Mangalore News: ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ 1.05 ಕೋಟಿ ರೂಪಾಯಿ ಕಳೆದುಕೊಂಡ ಮಂಗಳೂರು ಯುವಕ-dakshina kannada news crypto currency trading craze young man lost rs 1 05 crore in mangalore hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ 1.05 ಕೋಟಿ ರೂಪಾಯಿ ಕಳೆದುಕೊಂಡ ಮಂಗಳೂರು ಯುವಕ

Mangalore News: ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ 1.05 ಕೋಟಿ ರೂಪಾಯಿ ಕಳೆದುಕೊಂಡ ಮಂಗಳೂರು ಯುವಕ

ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ ನೆಲ್ಯಾಡಿ ಸಮೀಪ ಇಚ್ಲಂಪಾಡಿಯ ಯುವಕನೊಬ್ಬ 1.05 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಕೆಡಂಬೈಲು ಪುಲಿಕ್ಕಲ್ ನಿವಾಸಿ ಪಿಜಿ ಸಜಿ ಅವರೇ ಹಣ ಕಳೆದುಕೊಂಡವರು. ಇತರ ಅಪರಾಧ ಪ್ರಕರಣಗಳ ವಿವರ ಇಲ್ಲಿದೆ. (ವರದಿ: ಹರೀಶ್ ಮಾಂಬಾಡಿ)

ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ 1 ಕೋಟಿ ರೂ ಕಳೆದುಕೊಂಡ ಸುಬ್ರಹ್ಮಣ್ಯದ ಯುವಕ
ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ 1 ಕೋಟಿ ರೂ ಕಳೆದುಕೊಂಡ ಸುಬ್ರಹ್ಮಣ್ಯದ ಯುವಕ

ಮಂಗಳೂರು (ದಕ್ಷಿಣ ಕನ್ನಡ): ಅಪರಿಚಿತ ವ್ಯಕ್ತಿಯ ಸೂಚನೆಯಂತೆ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ ನೆಲ್ಯಾಡಿ ಸಮೀಪ ಇಚ್ಲಂಪಾಡಿಯ ಯುವಕನೊಬ್ಬ 1.05 ಕೋಟಿ ರೂ.ಕಳೆದುಕೊಂಡಿದ್ದಾರೆ. ಇಚ್ಲಂಪಾಡಿ ಗ್ರಾಮದ ಕೆಡಂಬೈಲು ಪುಲಿಕ್ಕಲ್ ನಿವಾಸಿ 43 ವರ್ಷದ ಪಿಜಿ ಸಜಿ ಅವರೇ ಹಣ ಕಳೆದುಕೊಂಡವರು. ಇವರಿಗೆ ಮೇ.25ರಂದು ಟೆಲಿಗ್ರಾಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ, ಯುಎಸ್‌ಡಿಟಿ ಕ್ರಿಪ್ಟೋ ಕರೆನ್ಸಿಗೆ (USDT Crypto Currency) ಹಣ ವರ್ಗಾಯಿಸಲು ಬಿನಾನ್ಸ್ ಆ್ಯಪ್ (Binance App) ಮತ್ತು ಡೆಫಿ ಆ್ಯಪ್ (Defi App) ಮಾಡುವಂತೆ ತಿಳಿಸಿದ್ದು, ಅದರಂತೆ ಸಜಿ ಅವರು ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಅಲ್ಲದೇ ಅಪರಿಚಿತ ವ್ಯಕ್ತಿ ನೀಡಿದ ಸೂಚನೆಯನ್ನು ಪಾಲಿಸಿ, ತಮ್ಮ ಬ್ಯಾಂಕ್ ಖಾತೆಗಳಿಂದ ಒಟ್ಟು 1,05,79,711 ರೂಪಾಯಿ ಹಣ ಹಾಕಿ, ಕ್ರಿಪ್ಟೋ ಕರೆನ್ಸಿ (USDT ) ಟ್ರೇಡಿಂಗ್ ಮಾಡಲು ಹೋಗಿ 1,05,79,711 ರೂಪಾಯಿ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಪಿಜಿ ಸಜಿ ಅವರು ನೀಡಿದ ದೂರಿನಂತೆ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 18/2024, ಕಲಂ: 66(ಅ), 66 (ಆ)IT Act, 417, 420 IPC ಯಂತೆ ಪ್ರಕರಣ ದಾಖಲಾಗಿದೆ.

ಸೇತುವೆ ಕಾಮಗಾರಿ ವೇಳೆ ಕುಸಿದ ಕಬ್ಬಿಣದ ಸರಳು, ಹಲಗೆ

ಸೇತುವೆ ಕಾಮಗಾರಿ ವೇಳೆ ಕಾಂಕ್ರಿಟ್ ಭಾರ ತಾಳಲಾರದೇ ಜೋಡಿಸಿಟ್ಟಿದ್ದ ಕಬ್ಬಿಣದ ಸರಳು, ಹಲಗೆ ಕುಸಿದುಬಿದ್ದ ಘಟನೆ ಬುಧವಾರ (ಮೇ 29) ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ರೆಖ್ಯ ಗ್ರಾಮದ ಪರಕ್ಕಳ ಎಂಬಲ್ಲಿ ನಡೆದಿದೆ. ಅಡ್ಡಹೊಳೆ-ಬಿ.ಸಿ.ರೋಡ್ ನಡುವೆ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಈ ಭಾಗದ ಕಾಮಗಾರಿಯನ್ನು ಔತ್ತಡೆ ಕನ್ಸ್ಟ್ರಕ್ಷನ್ ಕಂಪನಿಯವರು ಮಾಡುತ್ತಿದ್ದಾರೆ. ರೆಖ್ಯ ಗ್ರಾಮದ ಪರಕ್ಕಳ ಎಂಬಲ್ಲಿ ತೋಡಿಗೆ ಅಡ್ಡವಾಗಿ ನಿರ್ಮಾಣಗೊಂಡಿದ್ದ ಹಳೆಯ ಸೇತುವೆ ತೆಗೆದು ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಇಲ್ಲಿ ತೋಡಿಗೆ ಎರಡು ಪಿಲ್ಲರ್ ಹಾಕಿ ಅಂದಾಜು 25 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಪಿಲ್ಲರ್ ಕಾಮಗಾರಿ ಮುಗಿದಿದ್ದು ಅದರ ಮೇಲೆ ಹಲಗೆ, ಕಬ್ಬಿಣದ ಸರಳು ಜೋಡಿಸಿ ಮೇ 29ರಂದು ಸಂಜೆ ಯಂತ್ರದ ಮೂಲಕ ಕಾಂಕ್ರಿಟ್ ತುಂಬಿಸಲಾಗುತಿತ್ತು. ಸುಮಾರು 10 ಮೀಟರ್‌ನಷ್ಟು ಕಾಂಕ್ರಿಟ್ ತುಂಬಿಸುತ್ತಿದ್ದಂತೆ ಭಾರ ತಾಳಲಾರದೇ ಜೋಡಿಸಿದ್ದ ಹಲಗೆ, ಕಬ್ಬಿಣದ ಸರಳಿನ ಜೊತೆಗೇ ಕಾಂಕ್ರಿಟ್ ತೋಡಿಗೆ ಕುಸಿದು ಬಿದ್ದಿದೆ. ಇದರಿಂದಾಗಿ ಇಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಯಂತ್ರದ ಮೂಲಕ ಕಾಂಕ್ರಿಟ್ ಹಾಕುತ್ತಿದ್ದುದ್ದರಿಂದ ಯಾವುದೇ ಅನಾಹುತ ನಡೆದಿಲ್ಲ. ಇದರ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಗೊಂಡಿದ್ದು ಕೆಲ ದಿನಗಳಿಂದ ವಾಹನಗಳು ಹೊಸ ಸೇತುವೆ ಮೂಲಕ ಸಂಚರಿಸುತ್ತಿವೆ.

ನಿಯಂತ್ರಣ ಕಳೆದುಕೊಂಡ ಲಾರಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ, ವಿಡಿಯೊ ವೈರಲ್

ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿಯೊಂದು ಪಲ್ಟಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ವಗ್ಗ ಸಮೀಪ ಕಾಡಬೆಟ್ಟು ಕ್ರಾಸ್ ಬಳಿ ಬುಧವಾರ (ಮೇ 29) ನಡೆದಿದ್ದು, ಘಟನೆಯಲ್ಲಿ ವಿದ್ಯಾರ್ಥಿನಿ ಸೇರಿ ಎಂಟು ಮಂದಿ ಗಾಯಗೊಂಡಿದ್ದಾರೆ. ಬಿಸಿರೋಡು – ಕಡೂರು ರಾಜ್ಯ ಹೆದ್ದಾರಿಯ ವಗ್ಗ ಸಮೀಪದ ಕಾರಿಂಜ ಕಾಡಬೆಟ್ಟು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುವ ಬಸ್‌ಗೆ ಡಿಕ್ಕಿಯಾಗಿದೆ. ಲಾರಿ ಹಾಗೂ ಬಸ್‌ನ ಚಾಲಕರು, ಬಸ್ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿವಾಹವಾಗುತ್ತೇನೆ ಎಂದು ನಂಬಿಸಿ ಆಸ್ಪತ್ರೆಯಲ್ಲೇ ಅತ್ಯಾಚಾರ

ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ವಿವಾಹಿತ ಮಹಿಳೆಯನ್ನು ಅತ್ಯಾಚಾರ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಕೇರಳದ ಹೊಸದುರ್ಗ ಪುಲ್ಲೂರು ಗ್ರಾಮದ ಸುಜಿತ್. ಆರೋಪಿ ಜಿಮ್ ತರಬೇತುದಾರನಾಗಿದ್ದಾನೆ. ಕಾಸರಗೋಡಿನಲ್ಲಿ ಮಹಿಳೆ ಜಿಮ್‌ಗೆ ಹೋಗುತ್ತಿದ್ದು, ಸುಜಿತ್ ಪರಿಚಯವಾಗಿತ್ತು. ಮಹಿಳೆಗೆ ಫಿಸ್ತುಲಾ ಕಾಯಿಲೆ ಇದ್ದು, ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮಾರ್ಚ್ ತಿಂಗಳಲ್ಲಿ ದಾಖಲಾಗಿದ್ದರು. ಅಲ್ಲಿ ರಾತ್ರಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಸುಜಿತ್ ಆಕೆಯ ನಗ್ನ ಫೊಟೋ ತೆಗೆದಿದ್ದ. ಬಳಿಕ ಮಂಗಳೂರಿಗೆ ಬರುವಂತೆ ಒತ್ತಾಯಿಸಿದ್ದಾನೆ. ಮಂಗಳೂರಿಿನ ಹೋಟೆಲ್‌ನಲ್ಲಿರಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದ. ಮಹಿಳೆಗೆ ಫುಡ್ ಪಾಯ್ಸನ್ ಆಗಿ ನಗರದ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಸಂದರ್ಭವೂ ಅಲ್ಲಿ ಆತ ಅತ್ಯಾಚಾರವೆಸಗಿದ್ದಾನೆ ಎಂಬ ಮಹಿಳೆಯ ದೂರಿನಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ಯಾಂಗ್ ವಾರ್ ಪ್ರಕರಣ, ಆರು ಮಂದಿ ಬಂಧನ ಇಬ್ಬರಿಗೆ ಶೋಧ

ಉಡುಪಿ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಕಾಪು ಮತ್ತು ಪಡುಬಿದ್ರಿಯ ನಾನಾ ಭಾಗಗಳಲ್ಲಿ ಇವರಿಗಾಗಿ ತಪಾಸಣೆ ನಡೆಯುತ್ತಿದೆ. (ವರದಿ: ಹರೀಶ್ ಮಾಂಬಾಡಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

mysore-dasara_Entry_Point