ಕನ್ನಡ ಸುದ್ದಿ  /  Karnataka  /  Maha Shivaratri 2024 Special Pooja Offer In Kadri Manjunath Temple Mangaluru On Occasion Of Shivaratri Hsm

Maha Shivaratri 2024: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ನೆರವೇರಲಿದೆ ಮಹಾ ಶಿವರಾತ್ರಿ ವಿಶೇಷ ಪೂಜೆ

Kadri Temple Mangaluru: ಮಂಗಳೂರಿನ ಹೃದಯಭಾಗದಲ್ಲಿರುವ ಕದ್ರಿ ಮಂಜುನಾಥ ದೇವಾಲಯದಲ್ಲಿ ಪ್ರತಿವರ್ಷ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯಲಿದೆ. ಸುಮಾರು 10-11ನೇ ಶತಮಾನದ ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ. (ಬರಹ: ಹರೀಶ್‌, ಮಂಗಳೂರು)

ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಾಲಯ
ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಾಲಯ

ಮಂಗಳೂರು: ಮಹಾ ಶಿವರಾತ್ರಿ ಹಿನ್ನೆಲೆ ರಾಜ್ಯದ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಅದೇ ರೀತಿ ಮಂಗಳೂರಿನ ಕದ್ರಿ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಕೂಡಾ ವಿಶೇಷ ಪೂಜೆ ನಡೆಯಲಿದೆ. ಮಂಗಳೂರು ನಗರದ ಹೃದಯ ಭಾಗದಲ್ಲಿ ಕದ್ರಿಬೆಟ್ಟ, ಶ್ರೀ ಮಂಜುನಾಥನ ಸನ್ನಿಧಿ ಹಾಗೂ ಅಲ್ಲೇ ಜೋಗಿ ಮಠವಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರ ಧಾರ್ಮಿಕವಾಗಿ ಹಾಗೂ ಐತಿಹಾಸಿಕವಾಗಿಯೂ ಮಹತ್ವದ್ದು. ಶಿವರಾತ್ರಿಯಂದು ಇಲ್ಲಿಗೆ ದೂರದೂರಿನಿಂದ ಭಕ್ತರು ಆಗಮಿಸಿ, ಮಂಜುನಾಥನ ದರ್ಶನ ಪಡೆದು ಪುನೀತರಾಗುತ್ತಾರೆ.

ಎಲ್ಲಿದೆ ಕದ್ರಿ ಕ್ಷೇತ್ರ?

ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 4 ಕಿ.ಮೀ. ದೂರದಲ್ಲಿರುವ ಈ ಕದ್ರಿ ಕ್ಷೇತ್ರ, ಪೇಟೆ ಮಧ್ಯದಲ್ಲೇ ಇರುವ ಕಾರಣ ತಲುಪುವುದು ಸುಲಭ. ಬೆಂಗಳೂರು ಮಂಗಳೂರು ಮಾರ್ಗದಲ್ಲಿ ನಂತೂರು ಮೂಲಕವಾಗಿ ಬಂದರೆ, ಅಲ್ಲಿಂದ ಮಲ್ಲಿಕಟ್ಟೆಯ ಬಳಿ ಬಲಕ್ಕೆ ತಿರುಗಿದರೆ ನೇರ ದೇವಸ್ಥಾನ ತಲುಪಲು ಸಾಧ್ಯ. ಸುತ್ತಮುತ್ತಲೂ ಪ್ರಕೃತಿ ಹಸಿರಿನಿಂದ ಕೂಡಿರುವ ಕಾರಣ, ತಂಪಾದ ವಾತಾವರಣವೂ ಇಲ್ಲಿದೆ.

ಹೀಗಿದೆ ಪುರಾಣ

ಕರಾವಳಿಯನ್ನು ಪರಶುರಾಮಸೃಷ್ಟಿ ಎಂದು ಬಲವಾಗಿ ನಂಬಲಾಗುತ್ತದೆ. ಪರಶುರಾಮ ಸೂಕ್ತವಾದ ಸ್ಥಳವನ್ನು ಹುಡುಕಾಡಿದಾಗ ಶಿವನು ಕದಳೀವೃಕ್ಷಗಳಿಂದ ಕೂಡಿದ ಈ ಭಾಗವನ್ನೇ ತೋರಿಸಿದನಂತೆ. ಹೀಗೆ ಪರಶುರಾಮ ತಪಸ್ಸನ್ನು ಆಚರಿಸಲು ಇಲ್ಲಿಗೆ ಬಂದಾಗ, ಸಮುದ್ರ ಇದನ್ನು ಆವರಿಸಿತ್ತಂತೆ. ಆಗ ಸಮುದ್ರರಾಜನಿಗೆ ಕದಳೀವನದಲ್ಲಿ ತಪಸ್ಸನ್ನು ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಪರಶುರಾಮ ಕೇಳಿಕೊಂಡಾಗ ಸಮುದ್ರ ರಾಜ ನಿರಾಕರಿಸಿದ. ಕೋಪಗೊಂಡ ಪರಶುರಾಮ, ತನ್ನಲ್ಲಿದ್ದ ಪರಶುವನ್ನು ಸಮುದ್ರರಾಜನತ್ತ ಎಸೆದಾಗ ಸಮುದ್ರರಾಜ ಕದಳೀವನದಿಂದ ಹಿಂದೆ ಸರಿದನೆಂಬ ಕಥೆ ಇದೆ. ನಂತರ ಪರಶುರಾಮ ತಪಸ್ಸನ್ನಾಚರಿಸಿದ ಬಳಿಕ ಶಿವ ಪಾರ್ವತಿ ಪ್ರತ್ಯಕ್ಷರಾಗಿ ಈ ಕ್ಷೇತ್ರದಲ್ಲಿ ನೆಲೆಸಿದರು. ಶಿವನ ಆಣತಿಯಂತೆ ಸಪ್ತಕೋಟಿ ತೀರ್ಥಗಳು ಇಲ್ಲಿ ಏಳು ತೀರ್ಥ ಕುಂಡಗಳಾದವು ಎಂಬ ನಂಬಿಕೆ ಇದೆ.

ದೇವಸ್ಥಾನದಲ್ಲಿ ನಿತ್ಯ ಅನ್ನದಾಸೋಹ

ಸುಮಾರು 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುವ ಈ ದೇವಸ್ಥಾನದ ಕುರಿತು ಹಲವು ಶಿಲಾಶಾಸನಗಳು ವಿವರಗಳನ್ನು ನೀಡಿವೆ. ಬೌದ್ಧಧರ್ಮದ ಆಚರಣೆ, ಆರಾಧನೆಯನ್ನು ಇಲ್ಲಿ ಮಾಡಲಾಗುತ್ತಿತ್ತು ಎಂದೂ ಹೇಳಲಾಗುತ್ತದೆ. ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಅನ್ನದಾಸೋಹವಿದೆ. ಇಲ್ಲಿ ಪ್ರತಿದಿನ ಸುಮಾರು ಒಂದು ಸಾವಿರದಷ್ಟು ಮಂದಿ ಭೋಜನ ಸ್ವೀಕರಿಸುತ್ತಾರೆ. ಸಮೀಪದ ಶಾಲೆಗಳಿಗೂ ಇಲ್ಲಿಂದ ಅನ್ನಪ್ರಸಾದ ಒದಗಿಸಲಾಗುತ್ತದೆ.

ದೇವಸ್ಥಾನದ ವಿಶೇಷತೆಗಳು

ದೇವಸ್ಥಾನದ ಎಡಭಾಗದ ಮೇಲ್ಭಾಗದಲ್ಲಿರುವ ಗೋಮುಖ ತೀರ್ಥದ ಮೇಲ್ಭಾಗದ ನೀರಿನ ಸೆಲೆಯ ಮೂಲ ಯಾವುದು ಎಂದು ಈವರೆಗೂ ಯಾರಿಗೂ ತಿಳಿದಿಲ್ಲ. ಆದರೆ ಅದು ಕಾಶಿ ಕ್ಷೇತ್ರದ ಭಗೀರಥಿ ನದಿಯ ತೀರ್ಥವೆಂದೇ ಜನರು ನಂಬುತ್ತಾರೆ. ಈ ನೀರು ಹರಿದು ಬಂದು 9 ಪತ್ರಹೊಂಡಗಳಲ್ಲಿ ಶೇಖರಣೆಯಾಗುತ್ತದೆ. ಈ ಹೊಂಡಗಳಿರುವ ಜಾಗವನ್ನು ಮೋಕ್ಷಧಾಮ ಎಂದೇ ಕರೆಯಲಾಗುತ್ತದೆ. ಇಲ್ಲಿ ವಿಘ್ನೇಶ್ವರನ ವಿಗ್ರಹವಿದೆ. ಕೆಳಭಾಗದಲ್ಲಿರುವ ಈ ಹೊಂಡಗಳಲ್ಲಿ ಭಕ್ತರು ಮಿಂದು, ನಂತರ ಮೇಲ್ಭಾಗದಲ್ಲಿರುವ ಚಂದ್ರಮೌಳೀಶ್ವರನ ಲಿಂಗಕ್ಕೆ ಅಭಿಷೇಕ ಮಾಡಿ, ಮಂಜುನಾಥನ ದರ್ಶನ ಮಾಡುತ್ತಾರೆ.

ನಾಥ ಸಂಪ್ರದಾಯಕ್ಕೆ ಸೇರಿದ ಜೋಗಿಮಠ

ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೂ ಕದ್ರಿ ಜೋಗಿಮಠ (ಯೋಗೀಶ್ವರ ಮಠ)ಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಪ್ರತಿಯೊಂದು ಕಾರ್ಯಕ್ರಮದಲ್ಲೂ ಜೋಗಿ ಮಠದ ರಾಜ(ಮಠಾಧಿಪತಿ) ಭಾಗವಹಿಸುತ್ತಾರೆ. ಕದಳೀವನದ ಜೋಗಿಮಠಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಇದು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಂಪರ್ಕ ಸೇತುವೂ ಹೌದು. ಕದ್ರಿಯಲ್ಲಿ ನಾಥ ಸಂಪ್ರದಾಯಕ್ಕೆ ಸೇರಿದ ಯೋಗೀಶ್ವರ ಮಠ ಅನಾದಿಕಾಲದಿಂದಲೂ ಋಷಿಮುನಿಗಳು, ಯೋಗಪುರುಷರು, ನಾಥ ಪಂಥದ ಸಾಧುಗಳ ಆರಾಧನೆ ಮತ್ತು ಧಾರ್ಮಿಕ ಚಟುವಟಿಕೆಗಳಿಂದ ಪ್ರಸಿದ್ಧಿ ಪಡೆದಿದೆ.

ನಾಥ ಪಂಥದ ಯುಗಪುರುಷರಾದ ಶ್ರೀ ಮಚ್ಚೇಂದ್ರನಾಥರು ಮತ್ತು ಯೋಗಗುರು ಶ್ರೀ ಗೋರಕ್ಷನಾಥರವರು ಶ್ರೀ ಕಾಲಭೈರವ ದೇವರನ್ನು ಶ್ರೀ ಕ್ಷೇತ್ರದಲ್ಲಿ ಆರಾಧಿಸಿಕೊಂಡು ಬಂದಿದ್ದರು ಎಂಬ ಪ್ರತೀತಿ ಇದೆ. ಕದ್ರಿ ಗುಡ್ಡದ ತುದಿಯಲ್ಲಿರುವ ಯೋಗೇಶ್ವರ (ಜೋಗಿ) ಮಠ ಸಾವಿರ ವರ್ಷಗಳ ಇತಿಹಾಸ ಹೊಂದಿದೆ ಎಂದು ಹೇಳಲಾಗುತ್ತದೆ. ಇದು ದಕ್ಷಿಣ ಭಾರತದಲ್ಲಿರುವ ನಾಥ ಪಂಥದ ಪ್ರಮುಖ ಕೇಂದ್ರ. ಇಲ್ಲಿ ಪರಶುರಾಮರು ತಪಸ್ಸನ್ನಾಚರಿಸಿದ ಕುರುಹಾಗಿ ಸದಾ ಅಗ್ನಿ ಪ್ರಜ್ವಲಿಸುತ್ತಿರುವ ಪರಶುರಾಮ ಅಗ್ನಿ ಕುಂಡವಿದೆ. ಮಠದ ಸುತ್ತ ಇರುವ ವನವನ್ನು ಕದಳಿ ವನ ಎನ್ನುತ್ತಾರೆ. ಇಲ್ಲಿ ಈ ಹಿಂದೆ ರಾಜರಾಗಿ ಪಟ್ಟಾಭಿಷಿಕ್ತರಾದವರ ಸಮಾಧಿಗಳನ್ನು ಕಾಣಬಹುದು.

ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆಯುವ ಕುಂಭ ಮೇಳ

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೂ ಕದ್ರಿ ಜೋಗಿಮಠಕ್ಕೂ ಅವಿನಾಭಾವ ಸಂಬಂಧವಿದೆ. ಯೋಗಿ ಅವರು ಅಖಿಲ ಭಾರತ ವರ್ಷಿಯ ಅವಧೂತ್‌ ಯೋಗಿ ಮಹಾಸಭಾ ಭೇಕ್‌ ಬಾರಹ ಪಂಥದ ಮಹಾಂತ್‌ ಆಗಿದ್ದಾರೆ. 12 ವರ್ಷಗಳಿಗೊಮ್ಮೆ ಮಂಗಳೂರಿನಲ್ಲಿ ನಡೆಯುವ ಜೋಗಿ ಮಠದ ಮಠಾಧಿಪತಿ (ರಾಜ)ಗಳ ಆಯ್ಕೆಯಲ್ಲಿ ನಾಥ ಸಂಪ್ರದಾಯದ ಮೂಲ ಪೀಠವಾಗಿರುವ ಗೋರಖ್‌ಪುರ ಮಠ ಮಹತ್ವದ ಪಾತ್ರ ವಹಿಸುತ್ತದೆ. ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆಯುವ ಬಾರಹ ಪಂಥದ ಪದಾಧಿಕಾರಿಗಳ ಸಮ್ಮುಖದಲ್ಲಿ ಕುಂಭ ಮೇಳದ ಸಮಯದಲ್ಲಿ ತ್ರಯಂಬಕೇಶ್ವರದಲ್ಲಿ 12 ಪಂಗಡಗಳ ಶ್ರೀಗಳು ಮಂಗಳೂರು ಜೋಗಿ ಮಠದ ರಾಜವನ್ನು ಆಯ್ಕೆ ಮಾಡುತ್ತಾರೆ.

ಬರಹ: ಹರೀಶ್‌, ಮಂಗಳೂರು