ಕನ್ನಡ ಸುದ್ದಿ  /  Karnataka  /  Bengaluru News Nodal Officers To Solve Water Problem In 110 Villages Of 35 Wards Of Bbmp Outer City Rmy

ಬಿಬಿಎಂಪಿ ಹೊರವಲಯದ 35 ವಾರ್ಡ್‌ಗಳ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ನೋಡಲ್ ಅಧಿಕಾರಿಗಳ ನಿಯೋಜನೆ

ಬೆಂಗಳೂರಿನಲ್ಲಿ ಕುಡಿಯುವ ನೀರನ ಸಮಸ್ಯೆಯಾಗಿದ್ದು, ಬಿಬಿಎಂಪಿ ಹೊರವಲಯದ 35 ವಾರ್ಡ್‌ಗಳ 110 ಹಳ್ಳಿಗಳಿಗೆ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳನ್ನ ನಿಯೋಜಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಹೊರವಲಯದಲ್ಲಿನ 35 ವಾರ್ಡ್‌ಗಳ 110 ಹಳ್ಳಿಗಳ ನೀರನ ಸಮಸ್ಯೆ ಬಗೆಹರಿಸಲು ನೋಡಲ್ ಅಧಿಕಾರಗಳನ್ನು ನೇಮಿಸಲಾಗಿದೆ (ಫೋಟೊ-ಫೈಲ್)
ಬಿಬಿಎಂಪಿ ವ್ಯಾಪ್ತಿಯ ಹೊರವಲಯದಲ್ಲಿನ 35 ವಾರ್ಡ್‌ಗಳ 110 ಹಳ್ಳಿಗಳ ನೀರನ ಸಮಸ್ಯೆ ಬಗೆಹರಿಸಲು ನೋಡಲ್ ಅಧಿಕಾರಗಳನ್ನು ನೇಮಿಸಲಾಗಿದೆ (ಫೋಟೊ-ಫೈಲ್)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರವಲಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಶೀಘ್ರ ಕುಡಿಯುವ ನೀರಿನ ಸಮಸ್ಯೆ ಆಲಿಸುವ ಸಲುವಾಗಿ ಪ್ರತ್ಯೇಕವಾಗಿ ಮೇಲುಸ್ತುವಾರಿಗಾಗಿ ಕಾರ್ಯಪಾಲಕ ಅಭಿಯಂತರ (ದಾಸರಹಳ್ಳಿ) ಧರಣೇಂದ್ರ ಕುಮಾರ್ ಅವರನ್ನು ನೋಡಲ್ ಅಧಿಕಾರಿಯನ್ನ ನಿಯೋಜಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಪಾಲಿಕೆಯ ಕೇಂದ್ರ ಕಚೇರಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಯಾದ 1533 ಗೆ ಕರೆ ಮಾಡಿ ತಮ್ಮ ಸಮಸ್ಯೆ ಕುರಿತು ಮಾಹಿತಿ ಒದಗಿಸಲು ಕೋರಲಾಗಿದೆ.

ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯ ಇನ್ನುಳಿದ ವಾರ್ಡ್‌ಗಳ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯವಾಣಿ ಸಂಖ್ಯೆಯಾದ 1916 ಗೆ ಕರೆ ಮಾಡಿ ತಮ್ಮ ಸಮಸ್ಯೆ ಕುರಿತು ಮಾಹಿತಿ ಒದಗಿಸಬಹುದಾಗಿದೆ.

ಹೊರ ವಲಯಗಳಲ್ಲಿ ಬರುವ 35 ವಾರ್ಡ್‌ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆಯು 35 ವಾರ್ಡ್‌ಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್ ರವರು ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಟ್ಯಾಂಕರ್ ನೀರಿಗೆ ದುಪ್ಪಣ ಹಣ ವಸೂಲಿ ಆರೋಪ

ಕಳೆದ ಕೆಲವು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದನ್ನೇ ಬಂಡವಾಳನ್ನವಾಗಿಸಿಕೊಂಡಿರುವ ನೀರಿನ ಟ್ಯಾಂಕರ್‌ಗಳ ಮಾಲೀಕರು ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ. 400 ರೂಪಾಯಿ ಇದ್ದ ಟ್ಯಾಂಕರ್ ನೀರಿಗೆ 2,000 ರೂಪಾಯಿ ವರೆಗೆ ಪೀಕುತ್ತಿದ್ದಾರೆಂದು ಸ್ಥಳೀಯರ ಆರೋಪವಾಗಿದೆ.

ಬೇಸಿಗೆಯ ಆರಂಭದಲ್ಲೇ ಬೆಂಗಳೂರಿನಲ್ಲಿ ನೀರಿನ ಕೊರತೆ ತೀವ್ರಗೊಂಡಿದೆ. ನಗರ ಹಾಗೂ ಹೊರವಲಯದಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬಿಬಿಎಂಪಿ ಅಧಿಕಾರಿಗಳು ಸಮಗ್ರ ಕಾರ್ಯತಂತ್ರ ರೂಪಿಸಲು ಇತ್ತೀಚೆಗಷ್ಟೇ ಸಭೆಯನ್ನು ನಡೆಸಿದ್ದರು. ಆರ್‌ಆರ್‌ ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಳ್ಳಾಲ ಗ್ರಾಮ, ಸೊನ್ನೇನಹಳ್ಳಿ, ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ಸರ್‌ ಎಂ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್‌ನಿಂದ 9ನೇ ಬ್ಲಾಕ್, ಮುನೇಶ್ವರನಗರ, ಪ್ರಕೃತಿನಗರ, ಎಚ್‌ಎಂಟಿ ಲೇಔಟ್, ರಾಮಲೇಔಟ್, ಶೆಟ್ಟಿಹಳ್ಳಿ ವಾರ್ಡ್-12, ಮಲ್ಲಸಂದ್ರ ವಾರ್ಡ್-13 ಸೇರಿದಂತೆ ಹಲವೆಡೆ ನೀರಿನ ಸಮಸ್ಯೆಯಾಗಿದೆ.

ನೀರಿನ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ಬಿಬಿಎಂಪಿ ಹಲವು ಕ್ರಮಗಳಿಗೆ ಮುಂದಾಗಿದೆ. ಮಹದೇವಪುರು, ಆರ್‌ಆರ್‌ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ ಮತ್ತು ಯಲಹಂಕ ಸೇರಿದಂತೆ ಆದ್ಯತಾ ವಲಯಗಳಲ್ಲಿ ಹಾಗೂ ಸುತ್ತಮುತ್ತಲಿನ 110 ಹಳ್ಳಿಹಳಿಗೆ ನೀರು ಪೂರೈಸಲು ಬೋರ್‌ವೆಲ್‌ಗಳನ್ನು ಕೊರೆಸಲು 131 ಕೋಟಿ ರೂಪಾಯಿಗಳನ್ನು ಹಣವನ್ನು ಮೀಸಲಿಟ್ಟಿದೆ.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿರುವುದಕ್ಕೆ ಜನಸಾಮಾನ್ಯರು ಮಾತ್ರವಲ್ಲದೆ ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ನಾಯಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ 99 ವರ್ಷಗಳ ಕಾಲ ಬಿಬಿಎಂಪಿ ನೀರು ಪೂರೈಸದಿದ್ದರೆ ಬೆಂಗಳೂರಿನಲ್ಲಿ ಮನೆ ಖರೀದಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬೆಂಗಳೂರು ಹೃದ್ರೋಗ ತಜ್ಞ ಡಾ ದೀಪಕ್ ಕೃಷ್ಣಮೂರ್ತಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಬಿಬಿಎಂಪಿ ಕೂಡ ನೀರಿನ ಸಮಸ್ಯೆ ನಿವಾರಿಸಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point