ಕನ್ನಡ ಸುದ್ದಿ  /  Karnataka  /  Bengaluru News Accuses Arrested In Gwalior Who Attempt To Theft In Jewellery Shop Bengaluru Mrt

Crime News: ಹಾಡಹಗಲೇ ಚಿನ್ನಾಭರಣ ಮಳಿಗೆ ದರೋಡೆ ಯತ್ನ; ಆರೋಪಿಗಳಲ್ಲಿ ಒಬ್ಬ ಗುಂಡೇಟಿನಿಂದ ಸಾವು, ಉಳಿದ ಮೂವರು ಗ್ವಾಲಿಯರ್‌ನಲ್ಲಿ ಅರೆಸ್ಟ್‌

Bengaluru News: ಹಾಡಹಗಲೇ ಚಿನ್ನಾಭರಣ ಮಳಿಗೆಯಲ್ಲಿ ಲೂಟಿ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ. ನಾಲ್ವರು ಆರೋಪಿಗಳಲ್ಲಿ ಒಬ್ಬಾತ ಗುಂಡೇಟು ತಗುಲಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಹಾಡಹಗಲೇ ಚಿನ್ನಾಭರಣ ಮಳಿಗೆಯಲ್ಲಿ ಲೂಟಿ ಮಾಡಲು ಯತ್ನಿಸಿದ್ದ ಆರೋಪಿಗಳ ಬಂಧನ
ಹಾಡಹಗಲೇ ಚಿನ್ನಾಭರಣ ಮಳಿಗೆಯಲ್ಲಿ ಲೂಟಿ ಮಾಡಲು ಯತ್ನಿಸಿದ್ದ ಆರೋಪಿಗಳ ಬಂಧನ

ಬೆಂಗಳೂರು: ನಗರದ ಕೊಡಿಗೇಹಳ್ಳಿ ಸಮೀಪವಿರುವ ದೇವಿನಗರದ ಲಕ್ಷ್ಮೀ ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್ ಮಳಿಗೆಯಲ್ಲಿ ಹಾಡಹಗಲೇ ಚಿನ್ನಾಭರಣ ಲೂಟಿಗೆ ಯತ್ನಿಸಿದ್ದ ನಾಲ್ವರು ಆರೋಪಿಗಳಲ್ಲಿ ಒಬ್ಬ ಮಧ್ಯಪ್ರದೇಶದ ಗ್ವಾಲಿಯರ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಉಳಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತಪಟ್ಟ 30 ವರ್ಷದ ಸೂರಜ್ ಎಂಬ ಆರೋಪಿಗೆ ಚಿನ್ನಾಭರಣ ಮಳಿಗೆಯಲ್ಲೇ ಮತ್ತೊಬ್ಬ ಆರೋಪಿ ಹಾರಿಸಿದ ಗುಂಡು ತಗುಲಿತ್ತು. ಮಾರ್ಚ್ 14ರಂದು ಲಕ್ಷ್ಮೀ ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್ ಮಳಿಗೆಯಲ್ಲಿ ಬೆಳಗ್ಗೆ 11 ಗಂಟೆಯ ಸುಮಾರಿಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದ ನಾಲ್ವರು ಆರೋಪಿಗಳು ಚಿನ್ನಾಭರಣ ಲೂಟಿಗೆ ಯತ್ನಿಸಿದ್ದರು. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಮಧ್ಯ ಪ್ರದೇಶದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಆರೋಪಿಗಳಲ್ಲಿ ಒಬ್ಬನಾದ ಸೂರಜ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಟೈಲ್ಸ್‌ ಜೋಡಿಸುವ ಕೆಲಸ ಮಾಡುತ್ತಿದ್ದ ಆರೋಪಿಗಳು

ಆರೋಪಿಗಳಲ್ಲಿ ಒಬ್ಬನಾದ 37 ವರ್ಷದ ಪ್ರದೀಪ್ ಶರ್ಮ ಎಂಬಾತ ಹಲವು ತಿಂಗಳ ಹಿಂದೆ ಬೆಂಗಳೂರಿಗೆ ಆಗಮಿಸಿ ಟೈಲ್ಸ್ ಜೋಡಿಸುವ ಕೆಲಸ ಮಾಡುತ್ತಿದ್ದ. ಲಕ್ಷ್ಮೀ ಜ್ಯುವೆಲರ್ಸ್ ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ನಡೆಸಲು ಈತನೇ ಯೋಜನೆ ರೂಪಿಸಿ ಮತ್ತೊಬ್ಬ ಆರೋಪಿ ಖಾನಾ ಶರ್ಮಾ ಎಂಬಾತನಿಗೆ ದರೋಡೆ ಮಾಡುವ ವಿಷಯ ತಿಳಿಸಿದ್ದ. ಅಶು ಶರ್ಮಾ ಮತ್ತು ವಿಕಾಸ್ ಪಂಡಿತ್ ಎಂಬ ಆರೋಪಿಗಳು ಇವರಿಗೆ ಕೈ ಜೋಡಿಸಿದ್ದರು. ದರೋಡೆ ಮಾಡುವ ಎರಡು ದಿನ. ಮುಂಚಿತವಾಗಿ ಬೆಂಗಳೂರಿಗೆ ಆಗಮಿಸಿದ್ದ ಆರೋಪಿಗಳು ಪ್ರದೀಪ್ ಮನೆಯಲ್ಲೇ ಉಳಿದುಕೊಂಡಿದ್ದರು. ಈ ಕೃತ್ಯಕ್ಕಾಗಿ ವಿದ್ಯಾರಣ್ಯಪುರ ಮತ್ತು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಎರಡು ಬೈಕ್‌ಗಳನ್ನು ಕಳವು ಮಾಡಿದ್ದರು. ಇದೇ ಬೈಕ್‌ಗಳಲ್ಲಿ ಲಕ್ಷ್ಮೀ ಜ್ಯುವೆಲರ್ಸ್ ಮಳಿಗೆಗೆ ಆಗಮಿಸಿ ಏಕಾಏಕಿ ಮಳಿಗೆಗೆ ನುಗಿದ್ದರು.

ಈ ಸಂದರ್ಭದಲ್ಲಿ ಮಳಿಗೆ ಮಾಲೀಕ, ಅಕ್ಕನ ಮಗ ಮತ್ತು ಕೆಲಸಗಾರರು ಇದ್ದರು. ಮಾಲೀಕರು ಚಿನ್ನಾಭರಣ ಅಥವಾ ನಗದನ್ನು ನೀಡಲು ಒಪ್ಪದೇ ಇದ್ದಾಗ ಆರೋಪಿಗಳು ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದರು. ಅದರಲ್ಲಿ ಒಂದು ಗುಂಡು ಮಳಿಗೆ ಮಾಲೀಕ, ಅವರ ಅಕ್ಕನ ಮಗ ಮತ್ತು ಸೂರಜ್ ಕುತ್ತಿಗೆಗೆ ತಗುಲಿತ್ತು. ಈಗಲೂ ಮಳಿಗೆ ಮಾಲೀಕ, ಅವರ ಅಕ್ಕನ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಮಾಲೀಕರು ಸೈರನ್ ಬಟನ್ ಒತ್ತಿದ್ದರು. ತಮ್ಮ ಸಹಚರ ಸೂರಜ್‌ಗೆ ಗುಂಡು ತಗುಲಿದ್ದು ಇತರ ಆರೋಪಿಗಳಲ್ಲಿ ಭಯ ಮೂಡಿಸಿತ್ತು. ಸಿಕ್ಕಿ ಬೀಳದಿರಲು ಅವರು ಬೈಕ್‌ಗಳಲ್ಲಿ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದತ್ತ ತೆರಳಿದ್ದರು. ಆರೋಪಿ ಚಿಕಿತ್ಸೆ ಪಡೆಯದೆ ಕುತ್ತಿಗೆಗೆ ಬಟ್ಟೆ ಕಟ್ಟಿಕೊಂಡಿದ್ದ. ಕದ್ದ ಬೈಕ್‌ಗಳನ್ನು ಅಲ್ಲಿಯೇ ಬಿಟ್ಟು ಅನಂತಪುರಕ್ಕೆ ಬಸ್‌ನಲ್ಲಿ ತೆರಳಿದ್ದರು. ಅಲ್ಲಿಂದ ರೈಲಿನಲ್ಲಿ ಗ್ವಾಲಿಯರ್‌ನತ್ತ ತೆರಳಿದ್ದರು.

ಆರೋಪಿಗಳನ್ನು ಗ್ವಾಲಿಯರ್‌ನಲ್ಲಿ ಅರೆಸ್ಟ್‌ ಮಾಡಿದ ಪೊಲೀಸರು

ಲಕ್ಷ್ಮೀ ಜ್ಯುವೆಲರ್ಸ್ ಮಳಿಗೆಯಲ್ಲಿ ಆರೋಪಿಗಳ ಬೆರಳಚ್ಚು ಸಂಗ್ರಹಿಸಲಾಗಿತ್ತು. ರಾಷ್ಟ್ರಮಟ್ಟದ ಹಳೆಯ ಪ್ರಕರಣಗಳ ಜೊತೆ ಹೋಲಿಕೆ ಮಾಡಿದಾಗ ಖಾನಾ ಶರ್ಮಾ ಎಂಬಾತ ಭಾಗಿಯಾಗಿರುವ ಸುಳಿವು ಸಿಕ್ಕಿತ್ತು. ಈತ ಮತ್ತು ಈತನ ಸಹಚರರ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಆರೋಪಿಗಳು ರೈಲಿನಲ್ಲಿ ಗ್ವಾಲಿಯರ್ ನತ್ತ ಪ್ರಯಣ ಬೆಳೆಸಿರುವ ಸುಳಿವು ಲಭ್ಯವಾಗಿತ್ತು. ಆರೋಪಿಗಳು ಗ್ವಾಲಿಯರ್ ತಲುಪುವುದಕ್ಕೂ ಮುನ್ನವೇ ಪೊಲೀಸರ ತಂಡ ಗ್ವಾಲಿಯರ್ ರೈಲ್ವೆ

ನಿಲ್ದಾಣದಲ್ಲಿ ಹಾಜರಿದ್ದು ಆರೋಪಿಗಳನ್ನು ಬಂಧಿಸಿದ್ದರು. ರಕ್ತ ಸೋರುತ್ತಿದ್ದರಿಂದ ಸೂರಜ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆರೋಪಿಗಳು ಮಧ್ಯಪ್ರದೇಶದಲ್ಲಿ ತಯಾರಿಸಿದ್ದ ನಾಡ ಪಿಸ್ತೂಲುಗಳನ್ನು ಅಗ್ಗದ ದರಕ್ಕೆ ಖರೀದಿಸಿದ್ದರು.

ಪೊಲೀಸರು ಆರೋಪಿಗಳಿಂದ 3 ಪಿಸ್ತೂಲ್, 12 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರನ್ನೂ ಬೆಂಗಳೂರಿಗೆ ಕರೆತರಲಾಗಿದೆ. ಪ್ರಕರಣವನ್ನು ಪತ್ತೆ ಹಚ್ಚಿದ ಈಶಾನ್ಯ ವಿಭಾಗದ ಪೊಲೀಸರಿಗೆ 1 ಲಕ್ಷ ರೂಪಾಯಿ ಮತ್ತು ತನಿಖೆಗೆ ಸಹಕರಿಸಿದ ಮಧ್ಯಪ್ರದೇಶ ಪೊಲೀಸರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

IPL_Entry_Point