Dharwad News: ಅನೈತಿಕ ಸಂಬಂಧವೇ ಹತ್ಯೆಗೆ ಕಾರಣವಾಯ್ತು; ಧಾರವಾಡ ಕಲಘಟಗಿಯ ಮದುಮಗನನ್ನು ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್
ನಿಂಗಪ್ಪ, ವಿವಾಹಿತ ಮಹಿಳೆ ಜತೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದ. ಅದಕ್ಕೂ ಮೊದಲು ಸಾಕಷ್ಟು ಬಾರಿ ನಿಂಗಪ್ಪನಿಗೆ ಆರೋಪಿಗಳು ತಿಳಿ ಹೇಳಿದ್ದರು. ಆದರೂ ನಿಂಗಪ್ಪ ಚಾಳಿ ಮುಂದುವರೆಸಿದ್ದ. ಮದುವೆ ಹತ್ತಿರ ಬಂದರೂ ನಿಂಗಪ್ಪ ತನ್ನ ವರ್ತನೆಯನನ್ನು ಬದಲಾಯಿಸಿಕೊಂಡಿರಲಿಲ್ಲ.
ಧಾರವಾಡ: ಹಸೆಮಣೆ ಏರಲು ಐದು ದಿನಗಳು ಬಾಕಿ ಇರುವಾಗ ಭೀಕರವಾಗಿ ಹತ್ಯೆಯಾಗಿದ್ದ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಿನ್ನೂರು ಯುವಕನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗೆ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಕ್ಕಿದೆ.
ಜೂನ್ 2ರಂದು ರಾತ್ರಿ ಊಟ ಮುಗಿಸಿ ಗ್ರಾಮದ ಹೊರ ವಲಯದ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಯುವಕ ನಿಂಗಪ್ಪನ (33) ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದರು. ಹಸಮಣೆ ಏರಬೇಕಿದ್ದ ನಿಂಗಪ್ಪ, ಕೊಲೆಯಾಗಿದ್ದು ಇಡೀ ರಾಜ್ಯಾದ್ಯಂತ ಸುದ್ದಿ ಆಗಿತ್ತು. ಮದುವೆ ಹತ್ತಿರವಿದ್ದ ಸಮಯದಲ್ಲಿ ಯಾರು ಈ ರೀತಿ ಹತ್ಯೆ ಮಾಡಿರಬಹುದು? ಎಂಬ ಪ್ರಶ್ನೆಗಳಿಗೆ ಕಲಘಟಗಿ ಪೊಲೀಸರು ತನಿಖೆ ಉತ್ತರ ನೀಡಿದೆ.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ
ಗ್ರಾಮದ ವಿವಾಹಿತ ಮಹಿಳೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೇ ನಿಂಗಪ್ಪನ ಕೊಲೆಗೆ ಕಾರಣವಾಗಿದೆ. ಮದುವೆ ಸಮಯದಲ್ಲೂ ಮಹಿಳೆಯ ಜತೆ ನಂಟು ಬಿಡದ ಹಿನ್ನೆಲೆ ಮಹಿಳೆಯ ಪತಿ ಹಾಗೂ ಅವಳ ಸಹೋದರ ಇಬ್ಬರು ಸೇರಿ ನಿಂಗಪ್ಪನನ್ನು ಕೊಲೆ ಮಾಡಿದ್ದಾರೆ. ದನದ ಕೊಟ್ಟಿಗೆಗೆ ಬಂದು ಮಲಗಿರುವುದನ್ನು ಗಮನಿಸಿ ನಿಂಗಪ್ಪನಿಗೆ ಕಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದು ಅದೇ ಕಟ್ಟಿಗೆಯಿಂದ ಕುತ್ತಿಗೆಗೆ ಅಡ್ಡಹಾಕಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾರೆ. ನಂತರ ಅವನ ಸುತ್ತಲೂ ಕಾರದ ಪುಡಿ ಎರಚಿ ಅಲ್ಲಿಂದ ಪರಾರಿಯಾಗಿದ್ದರು.
ಮೊದಲೇ ಎಚ್ಚರಿಸಿದ್ದರು
ನಿಂಗಪ್ಪ, ವಿವಾಹಿತ ಮಹಿಳೆ ಜತೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದ. ಅದಕ್ಕೂ ಮೊದಲು ಸಾಕಷ್ಟು ಬಾರಿ ನಿಂಗಪ್ಪನಿಗೆ ಆರೋಪಿಗಳು ತಿಳಿ ಹೇಳಿದ್ದರು. ಆದರೂ ನಿಂಗಪ್ಪ ಚಾಳಿ ಮುಂದುವರೆಸಿದ್ದ. ಮದುವೆ ಹತ್ತಿರ ಬಂದರೂ ನಿಂಗಪ್ಪ ತನ್ನ ವರ್ತನೆ ಬದಲಾಯಿಸದ್ದನ್ನು ಕಂಡು, ಕೊನೆಯದಾಗಿ ''ಅವಳ ನಂಟು ಬಿಟ್ಟು ಬಿಡು, ಮದುವೆ ಆಗುತ್ತಿದ್ದಿಯಾ, ಇವೆಲ್ಲಾ ಸರಿ ಇರುವುದಿಲ್ಲ'' ಎಂದು ಬೇಡಿಕೊಂಡಿದ್ದರಂತೆ. ಆದರೆ ನಿಂಗಪ್ಪ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದಿದ್ದಾಗ ಆರೋಪಿಗಳು ನಿಂಗಪ್ಪನನ್ನು ಕೊಲೆ ಮಾಡಲು ನಿರ್ಧರಿಸಿದ್ದಾಗಿ ಆರೋಪಿಗಳು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.
===========================
ವೃದ್ಧೆ ಕೊಲೆ ಆರೋಪಿ ಅಂದರ್
ತಾಲೂಕಿನ ಆಲದಕಟ್ಟಿ ಗ್ರಾಮದ ಹೊರ ವಲಯದಲ್ಲಿ ಮೇ 27ರಂದು ನಡೆದಿದ್ದ ಒಂಟಿ ವೃದ್ಧೆಯ ಕೊಲೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿ ಆಗಿದ್ದಾರೆ. ಚಿನ್ನದ ಆಸೆಗೆ ವೃದ್ಧೆಯ ಹತ್ಯೆ ಮಾಡಿದ್ದು, ತಾಲೂಕಿನ ಜನರನ್ನು ಭಯ ಭೀತಿಗೊಳಿಸಿತ್ತು.
ತಾಲೂಕಿನ ನೆಲ್ಲಿಹರವಿ ಗ್ರಾಮದ 82 ವರ್ಷದ ತಿಪ್ಪವ್ವ ತಂಬೂರ ಎಂಬುವವರನ್ನು ಆಲದಕಟ್ಟಿ ಗ್ರಾಮದ ದ್ಯಾಮಣ್ಣ ಎಂಬುವವರಿಗೆ ಸೇರಿದ ಕಬ್ಬು ಬೆಳೆದ ಜಮೀನಿನಲ್ಲಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿ ನೆಲ್ಲಿಹರವಿ ಗ್ರಾಮದ ಮಲ್ಲಪ್ಪ ಶಂಕ್ರಪ್ಪ ಹುಲ್ಲಂಬಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೇಸ್ ಬಗ್ಗೆ ಸಿಪಿಐ ಶ್ರೀಶೈಲ ಕೌಜಲಗಿ ಮಾಹಿತಿ ನೀಡಿ, ''ಆರೋಪಿ ಕೆಲವು ದಿನಗಳ ಹಿಂದೆ ವೃದ್ಧೆಯಿಂದ 10 ಸಾವಿರ ಸಾಲ ಪಡೆದಿದ್ದ. ಸಾಲದ ಹಣವನ್ನು ವಾಪಸ್ ಕೊಡುವಂತೆ ವೃದ್ಧೆ ಕೇಳಿದ್ದರು. ಅಲ್ಲದೆ ಆರೋಪಿ ಸಾಲದ ಸುಳಿಯಲ್ಲಿ ಸಿಲುಕಿದ್ದ. ವೃದ್ಧೆಯ ಕೊರಳಿನಲ್ಲಿ ಇದ್ದ ಚಿನ್ನಾಭರಣ ಗಮನಿಸಿದ್ದ. ಮೇ 27ರಂದು ವೃದ್ಧೆ ಆಲದಕಟ್ಟಿಗೆ ಒಂಟಿಯಾಗಿ ತೆರಳುತ್ತಿದ್ದನ್ನು ಗಮನಿಸಿ ವೃದ್ಧೆಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ'' ಎಂದು ತಿಳಿಸಿದ್ದಾರೆ.
ಬಹುಮಾನ ಘೋಷಣೆ:
ಕಲಘಟಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ವೃದ್ಧೆ ಹಾಗೂ ಯುವಕನ ಕೊಲೆ ಪ್ರಕರಣ ಬೇಧಿಸಿದ ಕಲಘಟಗಿ ಪೊಲೀಸರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಲೆ ಪ್ರಕರಣ ಪತ್ತೆ ಮಾಡಿದ ತನಿಖಾ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.
===================================
ಅರೋಪಿಗಳು ನಿರ್ದೋಷಿ
ಹುಬ್ಬಳ್ಳಿಯಲ್ಲಿ ಅಪ್ಸರಾ ಚಿತ್ರ ಮಂದಿರದ ಎದುರು 2010ರಲ್ಲಿ ನಡೆದಿದ್ದ ಇಂದಿರಾನಗರದ ಪಾಲಾಕ್ಷ ವಲ್ಲೂರು(30) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ 10 ಜನ ಆರೋಪಿಗಳು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
ಅಪ್ಸರಾ ಚಿತ್ರಮಂದಿರದಲ್ಲಿ 'ರಕ್ತಚರಿತ್ರಂ' ತೆಲುಗು ಸಿನಿಮಾ ನೋಡಿ ಹೊರಗೆ ಬರುತ್ತಿದ್ದ ಪಾಲಾಕ್ಷ ಎಂಬುವವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿತ್ತು. ಸದಾ ಜನರಿಂದ ತುಂಬಿರುವ ಪ್ರದೇಶದಲ್ಲಿ ಭೀಕರ ಹತ್ಯೆ ನಡೆದಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ರಜನಿ ಬಿಜವಾಡ, ಶಂಕ್ರಪ್ಪ ಬಿಜವಾಡ, ದುರ್ಗಪ್ಪ ಬಿಜವಾಡ, ಶಶಿಕಾಂತ ಬಿಜವಾಡ ಸೇರಿ 10 ಮಂದಿ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತರಾಗಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಕೊಲೆಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಆರೋಪಿಗಳು ನಿರ್ದೋಷಿಗಳು ಎಂದು ಇಲ್ಲಿನ ಒಂದನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
================================
ಮತ್ತೊಬ್ಬ ಆರೋಪಿ ಬಂಧನ
ಧಾರವಾಡ ನಗರದ ಕಮಲಾಪೂರದ ಹೊರ ವಲಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ತೇಜಸ್ವಿನಗರ ನಿವಾಸಿ ರೌಡಿಶೀಟರ್ ಮಂಜುನಾಥ ಸಾವಂತ ಬಂಧಿತ ಆರೋಪಿ. ರಿಯಲ್ ಎಸ್ಟೇಟ್ ಉದ್ಯಮಿ ಮೊಹ್ಮದ್ ಕುಡಚಿ ಹತ್ಯೆಗೆ ಬಂದೂಕು ಸರಬರಾಜು ಮಾಡಿದ್ದ ಆರೋಪದಡಿ ಈತನನ್ನು ಬಂಧಿಸಲಾಗಿದೆ.
ಮೇ 25ರಂದು ರಿಯಲ್ ಎಸ್ಟೇಟ್ ಉದ್ಯಮಿ ಮೊಹ್ಮದ್ ಕುಡಚಿ ಅವರನ್ನು ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡಲು ಬಂದಿದ್ದ ಗಣೇಶ ಕಮ್ಮಾರ ಎಂಬಾತನ ತೊಡೆಗೂ ಆಕಸ್ಮಿಕವಾಗಿ ತಲ್ವಾರ್ ತಗುಲಿ ಮೃತಪಟ್ಟಿದ್ದನು.
ರಿಯಲ್ ಎಸ್ಟೇಟ್ ಉದ್ಯಮಿ ಮೊಹ್ಮದ್ ಕುಡಚಿ ಅವರನ್ನು ಮೇ 25ರಂದು ಅವರ ಮನೆ ಎದುರೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಲು ಬಂದಿದ್ದ ಗಣೇಶ ಕಮ್ಮಾರ ಎಂಬಾತನ ತೊಡೆಗೂ ಆಕಸ್ಮಿಕವಾಗಿ ತಲ್ವಾರ್ ತಗುಲಿ ಮೃತಪಟ್ಟಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವರದಿ: ಪ್ರಹ್ಲಾದಗೌಡ ಬಿ.ಜಿ, ಧಾರವಾಡ
ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ
ಇಮೇಲ್: ht.kannada@htdigital.in