Madhav Gadgil:ವಯನಾಡು ದುರಂತ, ಪಶ್ಚಿಮ ಘಟ್ಟಗಳ ಸಂರಕ್ಷಣೆ ವರದಿ ಕೊಟ್ಟಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಎಲ್ಲಿಯವರು?-environment news know about well known indian environmentalist western ghat expert prof madhav gadgil ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Madhav Gadgil:ವಯನಾಡು ದುರಂತ, ಪಶ್ಚಿಮ ಘಟ್ಟಗಳ ಸಂರಕ್ಷಣೆ ವರದಿ ಕೊಟ್ಟಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಎಲ್ಲಿಯವರು?

Madhav Gadgil:ವಯನಾಡು ದುರಂತ, ಪಶ್ಚಿಮ ಘಟ್ಟಗಳ ಸಂರಕ್ಷಣೆ ವರದಿ ಕೊಟ್ಟಿದ್ದ ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಎಲ್ಲಿಯವರು?

Western Ghats ವಯನಾಡು ದುರಂತದ ನಂತರ ಪಶ್ಚಿಮ ಘಟ್ಟ( Western Ghat) ಹಾಗೂ ಪ್ರೊ.ಮಾಧವ ಗಾಡ್ಗೀಳ್‌( Madhav Gadgil) ಹೆಸರು ಹೆಚ್ಚು ಚರ್ಚೆಯಲ್ಲಿವೆ. ಭಾರತರ ಪಶ್ಚಿಮ ಘಟ್ಟಗಳ ಉಳಿವಿಗೆ ವರದಿ ನೀಡಿದ ಪ್ರೊ.ಮಾಧವ್‌ ಗಾಡ್ಗೀಳ್‌ ಹೆಮ್ಮೆಯ ಪರಿಸರವಾದಿ. ಅವರ ಕುರಿತಾಗಿ ಹಿರಿಯ ಪತ್ರಕರ್ತ ಎನ್‌.ಜಗದೀಶ್‌ ಕೊಪ್ಪ ಬರೆದ ಲೇಖನ ಇಲ್ಲಿದೆ.

 ಭಾರತದ ಹೆಮ್ಮಯ ಪರಿಸರವಾದಿ ಮಾಧವ ಗಾಡ್ಗೀಳ್‌.
ಭಾರತದ ಹೆಮ್ಮಯ ಪರಿಸರವಾದಿ ಮಾಧವ ಗಾಡ್ಗೀಳ್‌.

ಭಾರತದ ಪಶ್ಚಿಮ ಘಟ್ಟಗಳ ರಕ್ಷಕ ಮತ್ತು ತಜ್ಞರೆನಿಸಿಕೊಂಡಿರುವ ಪ್ರೊ.ಮಾಧವ ಗಾಡ್ಗೀಳ್ ಅವರು ತಮ್ಮ ಎಂಬತ್ತೆರೆಡನೆಯ ವಯಸ್ಸಿನಲ್ಲಿಯೂ ಕೂಡ ಇಲ್ಲಿನ ನೆಲ ಮತ್ತು ಜಲದ ಬಗ್ಗೆ ಕಾಳಜಿ ವಹಿಸಿದಂತೆ , ಪ್ರಾಣಿ ಪಕ್ಷಿಗಳ ಸಂಕುಲದ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಗಾಡ್ಗೀಳ್ ಅವರಿಗೆ ಇರುವ ಪರಿಸರ ಪ್ರಜ್ಞೆಯಿಂದ ಪ್ರೇರಿತರಾಗಿ ಇಂದು ದೇಶಾದ್ಯಂತ ನೂರಾರು ಪರಿಸರ ತಜ್ಞರು ಸೃಷ್ಟಿಯಾಗಿದ್ದಾರೆ. ಈ ಕಾರಣದಿಂದ ಅವರನ್ನು ಭಾರತದ ಪರಿಸರದ ಪಿತಾಮಹಾ ಎಂದು ಕರೆದರೆ ಅದು ಅತಿಶಯದ ಮಾತಾಗಲಾರದು. ಕಳೆದ ವರ್ಷ ಪ್ರಕಟವಾದ ಇವರ ಆತ್ಮ ಚರಿತ್ರೆ ‘’ ಎ ವಾಕ್ ಅಪ್ ದಿ ಹಿಲ್ - ಲಿವಿಂಗ್ ವಿಥ್ ಪೀಪಲ್ ಅಂಡ್ ನೇಚರ್’’ ಕೃತಿಯು ಏಕಕಾಲಕ್ಕೆ ಗಾಡ್ಗೀಳ್ ಅವರ ಕಥನದ ಜೊತೆಗೆ ಭಾರತದ ಪರಿಸರದ ಏಳುಬೀಳಿನ ಕಥೆಯನ್ನೂ ಸಹ ಹೇಳುತ್ತದೆ.

ಬಾಲ್ಯದಲ್ಲೇ ತಂದೆ ಪ್ರಭಾವ

ಪ್ರೊ. ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಬರುವ ಮಹಾರಾಷ್ಟ್ರದ ಪುಣೆ ನಗರದಲ್ಲಿ 1942 ರ ಮೇ ತಿಂಗಳಲ್ಲಿ ವಿದ್ಯಾವಂತ ದಂಪತಿಗಳಿಗೆ ಜನಿಸಿದರು. ಅವರು ಬಾಲ್ಯದಿಂದಲೂ ತಮ್ಮ ತಂದೆಯವರಾದ ಧನಂಜಯ ರಾಮಚಂದ್ರ ಗಾಡ್ಗೀಳ್ ಅವರಿಂದ ಪ್ರಭಾವಿತರಾಗಿದ್ದರು. ಗಾಡ್ಗೀಳ್ ಬಾಲ್ಯದಲ್ಲಿ ತಮ್ಮ ತಂದೆಯವರು ತೆಗೆದುಕೊಟ್ಟಿದ್ದ ಬೈನಾಕ್ಯುಲರ್ ಹಿಡಿದು ಪುಣೆ ಸಮೀಪದ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದು ನೂರಾರು ಪಕ್ಷೆ ಪ್ರಬೇಧಗಳನ್ನು ಗುರುತಿಸುತ್ತಾ, ಅವುಗಳ ಕುರಿತಾಗಿ ಆಸಕ್ತಿ ಬೆಳೆಸಿಕೊಂಡರು. ಇದರ ಜೊತೆಗೆ ಬಾಲ್ಯದಲ್ಲಿ ಅವರಿಗೆ ವಿವಿಧ ಸಮುದಾಯದ ಜನರು ಮತ್ತು ಅವರ ಸಂಸ್ಕೃತಿ ಪರಿಚಯವಾಯಿತು. ತಮ್ಮ ಕುಟುಂಬದ ಪಕ್ಕದಲ್ಲಿ ವಾಸವಾಗಿದ್ದ ಹೆಸರಾಂತ ಮಾನವಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞರಾದ ಐರಾವತಿ ಕರ್ವೆ, ಅವರು ಧಾರ್ಮಿಕ, ಜಾತಿ ಮತ್ತು ವರ್ಗಗಳ ಕುರಿತು ಯಾವುದೇ ಪೂರ್ವಾಗ್ರಹಗಳಿಲ್ಲದೆ ಎಲ್ಲಾ ಜನರ ಮೇಲೆ ಸಮಾನತೆಯ ನಂಬಿಕೆಯಲ್ಲಿ ವಿಶ್ವಾಸ ಇಡುವಂತೆ ಮಾಡಿ ವಿವಿಧ ರಂಗಗಳಲ್ಲಿ ಗಾಡ್ಗೀಳ್ ಅವರಿಗೆ ಆಸಕ್ತಿ ಬೆಳೆಯಲು ಪ್ರೇರೇಪಿಸಿದರು.

ಪ್ರೊ. ಮಾಧವ ಗಾಡ್ಗೀಲ್ ಅವರು ತಮ್ಮ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಬುದ್ದಿವಂತ ವಿದ್ಯಾರ್ಥಿ ಮಾತ್ರವಲ್ಲದೆ, ಅತ್ಯುತ್ತಮ ಕ್ರೀಡಾಪಟುವಾಗಿದ್ದರು. ಗಾಡ್ಗೀಳ್ ಅವರು ವಿದ್ಯಾರ್ಥಿಯಾಗಿದ್ದಾಗ ದಿನಗಳಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಲ್ಲಿ ಪಕ್ಷಿವಿಜ್ಞಾನಿ ಸಲೀಂ ಅಲಿ ಅವರಿಗೆ ಪತ್ರವೊಂದನ್ನು ಬರೆದು ಪ್ರಶ್ನೆಯೊಂದನ್ನು ಕೇಳಿದ್ದರು. ಹಸಿರು ಜೇನುನೊಣ-ಭಕ್ಷಕಗಳ ಒಂದು ಗರಿಯು ಕೆಲವು ವಾರಗಳವರೆಗೆ ಏಕೆ ಕಣ್ಮರೆಯಾಗುತ್ತದೆ ಎಂಬುದರ ಕುರಿತು ಅವರು ಕೇಳಿದ್ದ ಪ್ರಶ್ನೆಗೆ ಸಲೀಂ ಆಲಿಯವರು ವಿವರವಾಗಿ ಉತ್ತರಿಸಿದ್ದರು. ಮಾಧವ ಗಾಡ್ಗೀಳ್ ಅವರು 1963 ರಲ್ಲಿ ಪುಣೆ ವಿಶ್ವವಿದ್ಯಾಲಯದ ಫರ್ಗುಸ್ಸನ್ ಕಾಲೇಜಿನಿಂದ ಜೀವಶಾಸ್ತ್ರದಲ್ಲಿ ಪದವಿ ಪಡೆದು ಆನಂತರ 1965 ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು

ಉನ್ನತ ಅಧ್ಯಯನ

ಮುಂಬೈನ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ, ಗಾಡ್ಗೀಳ್ ಅವರು ಸ್ನಾತಕೋತ್ತರ ಪದವಿ ಓದುತ್ತಾ, ರಸಾಯನಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಿದ್ದಾಗ ತಮ್ಮ ಸಹಪಾಠಿ ಸುಲೋಚನಾ ಅವರನ್ನು ಭೇಟಿಮಾಡಿ ತಮ್ಮ ಜೀವನ ಸಂಗಾತಿಯನ್ನಾಗಿ ಸ್ವೀಕರಿಸಿದರು. ನಂತರ ದಂಪತಿಗಳಿಬ್ಬರೂ ಅಮೇರಿಕಾಕ್ಕೆ ತೆರಳಿದರು. ಅಲ್ಲಿನ ಹಾರ್ವರ್ಡ್ ವಿಶ್ವ ವಿದ್ಯಾನಿಲಯದಲ್ಲಿ ಗಾಡ್ಗಿಳ್ ಅವರು 1969 ರಲ್ಲಿ ಪಿ.ಹೆಚ್.ಡಿ. ಪದವಿ ಪಡೆಯುವದರೊಂದಿಗೆ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ಅವರು 1971 ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ ಮಹಾರಾಷ್ಟ್ರ ಅಸೋಸಿಯೇಷನ್ ಫಾರ್ ಕಲ್ಟಿವೇಶನ್ ಆಫ್ ಸೈನ್ಸ್, ಪುಣೆಯ ಅಗರ್ಕರ್ ಸಂಶೋಧನಾ ಸಂಸ್ಥೆಯಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. 1973 ರಲ್ಲಿ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ಸೇರಿದ ಅವರು 2004 ರವರೆಗೆ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ತಮ್ಮ ಸೇವೆಯುದ್ದಕ್ಕೂ ಪರಿಸರ ವಿಜ್ಞಾನಿಯಾಗಿ ಅವರು ನಡೆಸಿದ ಅಧ್ಯಯನಗಳು ಮತ್ತು ಪ್ರಕಟಿಸಿದ ವರದಿಗಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾದವು.

ಪ್ರಕೃತಿಯೆಂದರೆ ಪ್ರಾಣ

ಮಾಧವ ಗಾಡ್ಗೀಳ್ ಅವರಿಗೆ ಬಾಲ್ಯದಿಂದಲೂ ಪ್ರಕೃತಿಯ ಮಡಿಲಲ್ಲಿ ವಾಸಿಸುವುದು, ಗಾಜಿನ ಜಾಡಿಗಳಲ್ಲಿ ಕೀಟಗಳು ಮತ್ತು ಚೇಳುಗಳನ್ನು ಸಂಗ್ರಹಿಸುವುದು ಮತ್ತು ಅವುಗಳ ನಡವಳಿಕೆಯನ್ನು ಅಧ್ಯಯನ ಮಾಡುವುದು ಅವರ ಹವ್ಯಾಸವಾಗಿತ್ತು. ತಮ್ಮ ಪೋಷಕರ ಬೆಂಬಲದಿಂದ ಪರಿಸರಶಾಸ್ತ್ರಜ್ಞರಾಗಿ ವೃತ್ತಿಜೀವನ ಆರಂಭಿಸಿದ ಗಾಡ್ಗೀಳ್ ಅವರು ಸ್ವತಂತ್ರ ಭಾರತವು ಎದುರಿಸುತ್ತಿದ್ದ ಅನೇಕ ಸಂದಿಗ್ಧತೆಗಳನ್ನು ಪರಿಹರಿಸಿದರು. ಇವುಗಳಲ್ಲಿ ಪ್ರಮುಖ ವಿಷಯಗಳಲ್ಲಿ ಒಂದಾದ ಜವಾಹರಲಾಲ್ ನೆಹರು ಅಣೆಕಟ್ಟುಗಳನ್ನು "ಆಧುನಿಕ ಭಾರತದ ದೇವಾಲಯಗಳು" ಎಂದು ಘೋಷಿಸಿದ್ದರು. ಆದರೆ, ಅವುಗಳ ಪರಿಣಾಮವನ್ನು ವಿಶೇಷವಾಗಿ ಅರಣ್ಯ ನಾಶ, ಸ್ಥಳಿಯ ಸಮುದಾಯಗಳ ಒಕ್ಕಲೆಬ್ಬಿಸುವಿಕೆ ಮತ್ತು ಭೂಕಂಪದ ಸಾಧ್ಯತೆ ಇವುಗಳನ್ನು ವಿವರಿಸಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನ ಮುಖ್ಯ ಎಂದು ಗಾಡ್ಗೀಳ್ ಪ್ರತಿಪಾದಿಸಿದ್ದರು. ಏಕೆಂದರೆ, ಅವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ವಿದ್ಯುತ್ ಮತ್ತು ನೀರಿಗಾಗಿ ನಿರ್ಮಿಸಿದ ಮಹಾರಾಷ್ಟçದ ಕೊಯ್ನಾ ಅಣೆಕಟ್ಟು ನಿರ್ಮಾಣದ ನಂತರ ಅರಣ್ಯ ನಾಶ ಮತ್ತು ಜನರ ಸ್ಥಳಾಂತರವನ್ನು ನೋಡಿದ್ದರು. ಇಷ್ಟು ಮಾತ್ರವಲ್ಲದೆ, 1967 ರಲ್ಲಿ ಕೊಯ್ನಾ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದ ಅಣೆಕಟ್ಟು ಒಡೆದು ಹಲವಾರು ಹಳ್ಳಿಗಳು ನೀರಿನಲ್ಲಿ ಮುಳುಗಿ ಹೋಗಿ ಫಲವತ್ತಾದ ಕೃಷಿಭೂಮಿಯು ನೀರಿನಲ್ಲಿ ಕೊಚ್ಚಿ ಹೋದುದಕ್ಕೆ ಸಾಕ್ಷಿಯಾದರು.

ಮಾಧವ ಗಾಡ್ಗೀಳ್ ರವರ ಪ್ರಮುಖ ಕೊಡುಗೆಗಳಲ್ಲಿ ಭಾರತದ ಪರಿಸರ ಸಂರಕ್ಷಣೆಗಾಗಿ ಅವರು ನಿರಂತರವಾಗಿ ನಡೆಸಿದ ಕ್ಷೇತ್ರ ಕಾರ್ಯ ಮತ್ತು ಅಧ್ಯಯನಗಳ ಮೂಲಕ ದೇಶದ ಹಲವಾರು ಜೀವತಾಣಗಳನ್ನು ರಕ್ಷಿಸಿದ್ದಾರೆ. 1980 ರ ದಶಕದಲ್ಲಿ ಅವರ ಕಾಳಜಿಯಿಂದಾಗಿ ನೀಲಗಿರಿ ಪ್ರದೇಶವನ್ನು ಭಾರತದಲ್ಲಿ ಮೊದಲ ಜೀವತಾಣಗಳ ಮೀಸಲು ಪ್ರದೇಶ ಎಂದು ಗುರುತಿಸಲು ಸಾಧ್ಯವಾಯಿತು. ಅದಕ್ಕೂ ಮೊದಲು 1976 ರಲ್ಲಿ, ಕರ್ನಾಟಕ ಸರ್ಕಾರವು ರಾಜ್ಯದ ಬಿದಿರು ಸಂಪನ್ಮೂಲಗಳನ್ನು ರಕ್ಷಿಸಲು ನಿರ್ಧರಿಸಿದಾಗ, ಗಾಡ್ಗೀಳ್ ಅವರನ್ನು ಅಧ್ಯಯನ ಮಾಡಲು ನೇಮಕ ಮಾಡಿಕೊಳ್ಳಲಾಗಿತ್ತು. ನಾಲ್ಕು ವರ್ಷಗಳ ಕಾಲ 1986 ರಿಂದ 1990 ರ ವರೆಗೆ ಅವರು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 2021 ರ ಮೇ ತಿಂಗಳಲ್ಲಿ ಗುಜರಾತ್‌ಗೆ ಅಪ್ಪಳಿಸಿದ ಮತ್ತು ಪಶ್ಚಿಮ ಕರಾವಳಿಗೆ ಭಾರೀ ಮಳೆ ತಂದ ಚಂಡಮಾರುತದಂತಹ ವೈವಿಧ್ಯಮಯ ಪರಿಸರ ಘಟನೆಗಳನ್ನು ವೈಜ್ಞಾನಿಕವಾಗಿ ಅವರು ವಿಶ್ಲೇಷಿಸಿದ್ದರು. "ಸಮುದ್ರಗಳು ಬೆಚ್ಚಗಾಗುತ್ತಲೇ ಇರುವುದರಿಂದ ಭಾರತದ ಪಶ್ಚಿಮ ಕರಾವಳಿಯು ಹೆಚ್ಚು ತೀವ್ರವಾದ ಚಂಡಮಾರುತಗಳನ್ನು ನೋಡಲಿದೆ" ಎಂದು ಗಾಡ್ಗೀಳ್ ದೇಶಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದ್ದರು.

ಪರಿಸರ ಶಿಕ್ಷಣಕ್ಕೆ ಕೊಡುಗೆ

ತಮ್ಮ ವೃತ್ತಿ ಹಾಗೂ ಅಧ್ಯಯನಗಳ ನಡುವೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಪರಿಸರ ಶಿಕ್ಷಣ ಸಮಿತಿಯ ಸದಸ್ಯರಾಗಿ ಮತ್ತು ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿಯೂ ಸಹ ಸೇವೆ ಸಲ್ಲಿಸಿದರು. ಗಾಡ್ಗೀಳ್ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯರಾಗಿ ಹಾಗೂ ಶಾಲಾ ಮಟ್ಟದಲ್ಲಿ ಪರಿಸರ ಶಿಕ್ಷಣ ಪಠ್ಯಕ್ರಮವನ್ನು ಪ್ರಸ್ತಾಪಿಸುವ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಪ್ರೊ. ಮಾಧವ ಗಾಡ್ಗೀಳ್ ಅವರು ಜನಸಂಖ್ಯೆಯ ಜೀವಶಾಸ್ತ್ರ , ಸಂರಕ್ಷಣಾ ಜೀವಶಾಸ್ತ್ರ , ಮಾನವ ಪರಿಸರ ವಿಜ್ಞಾನ ಮತ್ತು ಪರಿಸರ ಇತಿಹಾಸದ ಕ್ಷೇತ್ರಗಳಲ್ಲಿ ವ್ಯಾಪಕವಾದ ಸಂಶೋಧನೆಗಳನ್ನು ಮಾಡಿದ್ದಾರೆ. ಅವರು ಸಂಶೋಧನೆಗಳನ್ನು ಆಧರಿಸಿ ಐನೂರಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ. ದ ಹಿಂದೂ ಇಂಗ್ಲೀಷ್ ದಿನಪತ್ರಿಕೆ ಸೇರಿದಂತೆ ಇಂಗ್ಲೀಷ್ ಹಾಗೂ ಮರಾಠಿ ಭಾಷೆಯ ವಿವಿಧ ನಿಯತಕಾಲಿಕೆಗಳಲ್ಲಿ ಅವರ ಅಂಕಣ ಬರಹಗಳು ಪ್ರಕಟವಾಗಿವೆ. ಸ್ವತಃ ಲೇಖಕರಾಗಿ ಪರಿಸರ ಕುರಿತಂತೆ ಹಲವಾರು ಕೃತಿಗಳನ್ನು ಮಾಧವ ಗಾಡ್ಗೀಳ್ ರಚಿಸಿದ್ದಾರೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಅವರು ಸತತ ಮುವತ್ಮೂರು ವರ್ಷಗಳ ಕಾಲ ಮಾಡಿದ ಕೆಲಸ ಅನನ್ಯವಾದುದು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಡ್ಗೀಳ್ ಅವರು ಸತತ ಆರು ವರ್ಷಗಳ ಕಾಲ ಅಧ್ಯಯನ ಮಾಡಿದರು. ಅವರ ಅಧ್ಯಯನದಲ್ಲಿ ಅಂಜೂರದ ಮರದ ಪ್ರಾಮುಖ್ಯತೆಯನ್ನು ಗುರುತಿಸಿದರು. ಇಡೀ ಅರಣ್ಯ ಪ್ರದೇಶವು ಒಮ್ಮೊಮ್ಮೆ ಬರಡಾದರೂ ಸಹ, ಅಂಜೂರದ ಮರ ಹಸಿರಾಗಿ ಉಳಿದುಕೊಂಡಿರುವುದು ಹಾಗೂ ಕೀಟಗಳು, ಪಕ್ಷಿಗಳು, ಬಾವಲಿಗಳು ಮತ್ತು ಮಂಗಗಳಿಗೆ ವರ್ಷಪೂರ್ತಿ ಹಣ್ಣುಗಳು ಮತ್ತು ಪೋಷಣೆಯನ್ನು ಒದಗಿಸುವುದನ್ನು ಅವರು ಗಮನಿಸಿದರು. ಆನೆಗಳ ಮಾವುತರು ಈ ಮರದ ಮೌಲ್ಯವನ್ನು ಅರ್ಥಮಾಡಿಕೊಂಡಿರುವ ಬಗೆ ಹಾಗೂ ಆನೆಗಳು ಈ ಮರದ ಕೊಂಬೆಗಳನ್ನು ಮುರಿದು ಹಾಕದಂತೆ ತಡೆಗಟ್ಟಿದ ಬಗ್ಗೆ ಅಧ್ಯಯನ ಮಾಡಿದ್ದರು. ಬಿದಿರು, ದನಗಾಹಿಗಳು ಮತ್ತು ರೈತರು ಮತ್ತು ಬೇಟೆಗಾರರು ಮತ್ತು ಅರಣ್ಯ ರಕ್ಷಕರು ನಿರ್ವಹಿಸುತ್ತಿರುವ ಅರಣ್ಯ ಹೀಗೆ ನಮ್ಮ ಪರಿಸರ, ಕಾಡುಗಳು ಮತ್ತು ವನ್ಯಜೀವಿಗಳನ್ನು ನೋಡಿಕೊಳ್ಳುವ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿರುವ ಪ್ರಕೃತಿ ಸಂರಕ್ಷಣೆಯ ದುಃಖದ ಸ್ಥಿತಿಯನ್ನು ಸಹ ಅವರು ವ್ಯಾಖ್ಯಾನಿಸಿದ್ದರು. ಈ ಎಲ್ಲಾ ಸಂಗತಿಗಳು ಈಗ ಅವರ ಆತ್ಮಚರಿತ್ರೆಯಲ್ಲಿ ನೆನಪುಗಳಾಗಿ ದಾಖಲಾಗಿವೆ.

ಅಭಿವೃದ್ದಿಯ ಸುತ್ತ ಮುತ್ತಾ

ಅರಣ್ಯವನ್ನು ಕಸಿಯುತ್ತಿರುವ ರಸ್ತೆಗಳು ಮತ್ತು ಹೆದ್ದಾರಿಗಳು, ಮೆಟ್ರೋ ಮತ್ತು ರೈಲ್ವೆ ಮಾರ್ಗಗಳು ಮತ್ತು ಶ್ರೀಮಂತರಿಗಾಗಿ ಅರಣ್ಯ ಪ್ರದೆಶಗಳಲ್ಲಿ ವಸತಿಗಾಗಿ ರೆಸಾರ್ಟ್ ಇವುಗಳ ನಿರ್ಮಾಣದ ಆದ್ಯತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಗಾಡ್ಗೀಲ್ ಮನವಿ ಮಾಡಿದ್ದರು, ಈ ಚಟುವಟಿಕೆಗಳು ತೆರೆದ ಸಾರ್ವಜನಿಕ ಸ್ಥಳಗಳು, ನದಿಗಳು, ನದೀಮುಖಗಳು, ಮ್ಯಾಂಗ್ರೋವ್ ಕಾಡುಗಳು ಮತ್ತು ಕಡಲತೀರದ ಕಡಲತೀರಗಳನ್ನು ಅತಿಕ್ರಮಿಸಿ ವ್ಯಾಪಕ ಮರಗಳ ಕಡಿಯುವಿಕೆಗೆ ಕಾರಣವಾಗುತ್ತವೆ ಮತ್ತು ಪರಿಸರ ವಿನಾಶಕಾರಿ ಕಲ್ಲು ಕ್ವಾರಿಗಳು ಮತ್ತು ಮರಳು ಗಣಿಗಾರಿಕೆಯನ್ನು ಉತ್ತೇಜಿಸುತ್ತವೆ. ಇವು ಹವಾಮಾನ ಬದಲಾವಣೆಯ ಆತಂಕಕಾರಿ ವಾಸ್ತವ ಎಂದು ಅವರು ಗಮನಸೆಳೆದಿದ್ದರು.

ಪದ್ಮವಿಭೂಷಣ ಗೌರವ

ದೇಶ, ವಿದೇಶಗಳಲ್ಲಿ ಹನ್ನೆರೆಡಕ್ಕೂ ಹೆಚ್ಚು ಗೌರವ ಡಾಕ್ಟರೇಟ್ ಪದವಿಗೆ ಗಾಡ್ಗೀಳ್ ಪಾತ್ರರಾಗಿದ್ದಾರೆ. ಭಾರತ ಸರ್ಕಾರವು 1981 ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ 2006 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದೀಗ ಪುಣೆ ನಗರದಲ್ಲಿ ತಮ್ಮ ಪುತ್ರಿಯೊಂದಿಗೆ ವಾಸಿಸುತ್ತಿರುವ ಪ್ರೊ.ಮಾಧವ ಗಾಡ್ಗೀಳ್ ರವರು ಪಶ್ಚಿಮ ಘಟ್ಟದ ಶ್ರೇಣಿಯುದ್ದಕ್ಕೂ ಬರುವ ಮಹಾರಾಷ್ಟçದ ರತ್ನಗಿರಿ, ಗೋವಾ ಮತ್ತು ಕೇರಳ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಾ, ಪರಿಸರದ ರಕ್ಷಣೆಯ ಕುರಿತಾಗಿ ಉಪನ್ಯಾಸ ನೀಡುತ್ತಾ, ಈ ನೆಲದ ಜೀವ ಸಂಕುಲಗಳು ಮತ್ತು ಪರಸಿರ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಒಬ್ಬ ಮನುಷ್ಯ ಪರಿಸರ ರಕ್ಷಣೆಗಾಗಿ ಹೀಗೂ ಶ್ರಮಿಸಬಹುದೆ? ಎಂಬಂತೆ ನಮ್ಮ ನಡುವೆ ಮಾದರಿಯಾಗಿ ಜೀವಿಸಿದ್ದಾರೆ.

ಲೇಖನ: ಜಗದೀಶ್ ಕೊಪ್ಪ. ಮಂಡ್ಯ