ಬೆಂಗಳೂರು ಮೊಬೈಲ್‌ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಬಿಹಾರದ ಬೆಡ್‌ಶೀಡ್‌ ಗ್ಯಾಂಗ್‌ನ 8 ಸದಸ್ಯರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮೊಬೈಲ್‌ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಬಿಹಾರದ ಬೆಡ್‌ಶೀಡ್‌ ಗ್ಯಾಂಗ್‌ನ 8 ಸದಸ್ಯರ ಬಂಧನ

ಬೆಂಗಳೂರು ಮೊಬೈಲ್‌ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಬಿಹಾರದ ಬೆಡ್‌ಶೀಡ್‌ ಗ್ಯಾಂಗ್‌ನ 8 ಸದಸ್ಯರ ಬಂಧನ

ಬೆಡ್‌ಶೀಟ್‌ ಅಡ್ಡ ಇಟ್ಟು ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಬಿಹಾರದ ಬೆಡ್‌ ಶೀಟ್‌ ಗ್ಯಾಂಗ್‌ನ 8 ಆರೋಪಿಗಳ ಬಂಧನವಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಶಾಲಾ ಕಾಲೇಜು ಬ್ಯಾಂಕ್‌ಗಳಿಗೆ ಹುಸಿ ಬಾಂಬ್‌ ಕರೆ ಮುಂದುವರೆದಿದ್ದು, ವಿದ್ಯಾರ್ಥಿಗಳು ಮತ್ತು ಬ್ಯಾಂಕ್‌ ಸಿಬ್ಬಂದಿ ಬೆದರಿದ್ದಾರೆ.(ವರದಿ - ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಮೊಬೈಲ್‌ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಬಿಹಾರದ ಬೆಡ್‌ಶೀಡ್‌ ಗ್ಯಾಂಗ್‌ನ 8 ಸದಸ್ಯರ ಬಂಧನವಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಮೊಬೈಲ್‌ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಬಿಹಾರದ ಬೆಡ್‌ಶೀಡ್‌ ಗ್ಯಾಂಗ್‌ನ 8 ಸದಸ್ಯರ ಬಂಧನವಾಗಿದೆ. (ಸಾಂಕೇತಿಕ ಚಿತ್ರ) (pexels)

ಬೆಂಗಳೂರು: ಬೆಡ್‌ಶೀಟ್‌ಗಳನ್ನು ಅಡ್ಡ ಇಟ್ಟು ಮೊಬೈಲ್ ಅಂಗಡಿ ಸೇರಿದಂತೆ ವಿವಿಧ ರೀತಿಯ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಬಿಹಾರದ ‘ಬೆಡ್‌ಶೀಟ್ ಗ್ಯಾಂಗ್‌’ನ ಎಂಟು ಮಂದಿಯನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಇಮ್ತಿಯಾಜ್‌ ಆಲಂ (30), ಜಾವೇದ್‌ ಆಲಂ(32), ಪವನ್ ಷಾ(29), ಮುನೀಲ್ ಕುಮಾರ್(30) (32), ರಿಜ್ವಾನ್‌ ದೇವನ್‌ (30) ರಾಮೇಶ್ವರ ಗಿರಿ (40) ಹಾಗೂ ಸೂರಜ್ ಕುಮಾರ್ (34) ಬಂಧಿತ ಆರೋಪಿಗಳು. ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಡ್‌ಶೀಟ್ ಅಡ್ಡ ಇಟ್ಟು ಮೊಬೈಲ್ ಕಳವು ಮಾಡುತ್ತಿದ್ದ ಬಿಹಾರದ ಬೆಡ್‌ಶೀಟ್ ಗ್ಯಾಂಗ್‌

ಇತ್ತೀಚೆಗೆ ನಾಗವಾರಪಾಳ್ಯದ ಸ್ಯಾಮ್‌ಸಂಗ್ ಶೋರೂಂನಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು 22 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ಕದ್ದು ಪರಾರಿಯಾಗಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 15 ದಿನಗಳ ಹಿಂದೆಯಷ್ಟೇ ಎಂಟು ಆರೋಪಿಗಳು ನಗರಕ್ಕೆ ಬಂದಿದ್ದರು. ಸಿಕ್ಕಸಿಕ್ಕಲ್ಲಿ ಆಶ್ರಯ ಪಡೆಯುತ್ತಿದ್ದರು. ಹಗಲಿನಲ್ಲಿ ಮೊಬೈಲ್ ಅಂಗಡಿ ಗುರುತಿಸಿಕೊಂಡು ನಂತರ ಗ್ರಾಹಕರ ಸೋಗಿನಲ್ಲಿ ಹೋಗಿ ಅಲ್ಲಿ ಯಾವ ಯಾವ ವಸ್ತುಗಳನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನಂತರ ತಡರಾತ್ರಿ ಮುಖಕ್ಕೆ ಮಾಸ್ಕ್ ಮತ್ತು ತಲೆಗೆ ಮಂಕಿ ಕ್ಯಾಪ್‌ ಹಾಕಿಕೊಂಡು ಅಂಗಡಿ ಬಳಿ ಹೋಗುತ್ತಿದ್ದರು. ಆರೋಪಿಗಳ ಪೈಕಿ ಮೂವರು ಅಂಗಡಿ ಮುಂದೆ ಬೆಡ್‌ಶೀಟ್ ಅಡ್ಡವಾಗಿ ಹಿಡಿದುಕೊಳ್ಳುತ್ತಿದ್ದರು. ಇತರರು ಅಂಗಡಿಯ ರೋಲಿಂಗ್ ಶೆಟರ್ ತೆಗೆದು ಒಳಕ್ಕೆ ಹೋಗಿ ದೋಚುತ್ತಿದ್ದರು. ಕಳ್ಳತನ ಎಸಗಿದ ನಂತರ ಆರೋಪಿಗಳು ಹೊರಕ್ಕೆ ಬರುತ್ತಿದ್ದರು. ನಂತರ, ಎಲ್ಲರೂ ಮುಖಕ್ಕೆ ಬೆಡ್‌ಶೀಟ್ ಸುತ್ತಿಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದರು. ಇವರಲ್ಲಿ ಒಬ್ಬ ಬಿಹಾರ ಮೂಲಕ ನೇಪಾಳಕ್ಕೆ ಹೋಗಿ ಮೊಬೈಲ್‌ ಗಳನ್ನು ಮಾರಾಟ ಮಾಡಿ ಬಂದಿರುವುದು ಪತ್ತೆಯಾಗಿದೆ. ಈ ಗ್ಯಾಂಗ್‌ ಉಡುಪಿ ಉತ್ತರ ಕನ್ನಡ ಮೊದಲಾದ ಜಿಲ್ಲೆಗಳಲ್ಲಿ ಕಳ್ಳತನ ನಡೆಸಿರುವುದು ಬೆರಳಚ್ಚು ಮುದ್ರೆಯಿಂದ ಗೊತ್ತಾಗಿದೆ.

ಶಾಲೆ, ಬ್ಯಾಂಕ್‌ಗಳಿಗೆ ಹುಸಿ ಬಾಂಬ್‌ ಕರೆಗಳ ಹಾವಳಿ

ಬೆಂಗಳೂರಿನ ಶಾಲಾ ಕಾಲೇಜುಗಳು, ಹೋಟೆಲ್ ಹಾಗೂ ಬ್ಯಾಂಕ್‌ಗಳಿಗೆ ಬರುತ್ತಿರುವ ಹುಸಿ ಬಾಂಬ್‌ ಬೆದರಿಕೆಯ ಇ-ಮೇಲ್ ಹಾವಳಿ ಮುಂದುವರೆದಿದೆ. ಕಳೆದ ಎರಡು ದಿನ ಇದೇ ರೀತಿಯ ಮೂರು ಇ- ಮೇಲ್‌ ಬೆದರಿಕೆಗಳು ಬಂದಿದ್ದು, ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.

ಎಂಜಿ ರಸ್ತೆಯ ಟ್ರಿನಿಟಿ ಸರ್ಕ್‌ ನಲ್ಲಿರುವ ಎಚ್‌ಎಸ್‌ಬಿಸಿ ಬ್ಯಾಂಕ್ ಶಾಖೆಯ ಇ-ಮೇಲ್‌ಗೆ ಬುಧವಾರ ಬಾಂಬ್ ಬೆದರಿಕೆಯ ಸಂದೇಶ ಬಂದಿತ್ತು. ಇ- ಮೇಲ್ ಗಮನಿಸಿದ್ದ ಬ್ಯಾಂಕ್ ಅಧಿಕಾರಿಯೊಬ್ಬರು, ಗ್ರಾಹಕರು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ್ದರು. ಅಕ್ಕಪಕ್ಕದ ವಾಣಿಜ್ಯ ಮಳಿಗೆಗಳಿಗೂ ಮಾಹಿತಿ ನೀಡಿದ್ದರು. ಪೊಲೀಸ್ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಿದ್ದರು. ಹಲಸೂರು ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇ-ಮೇಲ್ ಬಂದಿತ್ತು. ಇದೊಂದು ಹುಸಿ ಬಾಂಬ್‌ ಕರೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ರೀತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯಲ್ಲಿರುವ ಬಿಷಪ್ ಕಾಟನ್ ಬಾಲಕ ಹಾಗೂ ಬಾಲಕಿಯರ ಶಾಲೆಗಳಿಗೂ ಇಮೇಲ್‌ ಮೂಲಕ ಬೆದರಿಕೆ ಸಂದೇಶ ಬಂದಿತ್ತು. ಕಳೆದ ಬಾರಿಯಂತೆ ಇದು ಹುಸಿ ಸಂದೇಶ ಅಲ್ಲ. ಶಾಲಾ ಆವರಣದಲ್ಲಿ ಇಟ್ಟಿರುವ ಬಾಂಬ್ ಬೆಳಿಗ್ಗೆ 11 ಗಂಟೆಯ ವೇಳೆಗೆ ಸ್ಫೋಟಗೊಳ್ಳಲಿದೆ. ಎಲ್ಲರನ್ನೂ ಹೊರಕ್ಕೆ ಕಳುಹಿಸಿ ಎಂದು ಇಮೇಲ್‌ ನಲ್ಲಿ ಹೇಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಇದೇ ಶಾಲೆಗಳಿಗೆ ಬೆದರಿಕೆ ಸಂದೇಶ ಬಂದಿತ್ತು.

ಮೂರೂ ಸ್ಥಳಗಳಿಗೆ ಬಾಂಬ್ ನಿಷ್ಕ್ರಿಯ ದಳ, ಬಾಂಬ್ ತಪಾಸಣೆ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಸ್ಫೋಟಕ ವಸ್ತು ಅಥವಾ ರಾಸಾಯನಿಕ ಪದಾರ್ಥಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ದೃಢವಾಗಿದೆ ಎಂದು ಬೆಂಗಳೂರು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

(ವರದಿ - ಎಚ್.ಮಾರುತಿ, ಬೆಂಗಳೂರು)

Whats_app_banner