ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ; ಭದ್ರತಾ ಲೋಪಕ್ಕೆ ನ್ಯಾಯಪೀಠದ ಅಸಮಾಧಾನ
ಕರ್ನಾಟಕ ಹೈಕೋರ್ಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮುಖ್ಯನ್ಯಾಯಮೂರ್ತಿ ಎದುರೇ ಆತ್ಮಹತ್ಯೆಗೆತ್ನಿಸಿದ ವಿಲಕ್ಷಣ ಘಟನೆ ವರದಿಯಾಗಿದೆ. ಭದ್ರತಾ ಲೋಪವಾಗಿರುವುದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ತನಿಖೆ ನಡೆದಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಬೆಚ್ಚಿಬೀಳಿಸುವಂತಹ ವಿದ್ಯಮಾನ ಒಂದರಲ್ಲಿ, ಕರ್ನಾಟಕ ಹೈಕೋರ್ಟ್‌ನ ಕೋರ್ಟ್ ರೂಮ್‌ನಲ್ಲೇ ವ್ಯಕ್ತಿಯೊಬ್ಬರು ತಮ್ಮ ಕತ್ತನ್ನು ಬ್ಲೇಡ್‌ನಿಂದ ಕೊಯ್ದುಕೊಂಡ ಘಟನೆ ವರದಿಯಾಗಿದೆ. ದಿಢೀರ್ ವಿದ್ಯಮಾನದಿಂದ ವಿಚಲಿತವಾದ ನ್ಯಾಯಪೀಠ, ಭದ್ರತಾ ಲೋಪದ ಬಗ್ಗೆ ಅಸಮಾಧಾನ ವಕ್ತಪಡಿಸಿತು.
ಕತ್ತು ಕೊಯ್ದುಕೊಂಡ ವ್ಯಕ್ತಿಯನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಹಾಲ್‌ನಲ್ಲಿ ಇಂದು (ಏಪ್ರಿಲ್ 3) ಈ ವಿಲಕ್ಷಣ ವಿದ್ಯಮಾನ ನಡೆಯಿತು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಚ್. ಪಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ ಎಂದಿನಂತೆ ದೈನಂದಿನ ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಮಧ್ಯಾಹ್ನ ನಂತರ ಸುಮಾರು 1.15ರ ವೇಳೆಗೆ ಕ್ರಮ ಸಂಖ್ಯೆ 26 ರ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟವರನ್ನು ನ್ಯಾಯಾಲಯದ ಅಧಿಕಾರಿ ಕೂಗಿದ್ದರು. ಆಗ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಒಂದಷ್ಟು ಕಡತಗಳೊಂದಿಗೆ ಏಕಾಕಿಯಾಗಿ ನ್ಯಾಯಪೀಠದ ಮುಂದಕ್ಕೆ ಆಗಮಿಸುತ್ತಾರೆ. ಕಡತಗಳನ್ನು ಅಧಿಕಾರಿಗೆ ಕೊಡುತ್ತಾರೆ. ಅದಾದ ಬಳಿಕ ಕೂಡಲೇ ಆ ವ್ಯಕ್ತಿ ಬ್ಯಾಗ್ ನಿಂದ ತಾವು ಚಿಕ್ಕದಾದ ಆಯುಧವೊಂದನ್ನು ಹೊರತೆಗೆದು ಕತ್ತು ಕೊಯ್ದುಕೊಳ್ಳುತ್ತಾರೆ.
ಕೂಡಲೇ ಮುಖ್ಯ ನ್ಯಾಯಮೂರ್ತಿಗಳು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಪೊಲೀಸರಿಗೆ ಸೂಚಿಸಿದರು. ತಕ್ಷಣವೇ ಆಗಮಿಸಿದ ಪೊಲೀಸರು ಆ ವ್ಯಕ್ತಿಯನ್ನು ಹೊರಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಹೈಕೋರ್ಟ್ ಒಳಗೆ ಕತ್ತುಕೊಯ್ದುಕೊಂಡ ವ್ಯಕ್ತಿ ಯಾರು
ಹೈಕೋರ್ಟ್‌ನ ಕೋರ್ಟ್ ಹಾಲ್‌ನಲ್ಲಿ ಮುಖ್ಯನ್ಯಾಯಮೂರ್ತಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸುತ್ತಿದ್ದ ಹಾಲ್‌ನಲ್ಲೇ ಕತ್ತುಕೊಯ್ದುಕೊಂಡ ವ್ಯಕ್ತಿಯನ್ನು ಪೊಲೀಸರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿಯನ್ನು ಮೈಸೂರು ಮೂಲದ ಶ್ರೀನಿವಾಸ್ (51) ಎಂದು ಗುರುತಿಸಲಾಗಿದೆ.
ಮೈಸೂರಿನ ನಿವಾಸಿ ಶ್ರೀನಿವಾಸ್ ಅವರು ಹೈಕೋರ್ಟ್ ಪ್ರವೇಶಿಸಿ ಕೋರ್ಟ್ ಹಾಲ್ ಒಂದರಲ್ಲಿ ಭದ್ರತಾ ಸಿಬ್ಬಂದಿಗೆ ಕಡತವನ್ನು ಹಸ್ತಾಂತರಿಸಿದರು. ಕೂಡಲೇ ಜೇಬಿನಿಂದ ಚಾಕು ತೆಗೆದು ಮುಖ್ಯ ನ್ಯಾಯಾಧೀಶರ ಸಮ್ಮುಖದಲ್ಲಿ ಕತ್ತು ಸೀಳಿದರು. ಭದ್ರತಾ ಸಿಬ್ಬಂದಿ ತಕ್ಷಣ ಎಚ್ಚೆತ್ತು ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು ಎಂದು ಪಿಟಿಐ ವರದಿ ಮಾಡಿದೆ.
“ಅವರು ಮುಖ್ಯ ನ್ಯಾಯಾಧೀಶರ ಮುಂದೆ ಏಕೆ ಅಂತಹ ತೀವ್ರವಾದ ಹೆಜ್ಜೆ ಇಟ್ಟರು ಎಂದು ನಮಗೆ ತಿಳಿದಿಲ್ಲ. ಅವರು ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ ಮತ್ತು ಅವರು ದೈಹಿಕವಾಗಿ ಸದೃಢರಾದ ನಂತರ ಮಾತ್ರ ನಾವು ಅವರ ಹೇಳಿಕೆಯನ್ನು ತೆಗೆದುಕೊಳ್ಳಬಹುದು" ಎಂದು ಪೊಲೀಸ್ ಅಧಿಕಾರಿ ಹೇಳಿದ್ಧಾಗಿ ವರದಿಯಾಗಿದೆ.
ಭದ್ರತಾ ಲೋಪದ ಬಗ್ಗೆ ನ್ಯಾಯಪೀಠದ ಅಸಮಾಧಾನ
ಹೈಕೋರ್ಟ್ ಒಳಗೆ ಪ್ರವೇಶಿಸಲು ಭಾರಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಇದೆ. ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಆದರೂ ಈ ವ್ಯಕ್ತಿ ಆಯುಧವನ್ನು ತೆಗೆದುಕೊಂಡು ಹೇಗೆ ಒಳಗೆ ಪ್ರವೇಶಿಸಿದರು ಎಂದು ಮುಖ್ಯ ನ್ಯಾಯುಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.
ಪೊಲೀಸರು ಏನು ಮಾಡುತ್ತಿರುತ್ತಾರೆ ಎಂದು ನ್ಯಾಯಮೂರ್ತಿ ಪ್ರಭಾಕರ ಶಾಸ್ತ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷ ಏನೆಂದರೆ ನ್ಯಾಯಮೂರ್ತಿ ಎಚ್.ಪಿ.ಪ್ರಭಾಕರ ಶಾಸ್ತ್ರಿ ಇಂದು ಬುಧವಾರ ನಿವೃತ್ತಿ ಹೊಂದುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.