Bengaluru Bomb Threat: ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಿಗೆ ಬಂತು ಬೆಂಗಳೂರು ಸ್ಫೋಟದ ಇಮೇಲ್, ಜನನಿಬಿಡ ಸ್ಥಳ ಟಾರ್ಗೆಟ್, ಕೇಸ್ ದಾಖಲು-bengaluru news bomb threat mail claims blast to rock bengaluru on saturday demands 2 5 mn usd karnataka crime news uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Bomb Threat: ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಿಗೆ ಬಂತು ಬೆಂಗಳೂರು ಸ್ಫೋಟದ ಇಮೇಲ್, ಜನನಿಬಿಡ ಸ್ಥಳ ಟಾರ್ಗೆಟ್, ಕೇಸ್ ದಾಖಲು

Bengaluru Bomb Threat: ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಿಗೆ ಬಂತು ಬೆಂಗಳೂರು ಸ್ಫೋಟದ ಇಮೇಲ್, ಜನನಿಬಿಡ ಸ್ಥಳ ಟಾರ್ಗೆಟ್, ಕೇಸ್ ದಾಖಲು

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಸದಸ್ಯರಿಗೆ ಶನಿವಾರ ಬೆಂಗಳೂರು ಸ್ಫೋಟ ನಡೆಸುವುದಾಗಿ ಬೆದರಿಕೆ ಇಮೇಲ್ ಬಂದಿದೆ. ಈ ಕುರಿತು ಕೇಸ್ ದಾಖಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಕಡತ ಚಿತ್ರ)
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಕಡತ ಚಿತ್ರ) (PTI file)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಮಂಗಳವಾರ (ಮಾ.5) ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಇದರಂತೆ, ಶನಿವಾರ ಮಧ್ಯಾಹ್ನ ನಂತರ 2.48 ಕ್ಕೆ ಬೆಂಗಳೂರು ಸ್ಫೋಟ ಸಂಭವಿಸಲಿದೆ. ಈ ಬೆದರಿಕೆ ಇಮೇಲ್ ಹಿನ್ನೆಲೆಯಲ್ಲಿ ಬಂದೋಬಸ್ತ್ ಇನ್ನಷ್ಟು ಬಿಗಿಯಾಗಿದ್ದು, ತಪಾಸಣೆ, ಪಹರೆ ಹೆಚ್ಚಾಗಿದೆ.

ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ, ಶಾಹಿದ್ ಖಾನ್ ಎಂಬ ವ್ಯಕ್ತಿ ಈ ರೀತಿ ಇಮೇಲ್ ರವಾನಿಸಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೇರಿ ವಿವಿಧ ಸಚಿವರಿಗೆ ಇಮೇಲ್ ರವಾನೆಯಾಗಿದೆ. ಪೊಲೀಸ್ ಅಧಿಕಾರಿಗಳಿಗೂ ಇಮೇಲ್ ಹೋಗಿದೆ.

ರೆಸ್ಟೋರೆಂಟ್‌, ದೇವಸ್ಥಾನ, ಬಸ್ ಅಥವಾ ರೈಲು ಹೀಗೆ ಜನನಿಬಿಡ ಪ್ರದೇಶಗಳಲ್ಲಿ ಈ ಸ್ಫೋಟ ಸಂಭವಿಸಲಿದೆ. ಈ ದಾಳಿ ನಡೆಯದೇ ಇರಬೇಕಾದರೆ 25 ಲಕ್ಷ ಡಾಲರ್ ಅಥವಾ 20 ಕೋಟಿ ರೂಪಾಯಿ ಹಣ ಪಾವತಿಸಬೇಕು ಎಂದು ಬೆದರಿಕೆ ಬಂದಿರುವುದಾಗಿ ವರದಿ ಹೇಳಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

ಶನಿವಾರವೇ ಬೆಂಗಳೂರು ಸ್ಫೋಟ ಬೆದರಿಕೆ; ಕೇಸ್ ದಾಖಲು

ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆ ಸ್ಫೋಟ ಶುಕ್ರವಾರ (ಮಾ.1) ರಂದು ಸಂಭವಿಸಿತ್ತು. ಅದರ ಬೆನ್ನಿಗೆ ಬೆಂಗಳೂರು ಸ್ಫೋಟ ಬೆದರಿಕೆ ಇಮೇಲ್ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.

ರಾಮೇಶ್ವರಂ ಕೆಫೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಕನಿಷ್ಠ 10 ಜನರು ಗಾಯಗೊಂಡು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಿನ್ನೆ ವಹಿಸಿಕೊಂಡಿದೆ.

"ಕಳೆದ ಕೆಲವು ವರ್ಷಗಳಲ್ಲಿ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ಇದೇ ರೀತಿಯ ಸ್ಫೋಟಗಳು ನಡೆದಿರುವುದರಿಂದ ಐಎಸ್ ಕಾರ್ಯಕರ್ತರ ಪಾತ್ರ ಸೇರಿ ಎಲ್ಲಾ ಸಂಭಾವ್ಯ ಅಂಶಗಳನ್ನು ಪರಿಸೀಲಿಸುತ್ತೇವೆ" ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಎಎನ್‌ಐ ವರದಿ ಹೇಳಿದೆ.

ಕೆಫೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಬೆಂಗಳೂರಿಗರು ಭಯಪಡಬೇಕಾಗಿಲ್ಲ, ಭದ್ರತೆ ಕಡೆಗೆ ಸರ್ಕಾರ ಒತ್ತು ನೀಡಿದೆ ಎಂದ ಉಪ ಮುಖ್ಯಮಂತ್ರಿ

ರಾಮೇಶ್ವರಂ ಕೆಫೆ ಸ್ಫೋಟದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, "ಇದು ಕಡಿಮೆ ತೀವ್ರತೆಯ ಸ್ಫೋಟವಾಗಿತ್ತು. ಒಬ್ಬ ಯುವಕ ಒಂದು ಸಣ್ಣ ಚೀಲ ಹಿಡಿದುಕೊಂಡು ಬಂದು ಕೆಫೆಯಲ್ಲಿಟ್ಟು ಹೋದ. ಆತ ಹೋದ ಒಂದು ಗಂಟೆಯ ನಂತರ ಆ ಚೀಲ ಸ್ಫೋಟಿಸಿದೆ. ಈ ದುರಂತದಲ್ಲಿ ಸುಮಾರು 10 ಜನರಿಗೆ ಗಾಯಗಳಾಗಿವೆ. ಘಟನೆಯ ತನಿಖೆಗಾಗಿ 7-8 ತಂಡಗಳನ್ನು ರಚಿಸಲಾಗಿದೆ. ಭದ್ರತೆಯ ವಿಚಾರದಲ್ಲಿ ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಇದೇ ವೇಳೆ, "ನಾವು ನಮ್ಮ ತನಿಖೆಯನ್ನು ಮುಂದುವರಿಸುತ್ತಿದ್ದೇವೆ. 8 ತಂಡಗಳನ್ನು ರಚಿಸಲಾಗಿದೆ. ಎಲ್ಲರೂ ವಿಭಿನ್ನ ದಿಕ್ಕುಗಳಲ್ಲಿ ಕೆಲಸ ಮಾಡುತ್ತಿದ್ದು, ವಿಭಿನ್ನ ಅಂಶಗಳನ್ನು ನೋಡುತ್ತಿದ್ದಾರೆ. ಹಲವಾರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ. ಯಾವುದೇ ವ್ಯಾಪಾರ ಅಸೂಯೆ ಅಂಶವಿದೆಯೇ ಎಂಬುದು ಸೇರಿ ಪ್ರತಿಯೊಂದು ಕೋನವನ್ನು ಪರಿಶೀಲಿಸುತ್ತಿದ್ದೇವೆ. ಪ್ರತಿಪಕ್ಷಗಳು ನಮ್ಮೊಂದಿಗೆ ಸಹಕರಿಸಬೇಕು ಮತ್ತು ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ ಎಂದು ಮನವಿ ಮಾಡುತ್ತೇನೆ" ಎಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

(ಏಜೆನ್ಸಿ ಮಾಹಿತಿಗಳೊಂದಿಗೆ)

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point