Mysore Muda Scam: ಇಡಿ ಪ್ರಕರಣ ದಾಖಲಿಸುತ್ತಿದ್ದಂತೆ 14 ನಿವೇಶನ ವಾಪಾಸ್‌ ನೀಡುವ ಪತ್ರ ಬರೆದ ಸಿದ್ದರಾಮಯ್ಯ ಪತ್ನಿ-bangalore news mysore muda scam karnataka cm siddaramaiah wife parvati write letter to withdraw sites kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Muda Scam: ಇಡಿ ಪ್ರಕರಣ ದಾಖಲಿಸುತ್ತಿದ್ದಂತೆ 14 ನಿವೇಶನ ವಾಪಾಸ್‌ ನೀಡುವ ಪತ್ರ ಬರೆದ ಸಿದ್ದರಾಮಯ್ಯ ಪತ್ನಿ

Mysore Muda Scam: ಇಡಿ ಪ್ರಕರಣ ದಾಖಲಿಸುತ್ತಿದ್ದಂತೆ 14 ನಿವೇಶನ ವಾಪಾಸ್‌ ನೀಡುವ ಪತ್ರ ಬರೆದ ಸಿದ್ದರಾಮಯ್ಯ ಪತ್ನಿ

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಹಂಚಿಕೆ ಮಾಡಿರುವ ವಿವಾದೀತ ನಿವೇಶನಗಳನ್ನು ಹಿಂದಕ್ಕೆ ಪಡೆಯುವಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪತ್ರ ಬರೆದಿದ್ದಾರೆ.

ಮುಡಾದಿಂದ ನೀಡಿರುವ ಬದಲಿ ನಿವೇಶನ ವಾಪಾಸ್‌ ನೀಡುವುದಾಗಿ ಪಾರ್ವತಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಮುಡಾದಿಂದ ನೀಡಿರುವ ಬದಲಿ ನಿವೇಶನ ವಾಪಾಸ್‌ ನೀಡುವುದಾಗಿ ಪಾರ್ವತಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಬದಲಿ ನಿವೇಶನದ ಹಂಚಿಕೆಯ ಉರುಳು ಸಿದ್ದರಾಮಯ್ಯ ಅವರಿಗೆ ಗಟ್ಟಿಯಾಗಿ ಸುತ್ತಿಕೊಂಡು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುತ್ತಿದ್ದಂತೆ ಅವರ ಪತ್ನಿ ಪಾರ್ವತಿ ಅವರು ಎಲ್ಲಾ ನಿವೇಶನ ವಾಪಾಸ್‌ ನೀಡುವುದಾಗಿ ಪತ್ರ ಬರೆದಿದ್ದಾರೆ. ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂ 464 ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದ್ದಕ್ಕಾಗಿ ಪರಿಹಾರದ ಬದಲಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ನನಗೆ ಮಂಜೂರು ಮಾಡಲಾದ 14 ನಿವೇಶನಗಳನ್ನು ಹಿಂದಿರುಗಿಸುವೆ ಎಂದು ಪಾರ್ವತಿ ಅವರು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೇ ನಂ 464 ರಲ್ಲಿ 3 ಎಕರೆ 16 ಗುಂಟೆ ವಿಸ್ತೀರ್ಣದ ನನ್ನ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದ್ದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರವಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ವಿವಿಧ ಅಳತೆಯ 14 ನಿವೇಶನಗಳನ್ನು ಮಂಜೂರು ಮಾಡಿರುವುದು ನಿಮಗೆ ತಿಳಿದಿದೆ. ಮುಂದುವರಿದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನನ್ನ ಪರವಾಗಿ ಕಾರ್ಯಗತಗೊಳಿಸಿದ 14 ನಿವೇಶನಗಳ ಕ್ರಯಪತ್ರಗಳನ್ನು ರದ್ದುಗೊಳಿಸುವ ಮೂಲಕ ನಾನು ಪರಿಹಾರದ ನಿವೇಶನಗಳನ್ನು ಒಪ್ಪಿಸಲು ಮತ್ತು ಹಿಂತಿರುಗಿಸಲು ಬಯಸುತ್ತೇನೆ. ನಿವೇಶನಗಳ ಸ್ವಾಧೀನವನ್ನು ಸಹ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿ ಹಸ್ತಾಂತರಿಸುತ್ತಿದ್ದೇನೆ. ದಯವಿಟ್ಟು ಈ ನಿಟ್ಟಿನಲ್ಲಿ ಆದಷ್ಟು ಬೇಗ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಪಾರ್ವತಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‌

ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ. ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ. ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ. ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ

ಅಶೋಕ್‌ ಕಟು ಟೀಕೆ

ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ @siddaramaiah ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನ ಹಿಂತಿರುಗಿಸುವ ನಿರ್ಧಾರ ಮಾಡಿದ್ದು, ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪನ್ನ ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟದ ಹಾದಿಯಲ್ಲಿ ಸಿಕ್ಕಿರುವ ಮತ್ತೊಂದು ಜಯ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಆದರೆ ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ? ಕದ್ದ ಮಾಲನ್ನು ವಾಪಸ್ಸು ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ?

'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ.

ಆದರೆ 'ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ' ಸಿಎಂ ಸಿದ್ದರಾಮಯ್ಯನವರೇ. ತಾವು ತನಿಖೆ ಎದುರಿಸಲೇ ಬೇಕು. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಎಕ್ಸ್‌ನಲ್ಲಿ ಅಶೋಕ್‌ ಪೋಸ್ಟ್‌ ಮಾಡಿದ್ಧಾರೆ.

ಪಾರ್ವತಿ ಸಿದ್ದರಾಮಯ್ಯ ಬರೆದಿರುವ ಪತ್ರ
ಪಾರ್ವತಿ ಸಿದ್ದರಾಮಯ್ಯ ಬರೆದಿರುವ ಪತ್ರ

ರಾಜೀನಾಮೆಯೊಂದೇ ನಿಮಗೆ ಉಳಿದಿರುವ ದಾರಿ: ವಿಜಯೇಂದ್ರ

'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ.

“ಮುಖ್ಯಮಂತ್ರಿ ಮನೆಯವರು ಎಂದರೆ ಬಿಟ್ಟುಬಿಡಬೇಕಾ? 62 ಕೋಟಿ ಕೊಟ್ಟರೆ ನಿವೇಶನಗಳನ್ನು ಹಿಂದಿರುಗಿಸುತ್ತೇನೆ" ಎಂದು ಅಂದು ಆರ್ಭಟಿಸಿದ್ದ ಮಾನ್ಯಸಿದ್ದರಾಮಯ್ಯ ನವರು ಇಂದು ಬೇಷರತ್ತಾಗಿ ಅವರ ಪತ್ನಿಯವರಿಂದ ನಿವೇಶನ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಬಿಜೆಪಿ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದರು, ನಿಮಗೆ ದೊರೆತ 14 ಅಕ್ರಮ ನಿವೇಶನಗಳು 5000 ಸಾವಿರಕ್ಕೂ ಹೆಚ್ಚು ನಿವೇಶನಗಳ ಲೂಟಿಕೋರತನಕ್ಕೆ ರಕ್ಷಣೆಯಾಗಿ ನಿಂತಿದೆ ಎಂದು ಆರೋಪಿಸಿ ನಾವು ನಡೆಸಿದ

‘ಮೈಸೂರು ಚಲೋ’ ಪಾದಯಾತ್ರೆಗೆ ಪರ್ಯಾಯ ಸಮಾವೇಶ ಆಯೋಜಿಸಿ ಭಂಡತನದ ಸಮರ್ಥನೆಗಿಳಿದರು, ಸಾಮಾಜಿಕ ಕಾರ್ಯಕರ್ತರ ನ್ಯಾಯಾಲಯದ ಹೋರಾಟಕ್ಕೆ ಅಸ್ತು ಎಂದ ಘನತೆವೆತ್ತ ರಾಜ್ಯಪಾಲರನ್ನು ಅವಹೇಳನ ಮಾಡಿದರು, ಅವರು ನೀಡಿದ ಅನುಮತಿಯನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಿದರು, ನ್ಯಾಯಾಲಯದಲ್ಲಿ ಜಯ ದೊರಕದ ಹಿನ್ನಲೆಯಲ್ಲಿ ಕಾನೂನಿನ ಕುಣಿಕೆ ಬಿಗಿತ ಹೆಚ್ಚಾದಂತೆ, CBI-ED ತನಿಖೆಗಳ ನಿರೀಕ್ಷೆಯಿಂದ ಬೆದರಿದ ಮುಖ್ಯಮಂತ್ರಿಗಳು ಏಕಾಏಕಿ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿರುವುದು ಅವರು ಕಾನೂನು ಹೋರಾಟಕ್ಕೆ ಮುನ್ನವೇ ಶಸ್ತ್ರ ತ್ಯಜಿಸಿ ಶರಣಾಗತಿ ಪ್ರಕಟಿಸಿದಂತಾಗಿದೆ, ಅಂದ ಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು, ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬಹುದು ಎಂದು ಅಂದುಕೊಂಡಿದ್ದರೆ ಅದು ಅವರ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ, ನೀವೇಶನಗಳನ್ನು ಹಿಂದಿರುಗಿಸಿ ತಪ್ಪೊಪ್ಪಿಕೊಂಡಂತೆ ಮುಖ್ಯಮಂತ್ರಿ ಸ್ಥಾನಕ್ಕೂ ರಾಜಿನಾಮೆ ನೀಡಿದರೆ ಮರೆತು ಹೋಗಿರುವ ತಮ್ಮ ನೈತಿಕತೆ ಪ್ರಜ್ಞೆ ಪ್ರದರ್ಶಿಸಿದಂತಾಗುತ್ತದೆ ಎಂದು ಕಾಲೆಳೆದಿದ್ದಾರೆ.

mysore-dasara_Entry_Point