Breaking News: ಕರ್ನಾಟಕದಲ್ಲಿ ಹಾಲಿನ ದರ ಹೆಚ್ಚಳ, ಲೀಟರ್ ನಂದಿನಿ ಹಾಲು 2.10 ರೂ ದುಬಾರಿ
Nandini milk rate hike ಕರ್ನಾಟಕದ ಪ್ರಮುಖ ಸಹಕಾರಿ ವಲಯದ ನಂದಿನಿ ಹಾಲಿನ ದರವನ್ನು( Nandini Milk) ಕರ್ನಾಟಕಸರ್ಕಾರ ಏರಿಕೆ ಮಾಡಿದೆ.
ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ರಾಜ್ಯ ಸರ್ಕಾರವು ದರ ಏರಿಕೆಯ ಮೂಡ್‌ನಲ್ಲಿದೆ. ವಾರದ ಹಿಂದೆಯಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಸಿದ್ದ ಕರ್ನಾಟಕ ಸರ್ಕಾರವು ಈಗ ಹಾಲಿನ ದರವನ್ನು ಏಕಾಏಕಿ ಏರಿಸಿದೆ. ಕರ್ನಾಟಕ ಹಾಲು ಮಹಾಮಂಡಳದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಅನುಮತಿ ನೀಡಿದ್ದು 2024 ರ ಜೂನ್ 26 ರಿಂದಲೇ ಹೊಸ ದರ ಜಾರಿಗೆ ಬರಲಿದೆ. ಕರ್ನಾಟಕ ಹಾಲು ಮಹಾಮಂಡಳದ ಪ್ರಕಾರ ನಂದಿನಿ ಹಾಲಿನ ದರ ಲೀಟರ್‌ಗೆ 2.10 ರೂ.ದುಬಾರಿಯಾಗಲಿದೆ. ಸದ್ಯ ಲೀಟರ್ ಹಾಲಿನ ದರ ಲೀಟರ್‌ಗೆ 42 ರೂಪಾಯಿ ಗಳಿದ್ದು. ಇನ್ನು ಮುಂದೆ 44 ರೂಪಾಯಿ ಗಳನ್ನು ಪಾವತಿಸಬೇಕಾಗುತ್ತದೆ.
ಲೋಕಸಭೆ ಚುನಾವಣೆಗೂ ಮುನ್ನವೇ ಹಾಲಿನ ದರ ಏರಿಕೆಗೆ ಕರ್ನಾಟಕ ಹಾಲು ಮಹಾಮಂಡಳವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಚುನಾವಣೆ ಕಾರಣಕ್ಕೆ ಅನುಮತಿ ದೊರೆತಿರಲಿಲ್ಲ. ಈಗಿನ ಹಾಲಿನ ದರ ದುಬಾರಿಯಾಗುತ್ತಿದೆ. ಮೊಸರು, ತುಪ್ಪ ಸೇರಿದಂತೆ ಇತರೆ ಉತ್ಪನ್ನಗಳ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲು ಮಹಾಮಂಡಳದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಭೀಮಾನಾಯಕ್, ಹಾಲು ಮಹಾಮಂಡಳದ ತೀರ್ಮಾನದಂತೆಯೇ ಹಾಲಿನ ದರ ಏರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದು ಬುಧವಾರದಿಂದಲೇ ಜಾರಿಗೆ ಬರಲಿದೆ. ಒಂದು ಲೀಟರ್ ಹಾಲಿಗೆ 2.10 ರೂ. ಹೆಚ್ಚಳವಾಗಲಿದೆ. ಆದರೆ 50 ಮಿಲಿ ಲೀಟರ್ ಹಾಲನ್ನು ಹೆಚ್ಚುವರಿಯಾಗಿ ಗ್ರಾಹಕರಿಗೆ ನೀಡುತ್ತೇವೆ. ಇದರ ದರ ಮಾತ್ರ ಹೆಚ್ಚಾಗಲಿದೆ ಎಂದು ವಿವರಿಸಿದರು.
ದಕ್ಷಿಣ ಭಾರತದ ಇತರೆ ರಾಜ್ಯಗಳು. ಅಮುಲ್ ಹಾಲಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನದರ ಕಡಿಮೆಯೇ ಇದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕರ್ನಾಟಕ ಹಾಲು ಮಹಾಮಂಡಳ ನೀಡುತ್ತಿದೆ ಎಂದು ಹೇಳಿದರು.
ಅಂದರೆ ಪ್ರತಿ ಲೀಟರ್‌ಗೆ ಸುಮಾರು ಹಾಲಿನ ದರವನ್ನ ಹೆಚ್ಚಳ ಮಾಡಲಾಗಿದೆ. 96 ರಿಂದ 98 ಲಕ್ಷ ಲೀಟರ್ ಹಾಲನ್ನು ಕರ್ನಾಟಕದಾದ್ಯಂತ ಕೆಎಂಎಫ್ ಸಂಗ್ರಹಿಸುತ್ತಿದೆ. ಈ ಮಾಸಾಂತ್ಯಕ್ಕೆ ಇದು ಒಂದು ಕೋಟಿ ಲೀಟರ್‌ಗೆ ತಲುಪಿದೆ. ಇದರಲ್ಲಿ ಹಾಲಿನ ಪುಡಿ ತಯಾರಿಕೆಗೆ ಸ್ವಲ್ಪ ಬಳಸಿ ಉಳಿಕೆ ಹಾಲನ್ನು ಉಪ ಉತ್ಪನ್ನ ಹಾಗೂ ಮಾರಾಟಕ್ಕೆ ಬಳಕೆ ಮಾಡಲಾಗುತ್ತಿದೆ ಎನ್ನುವುದು ಭೀಮಾನಾಯಕ್ ವಿವರಣೆ.
ಸಿಎಂ ಸ್ಪಷ್ಟನೆ
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ. ಹಾಲಿನ ದರ ಏರಿಕೆ ಕುರಿತು ಯಾವುದೇ ಮಾಹಿತಿ ಇಲ್ಲ. ದರ ಏರಿಕೆ ಕುರಿತು ಕೆ.ಎಂ. ಎಫ್. ತೀರ್ಮಾನಿಸುತ್ತದೆ. ನೆರೆಯ ರಾಜ್ಯಗಳ ದರಕ್ಕೆ ಅನುಗುಣವಾಗಿ ಏರಿಕೆ ಮಾಡಲು ತೀರ್ಮಾನಿಸಿರಬಹುದು. ಈ ಬಗ್ಗೆ ಕೂಡಲೇ ಮಾಹಿತಿ ಪಡೆಯುವುದಾಗಿ ತಿಳಿಸಿದರು.
ಆದೇಶ ವಾಪಾಸ್‌ಗೆ ಅಶೋಕ ಆಗ್ರಹ
ಕರ್ನಾಟಕ ಹಾಲು ಮಹಾಮಂಡಳ ಹಾಲು ದರ ಏರಿಕೆ ಮಾಡಿರುವುದನ್ನು ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ವಿರೋಧಿಸಿದ್ದು, ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನ ಎರಡು ಬಾರಿ ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್ ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮ್ಮೆ 2 ರೂಪಾಯಿ ಹೆಚ್ಚಾಗಿದೆ. ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ. ನಿಮಗೆ ಬಡವರು, ಮಾಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ ಎಂದು ಅಶೋಕ ಒತ್ತಾಯಿಸಿದ್ದಾರೆ.
ವಿಭಾಗ