ಅಮೆರಿಕ ವೀಸಾ ಪಡೆಯಲು ಚೆನ್ನೈಗೆ ಹೋಗಬೇಕಿಲ್ಲ ಇನ್ನು; ಮುಂದಿನ ವರ್ಷ ಬೆಂಗಳೂರಲ್ಲೇ ಅಮೆರಿಕನ್ ಕಾನ್ಸುಲೇಟ್
ಅಮೆರಿಕನ್ ವೀಸಾ ಪಡೆಯಲು ಬಹುತೇಕ ಬೆಂಗಳೂರಿಗರು ಚೆನ್ನೈಗೆ ಹೋಗುವುದು ವಾಡಿಕೆ. ವರ್ಷಕ್ಕೆ 4 ರಿಂದ 5 ಲಕ್ಷ ಕನ್ನಡಿಗರು ಈ ರೀತಿ ವೀಸಾ ಪಡೆಯುತ್ತಿದ್ದಾರೆ. ಆದರೆ, ಅಮೆರಿಕ ವೀಸಾ ಪಡೆಯಲು ಚೆನ್ನೈಗೆ ಹೋಗಬೇಕಿಲ್ಲ ಇನ್ನು. ಮುಂದಿನ ವರ್ಷ ಬೆಂಗಳೂರಲ್ಲೇ ಅಮೆರಿಕನ್ ಕಾನ್ಸುಲೇಟ್ ಶುರುವಾಗಲಿದೆ ಎಂದು ಸುಳಿವು ನೀಡಿದ್ದಾರೆ ರಾಯಭಾರಿ ಎರಿಕ್ ಗಾರ್ಸೆಟ್ಟಿ.
ಬೆಂಗಳೂರು: ಮುಂದಿನ ವರ್ಷದ ವೇಳೆಗೆ ಬೆಂಗಳೂರಿನಲ್ಲಿಯೇ ಅಮೆರಿಕನ್ ಕಾನ್ಸುಲೇಟ್ ಕಾರ್ಯಾರಂಭ ಮಾಡಲಿದೆ ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 2023 ರಲ್ಲಿ ಅಮೇರಿಕಕ್ಕೆ ಭೇಟಿ ನೀಡಿದಾಗ ಅಲ್ಲಿನ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿಯಾಗಿದ್ದರು. ಆಗ ಅವರು ಭಾರತದಲ್ಲಿ ಎರಡು ಹೊಸ ಅಮೆರಿಕನ್ ದೂತಾವಾಸಗಳನ್ನು ಘೋಷಿಸಿದ್ದರು.
ಬೆಂಗಳೂರಿನಲ್ಲಿ ನಡೆದ ಸಮ್ಮೇಳನ ಒಂದರಲ್ಲಿ ಮಾತನಾಡಿದ ಎರಿಕ್ ಗಾರ್ಸೆಟ್ಟಿ, “ಈ ಹಿಂದೆ, ಭಾರತದ ಪ್ರಧಾನಿ ಮೋದಿ ಅವರು ಅಮೆರಿಕನ್ ಅಧ್ಯಕ್ಷ ಬೈಡನ್ ಅವರನ್ನು ಭೇಟಿಯಾದಾಗ, ಅವರು ಭಾರತದಲ್ಲಿ ಒಂದಲ್ಲ, ಎರಡು ದೂತಾವಾಸಗಳನ್ನು ಘೋಷಿಸಿದರು. ಅವುಗಳಲ್ಲಿ ಒಂದು ಬೆಂಗಳೂರಿನಲ್ಲಿಯೇ ಶುರುವಾಗಲಿದೆ. ಮುಂದಿನ ವರ್ಷವೇ ಅದನ್ನು ಶುರು ಮಾಡಬೇಕೆಂಬ ಆಶಯ ನನ್ನದು. ಈ ನಗರದಲ್ಲಿ ಯುಎಸ್ ಕಾನ್ಸುಲೇಟ್ ಅನ್ನು ನೋಡಲು ನಾನು ಉತ್ಸುಕನಾಗಿದ್ದೇನೆ” ಎಂದು ಹೇಳಿದರು.
ವೀಸಾ ಬಯಸುವ ಬೆಂಗಳೂರಿಗರಿಗೆ ಕನಿಷ್ಠ 30,000 ರೂಪಾಯಿ ಉಳಿತಾಯ
ಯುಎಸ್ ಕಾನ್ಸುಲೇಟ್ ಕರ್ನಾಟಕದ ಕನಿಷ್ಠ ನಾಲ್ಕರಿಂದ ಐದು ಲಕ್ಷ ಜನರಿಗೆ ನಗರದಲ್ಲಿ ವೀಸಾ ಸಂಬಂಧಿತ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇದೇ ಸಂದರ್ಭದಲ್ಲಿ ಹೇಳಿದರು.
“ಬೆಂಗಳೂರಿನ ಜನರು ಯುಎಸ್ ವೀಸಾ ಸಂಬಂಧಿತ ಯಾವುದೇ ಕೆಲಸವನ್ನು ಪಡೆಯಲು ಚೆನ್ನೈ, ಹೈದರಾಬಾದ್ ಅಥವಾ ನವದೆಹಲಿಗೆ ಹೋಗಬೇಕಾಗಿತ್ತು. ಇದಕ್ಕೆ 25,000 ರೂ.ಗಳಿಂದ 30,000 ರೂ.ಗಳವರೆಗೆ ವೆಚ್ಚವಾಗುತ್ತಿತ್ತು. ಅಮೆರಿಕಕ್ಕೆ ಪ್ರಯಾಣಿಸುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳನ್ನು ಹೊಂದಿದ್ದರೂ, ಬೆಂಗಳೂರಿನಲ್ಲಿ ಕಾನ್ಸುಲೇಟ್ ಇರಲಿಲ್ಲ. ಶ್ವೇತಭವನದ ಘೋಷಣೆಯ ಬಗ್ಗೆ ನಮಗೆ ಸಂಪೂರ್ಣ ಸಂತೋಷವಾಗಿದೆ. ಅದನ್ನು ಸಾಧ್ಯವಾಗಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ತೇಜಸ್ವಿ ಸೂರ್ಯ ಹೇಳಿದರು.
ಬೆಂಗಳೂರಿಗರ ಅತ್ಯಗತ್ಯವಾಗಿತ್ತು ಅಮೆರಿಕನ್ ಕಾನ್ಸುಲೇಟ್
ಬೆಂಗಳೂರಿನಲ್ಲಿರುವ ಯುಎಸ್ ಕಾನ್ಸುಲೇಟ್ ಪ್ರತಿ ವರ್ಷ ಕರ್ನಾಟಕದ ನಾಲ್ಕರಿಂದ ಐದು ಲಕ್ಷ ಜನರಿಗೆ ರಾಜ್ಯದ ಹೊರಗೆ ಪ್ರಯಾಣಿಸದೆ ವೀಸಾ ಸ್ಟಾಂಪಿಂಗ್ ಮಾಡಲು ಸಹಾಯ ಮಾಡಲಿದೆ. ಬೆಂಗಳೂರಿನಲ್ಲಿರುವ ಯುಎಸ್ ಕಾನ್ಸುಲೇಟ್ ಅನಿವಾಸಿ ಭಾರತೀಯರು, ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ದೀರ್ಘಕಾಲದ ಅಗತ್ಯವಾಗಿದೆ ಎಂಬುದನ್ನು ತೇಜಸ್ವಿ ಸೂರ್ಯ ನೆನಪಿಸಿಕೊಂಡರು.
ಅಮೆರಿಕ ಮತ್ತು ಭಾರತದ ನಡುವಿನ ದೃಢವಾದ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಲು ಬಾಹ್ಯಾಕಾಶ ಕ್ಷೇತ್ರದ ಉದ್ಯಮಿಗಳು ಮತ್ತು ಉದ್ಯಮಿಗಳನ್ನು ಭೇಟಿ ಮಾಡಲು ಗಾರ್ಸೆಟ್ಟಿ ಬೆಂಗಳೂರಿಗೆ ಭೇಟಿ ನೀಡಿದ್ದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.