ಪಿಯುಸಿ ಅನುತ್ತೀರ್ಣರಾದರೂ ಮಠಾಧೀಶರಾದ ಬಳಿಕ ಮುಗಿಸಿದರು ಪಿಎಚ್‌ಡಿ: ಮಹದೇಶ್ವರ ಬೆಟ್ಟ ಸಾಲೂರು ಮಠದ ಸ್ವಾಮೀಜಿ ಸಾಧನೆ
ಶಿಕ್ಷಣ ಪಡೆಯಬೇಕು ಎಂಬ ಹಂಬಲ ಬಂದರೆ ಅದನ್ನು ಪೂರ್ಣಗೊಳಿಸುವುದು ಕಷ್ಟವಲ್ಲ. ಪಿಯುಸಿಯಲ್ಲಿ ಅನುತ್ತೀರ್ಣರಾದರೂ ಶಿಕ್ಷಣ ಪಡೆದು ಪೀಠಾಧಿಪತಿಯಾದ ನಂತರ ಪಿಎಚ್‌ಡಿ ಪಡೆದಿರುವ ಹೆಮ್ಮೆಯ ಸಾಧನೆಯಿದು.
ಚಾಮರಾಜನಗರ: ಓದಿಗೆ ಯಾವುದೇ ವಯಸ್ಸಿನ, ಹುದ್ದೆಯ ಮಿತಿ ಇರುವುದಿಲ್ಲ.ಆಸಕ್ತಿ ಎನ್ನುವುದು ಬಹಳ ಮುಖ್ಯ, ಇದನ್ನು ಸಾಬೀತುಪಡಿಸಿದ್ದಾರೆ ಕರ್ನಾಟಕದ ಸ್ವಾಮೀಜಿಯೊಬ್ಬರು. ಪಿಯುಸಿಯಲ್ಲಿ ಅನುತ್ತೀರ್ಣರಾದರೂ ಛಲಬಿಡದೇ ವ್ಯಾಸಂಗ ಮಾಡಿ ಸಂಸ್ಕೃತದಲ್ಲಿ ಚಿನ್ನದ ಪದಕದೊಂದಿಗೆ ಎಂಎ ಪದವಿಯನ್ನು ಪಡೆದಿದ್ದೂ ಅಲ್ಲದೇ ಮಠವೊಂದರ ಗುರುಗಳಾಗಿ ಪೀಠ ವಹಿಸಿಕೊಂಡ ನಂತರ ಪಿಎಚ್‌ಡಿಯನ್ನೂ ಮುಗಿಸಿದ್ದಾರೆ. ಅವರ ಪ್ರಬಂಧಕ್ಕೆ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿಯೂ ದೊರೆತಿದೆ. ಇದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಸ್ವಾಮೀಜಿ ಅವರ ಅಧ್ಯಯನ ಶೀಲತೆ, ಶಿಕ್ಷಣ ಪಡೆಯಲೇಬೇಕೆಂಬ ಹಂಬಲ, ಹಿರಿಯರ ಮಾರ್ಗದರ್ಶನದೊಂದಿಗೆ ಕಾರ್ಯಸಿದ್ದಿ ಮಾಡಿಕೊಂಡಿದ್ದರ ಬಗ್ಗೆ ಹಲವು ವಲಯಗಳಿಂದ ಮೆಚ್ಚುಗೆಗಳು ವ್ಯಕ್ತವಾಗಿವೆ
ಕರ್ನಾಟಕದ ತುತ್ತ ತುದಿಯಲ್ಲಿರುವ ಮಲೈಮಹದೇಶ್ವರ ಬೆಟ್ಟ ಪ್ರಸಿದ್ದ ಯಾತ್ರಾ ಸ್ಥಳ. ಮಲೈಮಹದೇಶ್ವರ ಬೆಟ್ಟದ ನಂಟು ಹೊಂದಿರುವುದು ಶ್ರೀ ಕ್ಷೇತ್ರ ಸಾಲೂರು ಬೃಹನ್ಮಠ. ಶಿಕ್ಷಣ, ಅನ್ನದಾಸೋಹ, ಧಾರ್ಮಿಕ ಚಟುವಟಿಕೆ. ಸಾಮಾಜಿಕ ಕಾರ್ಯಗಳ ಹಿನ್ನೆಲೆಯೊಂದಿಗೆ ಮಠ ಬೆಳೆದು ಬಂದಿದೆ.ಮಹದೇಶ್ವರರು ಕಾಯಕತತ್ವ ಪ್ರತಿಪಾದಕರಲ್ಲಿ ಪ್ರಮುಖರು. ಕಂದಾಚಾರ, ಮೌಢ್ಯಭಾವನೆಗಳ ವಿರುದ್ಧ ಹೋರಾಟ ನಡೆಸಿದವರು. ಯಾವುದೇ ಜಾತಿಯ ಜನರಲ್ಲಿ ಬೇಧ ಭಾವ ತೋರದೇ ಎಲ್ಲರನ್ನೂ ಪ್ರೀತಿಸಿದವರು. ಇದೇ ಕಾರಣಕ್ಕೆ ಜಾತಿಯಲ್ಲಿ ವೀರಶೈವ ಲಿಂಗಾಯತರಾಗಿದ್ದರೂ ಮಹದೇಶ್ವರರು ತಮ್ಮ ಪೂಜೆಗೆ ಮಾಂಸಾಹಾರಿ ಬೇಡರ ಕುಲದವರನ್ನೇ ತಮ್ಮನ್ನು ಮುಟ್ಟಿ ಪೂಜೆ ಮಾಡುವ ತಂಬಡಿಗಳನ್ನಾಗಿ ಮಾಡಿಕೊಂಡರು. ಅವರಿಗೆ ಇಷ್ಟಲಿಂಗ ಧಾರಣೆ ಮಾಡಿದರು. ಅಲ್ಲಿನ ಜನರು ಸೋಲಿಗರು, ಬೇಡರು, ಕಾಡುಕುರುಬರು ಮೊದಲಾದ ನಾಡಿನಿಂದ ದೂರ ಉಳಿದ ಅವಿದ್ಯಾವಂತ ಜನರಿಗೆ ನಾಗರಿಕತೆ ಇರದ ಜನರಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದಲೇ ತಾವು ನೆಲೆಸಿರುವ ಗುಡಿಯ ಸಮೀಪದಲ್ಲೇ ಕಂಚಿ ಕಾಳಹಸ್ತಿ ತೆಲಂಗಾಣ ಮಠ (ಸಾಲೂರು ಬೃಹನ್ಮಠ) ಸ್ಥಾಪಿಸಿದರು. ಈ ಮಠಕ್ಕೆ ಪಟ್ಟದ ಗುರುಸ್ವಾಮಿಗಳು ಪೀಠಾಧಿಪತಿಗಳಾಗಿದ್ದರು. ವಯಸ್ಸಿನ ಕಾರಣಕ್ಕೆ ಅವರು ನಾಲ್ಕು ವರ್ಷದ ಹಿಂದೆ ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ ನಾಗೇಂದ್ರ ಎಂಬುವವರಿಗೆ ಪೀಠವನ್ನು ಬಿಟ್ಟು ಕೊಟ್ಟರು.
ಪೀಠ ಅಲಂಕರಿಸಿದ್ದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಗೆ ಶಿಕ್ಷಣ ಪಡೆಯಬೇಕು ಎಂಬ ಹಂಬಲ. ಮಲೈ ಮಹದೇಶ್ವರ ಬೆಟ್ಟದ ಶಾಲೆಯಲ್ಲಿಯೇ ಶಿಕ್ಷಣ ಪಡೆದು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪಿಯುಸಿಯಲ್ಲಿ ಅನುತ್ತೀರ್ಣರಾದರೂ ಛಲ ಬಿಡದೇ ಪಿಯುಸಿ ಶಿಕ್ಷಣವನ್ನು ಪೂರೈಸಿದರು. ಮೈಸೂರು ಮಹಾರಾಜ ಸಂಸ್ಕೃತ ಕಾಲೇಜು ಅವರ ಪದವಿ ಕನಸಿಗೆ ನೀರೆರೆಯಿತು. ಅಲ್ಲಿ ಪದವಿ ಮುಗಿಸಿ ನಂತರ ಸಂಸ್ಕೃತದಲ್ಲಿ ಎಂಎ ಪಡೆಯಲು ಸೇರಿದ್ದು ಮೈಸೂರು ವಿಶ್ವವಿದ್ಯಾನಿಲಯ. ಅಲ್ಲಿಯೂ ಚಿನ್ನದ ಪದಕ ಹಾಗೂ ನಗದು ಬಹುಮಾನದೊಂದಿಗೆ ಎಂಎ ಪೂರೈಸಿದರು. ಜೆಎಸ್‌ಎಸ್ ಸಂಸ್ಥೆಯಲ್ಲಿ ಆಗಮ ಶಿಕ್ಷಣವನ್ನೂ ಪಡೆದುಕೊಂಡರು. ಸಂಸ್ಕೃತ ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ಕೂಡ ಮುಗಿಸಿದರು. ಈ ಹೊತ್ತಿಗೆ ಅವರನ್ನು ಕರೆದಿದ್ದು ಶಿಕ್ಷಣ, ನೈತಿಕ ಬಲ ನೀಡಿದ್ದ ಸಾಲೂರು ಮಠ. ಸಂಬಂಧಿಕರಿಗೆ ಪೀಠವನ್ನು ನೀಡುತ್ತಿದ್ದಾರೆ ಎನ್ನುವ ಆಕ್ಷೇಪಗಳಿಂದ ಕುಗ್ಗದೇ ಪೀಠವನ್ನು ವಹಿಸಿಕೊಂಡರು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ.
ಪೀಠಾಲಂಕಾರ ಮಾಡಿದ ಮೇಲೆ ದೊಡ್ಡ ಮಠದ ಉಸ್ತುವಾರಿ ನೋಡಿಕೊಳ್ಳುವ ಸವಾಲು. ಶಿಕ್ಷಣ ಮುಂದುವರೆಸಬೇಕು ಎಂಬ ಹಂಬಲ. ಇದಕ್ಕೆಲ್ಲಾ ಕುಂದೂರು ಮಠದ ಡಾ.ಶರಶ್ಚಂದ್ರ ಸ್ವಾಮೀಜಿ ಮಾರ್ಗದರ್ಶಕರಾಗಿ ನಿಂತರು. ಅವರ ಮಾರ್ಗದರ್ಶನದಲ್ಲಿಯೇ ಪಿಎಚ್‌ಡಿಗೂ ನೋಂದಣಿ ಮಾಡಿಸಿದರು. ನಾಲ್ಕು ವರ್ಷದ ಸತತ ಅಧ್ಯಯನದ ನಂತರ ಈಗ ಅವರ ಪ್ರಬಂಧವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿಗೆ ಅಂಗೀಕರಿಸಿದೆ. ಕ್ರಿಯಾ ಕರ್ಮಗಳಿಗೆ ಸಂಬಂಧಿಸಿದ ಪ್ರಬಂಧ ಅವರದ್ದು. ಈ ವರ್ಷದ ಘಟಿಕೋತ್ಸವದಲ್ಲಿ ಅವರಿಗೆ ಪಿಎಚ್‌ಡಿ ಪ್ರದಾನ ಆಗಲಿದೆ.
ಕಲಿಯಬೇಕು ಎಂಬ ಹಂಬಲವಿತ್ತು. ಆದರೂ ಪಿಯುಸಿಯಲ್ಲಿ ಅಡಚಣೆಗಳಾದವು. ಅದನ್ನೇ ಸವಾಲಿ ಸ್ವೀಕರಿಸಿದಾಗ ಎಂಫಿಎಲ್‌ವರೆಗೂ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಬಳಿಕ ನನಗೆ ಅಕ್ಷರ ದಾಸೋಹ ನೀಡಿದ್ದ ಮಠದ ಪೀಠಾಧಿಪತಿಯಾಗುವ ಅವಕಾಶ ಬಂದಿತು. ಬಳಿಕ ಶಿಕ್ಷಣ ಮುಂದುವರೆಸಿ ಈಗ ಪಿಎಚ್‌ಡಿಯೂ ಮುಗಿದಿದೆ. ಡಾ.ಶರಶ್ಚಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಇದೆಲ್ಲವೂ ಸಾಧ್ಯವಾಗಿದೆ ಎಂದು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳುತ್ತಾರೆ.
ಪೀಠಾಧಿಪತಿಗಿಂತ ಮೊದಲು ಭಾರತವಾಣಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಮಹದೇಶ್ವರ ಬೆಟ್ಟದ ಶ್ರೀ ಕ್ಷೇತ್ರ ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು (ಪೂರ್ವಾಶ್ರಮದಲ್ಲಿ ನಾಗೇಂದ್ರ) ಈಗ ಪಿ ಎಚ್ ಡಿ ಪೂರ್ಣಗೊಳಿಸಿದ್ದಾರೆ. ಹತ್ತಾರು ಸಮುದಾಯ ಕೇಂದ್ರಿತ ಸಮಾಜಕಾರ್ಯಗಳಲ್ಲಿ ತೊಡಗಿರುವ ಅತ್ಯಂತ ಸರಳ, ಸಜ್ಜನಿಕೆಯ ಸ್ವಾಮೀಜಿಯಾಗಿರುವ ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಅವರ ಸೇವಾಕಾಯಕದಿಂದ ನಾಡಿಗೆ ಇನ್ನಷ್ಟು ಒಳಿತಾಗಲಿ; ಮಹದೇಶ್ವರನು ಅವರ ಮೇಲೆ ಸದಾ ಕೃಪೆದೋರಲಿ ಎನ್ನುವ ಆಶಯವನ್ನು ವ್ಯಕ್ತಪಡಿಸುತ್ತಾರೆ ಹಿರಿಯ ಪತ್ರಕರ್ತ ಹಾಗೂ ಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬೇಳೂರು ಸುದರ್ಶನ.