Bannerghatta Leopard Safari: ಜೂನ್‌ ಅಂತ್ಯಕ್ಕೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ, ಮೈಸೂರಿನ ಕಾರಂಜಿ ಕೆರೆಯಲ್ಲಿ ಮತ್ಯ್ಸಾಗಾರ ನಿರ್ಮಾಣ
ಕನ್ನಡ ಸುದ್ದಿ  /  ಕರ್ನಾಟಕ  /  Bannerghatta Leopard Safari: ಜೂನ್‌ ಅಂತ್ಯಕ್ಕೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ, ಮೈಸೂರಿನ ಕಾರಂಜಿ ಕೆರೆಯಲ್ಲಿ ಮತ್ಯ್ಸಾಗಾರ ನಿರ್ಮಾಣ

Bannerghatta Leopard Safari: ಜೂನ್‌ ಅಂತ್ಯಕ್ಕೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ, ಮೈಸೂರಿನ ಕಾರಂಜಿ ಕೆರೆಯಲ್ಲಿ ಮತ್ಯ್ಸಾಗಾರ ನಿರ್ಮಾಣ

Karnataka zoos ಕರ್ನಾಟಕದಲ್ಲಿರುವ ಮೃಗಾಲಯಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರ( Karnataka zoo Authority ) ಸಭೆಯಲ್ಲಿ ಹಲವಾರು ಅನುಮತಿ ನೀಡಲಾಗಿದೆ.

ಬನ್ನೇರಘಟ್ಟದಲ್ಲಿ ಶುರುವಾಗಲಿದೆ ಚಿರತೆ ಸಫಾರಿ. ಇದಕ್ಕೆ ಮೃಗಾಲಯ ಪ್ರಾಧಿಕಾರ ಮಂಡಳಿ ಅನುಮತಿ ನೀಡಿದೆ.
ಬನ್ನೇರಘಟ್ಟದಲ್ಲಿ ಶುರುವಾಗಲಿದೆ ಚಿರತೆ ಸಫಾರಿ. ಇದಕ್ಕೆ ಮೃಗಾಲಯ ಪ್ರಾಧಿಕಾರ ಮಂಡಳಿ ಅನುಮತಿ ನೀಡಿದೆ.

ಬೆಂಗಳೂರು: ಬೆಂಗಳೂರಿಗೆ ಹೊಂದಿಕೊಂಡಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈಗಾಗಲೇ ಸಿಂಹ, ಹುಲಿ ಸಫಾರಿ ಇದೆ. ಆದರೆ ಇಲ್ಲಿ ಚಿರತೆ ಸಫಾರಿ ಕೂಡ ಇನ್ನು ಮುಂದೆ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಲಿದೆ. ಚಿರತೆ ಸಫಾರಿಗೆ ಈ ಹಿಂದೆಯೂ ಅನುಮತಿ ನೀಡಿದ್ದು. ಬಹುತೇಕ ಕೆಲಸವೂ ಮುಗಿದಿತ್ತು. ಲೋಕಸಭೆ ಚುನಾವಣೆ ಕಾರಣದಿಂದ ಚಿರತೆ ಸಫಾರಿ ಸಾರ್ವಜನಿಕರಿಗೆ ಮುಕ್ತವಾಗಿರಲಿಲ್ಲ. ಈಗ ಅದಕ್ಕೆ ಅನುಮತಿ ನೀಡಲಾಗಿದೆ. ಜೂನ್‌ ಅಂತ್ಯದಲ್ಲಿ ಸಫಾರಿ ಆರಂಭವಾಗಲಿದೆ. ಅದೇ ರೀತಿ ಕರ್ನಾಟಕದ ಪ್ರಮುಖ ಮೃಗಾಲಯಗಳಲ್ಲಿ ಒಂದಾದ ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ರೂಪಿಸಲಾಗಿದ್ದ ಬೃಹತ್‌ ಮತ್ಸ್ಯಾಲಯ ಯೋಜನೆ ಅಪೂರ್ಣವಾಗಿದೆ. ಅದನ್ನೇ ಪಿಪಿಪಿ ಮಾದರಿಯಲ್ಲಿ ನಿರ್ಮಿಸುವುದಕ್ಕೂ ಅನುಮತಿಯನ್ನು ನೀಡಲಾಗಿದೆ.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧ್ಯಕ್ಷತೆಯಲ್ಲಿ ಸೋಮವಾರ ವಿಕಾಸ ಸೌಧದ ಸಚಿವರ ಕಾರ್ಯಾಲಯದಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.ರಾಜ್ಯದಲ್ಲಿರುವ ವಿವಿಧ ಮೃಗಾಲಯಗಳಿಗೆ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಮತ್ತು ಆದಾಯ ಹೆಚ್ಚಿಸಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಪರಾಮರ್ಶಿಸಿದರು.

ಬನ್ನೇರಘಟ್ಟ ಉದ್ಯಾನಕ್ಕೆ ಹಲ ಸೌಲಭ್ಯ

ಬನ್ನೇರಘಟ್ಟದಲ್ಲಿ ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ, ಪಕ್ಷಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಒದಗಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು,, ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೀರು ಹರಿಸು ಕ್ರಮ ಕೈಗೊಳ್ಳಲು ಸಮ್ಮತಿ. ಬನ್ನೇರುಘಟ್ಟ ಉದ್ಯಾನದಲ್ಲಿ ನೇರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು 21 ಸಾವಿರ ಮಾಸಿಕ ವೇತನ ಮೀರಿದ 153 ಸಿಬ್ಬಂದಿಗೆ ಸಿ.ಜಿ.ಎಚ್.ಎಸ್. ದರದಂತೆ ವೈದ್ಯಕೀಯ ವೆಚ್ಚ ಭರಿಸಲು ಅನುಮೋದನೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸ್ಯಾಟಲೈಟ್ ಕೇಂದ್ರವಾಗಿ ಕಾರ್ಯನಿರ್ವಹಣೆಗೆ ಅನುಮೋದನೆ ನೀಡುವುದಕ್ಕೂ ಅನುಮತಿಯನ್ನು ಸಚಿವರು ನೀಡಿದರು.

ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಪಿಪಿಪಿ ಮಾದರಿಯಲ್ಲಿ ಸಿಹಿ ನೀರು ಮತ್ತು ಉಪ್ಪು ನೀರಿನ ಮತ್ಸ್ಯಾಗಾರಗಳನ್ನು ನಿರ್ಮಿಸಲು ಈಗಾಗಲೇ ನಡೆದಿರುವ ಪರಿಕಲ್ಪನೆ ಅಧ್ಯಯನ ವರದಿ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಜಾಗತಿಕ ಮಾನದಂಡಗಳ ರೀತ್ಯ ಮತ್ಸ್ಯಾಗಾರ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.

ಮೈಸೂರಲ್ಲಿ ಕಾಂಬೋ ಟಿಕೆಟ್‌

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ, ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಅಕ್ವೇರಿಯಂ (ಮತ್ಸ್ಯಾಗಾರ) ನಿರ್ಮಿಸಲು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಲು 15 ದಿನಗಳ ಒಳಗಾಗಿ ಪ್ರಸ್ತಾವನೆ ಮಂಡಿಸಲು ಸೂಚಿಸಲಾಯಿತು. ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮತಿಸಲಾಯಿತು.

ಪಶುವೈದ್ಯರ ನೇಮಕ

ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಆಗದಂತೆ ಮತ್ತು ಮೃಗಾಲಯದಲ್ಲಿರುವ ವನ್ಯಜೀವಿಗಳು ಸೋಂಕು ಇತ್ಯಾದಿಯಿಂದ ಸಾವಿಗೀಡಾಗದಂತೆ ಕ್ರಮ ವಹಿಸಲು ಪಶುವೈದ್ಯರ ನೇಮಕಾತಿಯ ಬಗ್ಗೆ ಚರ್ಚಿಸಿ, ವೈದ್ಯರ ನೇಮಕಾತಿಗೆ ಅನುಮೋದನೆ ನೀಡಲಾಯಿತು.

ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸ್ಥಳೀಯ ಪಶುವೈದ್ಯಾಧಿಕಾರಿಗಳ ಸೇವೆ ಪಡೆಯಲು ಘಟನೋತ್ತರ ಅನುಮೋದನೆ ನೀಡಲಾಯಿತು.

ಗದಗ ಮೃಗಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ 13.20 ಎಕೆ ಜಮೀನು ಭೂಸ್ವಾಧೀನ ಮತ್ತು ಮೃಗಾಲಯದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ ಪೂರೈಕೆಗೆ ಸಮ್ಮತಿಯನ್ನು ಪ್ರಾಧಿಕಾರದ ಸಭೆ ನೀಡಿತು.

ಸಭೆಯಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್‌ ಪೊನ್ವಾರ್‌ , ಮೈಸೂರು ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಮಹೇಶ್‌ ಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

Whats_app_banner