ಕನ್ನಡ ಸುದ್ದಿ  /  ಕರ್ನಾಟಕ  /  Hsrp Number Plate: ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಲ್ಲವೇ, ದಂಡ ಬೀಳುತ್ತೆ ಹುಷಾರು

HSRP Number Plate: ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಲ್ಲವೇ, ದಂಡ ಬೀಳುತ್ತೆ ಹುಷಾರು

ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ಪಿ( HSRP) ಅಳವಡಿಕೆಗೆ ಸಾರಿಗೆ ಇಲಾಖೆ ಮೇ 31ರ ಕಡೆಯ ದಿನವಾಗಿದ್ದು, ಆನಂತರ ದಂಡ ಬೀಳುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ ಪಿ ಅವಧಿ ಮೇ 31 ಕ್ಕೆ ಕಡೆಯ ದಿನ.
ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ ಪಿ ಅವಧಿ ಮೇ 31 ಕ್ಕೆ ಕಡೆಯ ದಿನ.

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆ ದೃಷ್ಟಿಯಿಂದ ಅಳವಡಿಸುತ್ತಿರುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌( HSRP) ಅಳವಡಿಕೆಗೆ 2024 ರ ಮೇ 31 ಕಡೆಯ ದಿನ. ಆನಂತರ ನೋಂದಣಿ ಮಾಡಿಸದ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಶುರುವಾಗುವ ಸಾಧ್ಯತೆಯಿದೆ. ಇದಕ್ಕಾಗಿ ಕರ್ನಾಟಕ ಸಾರಿಗೆ ಇಲಾಖೆಯು ಸಿದ್ದತೆಗಳನ್ನು ಕೂಡ ಮಾಡಿಕೊಳ್ಳುತ್ತಿದೆ. ನಿಮ್ಮ ನಾಲ್ಕು ಚಕ್ರ ಇಲ್ಲವೇ ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳ ನಂಬರ್‌ ಪ್ಲೇಟ್‌ ಅನ್ನು ಎಚ್‌ಎಸ್‌ಆರ್‌ಪಿ ಮಾದರಿಗೆ ಬದಲಿಸಿಕೊಳ್ಳಬೇಕು. ಈಗಾಗಲೇ ಮೂರು ವರ್ಷದ ಹಿಂದೆಯೇ ಆದೇಶ ಜಾರಿಯಾಗಿದ್ದರೂ ಒಂದು ವರ್ಷದ ಅವಧಿಯಲ್ಲಿ ನೋಂದಣಿ ಪ್ರಮಾಣವೂ ಹೆಚ್ಚಿದೆ. ಆದರೆ ನಿರೀಕ್ಷೆಯಷ್ಟು‌ ನೋಂದಣಿ ಆಗಿಲ್ಲ. ಈ ಕಾರಣದಿಂದಲೇ ಮೇ ಗಡುವು ಮುಗಿದ ನಂತರ ದಂಡ ಪ್ರಯೋಗಕ್ಕೆ ಸಾರಿಗೆ ಇಲಾಖೆ ಮುಂದಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ ಅಂದಾಜು 2 ಕೋಟಿ ವಾಹನಗಳಿವೆ. ಇದರಲ್ಲಿ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಆರು ಚಕ್ರದ ವಾಹನಗಳೂ ಇವೆ. ಇವುಗಳಲ್ಲಿ ದ್ವಿಚಕ್ರ ವಾಹನದ ಪ್ರಮಾಣವೇ ಅಧಿಕ. ಕಾರು, ಆಟೋ ರಿಕ್ಷಾ, ಬಸ್‌ಗಳು ಕೂಡ ಇವೆ. ಈ ಎಲ್ಲಾ ವಾಹನಗಳ ಸುರಕ್ಷತೆ ಕಾರಣಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅನ್ನು ಕಡ್ಡಾಯಗೊಳಿಸಲಾಗಿದೆ. ಈವರೆಗೂ ಸಾರಿಗೆ ಇಲಾಖೆಯಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ 36 ಲಕ್ಷ ವಾಹನಗಳಿಗೆ ಮಾತ್ರ ಎಚ್‌ಎಚ್‌ಎಸ್ಆರ್‌ಪಿ ಪ್ಲೇಟ್‌ ಅಳವಡಿಕೆಯಾಗಿದೆ. ಅಂದರೆ ಶೇ. 18 ರಷ್ಟು ಮಾತ್ರ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ 1.64 ಕೋಟಿ ವಾಹನಗಳಿಗೆ ಈ ಪ್ರಕ್ರಿಯೆ ಬಾಕಿಯಿದೆ. ಮೇ ಅಂತ್ಯದೊಳಗೆ ಇನ್ನಷ್ಟು ವಾಹನ ನೋಂದಣಿಯಾದರೂ ಅದು ಶೇ. 20 ರಷ್ಟನ್ನು ಮಾತ್ರ ತಲುಪಬಹುದು ಎನ್ನುವ ಅಂದಾಜಿದೆ.

ದಂಡ ಎಷ್ಟು?

ಆದರೆ ಈಗಾಗಲೇ ಮೂರು ಬಾರಿ ಗಡುವು ವಿಸ್ತರಿಸಿದರೂ ನೋಂದಣಿ ಪ್ರಮಾಣದಲ್ಲಿ ಏರಿಕೆಯೇ ಕಾಣುತ್ತಿಲ್ಲ. ಇದರಿಂದ ಈ ಬಾರಿ ನೋಂದಣಿ ಅವಧಿ ವಿಸ್ತರಣೆ ಮಾಡದೇ ಇರುವ ಕುರಿತು ಸಾರಿಗೆ ಇಲಾಖೆ ಚಿಂತನೆ ನಡೆಸುತ್ತಿದೆ. ಅವಧಿ ವಿಸ್ತರಿಸಿದಷ್ಟು ಜನ ಮುಂದೆ ನೋಡಿದರಾಯಿತು ಎನ್ನುವ ಮನಸ್ಥಿತಿಯಲ್ಲಿ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಜೂನ್‌ 1ರ ನಂತರ ಸಾರಿಗೆ ಇಲಾಖೆಯಿಂದಲೇ ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸದ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಶುರುವಾಗಲಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಆನಂತರ ಸಿಕ್ಕಿ ಬಿದ್ದರೆ 1000 ರೂ. ದಂಡ ಪಾವತಿಸಬೇಕಾಗುತ್ತದೆ. ಆನಂತರ ಪ್ರತೀ ಬಾರಿಯೂ 1000 ರೂ.ದಂಡ ತೆರುವುದು ಅನಿವಾರ್ಯವಾಗುತ್ತದೆ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ವಿವರಣೆ.

ಎಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸುವ ವಿಚಾರದಲ್ಲಿ ಸಾರಿಗೆ ಇಲಾಖೆ ಆದೇಶ ಸ್ಪಷ್ಟವಾಗಿದೆ. ನೋಂದಣಿ ಮಾಡಿಸಿಕೊಂಡವರಿಗೆ ಸಮಯ ಇರುತ್ತದೆ. ಅಂತವರಿಗೆ ದಂಡ ಇರುವುದಿಲ್ಲ. ನೋಂದಣಿ ಮಾಡಿಸದೇ ಇದ್ದವರಿಗೆ ದಂಡ ಹಾಕುವ ಕುರಿತು ನಿರ್ಧಾರ ಆಗಲಿದೆ ಎನ್ನುವುದು ಸಾರಿಗೆ ಮತ್ತು ಸುರಕ್ಷತೆ ಇಲಾಖೆ ಆಯುಕ್ತ ಎ.ಎಂ.ಯೋಗೀಶ್‌ ನೀಡುವ ಸೂಚನೆ.

ಸಹಾಯವಾಣಿ ವೆಬ್‌ಸೈಟ್‌

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಆನ್‌ಲೈನ್‌ನಲ್ಲಿ ನೋಂದಣಿ ವೇಳೆ ಸಮಸ್ಯೆ ಉಂಟಾದರೆ ನೆರವಾಗಲು ಸಾರಿಗೆ ಇಲಾಖೆಯ ಸಹಾಯವಾಣಿಯೂ ಈಗಾಗಲೇ ಕೆಲಸ ಮಾಡುತ್ತಿದೆ.ಸಾರ್ವಜನಿಕರು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಸಹಾಯವಾಣಿ 9449863429/26 ಸಂಪರ್ಕಿಸಿ ಗೊಂದಗಳಿದ್ದರೆ ಬಗೆಹರಿಸಿಕೊಳ್ಳಬಹುದು. ಕೆಲವೊಮ್ಮೆ ನಿಧಾನವಾದ ದೂರುಗಳೂ ಬಂದಿದ್ದು, ಸಹಾಯವಾಣಿಗೆ ಸಂಪರ್ಕಿಸಿದರೆ ಸೂಕ್ತ ಮಾರ್ಗದರ್ಶನವೂ ಸಿಗಲಿದೆ.

ಇದಲ್ಲದೇ http://transport.karnataka.gov.in ಅಥವಾ www.siam.inಗೆ ಭೇಟಿ ನೀಡಿ ವಾಹನಗಳಿಗೆ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಫಲಕ ಅಳವಡಿಸುವ ದಿನಾಂಕ, ವಾಹನ ಮಾರಾಟ ಕೇಂದ್ರದ ಹೆಸರು ಮತ್ತು ವಿಳಾಸವನ್ನು ವೆಬ್‌ಸೈಟ್‌ ಮೂಲಕವೇ ಖಚಿತಪಡಿಸಿಕೊಳ್ಳಬೇಕು. ಈ ವೆಬ್‌ಸೈಟ್‌ಗಳ ಮೂಲಕ ನೋಂದಣಿ ಮಾಡಿ ಅಳವಡಿಸಿದ ಎಚ್‌ಎಸ್‌ಆರ್‌ಪಿಗಳು ಮಾತ್ರ ಮಾನ್ಯತೆ ಹೊಂದಿರಲಿವೆ. ಇತರ ವೆಬ್‌ ಪೋರ್ಟಲ್‌ ಬಳಸುವ ಮುನ್ನ ಎಚ್ಚರಿಕೆ ವಹಿಸಿ ಎನ್ನುವುದು ಸಾರಿಗೆ ಅಧಿಕಾರಿಗಳು ನೀಡುವ ಸೂಚನೆ.

IPL_Entry_Point

ವಿಭಾಗ