ಕನ್ನಡ ಸುದ್ದಿ  /  Karnataka  /  Bengaluru News Nia Raids 17 Locations Across 7 States In Bengaluru Prison Radicalisation Probe India News Uks

NIA Raids: ಬೆಂಗಳೂರು ಜೈಲಲ್ಲಿ ಉಗ್ರ ಸಂಚು; ಕರ್ನಾಟಕ, ತಮಿಳುನಾಡು ಸೇರಿ 7 ರಾಜ್ಯಗಳ 17 ಕಡೆಗಳಲ್ಲಿ ಎನ್‌ಐಎ ದಾಳಿ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೇ ಉಗ್ರ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ, ತಮಿಳುನಾಡ ಸೇರಿ 7 ರಾಜ್ಯಗಳ 17 ಕಡೆಗಳಲ್ಲಿ ಇಂದು (ಮಾ.5) ಎನ್‌ಐಎ ದಾಳಿ ನಡೆಸಿದೆ. ಬೆಂಗಳೂರು ಜೈಲಲ್ಲಿ ಉಗ್ರ ಸಂಚು ಪ್ರಕರಣದ ಇನ್ನಷ್ಟು ಮಾಹಿತಿ ಇಲ್ಲಿದೆ.

ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ
ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ (Vipin Kumar/HT Photo)

ನವದೆಹಲಿ: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು (ಬೆಂಗಳೂರು ಜೈಲಲ್ಲಿ ಉಗ್ರ ಸಂಚು) ರೂಪಿಸಿದ್ದಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ (ಮಾ.5) ಏಳು ರಾಜ್ಯಗಳ 17 ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಲಷ್ಕರ್-ಏ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಟಿ ನಸೀರ್, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದುಕೊಂಡು ಹಲವರನ್ನು ತೀವ್ರಗಾಮಿಗಳನ್ನಾಗಿ ಮಾಡಿ, ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪ್ರಚೋದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬೆಂಗಳೂರು ನಗರ ಪೊಲೀಸರು ಖಚಿತ ಮಾಹಿತಿ ಆಧರಿಸಿ, 2023ರ ಜುಲೈನಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಶೋಧ ನಡೆಸಿದಾಗ, 7 ಪಿಸ್ತೂಲ್‌ಗಳು, 4 ಹ್ಯಾಂಡ್ ಗ್ರೆನೇಡ್, ಒಂದು ಮ್ಯಾಗಜೀನ್ ಮತ್ತು 45 ಲೈವ್ ರೌಂಡ್‌ಗಳು ಮತ್ತು 4 ವಾಕಿ-ಟಾಕಿಗಳು ಸೇರಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಇದರ ಮುಂದುವರಿದ ಭಾಗವಾಗಿ ಟಿ.ನಸೀರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಬೆಂಗಳೂರು ಜೈಲಲ್ಲಿ ಉಗ್ರ ಸಂಚು; ಅಕ್ಟೋಬರ್‌ನಲ್ಲಿ ಎನ್‌ಐಎ ತನಿಖೆ ಶುರು

ಬೆಂಗಳೂರು ಜೈಲಲ್ಲಿ ಉಗ್ರ ಸಂಚು ಪ್ರಕರಣವನ್ನು ಬೆಂಗಳೂರು ಪೊಲೀಸರು ಎನ್‌ಐಎಗೆ ಒಪ್ಪಿಸಿದ್ದರು. ಎನ್‌ಐಎ ಇದನ್ನು 2023ರ ಅಕ್ಟೋಬರ್ 25ರಂದು ತನಿಖೆಗೆ ಎತ್ತಿಕೊಂಡಿದೆ. ಇದಾಗಿ ಡಿಸೆಂಬರ್ 13ರಂದು ಕೆಲವು ಕಡೆ ದಾಳಿ ನಡೆಸಿ ಸಾಕ್ಷ್ಯಗಳನ್ನು ಕಲೆಹಾಕಿತ್ತು. ಬೆಂಗಳೂರು ಜೈಲಲ್ಲಿ ಉಗ್ರ ಸಂಚು ಪ್ರಕರಣದಲ್ಲಿ ಈಗಾಗಲೇ ಟಿ.ನಸೀರ್ ಮತ್ತು ಇಬ್ಬರು ತಲೆಮರೆಸಿಕೊಂಡವರು ಸೇರಿ 8 ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ.

ಕೇರಳದ ಕಣ್ಣೂರು ಮೂಲದ ನಸೀರ್ 2013ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೆ, ವಿದೇಶಕ್ಕೆ ಪರಾರಿಯಾಗಿರುವ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಜೈಲಿನಲ್ಲಿದ್ದಾಗ ಆತನಿಂದ ತೀವ್ರಗಾಮಿ ಬೋಧನೆಗೆ ಒಳಗಾಗಿ ಪರಿವರ್ತನೆಯಾದವರು. ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಜಾಹಿದ್ ತಬ್ರೇಜ್, ಸೈಯದ್ ಮುದಾಸಿರ್ ಪಾಷಾ ಮತ್ತು ಮೊಹಮ್ಮದ್ ಫೈಸಲ್ ರಬ್ಬಾನಿ ಅವರು ನಸೀರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಂಕಿಸಲಾಗಿದೆ.

"ಅವರೆಲ್ಲರನ್ನೂ ಎಲ್ಇಟಿ ಪರ ಕೆಲಸ ಮಾಡುವ ಭಯೋತ್ಪಾದಕರನ್ನಾಗಿ ಮಾಡುವ ಮತ್ತು ನೇಮಕ ಮಾಡುವ ಉದ್ದೇಶದಿಂದ ಅವರ ಸಾಮರ್ಥ್ಯಗಳನ್ನು ಟಿ.ನಸೀರ್ ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ್ದ. ಅದಾದ ಬಳಿಕ ಅವರನ್ನು ತನ್ನ ಬ್ಯಾರಕ್‌ಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯೂ ಆಗಿದ್ದ. ಎಲ್ಇಟಿಯ ಚಟುವಟಿಕೆಗಳನ್ನು ಮುಂದುವರಿಸಲು ಮೊದಲು ಜುನೈದ್ ಮತ್ತು ಸಲ್ಮಾನ್ ಅವರನ್ನು ತೀವ್ರಗಾಮಿಗಳನ್ನಾಗಿ ನೇಮಕ ಮಾಡುವಲ್ಲಿ ನಸೀರ ಯಶಸ್ವಿಯಾಗಿದ್ದ. ಇದಾದ ಬಳಿಕ ಇತರ ಆರೋಪಿಗಳನ್ನು ತೀವ್ರಗಾಮಿಗಳನ್ನಾಗಿ ಮಾಡಲು ಮತ್ತು ನೇಮಕ ಮಾಡಲು ನಸೀರ್‌ ಜುನೈದ್ ಜೊತೆ ಪಿತೂರಿ ನಡೆಸಿದ" ಎಂದು ಎನ್ಐಎ ಜನವರಿಯ ಹೇಳಿಕೆಯಲ್ಲಿ ತಿಳಿಸಿತ್ತು.

ಈಗ ಇದೇ ಪ್ರಕರಣ ಸಂಬಂಧ ಇಂದು (ಮಾ.5) ಎನ್‌ಐಎ ನಡೆಸಿರುವ ದಾಳಿಗೂ ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ (ಮಾ.1) ನಡೆದ ಸ್ಫೋಟಕ್ಕೂ ಸಂಬಂಧ ಇದೆಯೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ವಿದ್ಯಮಾನಗಳ ಅರಿವು ಇರುವಂಥವರು, ಖಚಿತವಾಗಿಯೂ ಎನ್‌ಐಎ ಅಧಿಕಾರಿಗಳ ತಂಡ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಪರಿಶೀಲಿಸಲದೆ ಎಂದು ಹೇಳಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯನ್ನೂ ಎನ್ಐಎ ಸೋಮವಾರ ವಹಿಡಿಕೊಂಡಿದೆ.

ಬಿಡುಗಡೆಯಾಗಿ ತಲೆಮರೆಸಿಕೊಂಡಿರುವ ಜುನೈದ್

ಜೈಲಿನಿಂದ ಬಿಡುಗಡೆಯಾದ ನಂತರ ಜುನೈದ್ ಇನ್ನೂ ಕೆಲವು ಅಪರಾಧಗಳನ್ನು ಮಾಡಿದ ನಂತರ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ನಂಬಲಾಗಿದೆ.

"ಎನ್ಐಎ ತನಿಖೆಯ ಪ್ರಕಾರ, ಜೈಲಿನ ಒಳಗೆ ಮತ್ತು ಹೊರಗೆ ಎಲ್ಇಟಿ ಚಟುವಟಿಕೆಗಳನ್ನು ಉತ್ತೇಜಿಸಲು ಅವನು ವಿದೇಶದಿಂದ ತನ್ನ ಸಹ ಆರೋಪಿಗಳಿಗೆ ಹಣವನ್ನು ಕಳುಹಿಸಲು ಪ್ರಾರಂಭಿಸಿದ್ದಾನೆ. 'ಫಿದಾಯಿನ್' ದಾಳಿ ನಡೆಸಲು ಮತ್ತು ನ್ಯಾಯಾಲಯಕ್ಕೆ ಹೋಗುವಾಗ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ನಸೀರ್‌ಗೆ ಸಹಾಯ ಮಾಡುವ ಪಿತೂರಿಯ ಭಾಗವಾಗಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಹ್ಯಾಂಡ್ ಗ್ರೆನೇಡ್ಗಳು ಮತ್ತು ವಾಕಿ ಟಾಕಿಗಳನ್ನು ಇತರರಿಗೆ ತಲುಪಿಸಲು ಅವರು ಸಲ್ಮಾನ್ ಜೊತೆ ಸೇರಿ ಪಿತೂರಿ ನಡೆಸಿದ್ದರು. ದಾಳಿಗಾಗಿ ಬಳಸಿದ ಪೊಲೀಸ್ ಟೋಪಿಗಳನ್ನು ಕದಿಯಲು ಮತ್ತು ಅಭ್ಯಾಸ ಚಾಲನೆಯಾಗಿ ಸರ್ಕಾರಿ ಬಸ್ಸುಗಳಿಗೆ ಬೆಂಕಿ ಹಚ್ಚಲು ಜುನೈದ್ ತನ್ನ ಸಹ ಆರೋಪಿಗಳಿಗೆ ಸೂಚನೆ ನೀಡಿದ್ದಾನೆ. ಕಳೆದ ವರ್ಷ ಜುಲೈನಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಮೂಲಕ ಈ ಸಂಚು ವಿಫಲಗೊಂಡಿದೆ" ಎಂದು ಎನ್‌ಐಎ ಮೂಲಗಳು ತಿಳಿಸಿವೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point