Hampi News:ಹಂಪಿ ವಾಜಪೇಯಿ ಮೃಗಾಲಯದಲ್ಲೀಗ ಜೋಡಿ ಜಿರಾಫೆ: ಉತ್ತರ ಕರ್ನಾಟಕದ ವಿಶಾಲ ಪ್ರಾಣಿಮನೆ ಮತ್ತಷ್ಟು ಆಕರ್ಷಕ
Hampi zoo ಹಂಪಿ ಮೃಗಾಲಯದಲ್ಲಿ ಒಂದು ವರ್ಷದಿಂದ ಒಂಟಿಯಾಗಿದ್ದ ಹೆಣ್ಣು ಜಿರಾಫೆಗೆ ಮೈಸೂರು ಮೃಗಾಲಯದಿಂದ ಹೊರಟು ಸೇರಿರುವ ಗಂಡು ಜಿರಾಫೆ ಜೋಡಿಯಾಗಿದೆ. ಇದರ ವಿಶೇಷ ಇಲ್ಲಿದೆ..
ಹೊಸಪೇಟೆ: ಹಂಪಿಯಲ್ಲಿರುವ ವಿಶಾಲ ಅಟಲ್‌ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಹೋದರೆ ಜಿರಾಫೆ ನೋಡುವುದನ್ನು ಮರೆಯಬೇಡಿ. ಅದೂ ಜೋಡಿ ಜಿರಾಫೆ ವೀಕ್ಷಣೆ ನಿಮಗೆ ಖುಷಿ ನೀಡಬಹುದು. ಏಕೆಂದರೆ ಏಳು ವರ್ಷದ ಹಿಂದೆ ಆರಂಭಗೊಂಡ ಹಂಪಿಯ ಅತಿ ದೊಡ್ಡ ಮೃಗಾಲಯಕ್ಕೆ ಈಗಾಗಲೇ ಹಲವು ಪ್ರಾಣಿಗಳು ಬಂದಿವೆ. ಅದರಲ್ಲೂ ಜಿರಾಫೆಯನ್ನು ನೀಡಬೇಕು ಎನ್ನುವ ಬೇಡಿಕೆಯಿತ್ತು. ಈಗಾಗಲೇ ಒಂದು ಹೆಣ್ಣು ಜಿರಾಫೆಯನ್ನು ಉತ್ತರ ಭಾರತದಿಂದ ತರಲಾಗಿತ್ತು. ಅದಕ್ಕೆ ಜೋಡಿ ಬೇಕು ಎಂದು ಹಂಪಿ ಮೃಗಾಲಯದವರು ಕೇಳಿದ್ದರು. ಮೈಸೂರು ಮೃಗಾಲಯದಿಂದ ಶಂಕರ ಎನ್ನುವ ಜಿರಾಫೆ ನೀಡಿದ್ದು ಜೋಡಿಯಾಗಲಿವೆ. ಮೈಸೂರಿನಿಂದ ಹೊರಟ ಜಿರಾಫೆ ಹಂಪಿಯನ್ನು ಸುಸೂತ್ರವಾಗಿ ತಲುಪಿದೆ.
ಮೃಗಾಲಯಗಳಲ್ಲಿ ಜಿರಾಫೆ
ಕರ್ನಾಟಕದಲ್ಲಿ ಜಿರಾಫೆ ನೋಡಬೇಕೆಂದರೆ ಮೈಸೂರು ಮೃಗಾಲಯಕ್ಕೆ ಬರಬೇಕಿತ್ತು. ಎಕೆಂದರೆ ಎಂಬತ್ತರ ದಶಕದಲ್ಲೇ ಮೊದಲಿಗೆ ಜಿರಾಫೆ ಪ್ರದರ್ಶಿಸಿದ ಮೃಗಾಲಯ ಮೈಸೂರಿನ ಚಾಮರಾಜೇಂದ್ರ ಮೃಗಾಲಯ. ಅದರಲ್ಲೂ ಹನಿ ಹಾಗೂ ಹೆನ್ರಿ ಎನ್ನುವ ಜಿರಾಫೆಗಳನ್ನು ಜರ್ಮನಿಯಿಂದ ತರಲಾಗಿತ್ತು. ಉತ್ತರ ಭಾರತದ ಪಾಟ್ನಾ, ಲಕ್ನೋ ಸಹಿತ ಹಲವು ಕಡೆಯೂ ಜಿರಾಫೆ ಪ್ರದರ್ಶನ ಶುರುವಾಗಿತ್ತು. ಆನಂತರ ಮೈಸೂರಿನಲ್ಲಿಯೇ ಹನಿ ಮತ್ತು ಹೆನ್ರಿಗೆ ಐದು ಮರಿಗಳು ಹುಟ್ಟಿದ್ದವು. ಅವಕ್ಕೆಲ್ಲಾ ಮೈಸೂರು ಮಹಾರಾಜರ ಹೆಸರನ್ನೇ ಇಡಲಾಗಿತ್ತು. ಒಂದನ್ನು ತಿರುವನಂತಪುರಂಗೆ ನೀಡಲಾಗಿತ್ತು. ಒಂದು ಮೃತಪಟ್ಟರೆ ಮೂರು ಇಲ್ಲಿಯೇ ಇದ್ದವು. ಅವುಗಳಿಗೆ ಖುಷಿ ಎನ್ನುವ ಜಿರಾಫೆಯನ್ನು ಹದಿನೈದು ವರ್ಷದ ಹಿಂದೆ ಮೈಸೂರು ಮೃಗಾಲಯದ ನಿರ್ದೇಶಕರಾಗಿದ್ದ ಜಿ.ವಿ.ರಂಗರಾವು ಅವರು ಲಕ್ನೋದಿಂದ ತರಿಸಿದ್ದರು. ಖುಷಿ ಹಾಗೂ ಆಕೆಯ ಪುತ್ರಿ ಲಕ್ಷ್ಮಿಯಿಂದ ಸಾಕಷ್ಟು ಮರಿಗಳ ಜನನವಾಗಿತ್ತು. ಮೈಸೂರು ಮೃಗಾಲಯದ ಜಿರಾಫೆಗಳ ಸಂಖ್ಯೆಯೇ 22 ಆಗಿತ್ತು. ಈಗ ಕೆಲವು ವಿದೇಶದ ಮೃಗಾಲಯಗಳಿಗೆ ನೀಡಿದರೆ, ಮತ್ತೆ ಕೆಲವು ಉತ್ತರ ಭಾರತದ ಮೃಗಾಲಯಗಳಿಗೆ ನೀಡಲಾಗಿದೆ.
ಬಲ ತುಂಬಿದ ರವಿ
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಇಡೀ ಕರ್ನಾಟಕದ ಮೃಗಾಲಯಗಳಿಗೆ ಶಕ್ತಿ ತುಂಬಿ ಹೊಸತನವನ್ನೇ ನೀಡಿದ್ದ ಹಿರಿಯ ಐಎಫ್‌ಎಸ್ ಅಧಿಕಾರಿ ಬಿ.ಪಿ.ರವಿ ಅವರು ನಮ್ಮ ಇತರೆ ಮೃಗಾಲಯಗಳಲ್ಲಿಯೂ ಹುಲಿ, ಜಿರಾಫೆ ಪ್ರದರ್ಶನ ಆಗಬೇಕು. ಎಲ್ಲಾ ಭಾಗದ ಜನ ಜಿರಾಫೆ ನೋಡುವಂತಾಗಬೇಕು ಎಂದು ಬೆಂಗಳೂರಿನ ಬನ್ನೇರಘಟ್ಟಕ್ಕೂ ನೀಡಿದ್ದರು. ವಿಶಾಲವಾಗಿ ರೂಪಿಸಿರುವ ಹಂಪಿ ಮೃಗಾಲಯಕ್ಕೂ ಜಿರಾಫೆ ತರಿಸಿದ್ದರು. ಎರಡು ತಿಂಗಳ ಹಿಂದೆಯೇ ಹಂಪಿ ಮೃಗಾಲಯಕ್ಕೆ ಮೈಸೂರಿನಿಂದ ಜಿರಾಫೆ ನೀಡುವ ತೀರ್ಮಾನವಾಗಿತ್ತು. ಈಗ ಅದನ್ನು ತಲುಪಿಸಲಾಗಿದೆ.
ಸಾಗಣೆ ಅತಿ ಸೂಕ್ಷ್ಮ
ಅತಿ ಎತ್ತರದ ಪ್ರಾಣಿ ಜಿರಾಫೆಯನ್ನು ಸಾಗಿಸುವುದು ಸುಲಭವಲ್ಲ. ಈ ಹಿಂದೆ ಮೈಸೂರು ಮೃಗಾಲಯದ ನಿರ್ದೇಶಕರಾಗಿದ್ದ ಅಜಿತ್ ಕುಲಕರ್ಣಿ ಅವರು ವಿದೇಶಕ್ಕೆ ಸುರಕ್ಷಿತವಾಗಿ ಜಿರಾಫೆ ಸಾಗಿಸಿದ ಉದಾಹರಣೆಯೂ ಇತ್ತು.
ಎಲ್ಲಿಯಾದರೂ ಕತ್ತಿನ ಮೇಲೆ ಒತ್ತಡ ಬಿದ್ದರೂ ಜಿರಾಫೆ ಮೃತಪಡುತ್ತದೆ. ಈ ಕಾರಣದಿಂದ ಎಚ್ಚರಿಕೆ ವಹಿಸಿ ವಿಶೇಷ ವಾಹನ, ತರಬೇತಿ ಪಡೆದ ಸಿಬ್ಬಂದಿಯೊಂದಿಗೆ ಜಿರಾಫೆ ಶಂಕರನನ್ನು ಮೈಸೂರಿನಿಂದ ಹಂಪಿಗೆ ಸಾಗಿಸಲಾಯಿತು. ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್ ಕುಮಾರ್ ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೈಸೂರಿನಿಂದ ಜಿರಾಫೆಗೆ ಬೀಳ್ಕೊಟ್ಟರೆ, ಹಂಪಿ ಮೃಗಾಲಯದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಬರ ಮಾಡಿಕೊಂಡರು.
ಹಂಪಿ ಮೃಗಾಲಯದ ವೈವಿಧ್ಯ
2017 ರಲ್ಲಿ ಪ್ರಾರಂಭವಾಗಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ಬೆಂಗಳೂರು ಹಾಗೂ ಶಿವಮೊಗ್ಗ ನಂತರ ರಾಜ್ಯದ ಮೂರನೇ ಹುಲಿ ಮತ್ತು ಸಿಂಹ ಸಫಾರಿ ತಾಣ. ಈಗಾಗಲೇ ಉದ್ಯಾನವನದಲ್ಲಿ ಹುಲಿ, ಸಿಂಹ, ಸ್ಪಾಟರ್ ಜಿಂಕೆ, ಸಾಂಬಾರ್, ಬಾರ್ಕಿಂಗ್ ಜಿಂಕೆ ಮತ್ತು ಇತರ ಪ್ರಾಣಿಗಳಿವೆ. ಮೊಸಳೆಗಳು, ಕತ್ತೆಕಿರುಬ, ಚಿರತೆ, ಕರಡಿ, ಆಮೆ, ನರಿ ಮತ್ತು ಲಂಗೂರ್ ಸೇರಿ 80ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಹಲವಾರು ಪ್ರಾಣಿಗಳಿವೆ. ಜಿರಾಫೆಯನ್ನು ವರ್ಷದ ಹಿಂದೆ ಪಾಟ್ನಾದಿಂದ ತರಲಾಗಿತ್ತು. ಈಗ ಮೈಸೂರಿನಿಂದಲೂ ಮತ್ತೊಂದು ಜಿರಾಫೆ ಸೇರಿರುವುದು ಮತ್ತಷ್ಟು ಆಕರ್ಷಕವಾಗಿದೆ ಎನ್ನುವುದು ಹಂಪಿ ಮೃಗಾಲಯದ ಅಧಿಕಾರಿಗಳ ವಿವರಣೆ.
ವಿಭಾಗ