CT Ravi: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್; ಬೆಳಗಾವಿಯಿಂದ ಬೆಂಗಳೂರು ಕಡೆಗೆ ಸಿಟಿ ರವಿ; ಈವರೆಗಿನ 9 ಮುಖ್ಯ ವಿದ್ಯಮಾನ
ಕನ್ನಡ ಸುದ್ದಿ  /  ಕರ್ನಾಟಕ  /  Ct Ravi: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್; ಬೆಳಗಾವಿಯಿಂದ ಬೆಂಗಳೂರು ಕಡೆಗೆ ಸಿಟಿ ರವಿ; ಈವರೆಗಿನ 9 ಮುಖ್ಯ ವಿದ್ಯಮಾನ

CT Ravi: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್; ಬೆಳಗಾವಿಯಿಂದ ಬೆಂಗಳೂರು ಕಡೆಗೆ ಸಿಟಿ ರವಿ; ಈವರೆಗಿನ 9 ಮುಖ್ಯ ವಿದ್ಯಮಾನ

CT Ravi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಕೇಸ್ ಗಂಭೀರವಾಗಿದ್ದು, ಬೆಳಗಾವಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಹೀಗಾಗಿ ಬೆಳಗಾವಿಯಿಂದ ಬೆಂಗಳೂರು ಕಡೆಗೆ ಸಿಟಿ ರವಿ ಅವರನ್ನು ಪೊಲೀಸರು ಕರೆದೊಯ್ಯುತ್ತಿದ್ದಾರೆ. ಈವರೆಗಿನ 9 ಮುಖ್ಯ ವಿದ್ಯಮಾನಗಳ ನೋಟ ಇಲ್ಲಿದೆ.

ಬಂಧನದಲ್ಲಿದ್ದ ಸಿಟಿ ರವಿ ಅವರನ್ನು ಪೊಲೀಸರು ರಾತ್ರಿ ಇಡೀ ಊರೂರು ಕರೆದೊಯ್ದಿದ್ದರು. ನಿನ್ನೆ ತಡ ರಾತ್ರಿ ರಸ್ತೆಯಲ್ಲಿ ಕುಳಿತು ಸಿಟಿ ರವಿ ಪ್ರತಿಭಟನೆ ವ್ಯಕ್ತಪಡಿಸಿದರು (ಎಡ ಚಿತ್ರ). ಇಂದು ಅವರನ್ನು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆ ತಂದ ಸಂದರ್ಭದ ಚಿತ್ರ ಬಲಬದಿಯದ್ದು.
ಬಂಧನದಲ್ಲಿದ್ದ ಸಿಟಿ ರವಿ ಅವರನ್ನು ಪೊಲೀಸರು ರಾತ್ರಿ ಇಡೀ ಊರೂರು ಕರೆದೊಯ್ದಿದ್ದರು. ನಿನ್ನೆ ತಡ ರಾತ್ರಿ ರಸ್ತೆಯಲ್ಲಿ ಕುಳಿತು ಸಿಟಿ ರವಿ ಪ್ರತಿಭಟನೆ ವ್ಯಕ್ತಪಡಿಸಿದರು (ಎಡ ಚಿತ್ರ). ಇಂದು ಅವರನ್ನು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆ ತಂದ ಸಂದರ್ಭದ ಚಿತ್ರ ಬಲಬದಿಯದ್ದು.

CT Ravi: ವಿಧಾನ ಪರಿಷತ್ ಸಭಾಂಗಣದ ಒಳಗೆ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರಂತೆ ಪೊಲೀಸರು ಅವರನ್ನು ದಿಢೀರ್ ಬಂಧಿಸಿ ಹೊತ್ತೊಯ್ದ ಘಟನೆ ಗಮನಸೆಳೆದಿತ್ತು. ಅದಾಗಿ, ರಾತ್ರಿ ಇಡೀ ಬೆಳಗಾವಿ ಜಿಲ್ಲೆಯ ಹಲವೆಡೆ ಸುತ್ತಾಡಿಸಿದ್ದು, ತಡ ರಾತ್ರಿ ಅವರು ರಸ್ತೆ ಮಧ್ಯೆ ಪ್ರತಿಭಟಿಸಿದ್ದೂ ಗಮನಸೆಳೆದಿತ್ತು. ಈ ನಡುವೆ ಅವರ ತಲೆಯಿಂದ ರಕ್ತ ಸೋರುತ್ತಿದ್ದ ವಿಡಿಯೋ, ಫೋಟೋಗಳು ವೈರಲ್ ಆಗಿದ್ದವು. ಇಂದು (ಡಿಸೆಂಬರ್ 20) ಬೆಳಗ್ಗೆ ಅವರನ್ನು ಬೆಳಗಾವಿಯ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ಬಳಿಕ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಸೂಚಿಸಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಸಿಟಿ ರವಿ ಕೇಸ್ ಏನಾಯಿತು; ಇದುವರೆಗಿನ ಪ್ರಮುಖ 9 ಬೆಳವಣಿಗೆಗಳು

1) ಸಿಟಿ ರವಿ ಅವಾಚ್ಯ ಪದ ಬಳಸಿ ಅವಹೇಳನ ಮಾಡಿದ್ದಾರೆ. ಅವಾಚ್ಯ ಪದವನ್ನು 10 ಸಲ ಬಳಸಿದ್ದಾರೆ, ಅಶ್ಲೀಲ ಸನ್ನೆ ಮಾಡಿ, ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬೆನ್ನಿಗೆ ಸುವರ್ಣ ಸೌಧದಲ್ಲಿ ಧರಣಿ ಕುಳಿತಿದ್ದ ಸಿಟಿ ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಬಲವಂತವಾಗಿ ಹೆಗಲ ಮೇಲೆ ಹೊತ್ತುಕೊಂಡು ಜೀಪು ಹತ್ತಿಸಿ ಅಲ್ಲಿಂದ ಕರೆದೊಯ್ದಿದ್ದರು. ಹಿರೇಬಾಗೇವಾಡಿ ಠಾಣೆಯಲ್ಲಿ ಕೆಲಹೊತ್ತು ಕೂರಿಸಿ ನಂತರ ನಂದಗಢ ಠಾಣೆಗೆ ಕರೆದೊಯ್ದಿದ್ದರು. ಮತ್ತೆ ಅಲ್ಲಿಂದ ಖಾನಾಪುರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಿದ್ದರು.

2) ಇದಾಗುತ್ತಲೇ ಖಾನಾಪುರ ಠಾಣೆ ಎದುರು ಬಿಜೆಪಿ ಎಂಎಲ್‌ಸಿ ರವಿ ಕುಮಾರ್, ಸುಭಾಷ್ ಪಾಟೀಲ್‌, ಸಂಜಯ್ ಪಾಟೀಲ್ ಸೇರಿ ಹಲವು ಪ್ರತಿಭಟನೆ ನಡೆಸಿದರು. ನಂತರ ವಿಪಕ್ಷ ನಾಯಕ ಆರ್.ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಅರವಿಂದ ಬೆಲ್ಲದ್, ಮಾಜಿ ಸಚಿವ ಪ್ರಭು ಚೌಹಾಣ್‌ ಅವರು ಖಾನಾಪುರ ಪೊಲೀಸ್ ಠಾಣೆಗೆ ತೆರಳಿದ್ದು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು.

3) ಇದಾದ ಕೂಡಲೇ ಸಿಟಿ ರವಿ ಅವರನ್ನು ಮಧ್ಯರಾತ್ರಿ ಖಾನಾಪುರ ಪೊಲೀಸ್ ಠಾಣೆಯಿಂದ ಸ್ಥಳಾಂತರ ಮಾಡಲಾಗಿದೆ. ಅಲ್ಲಿಂದ ಕಿತ್ತೂರು, ಅಲ್ಲಿ ಕೆಲ ಹೊತ್ತು ಇದ್ದು, ನಂತರ ಧಾರವಾಡ ತಾಲೂಕು ತಡಕೋಡ ಗ್ರಾಮದ ಮಾರ್ಗವಾಗಿ ಮತ್ತೆ ಬೆಳಗಾವಿ ಜಿಲ್ಲೆಯ ಬೆಳವಡಿ ಗ್ರಾಮಕ್ಕೆ ಕರೆದೊಯ್ದಿದ್ದಾರೆ. ಅದಾಗಿ ಸವದತ್ತಿ ಪಟ್ಟಣಕ್ಕೆ ಬಂದು ಅಲ್ಲಿ ಕೆಲ ಹೊತ್ತು ಇದ್ದರು, ನಂತರ ರಾಮದುರ್ಗದ ಡಿವೈಎಸ್‌ಪಿ ಕಚೇರಿಗೆ ಹೋಗಿದ್ದಾರೆ. ಇದೇ ವೇಳೆ ಸಿಟಿ ರವಿ ಅವರ ತಲೆಯಿಂದ ರಕ್ತ ಸೋರುತ್ತಿದ್ದ ಫೋಟೋ, ವಿಡಿಯೋ ಬಹಿರಂಗವಾಗಿದೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ. ರಾಮದುರ್ಗ ಡಿವೈಎಸ್‌ಪಿ ಕಚೇರಿಯಲ್ಲಿ ಗಾಯಕ್ಕೆ ಚಿಕಿತ್ಸೆ ನೀಡಲಾಗಿದೆ. ಅವರ ತಲೆಗೆ ಬ್ಯಾಂಡೇಜ್ ಸುತ್ತಿಸಿದ ಬಳಿಕ ರಾಮದುರ್ಗ ಪಟ್ಟಣದ ತುಂಬಾ ಅವರನ್ನು ಜೀಪಲ್ಲಿ ಕುಳ್ಳಿರಿಸಿ ಕರೆದೊಯ್ಯಲಾಗಿದೆ. ಆಗ ದಾರಿ ಮಧ್ಯೆ ರಸ್ತೆಗೆ ಇಳಿದ ರವಿ ಅಲ್ಲೇ ಪ್ರತಿಭಟನೆ ನಡೆಸಿದರು. ನಂತರ ಅವರನ್ನು ಬಾಗಲಕೋಟೆ, ಲೋಕಾಪುರ, ಯಾದವಾಡ ಕಡೆಗೆ ಕೊಂಡೊಯ್ಯಲಾಗಿದೆ. ಹುಲಕುಂದ ಗ್ರಾಮ, ಬಟಕುರ್ಕಿ, ಯರಗಟ್ಟಿಗೂ ಕರೆದೊಯ್ದ ಪೊಲೀಸರು ಅಲ್ಲಿಂದ ಮಾಧ್ಯಮದ ದಾರಿ ತಪ್ಪಿಸಿದರು ಎಂದು ವರದಿ ವಿವರಿಸಿದೆ.

ತಲೆ ಗಾಯವಾದ ಚಿತ್ರಗಳನ್ನು ಶೇರ್ ಮಾಡಿಕೊಂಡಿರುವ ಸಿಟಿ ರವಿ
ತಲೆ ಗಾಯವಾದ ಚಿತ್ರಗಳನ್ನು ಶೇರ್ ಮಾಡಿಕೊಂಡಿರುವ ಸಿಟಿ ರವಿ

4) ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಹಿಂಬರಹ ಕೊಟ್ಟರೇ ಹೊರತು ಎಫ್‌ಐಆರ್ ದಾಖಲಿಸಿಲ್ಲ. ನನ್ನನ್ನು ರಾತ್ರಿ ಸುತ್ತಮುತ್ತ ಜಿಲ್ಲೆಗಳಲ್ಲೆಲ್ಲ ಸುತ್ತಾಡಿಸಿದರು. ಕಬ್ಬಿನ ಗದ್ದೆಗೂ ಕರೆದೊಯ್ದರು. ನನ್ನ ಜೀವಕ್ಕೇನಾದರೂ ಅಪಾಯವಾದರೆ ಅದಕ್ಕೆ ಕಾಂಗ್ರೆಸ್​ ಸರ್ಕಾರವೇ ಜವಾಬ್ದಾರಿಯಾಗಿದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ, ಸುಳ್ಳು ದೂರು ಕೊಟ್ಟು ನನ್ನನ್ನು ಕೊಲೆ ಮಾಡುವ ಸಂಚು ರೂಪಿಸಲಾಗಿದೆ ಎಂದು ಸಿಟಿ ರವಿ ಆರೋಪಿಸಿದರು.

5) ಸದನದ ಒಳಗೆ ನಡೆದಿರುವ ವಿಚಾರದಲ್ಲಿ ಪರಿಷತ್ ಸಭಾಪತಿಗಳು ರೂಲಿಂಗ್ ಕೊಟ್ಟ ಬಳಿಕವೂ ಪೊಲೀಸರು ನನ್ನ ಬಂಧಿಸಿರುವುದು ಯಾಕೆ, ಯಾವುದರ ಆಧಾರ ಮೇಲೆ ಎಂಬುದು ಗೊತ್ತಾಗಿಲ್ಲ ಎಂದು ಹೇಳಿರುವ ಸಿಟಿ ರವಿ, ಇದೆಲ್ಲವೂ ಒಂದು ದೊಡ್ಡ ಸಂಚು, ಷಡ್ಯಂತ್ರ. ನಾನೊಬ್ಬ ಜನಪ್ರತಿನಿಧಿ. ಹಿಂದೆ ಮಂತ್ರಿಯಾಗಿ ಕೆಲಸ ಮಾಡಿದವನು. ನಾನು ದೂರು ಕೊಟ್ಟರೂ ಪೊಲೀಸರು ಎಫ್​ಐಆರ್​ ದಾಖಲಿಸಿಕೊಳ್ಳಲು ಮೀನಮೇಷ ಎಣಿಸಿದರು. ತುರ್ತು ಪರಿಸ್ಥಿತಿಯಂತೆ ಪೊಲೀಸರು ನಡೆಸುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

6) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ವರ್ಗಾವಣೆ ಮಾಡಿರುವುದಾಗಿ ಬೆಳಗಾವಿ 5ನೇ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶರಾದ ಸ್ಪರ್ಶ ಡಿಸೋಜಾ ಹೇಳಿದರು. 24 ಗಂಟೆ ಒಳಗೆ ಬೆಂಗಳೂರು ಕೋರ್ಟ್‌ನಲ್ಲಿ ಸಿಟಿ ರವಿ ಅವರನ್ನು ಹಾಜರುಪಡಿಸಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿದರು. ಇದರಂತೆ, ಸಿಟಿ ರವಿ ಅವರನ್ನು ರಸ್ತೆ ಮಾರ್ಗವಾಗಿ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.

7) ಸಿಟಿ ರವಿ ಅವರು ಫ್ರಸ್ಟ್ರೇಶನ್‌ (ಹತಾಶೆ) ಎಂಬ ಪದ ಬಳಸಿದ್ದಾರೆಂದು ಸಮಜಾಯಿಷಿ ನೀಡಿದ್ದನ್ನು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ಮಾಧ್ಯಮಗಳಿಗೆ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಆಲೋಚಿಸಿ ಹೇಳಿದ ಮಾತು. ಅವಾಚ್ಯ ಪದ ಬಳಸಿದ್ದನ್ನು ಕೇಳಿಸಿಕೊಂಡವರಿದ್ದಾರೆ. ಅದಕ್ಕೇ ಸಚಿವರು ದೂರು ನೀಡಿದ್ದಾರೆ. ಸಭಾಪತಿಯವರಿಗೇನು ಗೊತ್ತು. ಅವರು ಕಲಾಪ ಮುಂದೂಡಿ ಒಳಗೆ ಹೋಗಿದ್ದರು. ಘಟನೆಗೆ ಸಂಬಂಧಿಸಿ ಆಡಿಯೋ ಮತ್ತು ವಿಡಿಯೋ ಎರಡೂ ಇದೆ ಎಂದು ಹಲವರು ಹೇಳಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

8) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಬಿಜೆಪಿ ಸದಸ್ಯ ಸಿಟಿ ರವಿ ಅವರು ಆಕ್ಷೇಪಾರ್ಹ ಪದ ಬಳಿಸಿದ್ದಾರೆ ಎಂಬ ದೂರು ಸಲ್ಲಿಕೆಯಾಗಿತ್ತು. ಆದರೆ ಅದಕ್ಕೆ ಸಂಬಂಧಪಟ್ಟ ಆಡಿಯೋ, ವಿಡಿಯೋ ದಾಖಲೆ ಸಿಕ್ಕಿಲ್ಲ. ನಾಲ್ವರು ಈ ಬಗ್ಗೆ ಸಾಕ್ಷಿ ಹೇಳಿದ್ದರು. ಸಿಟಿ ರವಿ ಅವರೂ ದೂರು ನೀಡಿದ್ದರು. ಇಬ್ಬರ ದೂರು ಪಡೆದಿದ್ದೇವೆ. ಆಡಿಯೋ ವಿಡಿಯೋ ದಾಖಲೆಗಳು ಇಲ್ಲದ ಕಾರಣ ಇಬ್ಬರಿಗೂ ಬುದ್ಧಿ ಹೇಳಿದ್ದೇವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾಗಿ ವರದಿಯಾಗಿದೆ. ಸಭಾಪತಿಯವರು ಪರಿಷತ್‌ನಲ್ಲಿ ರೂಲಿಂಗ್ ನೀಡಿದ ಸಂದರ್ಭ ಹೀಗಿತ್ತು ವಿಡಿಯೋ ನೋಡಿ-

ಇದಾದ ಬಳಿಕ ಸಿಟಿ ರವಿ ಟ್ವೀಟ್ ಮಾಡಿದ್ದ ವಿಡಿಯೋ ಇದು

9) ರಾಹುಲ್ ಗಾಂಧಿ ಅವರು ಡ್ರಗ್ ಎಡಿಕ್ಟ್ ಎಂದು ಪದೆ ಪದೇ ಹೇಳಿದಾಗ ನೀವು ಅಪಘಾತ ಮಾಡಿ, ಮೂವರನ್ನು ಕೊಲೆ ಮಾಡಿದ್ದೀರಲ್ಲ ಎಂದು ಹೇಳಿದ್ದು ನಿಜ. ನನ್ನ ಮಾತಿನಿಂದ ನಾನು ಹಿಂದೆ ಸರಿದಿಲ್ಲ. ಆದರೆ ಅವರು ತಾವು ಆ ರೀತಿ ಮಾತನಾಡಿಯೇ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ‌. ಅವರು ಮಾತನಾಡಿರುವ ಬಗ್ಗೆ ಎಲ್ಲರ ಬಳಿಯೂ ವಿಡಿಯೋ ದಾಖಲೆಯಿದೆ ಎಂದರು. 10 ಬಾರಿ ಅತ್ಯಂತ ಕೆಟ್ಟ ಪದ ಬಳಸಿ ನನ್ನ ತೇಜೋವಧೆ ಮಾಡಿದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಇಂದು (ಡಿಸೆಂಬರ್ 20) ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.

ಇದೇ ವೇಳೆ, ರಾಜ್ಯದ ಹಲವೆಡೆ ಪ್ರತಿಭಟನೆಗಳಾಗಿವೆ. ಸಿಟಿ ರವಿ ಬಂಧನ ವಿರೋಧಿ ಬಿಜೆಪಿ ಸದಸ್ಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಿಟಿ ರವಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಮಂಡ್ಯದಲ್ಲಿ ಸಿಎಂ ಪ್ರತಿಕ್ರಿಯೆ: ಸಿಟಿ ರವಿ ಬಂಧನ ವಿರೋಧಿಸಿ ಬಿಜೆಪಿ ಪಕ್ಷ ಪ್ರತಿಭಟನೆ ಮಾಡುವ ಮೂಲಕ ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಬೆಂಬಲಿಸುತ್ತಿದ್ದಾರೆ. ಸಿಟಿ ರವಿಯವರು ಕೀಳುಭಾಷೆ ಬಳಸಿದ್ದು ಸುಳ್ಳಾದರೆ ಅವರ ಬಂಧನವೇಕಾಯಿತು? ಸಾಮಾನ್ಯವಾಗಿ ಇಂತಹ ಆರೋಪಗಳ ಬಗ್ಗೆ ಹೆಣ್ಣುಮಕ್ಕಳು ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಸಿಟಿ ರವಿಯವರು ಅವಾಚ್ಯ ಪದ ಏಕೆ ಬಳಸಿದರೆಂದು ನನಗೆ ತಿಳಿದಿಲ್ಲ. ಆದರೆ ಇದೊಂದು ಗಂಭೀರ ಸ್ವರೂಪದ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಸಿಟಿ ರವಿಯವರು ತಾವು ‘ಫ್ರಸ್ಟ್ರೇಷನ್’ ಪದ ಬಳಸಿರುವುದಾಗಿ ತಿಳಿಸಿದ್ದಾರೆ. ಆದರೆ ಅವಾಚ್ಯ ಪದ ಬಳಸಿರುವುದು ನಿಜವೆಂದು ಸಚಿವರು ಹೇಳಿದ್ದಾರೆ. ಕೀಳು ಪದಬಳಕೆಯನ್ನು ಕೇಳಿರುವುದಾಗಿ ಅಲ್ಲಿಯೇ ಇದ್ದ ಇತರ ಸದಸ್ಯರೂ ಹೇಳಿದ್ದಾರೆ. ಸಭಾಪತಿಯವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಇದೆ ಎಂದೂ ಹಲವರು ಹೇಳುತ್ತಿದ್ದು, ಪದಬಳಕೆಯಾಗಿರುವುದು ಸತ್ಯ. ಸಿಟಿ ರವಿಯವರು ಎಸಗಿರುವ ಅಪರಾಧ ಕೃತ್ಯಕ್ಕೆ ಅನುಗುಣವಾಗಿ ಕಾನೂನಿನ ಕ್ರಮ ಜರುಗಿಸಬೇಕಾಗುತ್ತದೆ. ಬೆಳಗಾವಿಯಲ್ಲಿ ಜನರ ಆಕ್ರೋಶದಿಂದ ಸಿಟಿ ರವಿಯವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಮಂಡ್ಯದಲ್ಲಿ ಹೇಳಿದ್ದಾರೆ.

Whats_app_banner