ಕನ್ನಡ ಸುದ್ದಿ  /  Karnataka  /  Bengaluru News Gunman Security For Bitcoin Scam King Pin Hacker Shriki Accused Politicians Police Officers In Fear Mrt

ಬಿಟ್‌ಕಾಯಿನ್‌ ಹಗರಣದ ಕಿಂಗ್‌ಪಿನ್ ಶ್ರೀಕಿಗೆ ಗನ್‌ಮ್ಯಾನ್‌ ಭದ್ರತೆ; ಆರೋಪಿ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳಲ್ಲಿ ನಡುಕ

ಬಿಟ್‌ಕಾಯಿನ್‌ ಹಗರಣದ ಕಿಂಗ್ ಪಿನ್ ಶ್ರೀಕಿಗೆ ಗನ್‌ಮ್ಯಾನ್‌ ಭದ್ರತೆ ಒದಗಿಸಲಾಗಿದೆ. ಈ ವಿದ್ಯಮಾನವು ಆರೋಪಿ ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಇದರ ವಿವರ ವರದಿ ಇಲ್ಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬಿಟ್‌ಕಾಯಿನ್‌ ಹಗರಣದ ಕಿಂಗ್ ಪಿನ್ ಶ್ರೀಕಿಗೆ ಗನ್‌ಮ್ಯಾನ್‌ ಭದ್ರತೆ
ಬಿಟ್‌ಕಾಯಿನ್‌ ಹಗರಣದ ಕಿಂಗ್ ಪಿನ್ ಶ್ರೀಕಿಗೆ ಗನ್‌ಮ್ಯಾನ್‌ ಭದ್ರತೆ

ಬೆಂಗಳೂರು: ಇಡೀ ರಾಜ್ಯವನ್ನು ತಲ್ಲಣಗೊಳಿಸಿದ್ದ ಬಿಟ್‌ಕಾಯಿನ್‌ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಗನ್‌ಮ್ಯಾನ್‌ ಭದ್ರತೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿತ್ತು. ತನಿಖೆ ಮುಂದುವರೆದಂತೆ ಬೆಚ್ಚಿ ಬೀಳಿಸುವ ಕುತೂಹಲಕಾರಿ ವಿದ್ಯಮಾನಗಳು ಒಂದೊಂದಾಗಿ ಬೆಳಕಿಗೆ ಬರತೊಡಗಿದವು. ಈತನನ್ನು ಬಂಧಿಸಿದ ನಂತರವಂತೂ ಕೆಲವರಿಗೆ ನಡುಕ ಉಂಟಾಗಿತ್ತು.

ತನಿಖೆಯ ಸಂದರ್ಭದಲ್ಲಿ ಶ್ರೀಕಿ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ ಹೆಸರನ್ನು ಎಸ್ ಐ ಟಿ ಗೆ ತಿಳಿಸಿದ್ದ. ತನಿಖೆ ಮತ್ತಷ್ಟು ಚುರುಕುಗೊಳ್ಳುತ್ತಿದ್ದಂತೆ ಶ್ರೀಕಿಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಆರಂಭದಲ್ಲಿಯೇ ಪೊಲೀಸರು ಭದ್ರತೆಯ ದೃಷ್ಟಿಯಿಂದ ಗನ್ ಮ್ಯಾನ್ ಒದಗಿಸುವುದಾಗಿ ಶ್ರೀಕಿಗೆ ಹೇಳಿದ್ದರಾದರೂ ಶ್ರೀಕಿ ನಿರಾಕರಿಸಿದ್ದ. ಆದರೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿಗಳನ್ನು ಆಧರಿಸಿ ಶ್ರೀಕಿಗೆ ಗನ್‌ಮ್ಯಾನ್‌ ಭದ್ರತೆ ಒದಗಿಸಲಾಗಿದೆ.

ಕಂಪ್ಯೂಟರ್ ತಂತ್ರಜ್ಞಾನ, ಹ್ಯಾಕಿಂಗ್ ನಂತಹ ವಿಷಯಗಳಲ್ಲಿ ಶ್ರೀಕಿ ಪರಿಣಿತಿ ಹೊಂದಿದ್ದ. ವೆಬ್‌ಸೈಟ್ ಹ್ಯಾಕ್ ಮಾಡುತ್ತಿದ್ದ ಸಂಗತಿ ಎಲ್ಲರಿಗೂ ಗೊತ್ತಾಗಿತ್ತು. ಆದ್ದರಿಂದ ರಾಜಕಾರಣಿಗಳು ಶ್ರೀಕಿಯನ್ನು ಬಳಸಿಕೊಂಡು, ಆತನ ಮೂಲಕ ಬಿಟ್‌ಕಾಯಿನ್ ಹಗರಣ ನಡೆಸಿದ್ದರು. ಈ ಹಗರಣದಲ್ಲಿ ಐಪಿಎಸ್ ಅಧಿಕಾರಿಗಳೂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ.

ಶ್ರೀಕಿ ಬಾಯಿ ಬಿಟ್ಟಿದ್ದ ಕೆಲವು ಹಿರಿಯ ಅಧಿಕಾರಿಗಳನ್ನು ಇತ್ತೀಚೆಗೆ ತನಿಖಾ ತಂಡ ವಿಚಾರಣೆಗೆ ಒಳಪಡಿಸಿತ್ತು ಎಂದು ಹೇಳಲಾಗಿದೆ. ಇನ್ನೂ ಕೆಲವು ಅಧಿಕಾರಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಯಾರು ಈ ಶ್ರೀಕಿ ?

ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮೂಲತಃ ಬೆಂಗಳೂರಿನ ನಿವಾಸಿ. ವಿದೇಶದಲ್ಲಿ 2014ರಿಂದ 3 ವರ್ಷ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಎಸ್ಸಿ ಪದವಿ ಪಡೆದಿದ್ದ. ಹ್ಯಾಕಿಂಗ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಆಗಿದ್ದ ಈತ ವೆಬ್‌ಸೈಟ್ ಹ್ಯಾಕ್ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದ. ಪದವಿ ಪಡೆದು ಭಾರತಕ್ಕೆ ಮರಳಿದ ನಂತರ ಸಣ್ಣಪುಟ್ಟ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಗಮನ ಸೆಳೆದಿದ್ದ ನಂತರ ದೊಡ್ಡ ದೊಡ್ಡ ಕಂಪನಿಗಳ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತಿದ್ದ. ಅದರಲ್ಲೂ. ಬಿಟ್ ಕಾಯಿನ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಕಂಪನಿಗಳ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ ಹಣವನ್ನು ಗಳಿಸುತ್ತಿದ್ದ. ಈ ಎಲ್ಲ ದುಷ್ಕೃತ್ಯಗಳಿಗೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಎಂದು ಕಂಪ್ಯೂಟರ್ ತಜ್ಞರು ಹೇಳುತ್ತಾರೆ.

2020ರಲ್ಲಿ ಡಾರ್ಕ್‌ವೆಬ್‌ ಮೂಲಕ ವಿದೇಶಗಳಿಂದ ಹೈಡ್ರೊ ಗಾಂಜಾ ತರಿಸಿದ್ದ ಆರೋಪದಡಿಯಲ್ಲಿ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಶ್ರೀಕಿ ಹಾಗೂ ಇತರರ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ಹಾಗೂ ಇತರರನ್ನು ಸಿಸಿಬಿ ಬಂಧಿಸಿತ್ತು. ನಂತರ ಶ್ರೀಕಿ ಜಾಮೀನು ಪಡೆದಿದ್ದಾನೆ. ಈ ಹಗರಣದಲ್ಲಿ ಶ್ರೀಕಿ ಜೊತೆಗೆ ಕೆಲವು ರಾಜಕಾರಣಿಗಳ ಮಕ್ಕಳು ಭಾಗಿಯಾಗಿರುವ ಆರೋಪ ಇದೆ.

ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತಿರುವ ಆರೋಪಿಗಳು

ಮೂರು ದಿನಗಳ ಹಿಂದೆಯಷ್ಟೇ ಈ ಹಗರಣದಲ್ಲಿ ಭಾಗಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಎಸ್‌ಪಿ ಶ್ರೀಧರ್ ಕೆ. ಪೂಜಾರ್ ಮತ್ತು ಯಲಹಂಕ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ಚಂದ್ರಧರ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮತ್ತೊಬ್ಬ ಆರೋಪಿ ಪೊಲೀಸ್ ಇನ್‌ಸ್ಪೆಕ್ಟರ್‌ ಡಿ.ಎಂ. ಪ್ರಶಾಂತ್ ಬಾಬು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳಾದ ಶ್ರೀಧರ್ ಪೂಜಾರ್, ಪ್ರಶಾಂತ್ ಬಾಬು, ಲಕ್ಷ್ಮಿಕಾಂತಯ್ಯ ಮತ್ತು ಚಂದ್ರಧರ ಅವರು ಶ್ರೀಕಿ ಮತ್ತು ರಾಬಿನ್ ಖಂಡೇಲ್‌ವಾಲ ಅವರನ್ನು ಅಕ್ರಮವಾಗಿ ಬಂಧನದಲ್ಲಿರಿಸಿ, ಇವರಿಂದ ಬಿಟ್ ಕಾಯಿನ್‌ಗಳನ್ನು ವರ್ಗಾವಣೆ ಮಾಡಿಕೊಂಡ ಆರೋಪ ಎದುರಿಸುತ್ತಿದ್ದಾರೆ.

IPL_Entry_Point