ದಾವಣಗೆರೆಯಲ್ಲೂ ಗಣೇಶನ ಮೆರವಣಿಗೆ ವೇಳೆ ಗಲಾಟೆ, ಮನೆಗಳ ಮೇಲೂ ಕಲ್ಲು ತೂರಾಟ; 30ಕ್ಕೂ ಹೆಚ್ಚು ಆರೋಪಿಗಳ ಬಂಧನ-davanegere news ganesha immersion procession in davangere stone pelting clash between two communities many arrested kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ದಾವಣಗೆರೆಯಲ್ಲೂ ಗಣೇಶನ ಮೆರವಣಿಗೆ ವೇಳೆ ಗಲಾಟೆ, ಮನೆಗಳ ಮೇಲೂ ಕಲ್ಲು ತೂರಾಟ; 30ಕ್ಕೂ ಹೆಚ್ಚು ಆರೋಪಿಗಳ ಬಂಧನ

ದಾವಣಗೆರೆಯಲ್ಲೂ ಗಣೇಶನ ಮೆರವಣಿಗೆ ವೇಳೆ ಗಲಾಟೆ, ಮನೆಗಳ ಮೇಲೂ ಕಲ್ಲು ತೂರಾಟ; 30ಕ್ಕೂ ಹೆಚ್ಚು ಆರೋಪಿಗಳ ಬಂಧನ

ಗಣೇಶ ಮೂರ್ತಿ ವಿಸರ್ಜನೆ ವೇಳೆ ನಾಗಮಂಗಲದ ಬಳಿಕ ಈಗ ದಾವಣಗೆರೆಯಲ್ಲೂ ಗಲಾಟೆ, ಕಲ್ಲು ತೂರಾಟಗಳು ನಡೆದಿವೆ.ಹಲವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದೆ.
ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದೆ.

ದಾವಣಗೆರೆ: ವಾರದ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಾಟೆ ಮಾಸುವ ಮುನ್ನವೇ ದಾವಣಗೆರೆಯಲ್ಲೂ ಗಣೇಶನ ಮೂರ್ತಿ ವಿಸರ್ಜನೆ ವೇಳೆ ಭಾರೀ ಗಲಾಟೆಯೇ ಆಗಿದೆ. ಕಲ್ಲು ತೂರಾಟ ನಡೆದು ಕೆಲವರಿಗೆ ಗಾಯಗಳಾಗಿವೆ. ಪೊಲೀಸ್‌ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಅಲ್ಲದೇ ಮನೆಗಳ ಮೇಲೂ ಕಲ್ಲು ತೂರಲಾಗಿದೆ. ಘಟನೆ ಹಿನ್ನೆಲೆಯಲ್ಲಿ ದಾವಣಗೆರೆಯ 30ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ಭದ್ರತೆಯನ್ನು ಹಾಕಿದ್ದಾರೆ. ಉದ್ವಿಗ್ನ ಸ್ಥಿತಿಗೆ ಇಲ್ಲಿಯೂ ಕೂಡ ವೀಡಿಯೋವೊಂದು ಕಾರಣವಾಗಿದ್ದು. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಗಿದ್ದಾದರೂ ಏನು

ದಾವಣಗೆರೆಯ ಬೇತೂರು ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಗುರುವಾರ ರಾತ್ರಿ ಕಲ್ಲು ತೂರಾಟ ನಡೆದಿದ್ದು, ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಅನಾಹುತವನ್ನು ತಪ್ಪಿಸಿದರು. ಈ ವೇಳೆ ಕೆಲ ಕಿಡಿಗೇಡಿಗಳು ಮನೆಗಳ ಮೇಲೂ ಕಲ್ಲೆಸೆದಿದ್ದಾರೆ. ದಾವಣಗೆರೆಯ ಬೇತೂರು ರಸ್ತೆ, ಅರಳಿಮರ, ಅಶೋಕ ರೋಡ್, ಹಾಸಭಾವಿ ಸರ್ಕಲ್ ಸೇರಿದಂತೆ ಹಳೇ ದಾವಣಗೆರೆಯ ಹಲವು ಬಡಾವಣೆಗಳಲ್ಲಿ ಶುಕ್ರವಾರ ಮಧ್ಯಾಹ್ನವೂ ಉದ್ವಿಗ್ನಸ್ಥಿತಿ ಇರುವುದು ಕಂಡು ಬಂದಿತು. ಎಲ್ಲೆಡೆ ಪೊಲೀಸ್‌ ಸರ್ಪಗಾವಲು ಕೂಡ ಜೋರಾಗಿಯೇ ಹಾಕಲಾಗಿದೆ.

ಗಣೇಶ ಹಬ್ಬಕ್ಕೂ ಮುಂಚಿನಿಂದಲೂ ದಾವಣಗೆರೆಯಲ್ಲಿ ಬಾವುಟ ಕಟ್ಟು ವಿಚಾರವಾಗಿ ಎರಡು ಸಮುದಾಯಗಳ ಯುವಕರ ನಡುವೆ ಮಾತಿನ ಚಕಮಕಿ ನಡೆದು ನಂತರ ಗಲಾಟೆಯೂ ಆಗಿತ್ತು. ಆಗ ಪೊಲೀಸರು ವಾರ್ನಿಂಗ್‌ ಕೂಡ ನೀಡಿದ್ದರು. ಈ ವೇಳೆ ಹಿಂದೂ ಸಮಾಜದ ಮುಖಂಡ ಸತೀಶ್‌ ಪೂಜಾರಿ ಎಂಬುವವರು ಭಾಷಣ ಮಾಡಿದ್ದರು. ಅಲ್ಲದೇ ಗಾಂಧಿನಗರದಲ್ಲಿ ನೀವು ಅಡ್ಡಿಪಡಿಸಿದರೆ ನಾವು ಆಜಾದ್‌ ನಗರಕ್ಕೆ ನುಗ್ಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ಪೊಲೀಸರಿಗೆ ದೂರು ನೀಡಿದ್ದರು. ಇದರ ನಡುವೆ ಮುಸ್ಲೀಂ ಸಮುದಾಯದ ಕೆಲ ಯುವಕರು ಆಜಾದ್‌ ನಗರಕ್ಕೆ ಬನ್ನಿ ನೋಡಿ ಎನ್ನುವ ಸವಾಲಿನ ವೀಡಿಯೋ ಹಾಕಿದ್ದರು. ಇದು ಪರಸ್ಪರ ಉದ್ವಿಗ್ನ ಸನ್ನಿವೇಶಕ್ಕೆ ಕಾರಣವಾಗಿತ್ತು.

ಗುರುವಾರ ರಾತ್ರಿಯೂ ಬೇತೂರು ರಸ್ತೆಯಲ್ಲಿ ಮೆರವಣಿಗೆ ಹೋಗುವಾಗ ಕೆಲವರು ಗಣೇಶನ ವಿಗ್ರಹದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಇತ್ತ ಕಡೆಯಿಂದಲೂ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯ ಅರಿವಿದ್ದ ಕಾರಣಕ್ಕೆ ಪೊಲೀಸ್‌ ಭದ್ರತೆ ಹಾಕಲಾಗಿತ್ತು. ಕೂಡಲೇ ಪೊಲೀಸರು ಎರಡು ಕಡೆಯವರನ್ನು ಚದುರಿಸಿದರು. ಕಲ್ಲು ತೂರಾಟದಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಕೆಲ ಸಿಬ್ಬಂದಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆ ನೀಡಲಾಗಿದೆ.

ಎಸ್ಪಿ ಹೇಳೋದು ಏನು

ವಿಷಯ ತಿಳಿದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್‌ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದರು. ಲಾಠಿ ಹಿಡಿದು ಅಲ್ಲಿದ್ದವರನ್ನು ಚದುರಿಸಿ ಗಣೇಶ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟರು.

ದಾವಣಗೆರೆಯಲ್ಲಿ ಗಲಾಟೆ ಹಿಂದೆ ಎರಡೂ ಸಮುದಾಯಗಳ ತಪ್ಪಿದೆ ಸತೀಶ್​ ಪೂಜಾರಿ ಪ್ರಚೋದನೆಯೇ ಕಾರಣ ಅಂತ ಎಂದು ಮುಸ್ಲೀಂ ಸಮುದಾಯದವರು ಹೇಳುತ್ತಿದ್ದಾರೆ. ಮುಸ್ಲಿಮರಿಗೆ ಚಾಲೆಂಜ್ ಮಾಡಿದ್ದಕ್ಕೆ ಗಲಾಟೆ ನಡೆದಿದೆ ಅಂತ ಹೇಳಿದ್ದಾರೆ. ಮುಸ್ಲಿಂ ವ್ಯಕ್ತಿ ವಿಡಿಯೋ ಮಾಡಿದ್ದ, ಇದಕ್ಕೆ ಸತೀಶ್ ಪೂಜಾರಿ ಪ್ರಚೋದನಾಕಾರಿ ಭಾಷಣ ಮಾಡಿ ಮುಸ್ಲಿಮರಿಗೆ ಚಾಲೆಂಜ್ ಮಾಡಿದ್ದರು. ಇದೇ ಕಾರಣಕ್ಕೆ ಗಲಾಟೆ ಆಗಿದೆ ಎನ್ನುವ ಮಾಹಿತಿ ಇದೆ. ಆದರೆ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಯಾವುದೇ ಸಮುದಾಯದ ವಿರುದ್ದ ಕಠಿಣ ಕ್ರಮ ಖಚಿತ ಎಂದು ಎಸ್ಪಿ ಉಮಾ ಮಾಹಿತಿ ನೀಡಿದರು.

ಕಲ್ಲು ತೂರಾಟ ನಡೆಸಿದ ಘಟನೆ ಹಾಗೂ ಗಲಭೆಗೆ ಕಾರಣವಾದ 30ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವರನ್ನು ಗುರುವಾರ ರಾತ್ರಿಯೇ ನ್ಯಾಯಾಧೀಶರ ನಿವಾಸದ ಎದುರು ಹಾಜರುಪಡಿಸಲಾಗಿದೆ. ಹನ್ನೊಂದು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೂರ್ವ ವಲಯ ಐಜಿಪಿ ರಮೇಶ್‌ ಬಾನೋತ್‌ ಕೂಡ ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿದ್ದರು.

ಈ ವೇಳೆ ಗಲಾಟೆ ಕಾರಣದಿಂದ ಹಲವರನ್ನು ವಶಕ್ಕೆ ಪಡೆದುಕೊಂಡಿರುವ ಮಕ್ಕಳ ಪೋಷಕರು ಮಧ್ಯರಾತ್ರಿ ಪೊಲೀಸರು ನಮ್ಮ ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ಏನಾಗುತ್ತೋ ಗೊತ್ತಿಲ್ಲ ಎಂದು ಆತಂಕ ಹೊರ ಹಾಕಿದರು.

ವಿಜಯೇಂದ್ರ ಕಿಡಿ

ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟ ಹಗರಣಗಳ ಗಂಭೀರ ಚರ್ಚೆಯ ದಿಕ್ಕು ತಪ್ಪಿಸಿ ಜನರ ಗಮನ ಬೇರೆಡೆ ಸೆಳೆಯಲು ಕೆಲವು ಘಟನೆಗಳನ್ನು ಸೃಷ್ಠಿಮಾಡುತ್ತಿದೆ ಅದರ ಒಂದು ಭಾಗವಾಗಿ ಹಿಂದೂ ಸಮುದಾಯದ ಭಾವನೆ ಕೆರಳಿಸಲು ಗಣೇಶೋತ್ಸವ ಮೆರವಣಿಗೆಗಳ ಮೇಲೆ ದಾಳಿ ನಡೆಸುವ ಮತಾಂಧ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿ ಕಾರಿದ್ದಾರೆ.

ಈ ಹಿನ್ನಲೆಯಲ್ಲಿ ಗಣೇಶೋತ್ಸವಗಳ ಮೇಲೆ ಕ್ಷುದ್ರ ಶಕ್ತಿಗಳ ಅಟ್ಟಹಾಸ ನಿರಂತರವಾಗಿ ಸಾಗಿದೆ ನಾಗಮಂಗಲದ ಘಟನೆ ಮಾಸುವ ಮುನ್ನವೇ ತಡರಾತ್ರಿ ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ದಾಳಿ ನಡೆದಿರುವ ಘಟನೆ ಗಮನಿಸಿದರೆ ಕಾನೂನು ಸುವ್ಯವಸ್ಥೆಯ ವಿಫಲತೆ ಹಾಗೂ ಗೃಹ ಇಲಾಖೆಯ ಸಂಪೂರ್ಣ ನಿಷ್ಕ್ರಿಯತೆ ಎದ್ದುಕಾಣುತ್ತದೆ, ಹಿಂದೂ ಉತ್ಸವ ಹಾಗೂ ಆಚರಣೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತಾಳಿರುವ ಉಪೇಕ್ಷೆ ಧೋರಣೆಯನ್ನು ಸರಣೀ ಘಟನೆಗಳು ಸಾಕ್ಷಿಕರಿಸುತ್ತಿವೆ. ಘಟನೆಯ ವೀಡಿಯೋ ತುಣುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತಾಂಧ ಕಿಡಿಗೇಡಿಗಳು ಕಾಂಗ್ರೆಸ್ ಸರ್ಕಾರ ತಮ್ಮ ರಕ್ಷಣೆಗಿದೆ ಎಂಬ ನಂಬಿಕೆಯಲ್ಲೇ ದಾಳಿ ನಡೆಸುತ್ತಿರುವ ಪರಿ ಗೋಚರವಾಗುತ್ತದೆ. ದಾವಣಗೆರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುರ್ಘಟನೆಗೆ ಕಾರಣರಾದ ಮತಾಂಧರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಅಲ್ಲದೇ ನಾಗಮಂಗಲದಂತೆ ಅಮಾಯಕ ಹಿಂದೂ ಸಮುದಾಯಕ್ಕೆ ತೊಂದರೆ ನೀಡಿದರೆಬಿಜೆಪಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಪುಂಡ-ಪೋಕರಿಗಳ, ವಿಧ್ವಂಸಕ ಮನಸ್ಥಿತಿಯ ದೇಶ ದ್ರೋಹಿಗಳ ತಾಣವಾಗುತ್ತಿರುವ ರಾಜ್ಯದಲ್ಲಿ ನಾಗರಿಕ ಸಮಾಜ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದ ಆತಂಕದ ನೆಲೆ ಸೃಷ್ಠಿಯಾಗುತ್ತಿದೆ. ಸಮಾಜಕ್ಕೆ ಸುರಕ್ಷತೆಯ ವಾತಾವರಣ ನಿರ್ಮಿಸುವ ಬದ್ಧತೆ ಹಾಗೂ ಸಾಮರ್ಥ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದ್ದಂತಿಲ್ಲ, ಈ ಸರ್ಕಾರ ಆಡಳಿತ ಬಿಟ್ಟು ತೊಲಗುವುದೇ ಸದ್ಯಕ್ಕೆ ಕಾಣುತ್ತಿರುವ ಪರಿಹಾರ ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

mysore-dasara_Entry_Point