Kumara Parvatha: ಬೆಟ್ಟದ ಮೇಲೊಂದು ಮನೆಯ ಮಾಡಿ, ಸುಬ್ರಹ್ಮಣ್ಯದ ಕುಮಾರ ಪರ್ವತದ ಗಿರಿಗದ್ದೆ ಮನೆಯ ಮೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  Kumara Parvatha: ಬೆಟ್ಟದ ಮೇಲೊಂದು ಮನೆಯ ಮಾಡಿ, ಸುಬ್ರಹ್ಮಣ್ಯದ ಕುಮಾರ ಪರ್ವತದ ಗಿರಿಗದ್ದೆ ಮನೆಯ ಮೋಡಿ

Kumara Parvatha: ಬೆಟ್ಟದ ಮೇಲೊಂದು ಮನೆಯ ಮಾಡಿ, ಸುಬ್ರಹ್ಮಣ್ಯದ ಕುಮಾರ ಪರ್ವತದ ಗಿರಿಗದ್ದೆ ಮನೆಯ ಮೋಡಿ

Kumara Parvatha trek: ಪಾಕಪ್ರವೀಣರೆಂದೇ ಹೆಸರು ಗಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಗಿರಿಗದ್ದೆ ಕುಮಾರ ಪರ್ವತ ಬಳಿ ನಿವಾಸಿ ವೆಂಕಟ್ರಮಣ ಜೋಯಿಸರು ಅಸೌಖ್ಯದಿಂದ ಮೊನ್ನೆ ಮೇ.17ರಂದು ನಿಧನ ಹೊಂದಿದರು. ಚಾರಣಿಗರ ಪ್ರೀತಿಯ ಗಿರಿಗದ್ದೆ ಮನೆಯ ಕುರಿತು ಇಲ್ಲಿದೆ ವಿವರ.

ವೆಂಕಟರಮಣ ಭಟ್ ನಿಧನ, ಸುಬ್ರಹ್ಮಣ್ಯ ಕುಮಾರಪರ್ವತದಲ್ಲೀಗ ನೀರವ ಮೌನ
ವೆಂಕಟರಮಣ ಭಟ್ ನಿಧನ, ಸುಬ್ರಹ್ಮಣ್ಯ ಕುಮಾರಪರ್ವತದಲ್ಲೀಗ ನೀರವ ಮೌನ

ಮಂಗಳೂರು: ಸುಮಾರು 13 ಕಿಲೊಮೀಟರ್ ನಷ್ಟು ಎತ್ತರದ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಲ್ಲಿ ಇರುವ ಸುಬ್ರಹ್ಮಣ್ಯ ಸಮೀಪದ (Subrahmanya) ಕುಮಾರಪರ್ವತವನ್ನು(Kumara Parvatha trek) ಏರುವುದೆಂದರೆ ದೊಡ್ಡ ಸಾಹಸ. ಇಲ್ಲಿಗೆಂದೇ ಸೀಸನ್ ನಲ್ಲಿ (ಅಂದರೆ, ನವೆಂಬರ್, ಡಿಸೆಂಬರ್, ಜನವರಿ) ನೂರಾರು ಮಂದಿ ಬರುತ್ತಾರೆ. ಹಾಗೆ ಬಂದವರು ಬೆಟ್ಟವೇರುವಾಗಲೋ, ಇಳಿಯುವಾಗಲೋ ಮಧ್ಯದಲ್ಲಿರುವ ಗಿರಿಗದ್ದೆ ಭಟ್ರ ಮನೆಗೆ ಹೋಗಿಯೇ ಹೋಗುತ್ತಾರೆ.

ಪರಮೇಶ್ವರ ಜೋಯಿಸರ (ಸ್ಥಳೀಯವಾಗಿ ಅವರನ್ನು ಭಟ್ರು ಎಂದೇ ಕರೆಯತೊಡಗಿದರು) ಮಕ್ಕಳು ಗಿರಿಗದ್ದೆ ಭಟ್ ಸಹೋದರರು. ಇವರ ಪೈಕಿ ವೆಂಕಟರಮಣ ಭಟ್ ಪಾಕಪ್ರವೀಣ. ಹೀಗಾಗಿ ಅವರು ಬೆಟ್ಟದ ಕೆಳಗೆ ನೆಲೆಸಿದರು. ಮಹಾಲಿಂಗ ಭಟ್, ನಾರಾಯಣ ಭಟ್ಟರು ಬೆಟ್ಟದಲ್ಲಿ ಉಳಿದರು. ಇತ್ತೀಚೆಗೆ ವೆಂಕಟರಮಣ ಭಟ್ ಅವರು ನಿಧನ ಹೊಂದಿದ್ದಾರೆ. ಪಾಕಪ್ರವೀಣರೆಂದೇ ಹೆಸರು ಗಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಗಿರಿಗದ್ದೆ ಕುಮಾರ ಪರ್ವತ ಬಳಿ ನಿವಾಸಿ ವೆಂಕಟ್ರಮಣ ಜೋಯಿಸರು ಅಸೌಖ್ಯದಿಂದ ಮೊನ್ನೆ ಮೇ.17ರಂದು ನಿಧನ ಹೊಂದಿದರು.

ಗಿರಿಗದ್ದೆ ಮನೆ

ಕುಕ್ಕೆಯಿಂದ 13 ಕಿ.ಮೀ.ನಷ್ಟು ಏರುಹಾದಿಯಲ್ಲಿ ಚಾರಣಕ್ಕೆಂದು ನಡೆಯಬೇಕು. ಈ ಹಂತದಲ್ಲಿ ಚಾರಣಿಗರಿಗೆ ಆಶ್ರಯ ನೀಡುವವರು ಗಿರಿಗದ್ದೆಯ ಭಟ್ಟರ ಮನೆಯವರು. ಇಲ್ಲಿ ಮಹಾಲಿಂಗ ಭಟ್ ಮತ್ತು ನಾರಾಯಣ ಭಟ್ ಇದರ ನಿರ್ವಹಣೆ ಹೊತ್ತಿದ್ದಾರೆ. ವೆಂಕಟ್ರಮಣ ಭಟ್ಟರು ಪಾಕಶಾಲೆ ಸಹಾಯಕ್ಕೆಂದು ಹಿಂದೆ ಬರುತ್ತಿದ್ದರು. ಬಳಿಕ ವಯಸ್ಸಾದ ಬಳಿಕ ಬೆಟ್ಟದ ಕೆಳಗೆ ವಾಸಿಸುತ್ತಿದ್ದಾರೆ.

ಕುಮಾರ ಪರ್ವತ ಚಾರಣದ ಬಹುತೇಕ ಅರ್ಧ ದಾರಿ ಸುಮಾರು 5 ಕಿ.ಮೀ. ದೂರ ಸಾಗುವಾಗ ಭಟ್ಟರ ಮನೆ ಸಿಗುತ್ತದೆ. ಹಿಂದಿನ ದಿನ ರಾತ್ರಿ ಅವರ ಮನೆಯಲ್ಲಿ ಉಳಿದುಕೊಂಡು ಬೆಳಗ್ಗೆ ಬೇಗನೆ ಎದ್ದು ಚಾರಣ ಮುಂದುವರಿಸುವವರೂ ಇದ್ದಾರೆ. ಆ ದಿನ ಬೆಟ್ಟದ ತುದಿಗೆ ನೇರವಾಗಿ ಹೋಗಿ, ರಾತ್ರಿ ಅಲ್ಲಿ ಉಳಿದುಕೊಂಡು, ಮರುದಿನ ಕುಕ್ಕೆಗೆ ಹೋಗುವವರು ಇದ್ದಾರೆ. ರಾತ್ರಿವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ, ಸರಳ ಶೌಚಾಲಯವೂ ಇದೆ. ಶುಚಿರುಚಿಯಾದ ಊಟದ ವ್ಯವಸ್ಥೆಯನ್ನೂ ಭಟ್ಟರು ಮಾಡುತ್ತಾರೆ.

ಕಲ್ಲುಮಣ್ಣಿನ ಹಾದಿಯಲ್ಲಿ ಕುಕ್ಕೆಸುಬ್ರಹ್ಮಣ್ಯ ಪೇಟೆಯಿಂದ ಗಿರಿಗದ್ದೆಗೆ ತಲುಪಲು ಸುಮಾರು ಎರಡೂವರೆ ತಾಸು ಬೇಕು. ಮರದ ಬೇರುಗಳು, ಚರಳುಕಲ್ಲು, ಜಾರುವ ಬಂಡೆಗಳು, ನಡಿಗೆಯ ವೇಗವನ್ನು ಕುಗ್ಗಿಸುತ್ತದೆ. ಭಟ್ಟರ ಮನೆಯವರು ಇದನ್ನು ಒಂದೂವರೆ ಗಂಟೆಯಲ್ಲೇ ಕ್ರಮಿಸುತ್ತಾರೆ. ಅಂಗಡಿಗೆ ಭಟ್ಟರ ಮನೆಯವರು ಬರಬೇಕಾದರೆ, ಇಂಥದ್ದೇ ಹಾದಿಯಲ್ಲಿ ಬರಬೇಕು.

ಚಾರಣಿಗರು ಕುಮಾರ ಪರ್ವತವೇರಲು ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಬರುತ್ತಾರೆ. ಆದರೆ ಭಟ್ಟರ ಮನೆಯವರು ಸುಮಾರು 10 ಕಿ.ಮೀನಷ್ಟು ನಡೆಯಲೇಬೇಕು. ಅಕ್ಕಿ, ಬೇಳೆ ಇತ್ಯಾದಿಗಳನ್ನು ಹೊತ್ತುಕೊಂಡು ಹೋಗಬೇಕು.

1976ರಲ್ಲಿ ದಿ.ಪರಮೇಶ್ವರ ಜೋಯಿಸರು ಗಿರಿಗದ್ದೆಯಲ್ಲಿ ನೆಲೆಸಿದ್ದರು. ಬಳಿಕ ಅವರ ಮಕ್ಕಳಾದ ಮಹಾಲಿಂಗ ಭಟ್ ಮತ್ತು ನಾರಾಯಣ ಭಟ್ ಇಲ್ಲಿನ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದರು. ಅಡಕೆ ಕೃಷಿಯನ್ನೂ ಮಾಡುತ್ತಿದ್ದಾರೆ. ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಮನೆಯಲ್ಲಿ ಸೌರಶಕ್ತಿ ವ್ಯವಸ್ಥೆ ಇದೆ. ತೋಟ ಮತ್ತು ಅರಣ್ಯದ ನಡುವಿನ ಕಣಿವೆಯಂಥ ಭಾಗದಲ್ಲಿದೆ. ಹೆಂಚು, ಶೀಟಿನ ಛಾವಣಿಯ ಮನೆ. ಪಕ್ಕದಲ್ಲಿ ಚಾರಣಿಗರಿಗೋಸ್ಕರ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ. ರಾತ್ರಿ ಉಳಿದುಕೊಳ್ಳಲು ಟೆಂಟುಗಳನ್ನು ಪ್ರವಾಸಿಗರು ಹಾಕಿಕೊಳ್ಳುತ್ತಾರೆ. ಪ್ರತಿದಿನ ನೂರಾರು ಮಂದಿ ಇಲ್ಲಿಗೆ ಬರುವ ಕಾರಣ, ಇಲ್ಲಿನ ಪಾಕಶಾಲೆಯಲ್ಲಿ ಅನ್ನ ಬೇಯುತ್ತಲೇ ಇರುತ್ತದೆ. ಚಾರಣಿಗರನ್ನು ಸ್ವಾಗತಿಸಲು ಪ್ರತಿದಿನವೂ ಭಟ್ಟರ ಮನೆ ತೆರೆದಿರುತ್ತದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner