DK Shivakumar: ಬೆಂಗಳೂರಿನ ಸ್ಥಿತಿಗೆ ಕಾಂಗ್ರೆಸ್​ ದುರಾಡಳಿತ ಕಾರಣ ಎಂದ ಸಿಎಂಗೆ ಡಿಕೆಶಿ ತಿರುಗೇಟು ನೀಡಿದ್ದು ಹೀಗೆ..
ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar: ಬೆಂಗಳೂರಿನ ಸ್ಥಿತಿಗೆ ಕಾಂಗ್ರೆಸ್​ ದುರಾಡಳಿತ ಕಾರಣ ಎಂದ ಸಿಎಂಗೆ ಡಿಕೆಶಿ ತಿರುಗೇಟು ನೀಡಿದ್ದು ಹೀಗೆ..

DK Shivakumar: ಬೆಂಗಳೂರಿನ ಸ್ಥಿತಿಗೆ ಕಾಂಗ್ರೆಸ್​ ದುರಾಡಳಿತ ಕಾರಣ ಎಂದ ಸಿಎಂಗೆ ಡಿಕೆಶಿ ತಿರುಗೇಟು ನೀಡಿದ್ದು ಹೀಗೆ..

ಕೊಟ್ಟ ಕುದುರೆಯನ್ನು ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ ಎಂಬ ಅಲ್ಲಮ ಪ್ರಭುಗಳ ವಚನದ ರೀತಿ ಮುಖ್ಯಮಂತ್ರಿಗಳು ಅಧಿಕಾರ ಸಿಕ್ಕಾಗ ಕೆಲಸ ಮಾಡಲಾಗದೆ ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.

<p>ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್</p>
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು: ಮಳೆ ಅಬ್ಬರಕ್ಕೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ನಗರದ ರಸ್ತೆಗಳು, ಬಡಾವಣೆಗಳು ಜಲಾವೃತವಾಗಿವೆ. ಮಳೆ ಅವಾಂತರಕ್ಕೆ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್​ ದೂಷಿಸುತ್ತಿದ್ದರೆ, ಬಿಜೆಪಿ ಸರ್ಕಾರ ಹಿಂದಿನ ಕಾಂಗ್ರೆಸ್​ ಸರ್ಕಾರನ್ನು ದೂಷಿಸುತ್ತಿದೆ. ಬಡಾವಣೆಗಳು ಜಲಾವೃತಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಯೋಜನಾ ರಹಿತ ಹಾಗೂ ದುರಾಡಳಿತದ ಫಲವಾಗಿ ಈ ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ ಎದುರಿಸಬೇಕಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಕೊಟ್ಟ ಕುದುರೆಯನ್ನು ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ ಎಂಬ ಅಲ್ಲಮ ಪ್ರಭುಗಳ ವಚನದ ರೀತಿ ಮುಖ್ಯಮಂತ್ರಿಗಳು ಅಧಿಕಾರ ಸಿಕ್ಕಾಗ ಕೆಲಸ ಮಾಡಲಾಗದೆ ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಒತ್ತುವರಿ ಆಗಿದ್ದರೆ ಈ ಸರ್ಕಾರ ಅದನ್ನು ತೆರವುಗೊಳಿಸಲಿ ಎಂದು ಸವಾಲೆಸೆದಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಇಂತಹ ದುಸ್ಥಿತಿ ನಿರ್ಮಾಣವಾಗಿರಲಿಲ್ಲ. ನಿಮ್ಮ ಸರ್ಕಾರ, ಅಧಿಕಾರಿಗಳ ಭ್ರಷ್ಟಾಚಾರದಿಂದ ಬೆಂಗಳೂರಿಗೆ ಈ ಸ್ಥಿತಿ ಬಂದಿದೆ. ಅಧಿಕಾರ ಈಗ ಅವರ ಕೈಯಲ್ಲಿದೆ. ಅವರಿಗೆ ಕೆಲಸ ಮಾಡಲಾಗದಿದ್ದರೆ ಚುನಾವಣೆಗೆ ಹೋಗೋಣ ಎಂಬುದನ್ನು ಮುಖ್ಯಮಂತ್ರಿಗಳು ಅರಿಯಲಿ ಎಂದರು.

ಬೆಂಗಳೂರಿನ ಈ ಕೆಟ್ಟ ಸಮಯದಲ್ಲಿ ನಾವು ರಾಜಕೀಯ ಮಾಡಲು ಬಯಸುವುದಿಲ್ಲ. ಬೆಂಗಳೂರಿನ ಘನತೆ ಮರುಸ್ಥಾಪಿಸುವ ಬಗ್ಗೆ ನಾವು ಗಮನಹರಿಸುತ್ತೇವೆ. ಅವರು (ಬೊಮ್ಮಾಯಿ) ನಮ್ಮ ಮೇಲೆ ಆರೋಪ ಮಾಡುವ ಬದಲು, ಕಳೆದ ಮೂರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ನಮ್ಮ ಅವಧಿಯಲ್ಲಿ ತಪ್ಪಾಗಿದ್ದರೆ ಅದನ್ನು ಗುರುತಿಸಿ ಸರಿಪಡಿಸಬಹುದಾಗಿತ್ತು. ಈ ಕೆಲಸ ಮಾಡದಂತೆ ಅವರನ್ನು ತಡೆದವರು ಯಾರು? ಕೆಲಸದ ವಿಚಾರದಲ್ಲಿ ಅವರನ್ನು ಯಾರೂ ತಡೆಯುತ್ತಿಲ್ಲ. ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದು ಬಿಟ್ಟರೆ ಉಳಿದಂತೆ ಯಾವ ಅಗತ್ಯ ಕ್ರಮ ಕೈಗೊಳ್ಳಲಾಗಿದೆ? ಮುಖ್ಯಮಂತ್ರಿಗಳಿಗೆ ಬೆಂಗಳೂರು ಜನರ ಮೇಲೆ ನಂಬಿಕೆ ಇಲ್ಲ. ಬೆಂಗಳೂರು ಹಾಗೂ ಕರ್ನಾಟಕದ ರಾಜ್ಯದ ಬಗ್ಗೆ ದೂರದೃಷ್ಟಿ ಇಲ್ಲ. ಅವರು ಕೇವಲ ತೆರಿಗೆದಾರರ ಹಣದ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.

ದೇಶದ ರಫ್ತು ತೆರಿಗೆಯಲ್ಲಿ ಸುಮಾರು ಶೇ. 29 ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ರಾಜ್ಯ ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ನಮಗೆ ದಕ್ಷ ಆಡಳಿತ ಬೇಕಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯ ಹಾಗೂ ಬೆಂಗಳೂರಿನ ಜನರಿಗಾಗಿ ದೂರದೃಷ್ಟಿಯನ್ನು ಹೊಂದಿದ್ದು, ಬೆಂಗಳೂರನ್ನು ಎಲ್ಲ ಬಂಡವಾಳ ಹೂಡಿಕೆದಾರರ ಸುರಕ್ಷಿತ ಪ್ರದೇಶವನ್ನಾಗಿ ಮಾಡಲು ಸಿದ್ಧವಿದೆ. ಕಾಂಗ್ರೆಸ್ ಸರಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮೊದಲು ಆರಂಭಿಸಿತು . ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಅವರು ಕೇವಲ ಸಮಾಜ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ಬೇರೆಯವರ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದು, ರಾಜ್ಯದ ಜನ ಎಲ್ಲವನ್ನು ನೋಡುತ್ತಿದ್ದಾರೆ. ಸಮಯ ಬಂದಾಗ ಅವರು ತೀರ್ಮಾನ ಮಾಡುತ್ತಾರೆ ಎಂದರು.

ರಾಜ್ಯದೆಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, 40 % ಕಮಿಷನ್ ಹೆಚ್ಚಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅದು 50 % ತಲುಪಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದು ಬೆಂಗಳೂರಿನ ದುಸ್ಥಿತಿ. ಮುಖ್ಯಮಂತ್ರಿಗಳು ಕೇವಲ ಆರೋಪ ಮಾಡಲಷ್ಟೇ ಸೀಮಿತವಾಗಿದ್ದು, ಕಾಂಗ್ರೆಸ್ ತಪ್ಪು ಮಾಡಿದ್ದರೆ ಸಾಬೀತುಪಡಿಸಲಿ, ನಾವು ಅದರ ಹೊಣೆ ಹೊರಲು ಸಿದ್ಧರಿದ್ದೇವೆ. ಸರ್ಕಾರ ಬೆಂಗಳೂರಿನ ಸ್ಥಿತಿ ಉತ್ತಮವಾಗಿಸಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಬೆಂಗಳೂರು ಹಾಗೂ ರಾಜ್ಯದ ಜನತೆ ನಮಗೆ ಒಂದು ಅವಕಾಶ ನೀಡಲಿ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಮತ್ತೆ ಬೆಂಗಳೂರಿನ ವೈಭವ ಮರಳಿ ತರುತ್ತೇವೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಕಾಲದ ಹಗರಣದ ತನಿಖೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಅವರು ಈ ವಿಚಾರದಲ್ಲಿ ತಡ ಯಾಕೆ ಮಾಡುತ್ತಿದ್ದಾರೆ. ಅವರು ಒಂದು ನಿಮಿಷ ವ್ಯರ್ಥ ಮಾಡದೇ ತನಿಖೆ ಮಾಡಿಸಲಿ. ಕೇವಲ ಖಾಲಿ ಮಾತುಗಳನ್ನು ಆಡುವುದು ಬೇಡ. ನಮ್ಮ ತಪ್ಪಿದ್ದರೆ ಸಾಬೀತು ಮಾಡಿ ನಮ್ಮನ್ನು ಗಲ್ಲಿಗೇರಿಸಲಿ. ನನ್ನ ಮೇಲೆ ಮಾತ್ರ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿ ಸಿಬಿಐಗೆ ನೀಡಿಲ್ಲವೇ? ಬೇರೆ ಯಾರೂ ಅಕ್ರಮ ಆಸ್ತಿ ಸಂಪಾದಿಸಿಲ್ಲವೇ? ಇಂತಹ ಗೊಡ್ದು ಬೆದರಿಕೆಗಳಿಗೆ ಡಿ.ಕೆ. ಶಿವಕುಮಾರ್ ಹೆದರುವ ಮಗ ಅಲ್ಲ ಎಂದು ಕಿಡಿಕಾರಿದರು.

ಪಿಎಸ್ಐ ಅಕ್ರಮ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು

ಪಿಎಸ್ಐ ಅಕ್ರಮದಲ್ಲಿ ಬಿಜೆಪಿ ಶಾಸಕ ಬಸವರಾಜ ದಡಸಗೂರು ಅವರದು ಒಂದು ಸಣ್ಣ ಕೈ. ಅವರ ಮಾತಿನಂತೆ ಸರ್ಕಾರ ಎಂದರೆ ಯಾರು? ಸರ್ಕಾರ ಎಂದರೆ ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು. ಇದಕ್ಕಾಗಿಯೇ ನಾವು ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಲೋಕಾಯುಕ್ತ ತನಿಖೆಯಿಂದ ಪ್ರಯೋಜನ ಆಗುವುದಿಲ್ಲ. ಸತ್ಯ ಒಂದೊಂದಾಗಿ ಹೊರ ಬರುತ್ತಿದೆ. ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರನ್ನು ಹೆದರಿಸಲು ನೋಟೀಸ್ ನೀಡಿದ್ದರು. ವಿಶ್ವನಾಥ್, ಯತ್ನಾಳ್ ಹಾಗೂ ಬಸವರಾಜ ಅವರು ಸತ್ಯ ಹೇಳಿದ್ದರೂ ಈಗ ಸುಮ್ಮನಿದ್ದಾರೆ. ಮುಖ್ಯಮಂತ್ರಿಗಳೇ ನಿಮ್ಮಿಂದ ಸರ್ಕಾರ ನಡೆಸಲು ಆಗುತ್ತಿಲ್ಲ. ಸಚಿವ ಮಾಧುಸ್ವಾಮಿಗಳು ಹೇಳಿದಂತೆ ನೀವು ಸರ್ಕಾರವನ್ನು ತಳ್ಳುತ್ತಿದ್ದೀರಿ ಅಷ್ಟೇ. ಇನ್ನೂ ನಾಲ್ಕು ಜನರನ್ನು ಸೇರಿಸಿಕೊಂಡು ಸರ್ಕಾರವನ್ನು ತಳ್ಳಿ ಎಂದು ವ್ಯಂಗ್ಯವಾಡಿದರು.

Whats_app_banner