Bengaluru Karaga: ಏಪ್ರಿಲ್ 15ಕ್ಕೆ ಬೆಂಗಳೂರು ಐತಿಹಾಸಿಕ ಕರಗ ಆಚರಣೆಗೆ ಚಾಲನೆ; ಏಪ್ರಿಲ್ 23ಕ್ಕೆ ಶಕ್ತ್ಯೋತ್ಸವ
ಏಪ್ರಿಲ್ 23 ರಂದು ಬೆಂಗಳೂರು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯ ರಥೋತ್ಸವ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬಿಬಿಎಂಪಿ ಕರಗದ ಉಸ್ತುವಾರಿ ವಹಿಸಿಕೊಂಡಿದೆ. (ವರದಿ: ಎಚ್. ಮಾರುತಿ)
ಬೆಂಗಳೂರು: ನಾಳೆಯಿಂದ (ಏಪ್ರಿಲ್ 15, ಸೋಮವಾರ) ಕರಗದ (Bengaluru Karaga 2024) ಆಚರಣೆ ವಿದ್ಯುಕ್ತವಾಗಿ ಆರಂಭವಾಗಲಿವೆ. ಏಪ್ರಿಲ್ 23ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಈ ಬಾರಿಯೂ ಎ. ಜ್ಞಾನೇಂದ್ರ ಸ್ವಾಮಿ ಅವರು ಕರಗ ಹೊರಲಿದ್ದಾರೆ. ಇವರು ಹದಿಮೂರನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ. ಇವರ ಹೆಸರನ್ನು ಮುಜರಾಯಿ ಇಲಾಖೆ ಮತ್ತು ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಆಯ್ಕೆ ಮಾಡಿದೆ.
ಕರಗ ಕಾರ್ಯಕ್ರಮ ವೇಳಾಪಟ್ಟಿ
ಏಪ್ರಿಲ್ 15ರ ಸೋಮವಾರ ರಾತ್ರಿ 10ಕ್ಕೆ ರಥೋತ್ಸವ ಧ್ವಜಾರೋಹಣ, ಏಪ್ರಿಲ್ 16 ರಿಂದ 19 ಪ್ರತಿ ದಿನ ವಿಶೇಷ ಪೂಜೆ ಮತ್ತು ಮಂಗಳಾರತಿ, ಏಪ್ರಿಲ್ 21ಕ್ಕೆ ಹಸಿ ಕರಗ, ಏಪ್ರಿಲ್ 23 ರಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯ ರಥೋತ್ಸವ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ಕರಗದ ಉಸ್ತುವಾರಿ ವಹಿಸಿಕೊಂಡಿದ್ದು, ಈಗಾಗಲೇ 1.5 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ಈಗಾಗಲೇ ಹಲವು ಬಾರಿ ಸಭೆ ನಡೆಸಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ಚ್ಯುತಿ ಬಾರದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕರಗ ಉತ್ಸವ ನಡೆಯುವ ರಸ್ತೆಗಳಲ್ಲಿ ವಿದ್ಯುತ್ ದೀಪ ಅಳವಡಿಕೆ, ವೈದ್ಯರು ಮತ್ತು ಇತರ ಸಿಬ್ಬಂದಿ ನಿಯೋಜನೆ, ಘನತ್ಯಾಜ್ಯ ವಿಭಾಗದ ಕಾರ್ಮಿಕರ ನೇಮಕ ಮಾಡಲು ತಿಳಿಸಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿಟಿವಿ ಅಳವಡಿಕೆ, ಪೊಲೀಸ್ ಬಂದೋಬಸ್ತ್, ಅಗ್ನಿಶಾಮಕ ವಾಹನ ಮತ್ತು ಒಳ ಚರಂಡಿ ಸ್ವಚ್ಚಗೊಳಿಸಲು ತಿಳಿಸಿದ್ದಾರೆ.
ಬೆಂಗಳೂರು ಕರಗದ ಇತಿಹಾಸ
ಬೆಂಗಳೂರಿನ ತಿಗಳರಪೇಟೆಯಲ್ಲಿ ವಹ್ನಿಕುಲ ಅಥವಾ ತಿಗಳ ಸಮುದಾಯ ಕರಗವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದೆ. ಆ ಸಮುದಾಯದ ಐತಿಹ್ಯಗಳ ಪ್ರಕಾರ ದ್ರೌಪದಿ ಮತ್ತು ಪಾಂಡವರಲ್ಲಿ ಹಿರಿಯನಾದ ಧರ್ಮರಾಯನಿಗೆ ದೇವಾಲಯಗಳನ್ನು ನಿರ್ಮಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ. ಈ ಸಮುದಾಯ ದ್ರೌಪದಿಯನ್ನು ತಮ್ಮ ಕುಲ ದೇವತೆ ಎಂದು ಭಾವಿಸಿದ್ದಾರೆ. ಬೆಂಗಳೂರಿನ ಹಳೆಯ ಸಮುದಾಯಗಳಲ್ಲಿ ಒಂದಾದ ತಿಗಳರು ಧರ್ಮರಾಯ ಸ್ವಾಮಿ ದೇವಸ್ಥಾನವನ್ನು ಸುಮಾರು 800 ವರ್ಷಗಳ ಹಿಂದೆ ನಿರ್ಮಿಸಿದ್ದಾರೆ.
ಕರಗ ಹಬ್ಬವನ್ನು ತಿಗಳ ಸಮುದಾಯ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದೆ. ಆದಿಶಕ್ತಿ ದ್ರೌಪದಿಯನ್ನು ಆರಾಧಿಸುವ ಹಬ್ಬವೇ ಕರಗ. ಶತಶತಮಾನಗಳಿಂದ ಕರಗವನ್ನು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಚರಿಸಕೊಂಡು ಬರಲಾಗುತ್ತಿದೆ. ಈ ಆಚರಣೆಯ ಗುಟ್ಟುಗಳು ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರುವುದಿಲ್ಲ. ಪೂಜಾ ವಿಧಾನಗಳನ್ನು ಬಹಿರಂಗಪಡಿಸಿದರೆ ತಿಳಿದವರಿಗೆ ಮತ್ತು ತಿಗಳ ಸಮುದಾಯಕ್ಕೆ ಶ್ರೇಯಸ್ಸು ಅಲ್ಲ ಎಂಬ ಪ್ರತೀತಿ ಇದೆ. ಈ ಸಂಪ್ರದಾಯ ಮತ್ತು ಪೂಜೆಯನ್ನು ಬೆಂಗಳೂರು ಮೂಲದ ತಿಗಳರೇ ನಡೆಸುವುದು ವಾಡಿಕೆ. ಇವರ ಮೂಲಪುರುಷ ರಾಜ ವೀರವಹ್ನಿ ಬೆಂಕಿಯಿಂದ ಜನಿಸಿದ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗ್ನಿಯ ಅಧಿದೇವತೆಯಾದ ದೌಪದಿಯ ಹೆಸರಿನಲ್ಲಿ ಕರಗವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನ ಕರಗದ ಕೇಂದ್ರಬಿಂದು. ಕರಗ 9 ದಿನಗಳ ಹಬ್ಬ. ಯುಗಾದಿ ನಂತರ ಕರಗದ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದ್ವಾದಶಿಯಂದು ಆರತಿ ಸೇವೆ ಮತ್ತು ದೀಪೋತ್ಸವ ನಡೆದರೆ ತ್ರಯೋದಶಿಯಂದು ಹಸಿಕರಗ ನಡೆಯುತ್ತದೆ. ಪೂರ್ಣಿಮೆಯಂದು ಕರಗದ ಉತ್ಸವ ನಡೆಯುತ್ತದೆ.
ಕರಗ ಆಚರಣೆ ಹೇಗೆ?
ಕರಗದ ಮುಖ್ಯ ಆಚರಣೆ ಪೂರ್ಣಿಮೆಯಂದು ನಡೆಯುತ್ತದೆ. ಅಂದು ಸ್ತ್ರೀ ವೇಷವನ್ನು ಧರಿಸಿದ ಪುರುಷ ಪೂಜಾರಿ ಹೂಗಳಿಂದ ಅಲಂಕರಿಸಿದ ಪಿರಮಿಡ್ ಮಾದರಿಯ ಕಳಸವನ್ನು ತಲೆಯ ಮೇಲೆ ಹೊತ್ತು ಸಾಗುತ್ತಾರೆ. ಯಾವುದೇ ಕಾರಣಕ್ಕೂ ಕೈಗಳಿಂದ ಮುಟ್ಟುವುದಿಲ್ಲ. ಹೀಗೆ ರಾತ್ರಿಯಿಡೀ ಮೆರವಣಿಗೆ ನಡೆಸುವುದು ಕರಗದ ಅವಿಭಾಜ್ಯ ಅಂಗ. ಧರ್ಮರಾಯ ಸ್ವಾಮಿ ದೇವಸ್ಥಾನ ದಿಂದ ನಗರ್ತ ಪೇಟೆ, ಕಬ್ಬನ್ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಅರಳೆ ಪೇಟೆ, ಬಳೆಪೇಟೆ, ಕುಂಬಾರ ಪೇಟೆ, ಹಲಸೂರು ಮತ್ತು ಗೂಳರ ಪೇಟೆಯ ಮೂಲಕ ಮೆರವಣಿಗೆ ನಡೆಯುತ್ತದೆ. ಲಕ್ಷಾಂತರ ಜನರು ಕರಗದಲ್ಲಿ ಭಾಗವಹಿಸುತ್ತಾರೆ. ಜಾತಿ ಮತ ಧರ್ಮಗಳ ಹಂಗಿಲ್ಲದೆ ಸರ್ವ ಧರ್ಮಿಯರು ಉತ್ಸಾಹದಿಂದ ಭಾಗವಹಿಸುವುದು ಮತ್ತೊಂದು ವಿಶೇಷ.
ಕರಗದ ಹಿನ್ನೆಲೆ
ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಚೆ ಹೋಗುತ್ತಾಳೆ. ಇದು ತಿಳಿಯದೆ ಪಾಂಡವರು ಮುಂದೆ ಸಾಗುತ್ತಾರೆ. ಆಕೆ ಎಚ್ಚರಗೊಂಡಾಗ ತಿಮಿರಾಸುರ ಎಂಬ ರಾಕ್ಷಸ ಎದುರಿಗೆ ನಿಂತಿರುತ್ತಾನೆ. ಆಗ ದ್ರೌಪದಿ ತಿಮಿರಾಸುರನ ವಿರುದ್ದ ಹೊರಾಡಲು ವೀರಕುಮಾರರ ಪಡೆಯನ್ನು ಸೃಷ್ಟಿಸುತ್ತಾಳೆ. ಯುದ್ಧದಲ್ಲಿ ತಿಮಿರಾಸುರ ಅಸುನೀಗುತ್ತಾನೆ. ವೀರಕುಮಾರರು ದ್ರೌಪದಿಯನ್ನು ಸ್ವರ್ಗಕ್ಕೆ ಹೋಗದಂತೆ ತಡೆಯುತ್ತಾರೆ. ಆಗ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸಿ ಮೂರು ದಿನ ಇರುವುದಾಗಿ ಭರವಸೆ ನೀಡುತ್ತಾಳೆ. ಹೀಗೆ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವ 3 ದಿನಗಳ ಕಾಲ ಆಚರಿಸುವ ಹಬ್ಬವೇ ಕರಗ ಎಂಬ ಐತಿಹ್ಯವಿದೆ.
ಏನಿದು ಹಸಿ ಕರಗ
ಚೈತ್ರಶುದ್ಧ ತ್ರಯೋದಶಿಯಂದು ಕರಗ ಹೊರುವ ಪೂಜಾರಿ, ಅರ್ಚಕರ ವಂಶಸ್ಥರು ಮತ್ತು ವೀರಕುಮಾರರು ಸಂಪಂಗಿ ಕೆರೆಯ ಬಳಿ ಮಧ್ಯರಾತ್ರಿ ಸೇರುತ್ತಾರೆ. ಈ ಕೆರೆಯು ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿದೆ. ಈ ಸ್ಥಳವನ್ನು ಸ್ವಚ್ಚಗೊಳಿಸಿ ಕೆಂಪು ಕೊಡೆಯನ್ನು ನೆಡಲಾಗುತ್ತದೆ. ಈ ದಿನದ ಹಿಂದಿನ 7 ದಿನಗಳಿಂದ ಉಪವಾಸವಿದ್ದ ವೀರಕುಮಾರರು ತಮ್ಮ ಚೂಪಾದ ಕತ್ತಿಗಳನ್ನು ಸಿದ್ದಪಡಿಸಿ ಇಟ್ಟುಕೊಂಡಿರುತ್ತಾರೆ. ಕರಗ ದೇವತೆಯ ಹೆಸರಿನಲ್ಲಿ ವೀರಕುಮಾರರು ದೀಕ್ಷೆ ಪಡೆದುಕೊಂಡಿರುತ್ತಾರೆ. ಈ ವೀರಕುಮಾರರೇ ಕರಗದ ಅಂಗರಕ್ಷರು. ಇವರು ತಮ್ಮ ಕತ್ತಿಗಳಿಂದ ಎದೆಗೆ ಬಡಿದುಕೊಳ್ಳುತ್ತಾರೆ. ನೂರಾರು ವೀರಕುಮಾರರು ಸೊಂಟದ ಸುತ್ತ ಕೆಂಪು ಪಟ್ಟಿಯನ್ನು ಕಟ್ಟಿಕೊಂಡು ಎದೆಯ ಸುತ್ತ ಬಿಳಿ ವಸ್ತ್ರ ಮತ್ತು ತಲೆಗೆ ಪೇಟವನ್ನು ಸುತ್ತಿಕೊಂಡಿರುತ್ತಾರೆ.
ನಡುರಾತ್ರಿಯ ನಂತರ ಹಸಿಕರಗವನ್ನು ಸಿದ್ದಪಡಿಸಲಾಗುತ್ತದೆ. ಗೋಪುರದ ಆಕಾರದಲ್ಲಿ ಕರಗವನ್ನು ಕೆಂಪು ವಸ್ತ್ರದಿಂದ ಅಲಂಕರಿಸಿ ಸೇವಂತಿಗೆ ಹೂಗಳಿಂದ ಸಿಂಗರಿಸಲಾಗುತ್ತದೆ. ಇದೇ ಸಮಯಕ್ಕೆ ಕರಗದ ಪೂಜಾರಿಯನ್ನು ಸೇವಂತಿಗೆ ಹೂಗಳಿಂದ ಸಿಂಗರಿಸಲಾಗುತ್ತದೆ. ನಂತರ ಮಹಾಮಂಗಳಾರತಿ ನೆರವೇರುತ್ತದೆ. ವೀರಕುಮಾರರು ಗೋವಿಂದಾ ಗೋವಿಂದಾ ಎಂಬ ಘೋಷಣೆಗಳನ್ನು ಕೂಗುತ್ತಾರೆ. ಇದನ್ನು ಅಲಗು ಸೇವೆ ಎಂದು ಕರೆಯಲಾಗುತ್ತದೆ. ರಾತ್ರಿಯಿಡೀ ಮೆರವಣಿಗೆ ನಡೆದು ಸೂರ್ಯಾಸ್ತವಾದ ನಂತರ ದೇವಸ್ಥಾನ ತಲುಪುತ್ತದೆ. (ವರದಿ: ಎಚ್. ಮಾರುತಿ)