ಕನ್ನಡ ಸುದ್ದಿ  /  ಕರ್ನಾಟಕ  /  Nandini Record: ಬೇಸಿಗೆಯಲ್ಲಿ ನಂದಿನಿ ಹಾಲು, ಮೊಸರು ಮಾರಾಟದಲ್ಲಿ ದಾಖಲೆ, 29 ಹೊಸ ಐಸ್‌ಕ್ರೀಂ ಉತ್ಪಾದನೆ

Nandini Record: ಬೇಸಿಗೆಯಲ್ಲಿ ನಂದಿನಿ ಹಾಲು, ಮೊಸರು ಮಾರಾಟದಲ್ಲಿ ದಾಖಲೆ, 29 ಹೊಸ ಐಸ್‌ಕ್ರೀಂ ಉತ್ಪಾದನೆ

KMF ಕರ್ನಾಟಕ ಹಾಲು ಮಹಾ ಒಕ್ಕೂಟವು ಬೇಸಿಗೆಯಲ್ಲಿ ದಾಖಲೆ ಮಾರಾಟ ಮಾಡಿದೆ. ಹೊಸ ಐಸ್‌ಕ್ರೀಂ ಉತ್ಪನ್ನಗಳನ್ನೂ ಬಿಡುಗಡೆ ಮಾಡಿದೆ.

ನಂದಿನಿ ಹೊಸ ಐಸ್‌ಕ್ರೀಂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನಂದಿನಿ ಹೊಸ ಐಸ್‌ಕ್ರೀಂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬೆಂಗಳೂರು: ಬೇಸಿಗೆಯ ಬೇಗೆಗೆ ಜನ ತಂಪಾಗಿರಲು ಬಯಸುತ್ತಿದ್ದಾರೆ. ಕರ್ನಾಟಕದಲ್ಲಿ ಬೇಸಿಗೆ ವೇಳೆ ಹಾಲು, ಮೊಸರು ಹಾಗೂ ಐಸ್‌ ಕ್ರೀಂಗಳ ಬಳಕೆಯೂ ಅಧಿಕವಾಗಿದೆ. ಅದರಲ್ಲೂ ರೈತರು ಉತ್ಪಾದಿಸುವ ಹಾಲನ್ನು ಬಳಸಿ ಹಾಲು, ಮೊಸರು ಹಾಗೂ ಐಸ್‌ ಕ್ರೀಂಗಳನ್ನು ತಯಾರಿಸಿ ಮಾರುಕಟ್ಟೆ ಮಾಡುತ್ತಿರುವ ಕರ್ನಾಟಕ ಹಾಲು ಮಹಾ ಮಂಡಳ( KMF) ಏಪ್ರಿಲ್‌ ಎರಡು ವಾರದಲ್ಲಿಯೇ ದಾಖಲೆಯ ಮಾರಾಟ ಮಾಡಿದೆ. ಅದರಲ್ಲೂ ಹಾಲು ಮಹಾಮಂಡಳದ ಅವಧಿಯಲ್ಲೇ ಇಷ್ಟು ಮಾರಾಟ ಮಾಡಿರುವುದು ಅತ್ಯಧಿಕ ಎಂದು ಕೆಎಂಎಫ್‌ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ಹೈನೋದ್ಯಮದಲ್ಲಿ ರಾಷ್ಟ್ರದಲ್ಲಿಯೇ ಎರಡನೇಯ ದೊಡ್ಡ ಮಹಾಮಂಡಳವಾಗಿದ್ದು, ದಕ್ಷಿಣ-ಭಾರತದಲ್ಲಿಯೇ ಅಗ್ರರಾಜ್ಯ ಹಾಲು ಮಹಾಮಂಡಳವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಲು ಮಹಾಮಂಡಳವು ಕಳೆದ 5 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 26 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲನ್ನು ಖರೀದಿಸಿ, ಸಂಸ್ಕರಿಸಿ, “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯಡಿ “ನಂದಿನಿ” ಬ್ರಾಂಡಿನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸಿದೆ. ‘‘ನಂದಿನಿ” ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಬ್ರಾಂಡ್ ಆಗಿರುವುದಲ್ಲದೇ, ರಾಷ್ಟ್ರಾದ್ಯಂತ ಗ್ರಾಹಕರು ಗುರುತಿಸುವ ಪ್ರತಿಷ್ಠಿತ ಹಾಲಿನ ಬ್ರಾಂಡ್ ಆಗಿ ಹೊರಹೊಮ್ಮಿದೆ.

ಏಪ್ರಿಲ್ 2024ರ ಮಾಸದ ಎರಡನೇ ವಾರದಲ್ಲಿ ಸಾಲು ಸಾಲು ಹಬ್ಬಗಳಿದ್ದು, ನಂದಿನಿ ಹಾಲು ಮತ್ತುಮೊಸರು ದಾಖಲೆ ಮಟ್ಟದಲ್ಲಿ ಮಾರಾಟವಾಗಿದೆ. ಏಪ್ರಿಲ್‌ 11ರಂದು 51.60 ಲಕ್ಷ ಲೀಟರ್‌ ಸ್ಯಾಚೆಟ್ ಹಾಲು ಮಾರಾಟ ಮಾಡಿರುವುದು ಹಾಗೂ ಎಪ್ರಿಲ್‌ 6ರಂದು13.56 ಲಕ್ಷ ಲೀಟರ್ ಸ್ಯಾಚೆಟ್ ಮೊಸರು ಮಾರಾಟ ಮಾಡಿರುವುದು ಮಹಾಮಂಡಳದ ಇತಿಹಾಸದಲ್ಲಿ ಇಲ್ಲಿಯವರೆಗಿನ ದಾಖಲೆ ಮಾರಾಟವಾಗಿದೆ.

ಪ್ರಸ್ತುತ ಹಾಲು ಮಾರಾಟದ ಪ್ರಗತಿಯು ಕಳೆದ ಸಾಲಿಗೆ ಹೋಲಿಸಿದಲ್ಲಿ ಸರಾಸರಿ ಶೇ.10 ರಷ್ಟು ಪ್ರಗತಿಯಾಗಿದ್ದು, ಅದೇ ರೀತಿ ಮೊಸರಿನ ಮಾರಾಟವು ಶೇ.22 ರಷ್ಟು ಪ್ರಗತಿಯಾಗಿದೆ. ಮಜ್ಜಿಗೆ ಮತ್ತು

ಲಸ್ಸಿ ಉತ್ಪನ್ನಗಳಿಗೂ ಸಹ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಪ್ರತಿದಿನ ಅಂದಾಜು1.5 ಲಕ್ಷ ಲೀಟರ್ ಮಾರಾಟ ಮಾಡಲಾಗುತ್ತಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ.30 ರಷ್ಟು ಹೆಚ್ಚಿಗೆಯಾಗಿದೆ.

ಅದೇ ರೀತಿ ಮಾರ್ಚ್2024 ರ ಮಾಹೆಯಲ್ಲಿ ಕಳೆದ ಸಾಲಿಗೆ ಹೋಲಿಸಿದಾಗ ಶೇ.36ರಷ್ಟು ನಂದಿನಿ ಐಸ್ ಕ್ರೀಂ ಮಾರಾಟದಲ್ಲಿ ಹೆಚ್ಚಿಗೆಯಾಗಿದ್ದು, ಪ್ರತಿದಿನ ಸರಾಸರಿ 25349 ಲೀಟರ್ ಐಸ್ ಕ್ರೀಂಅನ್ನು ಮಾರಾಟ ಮಾಡುವ ಮೂಲಕ ಮಹಾಮಂಡಳ ಇತಿಹಾಸದಲ್ಲೇ ದಾಖಲೆ ನಿರ್ಮಿಸಲಾಗಿದೆ ಎಂದು ಮಹಾಮಂಡಳ ತಿಳಿಸಿದೆ.

ಮಹಾಮಂಡಳವು ಎರಡೂವರೆ ದಶಕದಿಂದಲೂ ನಂದಿನಿ ಹೆಸರಿನಲ್ಲಿ ಐಸ್‌ ಕ್ರೀಂ ಉತ್ಪಾದಿಸುತ್ತಿದೆ. ಬೆಂಗಳೂರು, ಬಳ್ಳಾರಿ ಹಾಗೂ ಹಾಸನದಲ್ಲಿ ಐಸ್‌ಕ್ರೀಂ ಉತ್ಪಾದನೆ ಘಟಕಗಳಿವೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ದೇಶದಲ್ಲೂ ನಂದಿನಿ ಐಸ್‌ಕ್ರೀಂ ಮಾರಾಟ ಮಾಡಲಾಗಿದೆ. ಈ ಬಾರಿ ಹೊಸದಾಗಿ 29 ರೀತಿಯ ಐಸ್‌ಕ್ರೀಂಗಳನ್ನು ಮಹಾಮಂಡಳ ಮಾರುಕಟ್ಟೆಗೆ ಫೆಬ್ರವರಿಯಲ್ಲಿ ಪರಿಚಯಿಸಿದೆ. ಇದರಲ್ಲಿ ಕುಲ್ಫಿ, ಕ್ಯಾಂಡೀಯನ್ನು ವಿವಿಧ ರುಚಿಯಲ್ಲಿ ಬಿಡುಗಡೆ ಮಾಡಿದೆ ಎಂದು ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌ ಅವರು ತಿಳಿಸಿದ್ದಾರೆ.

IPL_Entry_Point

ವಿಭಾಗ