HD Kumaraswamy: ರಾಜಕೀಯ ಏರಿಳಿತದಲ್ಲೂ ಛಲ ಬಿಡದೇ ಮಂಡ್ಯ ಗೆದ್ದು ಇಂಡಿಯಾದ ಮಂತ್ರಿಯಾದ ಕುಮಾರಣ್ಣ-india news mandya mp hd kumaraswamy 3 decades politics mp mla to cm now union minister kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hd Kumaraswamy: ರಾಜಕೀಯ ಏರಿಳಿತದಲ್ಲೂ ಛಲ ಬಿಡದೇ ಮಂಡ್ಯ ಗೆದ್ದು ಇಂಡಿಯಾದ ಮಂತ್ರಿಯಾದ ಕುಮಾರಣ್ಣ

HD Kumaraswamy: ರಾಜಕೀಯ ಏರಿಳಿತದಲ್ಲೂ ಛಲ ಬಿಡದೇ ಮಂಡ್ಯ ಗೆದ್ದು ಇಂಡಿಯಾದ ಮಂತ್ರಿಯಾದ ಕುಮಾರಣ್ಣ

ಮೂರನೇ ಬಾರಿ ಸಂಸದ, ಎರಡು ಬಾರಿ ಸಿಎಂ. ಮೊದಲ ಬಾರಿ ಕೇಂದ್ರ ಸಚಿವ, ಇದು ಎಚ್‌ಡಿಕುಮಾರಸ್ವಾಮಿ ರಾಜಕೀಯ ಹಾದಿ. ತಂದೆ ಮಾಜಿ ಪ್ರಧಾನಿಯಾದರೂ ಕುಮಾರಸ್ವಾಮಿ ಅವರ ರಾಜಕೀಯ ಜೀವನ ಏರಿಳಿತದಿಂದ ಕೂಡಿದೆ. ಆದರೆ ಎಂದು ಬಿಟ್ಟುಕೊಡದೇ ಕುಮಾರಸ್ವಾಮಿ ಮೂರು ದಶಕದ ರಾಜಕೀಯ ಹಾದಿ ಸವೆಸಿದ್ದಾರೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಏರಳಿತದ ನಡುವೆಯೂ ರಾಜಕೀಯವಾಗಿ ಎದ್ದು ಬಂದ ಕುಮಾರಸ್ವಾಮಿ
ಏರಳಿತದ ನಡುವೆಯೂ ರಾಜಕೀಯವಾಗಿ ಎದ್ದು ಬಂದ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ವಿಭಿನ್ನ ರಾಜಕೀಯ ಶೈಲಿಯ ಮೂಲಕ ಗುರುತಿಸಿಕೊಂಡವರು. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದರೂ ಪೂರ್ಣಾವಧಿ ಅವಕಾಶ ಪಡೆದವರಲ್ಲ. ಆದರೂ ಅವರ ತಂದೆಯ ನಂತರ ಪಕ್ಷದಲ್ಲಿ ಹಿಡಿತ ಸಾಧಿಸಿ ಜನ ನಾಯಕರಾಗಿ ಬೆಳೆದವರು. ಈಗಾಗಲೇ ಎರಡು ಬಾರಿ ಸಂಸದರಾದರೂ ಕೇಂದ್ರದಲ್ಲಿ ಮಂತ್ರಿಯಾಗಿರಲಿಲ್ಲ.ಮೊದಲ ಬಾರಿಗೆ ಅವರು ಕೇಂದ್ರದಲ್ಲೂ ಮಂತ್ರಿಯಾಗಿದ್ದಾರೆ.

ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಕರ್ನಾಟಕ ಪ್ರಭಾವಿ ರಾಜಕೀಯ ನಾಯಕರಲ್ಲಿ ಒಬ್ಬರು. ದೊಡ್ಡಗೌಡರ ಕುಟುಂಬದ ಕುಡಿ ಎನ್ನುವ ಹಿರಿಮೆಯಿದ್ದರೂ ರಾಜಕೀಯ ಜೀವನ ಹಾಗೂ ವೈಯಕ್ತಿಕ ಬದುಕಿನಲ್ಲಿ ಹೋರಾಟದ ನಡುವೆಯೇ ಕುಮಾರಸ್ವಾಮಿ ಮೇಲೆದ್ದು ಬಂದಿದ್ದಾರೆ. ತಮ್ಮ ತಂದೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಪ್ರಭಾವದ ಹೊರತಾಗಿಯೂ ತಮ್ಮದೇ ಆದ ವರ್ಚಸ್ಸಿನ ಮೂಲಕ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡವರು. ಎರಡು ಬಾರಿ ಮುಖ್ಯಮಂತ್ರಿ, ಮೂರು ಬಾರಿ ಸಂಸದರಾಗಿರುವ ಕುಮಾರಸ್ವಾಮಿ, ಹಲವು ಜನಪರ ಯೋಜನೆಗಳ ಮೂಲಕ ಸಿಎಂ ಆಗಿದ್ದಾಗ ಜನಪ್ರಿಯರಾಗಿದ್ದವರು.

ಎಚ್.ಡಿ. ಕುಮಾರಸ್ವಾಮಿ ಬದುಕಿನ ಹಾದಿ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಚೆನ್ನಮ್ಮರ ಕೊನೆಯ ಪುತ್ರರಾದ ಕುಮಾರಸ್ವಾಮಿ ಜನಿಸಿದ್ದು 1959ರ ಡಿಸೆಂಬರ್‌ 16ರಂದು. ತಂದೆ ಪ್ರಭಾವಿ ರಾಜಕಾರಣಿ. ವರ ಗರಡಿಯಲ್ಲೇ ಬೆಳೆದವರು ಕುಮಾರಸ್ವಾಮಿ.ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಕುಮಾರಸ್ವಾಮಿ ಜನಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಂಗಳೂರಿನ ಎಮ್.ಇ.ಎಸ್ ವಿದ್ಯಾಸಂಸ್ಥೆಯಲ್ಲಿ, ಬೆಂಗಳೂರಿನ ಜಯನಗರದಲ್ಲಿರುವ ವಿಜಯ ಕಾಲೇಜ್‌ನಲ್ಲಿ ಪಿಯುಸಿಯನ್ನು ಪೂರ್ಣಗೊಳಿಸಿ ನ್ಯಾಷನಲ್ ಕಾಲೇಜ್‌ನಲ್ಲಿ ಬಿಎಸ್ಸಿ ಪದವಿಯನ್ನು ಪಡೆದುಕೊಂಡವರು. ರಾಜಕೀಯಕ್ಕೆ ಬರುವ ಮುನ್ನ ಸಿನೆಮಾದಲ್ಲಿ ಗುರುತಿಸಿಕೊಂಡವರು. ತಂದೆ ಸಿಎಂ ಆಗಿದ್ದಾಗಲೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕನಕಪುರದಿಂದ ಗೆದ್ದು ಮೂರು ದಶಕದ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಕೇವಲ ರಾಜಕೀಯ ಜೀವನದಲ್ಲಿ ಮಾತ್ರವಲ್ಲದೇ ಸಿನಿಮಾ ರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರು ಮಾರ್ಚ್ 13, 1986ರಲ್ಲಿ ಅನಿತಾ ಕುಮಾರಸ್ವಾಮಿಯನ್ನು ವಿವಾಹವಾದರು. ಅವರಿಗೆ ಒಬ್ಬನೇ ಪುತ್ರ ನಿಖಿಲ್‌ ಕುಮಾರಸ್ವಾಮಿ.

ಎಚ್‌ಡಿ ಕುಮಾರಸ್ವಾಮಿ ರಾಜಕೀಯ ಜೀವನ

1996ರಲ್ಲಿ ಕನಕಪುರ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಕುಮಾರಸ್ವಾಮಿ ರಾಜಕೀಯ ಪ್ರವೇಶ ಮಾಡಿದರು. 1998,1999 ರಲ್ಲಿ ಪುನಃ ಕನಕಪುರದಿಂದಲೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಸೋಲು ಅನುಭವಿಸಿದ್ದರು. ನಂತರ 2004ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2006ರಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿ ಮೈತ್ರಿ ಸರ್ಕಾರದಲ್ಲಿ20 ತಿಂಗಳು ಮುಖ್ಯಮಂತ್ರಿಯಾದರು. ಆನಂತರ ಶಾಸಕರಾದರೂ 2009 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದರಾದರು. ಆನಂತರ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆ ಎದುರಿಸಿ ಗೆದ್ದರು. ಮತ್ತೆ 2014ರಲ್ಲಿ ಚಿಕ್ಕಬಳ್ಳಾಪುರದಿಂದ ಲೋಕಸಭೆ ಚುನಾವಣೆ ಕಣಕ್ಕೆ ಇಳಿದು ಸೋತರು. 2018ರ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಎಚ್‌ಡಿ ಕುಮಾರಸ್ವಾಮಿ ಎರಡನೇ ಬಾರಿ ಮುಖ್ಯಮಂತ್ರಿಯಾದರು.14 ತಿಂಗಳಲ್ಲೇ ಮೈತ್ರಿ ಮುರಿದು ಬಿದ್ದಿತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ರಾಜೀನಾಮೆಯಿಂದ ಕುಮಾರಸ್ವಾಮಿ ಅಧಿಕಾರ ತ್ಯಜಿಸಬೇಕಾಯಿತು. 2023ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದರೂ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಆರು ತಿಂಗಳಲ್ಲೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮಂಡ್ಯದಲ್ಲಿ ಸ್ಪರ್ಧಿಸಿ ಭಾರೀ ಬಹುಮತದಿಂದ ಗೆದ್ದರು ಕುಮಾರಸ್ವಾಮಿ. ಈಗ ಎನ್‌ಡಿಎ ಮಿತ್ರ ಪಕ್ಷವಾಗಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ.

ಕುಮಾರಸ್ವಾಮಿ ಜನಪ್ರಿಯ ಕಾರ್ಯಕ್ರಮ

ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರೊಂದಿಗೆ ಸೇರಿಕೊಂಡು ಮೊದಲ ಬಾರಿ ಸರ್ಕಾರ ರಚಿಸಿದಾಗ ಹಲವಾರು ಯೋಜನೆ ಜಾರಿಯಾಗಿದ್ದವು. ಲಾಟರಿ ನಿಷೇಧ, ಹೆಣ್ಣು ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮತ್ತು ಜನತಾ ದರ್ಶನ ಕಾರ್ಯಕ್ರಮಗಳು ಇವರಿಗೆ ಬಹಳಷ್ಟು ಹೆಸರು ತಂದುಕೊಟ್ಟಿದ್ದವು.

ಸಿಎಂ ಆದ ನಂತರ ರೈತರ ಸಾಲಮನ್ನಾ ಘೋಷಣೆ ಮಾಡಿದ್ದರು ಕುಮಾರಸ್ವಾಮಿ. ಯಡಿಯೂರಪ್ಪ ಅವರೊಂದಿಗೆ ಸೇರಿಕೊಂಡು ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದರು. ಜನಪ್ರಿಯ ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಕಾರ್ಯಕ್ರಮ ಜಾರಿಗೊಳಿಸಿದರು. ಇದು ಬಹು ಜನಪ್ರಿಯ ಕಾರ್ಯಕ್ರಮವೂ ಆಗಿತ್ತು. ಅವರ ಅವಧಿಯಲ್ಲಿಯೇ ಕರ್ನಾಟಕದಲ್ಲಿ ಲಾಟರಿ ನಿಷೇಧ ಜಾರಿಗೊಂಡು ಈಗಲೂ ಬಂದ್‌ ಆಗಿದೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

mysore-dasara_Entry_Point