Kodagu News: ಕಾವೇರಿ ತೀರ್ಥೋದ್ಭವ: ಈ ಬಾರಿ ಅಕ್ಟೋಬರ್‌ 17 ರ ಮಧ್ಯರಾತ್ರಿಗೆ ಮುಹೂರ್ತ
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕಾವೇರಿ ತೀರ್ಥೋದ್ಭವ: ಈ ಬಾರಿ ಅಕ್ಟೋಬರ್‌ 17 ರ ಮಧ್ಯರಾತ್ರಿಗೆ ಮುಹೂರ್ತ

Kodagu News: ಕಾವೇರಿ ತೀರ್ಥೋದ್ಭವ: ಈ ಬಾರಿ ಅಕ್ಟೋಬರ್‌ 17 ರ ಮಧ್ಯರಾತ್ರಿಗೆ ಮುಹೂರ್ತ

Kodagu Cauvery theerthodbhava ಕೊಡಗು ಮಾತ್ರವಲ್ಲದೇ ನಾಡಿನ ನಾನಾ ಭಾಗಗಳಿಂದ ಆಗಮಿಸಿ ಪೂಜೆ ಸಲ್ಲಿಸುವ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಈ ವರ್ಷದ ಮುಹೂರ್ತವನ್ನು ನಿಗದಿ ಮಾಡಲಾಗಿದೆ.

ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಸಮಯ ನಿಗದಿಯಾಗಿದೆ.
ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಸಮಯ ನಿಗದಿಯಾಗಿದೆ.

ಮಡಿಕೇರಿ: ಕಾವೇರಿ ವಿವಾದ ಜಟಿಲವಾಗುತ್ತಿರುವ ನಡುವೆಯೇ ಕೊಡಗಿನ ಆರಾಧ್ಯದೈವ ಕಾವೇರಿ ತೀರ್ಥೋದ್ಭವಕ್ಕೆ ಈ ಬಾರಿಯ ಮಹೂರ್ತ ನಿಗದಿಯಾಗಿದೆ.

ಕೊಡಗು ಜಿಲ್ಲೆಯ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಪ್ರತಿ ವರ್ಷ ನಡೆಯುವಂತೆಯೇ ಅಕ್ಟೋಬರ್‌ 17ರಂದೇ ಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಮಂಗಳವಾರ ಮಧ್ಯರಾತ್ರಿ 1:27ಕ್ಕೆ ಕರ್ಕಾಟಕ ಲಗ್ನದಲ್ಲಿ ಮಹೂರ್ತವನ್ನು ನಿಗದಿ ಮಾಡಲಾಗಿದೆ.

ಕೊಡಗು ಮಾತ್ರವಲ್ಲದೇ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಸ್ನಾನ ಮಾಡಿ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಲಕ್ಷಾಂತರ ಜನ ಆಗಮಿಸುವುದರಿಂದ ಜಿಲ್ಲಾಡಳಿತದಿಂದಲೂ ಸಿದ್ದತೆಗಳು ನಡೆಯಲಿವೆ.

ಈ ಬಾರಿ ಮಳೆಯ ಕೊರತೆಯಿಂದ ಕೃಷ್ಣರಾಜಸಾಗರ ಜಲಾಶಯವೂ ತುಂಬಲೇ ಇಲ್ಲ. ತಮಿಳುನಾಡು ಕೂಡ ಕಾವೇರಿ ನೀರು ಹರಿಸುವಂತೆ ನಿರಂತರ ಒತ್ತಡ ಹೇರುತ್ತಲೇ ಕಾನೂನು ಸಮರಕ್ಕೂ ಮುಂದಾಗಿರುವುದು ಕರ್ನಾಟಕಕ್ಕೂ ತಲೆನೋವು ತರಿಸಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥಿಸುವ ಪ್ರಯತ್ನಗಳು ನಡೆದಿರುವ ನಡುವೆ ತೀರ್ಥೋದ್ಭವಕ್ಕೆ ಸಿದ್ದತೆಗಳು ಶುರುವಾಗುತ್ತಿವೆ.

ಹಳೆಯ ಸಂಪ್ರದಾಯ

ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಕೊಡಗು ಕಾವೇರಿ ನದಿಯಿಂದಲೂ ಜನಪ್ರಿಯ. ಮಡಿಕೇರಿ ನಗರದಿಂದ ಐವತ್ತು ಕಿ.ಮಿ ದೂರದಲ್ಲಿರುವ ತಲಕಾವೇರಿಯಲ್ಲಿ ಕಾವೇರಿ ನದಿ ಉಗಮ ಸ್ಥಳ. ತಲಕಾವೇರಿಯಲ್ಲಿರುವ ಗುಡ್ಡಗಳ ನಡುವೆ ಕಾವೇರಿ ಕುಂಡಿಕೆಯ ಮೂಲಕ ನೀರು ಹರಿಯುತ್ತದೆ. ಈ ಕುಂಡಿಕೆಯ ಮೂಲಕವೇ ಕಾವೇರಿ ಅವಿರ್ಭವಿಸುತ್ತಾಳೆ ಎನ್ನುವುದು ಜನರ ಧಾರ್ಮಿಕ ನಂಬಿಕೆ. ಆನಂತರ ಇಲ್ಲಿಂದಲೇ ಮುಂದೆ ಕಾವೇರಿ ನದಿಯಾಗಿ ಹರಿಯುತ್ತಾಳೆ. ಜನರನ್ನು ಸುಭಿಕ್ಷವಾಗಿ ಇಡುತ್ತಾಳೆ ಎನ್ನುವ ನಂಬಿಕೆ ಜನರಲ್ಲಿದೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಪುಟ್ಟ ಜಾಗವಾಗಿರುವ ಇಲ್ಲಿ ಮೊಗೆದಷ್ಟೂ ನೀರು ಬರುವಂಥದ್ದು ವಿಶೇಷ. ಇದು ಬತ್ತಿದ ಉದಾಹರಣೆಯೂ ಇಲ್ಲ. ಬೇಸಿಗೆ ಸೇರಿದಂತೆ ಎಂತಹ ಸನ್ನಿವೇಶದಲ್ಲೂ ಕುಂಡಿಕೆಯಲ್ಲಿ ನೀರು ಇದ್ದೇ ಇರುತ್ತದೆ. ಅಕ್ಕಪಕ್ಕದ ಕೊಳ್ಳದಲ್ಲಿ ನೀರು ಬತ್ತಿದರೂ ಕುಂಡಿಕೆ ಮಾತ್ರ ನೀರಿನಿಂದ ಕಂಗೊಳಿಸುತ್ತದೆ. ಇದು ಅಚ್ಚರಿಯಾದರೂ ಅಲ್ಲಿನ ಜಲಮೂಲ ಗಟ್ಟಿಯಾಗಿ ಉಳಿದುಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಧಾರ್ಮಿಕ ನಂಬಿಕೆಯಾಗಿಯೂ ಇದು ಜನರ ಮನಸಿನಲ್ಲಿ ಉಳಿದುಕೊಂಡು ಬಂದಿದೆ.

ಕೊಡಗಿನವರಿಗೆ ಕಾವೇರಿ ಆರಾಧ್ಯದೈವ

ಕಾವೇರಿ ಕೊಡಗಿನ ಆರಾಧ್ಯದೈವ. ಪ್ರತಿ ಮನೆಯವರೂ ತಲಕಾವೇರಿಗೆ ಹೋಗಿ ಕೊಡಗನ್ನು ಸುಭಿಕ್ಷೆಯಲ್ಲಿಡು ಎಂದು ಪ್ರಾರ್ಥಿಸಿ ಬರುತ್ತಾರೆ. ಅದರಲ್ಲೂ ಕಾವೇರಿ ತೀರ್ಥೋದ್ಭವದ ವೇಳೆಯಲ್ಲಂತೂ ಪ್ರತಿಯೊಬ್ಬರೂ ತಲಕಾವೇರಿಗೆ ತೆರಳಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಬರುತ್ತಾರೆ. ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದಾಗಲಿ. ಶತಮಾನಗಳಿಂದ ಕಾವೇರಿ ತಾಯಿಯೇ ನಮ್ಮನ್ನು ಸಲಹಿದ್ದಾಳೆ ಎನ್ನುವುದು ಕೊಡಗಿನ ಅಪಾರ ನಂಬಿಕೆ.

ಈ ಕಾರಣದಿಂದಲೇ ಕೊಡಗಿನಲ್ಲಿ ತೀರ್ಥೋದ್ಭವ ಕಾರ್ಯಕ್ರಮ ವಿಜೃಂಭಣೆಯಿಂದಲೇ ನಡೆಯುತ್ತದೆ. ಕಾವೇರಿ ಸಮಿತಿಯವರು ವಿಶೇಷ ಮುತುವರ್ಜಿ ವಹಿಸಿ ತಿಂಗಳ ಮುಂಚೆಯೇ ತಯಾರಿ ಆರಂಭಿಸುತ್ತಾರೆ. ಅಕ್ಟೋಬರ್‌ ಮೂರು ಹಾಗೂ ನಾಲ್ಕನೇ ವಾರದಲ್ಲಿ ತಲಕಾವೇರಿಯಲ್ಲಿ ನಿರಂತರ ಜನ ಭೇಟಿ ಇರುತ್ತದೆ.

ತೀಥೋದ್ಭವದ ಸುತ್ತ

ಅಕ್ಟೋಬರ್‌ 17ರಂದೇ ತೀಥೋದ್ಭವ ನಡೆಯುತ್ತದೆ. ಆದರೆ ಪ್ರತಿ ವರ್ಷ ಆರು ಗಂಟೆಯ ಲೆಕ್ಕದಲ್ಲಿ ನಡೆಯುತ್ತದೆ. ಹಿಂದಿನ ವರ್ಷ ಸಂಜೆ ನಡೆದಿದ್ದರೆ, ಈ ವರ್ಷ ಮಧ್ಯರಾತ್ರಿ. ಮರು ವರ್ಷ ಬೆಳಗಿನ ಜಾವ. ನಂತರದ ವರ್ಷದಲ್ಲಿ ಮಧ್ಯಾಹ್ನ ನಡೆಯುತ್ತದೆ. ಹೀಗೆ ಪ್ರತಿ ವರ್ಷ ಆರು ಗಂಟೆಯಲ್ಲಿ ಮುಹೂರ್ತ ಬದಲಾಗುತ್ತಾ ಹೋಗುತ್ತದೆ. ನಾಲ್ಕು ವರ್ಷಕ್ಕೊಮ್ಮೆ ಇದು ಬದಲಾಗಲಿದೆ ಎನ್ನುವುದು ಸ್ಥಳೀಯರ ವಿವರಣೆ.

ತೀರ್ಥೋದ್ಭವದ ನಂತರ ಹತ್ತು ದಿನಗಳ ಕಾಲ ಅತ್ಯಂತ ಪವಿತ್ರ ದಿನ. ಕುಟುಂಬದವರೊಂದಿಗೆ ಕೊಡಗಿನವರು ತಲಕಾವೇರಿಗೆ ಆಗಮಿಸಿ ಇಲ್ಲಿ ಸ್ನಾನದೊಂದಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿಂದಲೇ ಕಾವೇರಿ ತೀರ್ಥವನ್ನು ತೆಗೆದುಕೊಂಡು ಹೋಗುತ್ತಾರೆ. ಮರು ದಿನ ತಮ್ಮ ಮನೆಗಳಲ್ಲಿ ಹಿರಿಯರ ಪೂಜೆಯನ್ನು ಮಾಡುತ್ತಾರೆ. ಹತ್ತನೆ ದಿನ ಹಿರಿಯರನ್ನು ಸ್ಮರಿಸುವ ಹಾಗೂ ಅವರಿಗೆ 'ಮೀದಿ' (ಎಡೆ) ಇಡುವ ಕಾರ್ಯಕ್ರಮವನ್ನೂ ಐನ್‌ಮನೆಗಳಲ್ಲಿ ಮಾಡುತ್ತಾರೆ. ಕಾಯಿಲೆ ಅಥವಾ ಇನ್ನಿತರ ಸಮಸ್ಯೆ ಕಂಡು ಬಂದಾಗ ತೀರ್ಥ ಸೇವಿಸಿದರೆ ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯೂ ಗಾಢವಾಗಿರುವುದರಿಂದ ತೀರ್ಥೋದ್ಭವವನ್ನು ಯಾರೂ ತಪ್ಪಿಸಿಕೊಳ್ಳುವುದಿಲ್ಲ.

ಮಂಡ್ಯದವರಿಗೂ ಗೌರವ

ಇನ್ನು ಕಾವೇರಿ ಮಂಡ್ಯ ಜಿಲ್ಲೆಯವರಿಗೂ ಆರಾಧ್ಯ ದೈವ. ಕೊಡಗಿನಲ್ಲಿ ಮಳೆ ಬಂದು ಕಾವೇರಿ ಉಕ್ಕಿ ಹರಿದರೆ ತಮಗೆ ವ್ಯವಸಾಯ ಸೇರಿದಂತೆ ಎಲ್ಲ ಬದುಕು ಎನ್ನುವುದು ಮಂಡ್ಯದವರ ನಂಬಿಕೆ. ಈ ಕಾರಣದಿಂದ ಮಂಡ್ಯ ಜಿಲ್ಲೆಯವರೂ ಕಾವೇರಿಗೆ ಪೂಜೆ ಸಲ್ಲಿಸುತ್ತಾರೆ. ತೀರ್ಥೋದ್ಭವಕ್ಕೂ ಆಗಮಿಸುತ್ತಾರೆ. ಪೂಜೆ ಸಲ್ಲಿಸುತ್ತಾರೆ. ತೀರ್ಥೋದ್ಭವದ ದಿನದಂದು ತಲಕಾವೇರಿ,. ಭಾಗಮಂಡಲದಲ್ಲಿ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ.

Whats_app_banner