ಒಂದು ತಿಂಗಳಲ್ಲೇ ನೂಲು ಬಿಡುತ್ತಿರುವ ಸೀರೆ: ಮಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ರಾ ಕಳಪೆ ಸೀರೆ?
ಏಕರೂಪದ ಸಮವಸ್ತ್ರ ಧರಿಸಬೇಕು ಎಂಬ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೀರೆಯನ್ನು ನೀಡಲಾಗುತ್ತಿದೆ. ಕಳೆದ ತಿಂಗಳು ಹೊಸ ಸೀರೆ ನೀಡಲಾಗಿದ್ದು,ಒಂದೇ ತಿಂಗಳಲ್ಲಿ ಸೀರೆಯ ನಿಜ ಬಣ್ಣ ಬಯಲಾಗುತ್ತಿದೆ ಎಂದು ಕಾರ್ಯಕರ್ತೆಯರು,ಸಹಾಯಕಿಯರು ದೂರುತ್ತಿದ್ದಾರೆ. (ವರದಿ: ಹರೀಶ್ ಮಾಂಬಾಡಿ)
ಮಂಗಳೂರು: ಕಳೆದ ತಿಂಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ಸೀರೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರಿದ್ದಾರೆ. ಸೀರೆ ಕಡಿಮೆ ಗುಣಮಟ್ಟದ್ದಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈಗಾಗಲೇ ಅನೇಕರ ಸೀರೆ ನೂಲು ಬಿಡುತ್ತಿರುವ ಬಗ್ಗೆ ನಮಗೆ ದೂರುಗಳೂ ಬಂದಿವೆ. ಇದನ್ನು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರ ಸಂಘದ ಅಧ್ಯಕ್ಷೆ ತಾರಾ ಬಲ್ಲಾಳ್ ಹೇಳಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ಯಾಕೆ ಕೊಡಲಾಗುತ್ತಿದೆ? ಏನಿದು ಸಮಸ್ಯೆ ಇಲ್ಲಿದೆ ವಿವರ.
ಏಕರೂಪದ ಸಮವಸ್ತ್ರ ಧಾರಣೆ ಉದ್ದೇಶ
ಪ್ರತಿ ಬಾರಿ ಸರಕಾರ ಬದಲಾದಾಗಲೂ ಏನಾದರೂ ಒಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಪಾಲಿಗೂ ಇದು ಹೊಸದು. ಏಕರೂಪದ ಸಮವಸ್ತ್ರ ಧರಿಸಬೇಕು ಎಂಬ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೀರೆಯನ್ನು ನೀಡಲಾಗುತ್ತಿದೆ. ಕಳೆದ ತಿಂಗಳು ಹೊಸ ಸೀರೆ ನೀಡಲಾಗಿದ್ದು, ಒಂದೇ ತಿಂಗಳಲ್ಲಿ ಸೀರೆಯ ನಿಜ ಬಣ್ಣ ಬಯಲಾಗುತ್ತಿದೆ ಎಂದು ಕಾರ್ಯಕರ್ತೆಯರು, ಸಹಾಯಕಿಯರು ದೂರುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಲಾ ಎರಡು ಸೀರೆಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಅಕ್ಟೋಬರ್ ತಿಂಗಳು ಅರ್ಧ ಮುಗಿಯುತ್ತಲೇ ಅನೇಕರ ಸೀರೆಯ ನೂಲು ಬಿಡುತ್ತಿರುವುದು, ಅಲ್ಲಲ್ಲಿ ನೂಲು ಸಡಿಲಗೊಂಡಂತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಈ ಮೊದಲು ಸೀರೆ ಖರೀದಿಗೆ ಹಣ ಕೊಡುತ್ತಿದ್ದರು
ಈ ಕುರಿತು ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರು ಹೇಳಿದ್ದು ಹೀಗೆ. ಮೊದಲು ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆ ವತಿಯಿಂದ ಸೀರೆ ಖರೀದಿಗೆ ಹಣ ನೀಡಲಾಗುತ್ತಿತ್ತು. ಕಾರ್ಯಕರ್ತೆಯರ ತಾಲೂಕು ಸಂಘಗಳ ನೇತೃತ್ವದಲ್ಲಿ ಸೀರೆ ಖರೀದಿಸಲಾಗುತ್ತಿತ್ತು. ಆದರೆ, ಸೀರೆಯ ಬಣ್ಣದ ವಿಚಾರದಲ್ಲಿ ತಾಲೂಕಿನಿಂದ ತಾಲೂಕು, ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸಗಳು ಗೋಚರಿಸಿದವು. ಈ ಕಾರಣದಿಂದ ಗೊಂದಲಗಳು ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಇಲಾಖೆಯೇ ರಾಜ್ಯಮಟ್ಟದಲ್ಲಿ ಏಕರೂಪದ ನಿಯಮ ರೂಪಿಸಿತು. ಅದರಂತೆ ಈ ಬಾರಿ ಸೀರೆ ಪೂರೈಸಲಾಗುತ್ತಿದೆ ಎನ್ನಲಾಗಿದೆ.
500 ರೂ. ಸೀರೆಯಂತಿಲ್ಲ
ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಈ ಸೀರೆಗೆ 500 ರೂ ಖರ್ಚು ಮಾಡುತ್ತಿದ್ದರೆ, ಗುಣಮಟ್ಟ (quality) ಚೆನ್ನಾಗಿರುತ್ತಿತ್ತು. ಈ ರೀತಿ ಕಳಪೆಯಾಗಿರುತ್ತಿರಲಿಲ್ಲ ಎಂದು ಕಾರ್ಯಕರ್ತೆಯರು ಹೇಳಿದ್ದಾರೆ. ಹಳದಿ ಮಿಶ್ರಿತ ಸೀರೆ ಕಾರ್ಯಕರ್ತೆಯರಿಗೆ ಹಾಗೂ ನೀಲಿ ಮಿಶ್ರಿತ ಸೀರೆ ಸಹಾಯಕಿಯರಿಗೆ ನೀಡಲಾಗುತ್ತದೆ. ಇದು ಇಡೀ ರಾಜ್ಯದಲ್ಲಿ ಏಕರೂಪದ ಸಮವಸ್ತ್ರವಾಗಿ ನೀಡಲಾಗುತ್ತದೆ. ಒಂದು ಸೀರೆಗೆ 500 ರೂ. ನಿಗದಿ ಮಾಡಲಾಗಿದೆ. ಅದರಂತೆ ಒಂದು ಅಂಗನವಾಡಿ ಕೇಂದ್ರದ ಇಬ್ಬರಿಗೆ 4 ಸೀರೆಗೆ 2 ಸಾವಿರ ರೂ.ಗಳನ್ನು ಇಲಾಖೆ ನೀಡುತ್ತದೆ. ಇಲಾಖೆಯಿಂದಲೇ ನೇರ ಟೆಂಡರ್ ಕರೆದು ಸೀರೆ ಪೂರೈಸಲಾಗುತ್ತಿದೆ. ಈ ಕುರಿತು ಸಮಸ್ಯೆಯಾಗಿದೆ ಎಂಬ ವಿಚಾರವನ್ನು ಮೇಲಧಿಕಾರಿಗಳಿಗೆ ತರಲಾಗಿದ್ದು, ಸರಿಯಾದ ಸೀರೆಗಳನ್ನೇ ವಿತರಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.