Karnataka Cabinet Decisions: ಸಿ, ಡಿ ಗ್ರೂಪ್ ನೌಕರರಿಗೆ ಶುಭಸುದ್ದಿ; ಪತಿ-ಪತ್ನಿ ಪ್ರಕರಣದಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಒಪ್ಪಿಗೆ
Karnataka Cabinet Decisions: ರಾಜ್ಯದ ಸರ್ಕಾರಿ ನೌಕರರ ವಿಶೇಷವಾಗಿ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ರಾಜ್ಯ ಸರ್ಕಾರ ಗುರುವಾರ ಶುಭ ಸುದ್ದಿ ನೀಡಿದೆ. ಪತಿ-ಪತ್ನಿ ವರ್ಗಾವಣೆ ಕೇಸ್‌ನಲ್ಲಿದ್ದ ಅಡ್ಡಿಯನ್ನು ನಿವಾರಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವಿಶೇಷವಾಗಿ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ರಾಜ್ಯ ಸರ್ಕಾರ ಗುರುವಾರ ಶುಭ ಸುದ್ದಿ ನೀಡಿದೆ. ಹಲವಾರು ವರ್ಷಗಳಿಂದ ಬಾಕಿ ಇದ್ದ ವರ್ಗಾವಣೆ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ, ಸುದ್ದಿಗೋಷ್ಠಿ ನಡೆಸಿದ ಸಚಿವ ಡಾ.ಕೆ.ಸುಧಾಕರ್ ಈ ವಿಚಾರ ತಿಳಿಸಿದರು.
ರಾಜ್ಯದ ಸಿ ಮತ್ತು ಡಿ ಗ್ರೂಪ್ ನೌಕರರ ವರ್ಗಾವಣೆ ನೀತಿ ಪರಿಷ್ಕರಿಸುವುದಕ್ಕೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಅನುಮೋದನೆ ಮಾಡಿದೆ. ಕನಿಷ್ಠ ಏಳು ವರ್ಷ ಸೇವೆ ಸಲ್ಲಿಸಿದರೂ ಪತಿ-ಪತ್ನಿ ಕೇಸ್‌ನಲ್ಲಿ ವರ್ಗಾವಣೆಗೆ ಅವಕಾಶ ಇರಲಿಲ್ಲ. ಈ ಮೂಲಕ ಪತಿ ಪತ್ನಿ ವರ್ಗಾವಣೆ ಆಗಲು ಇದ್ದ ತೊಡಕು ನಿವಾರಣೆಯಾಗಲಿದೆ.
ಪೊಲೀಸ್ ಇಲಾಖೆಯಲ್ಲಿ 7 ವರ್ಷ ಸೇವೆ ಪೂರ್ಣಗೊಳಿಸಿದ್ರೆ, ಪತಿ-ಪತ್ನಿ ಪ್ರಕರಣದಲ್ಲಿ ಮಾತ್ರವೇ ಅಂತರ ಜಿಲ್ಲಾ ವರ್ಗಾವಣೆ ಕೊಡಬಹುದು. ಇದರಲ್ಲಿ ಇನ್ನೂ ಸಡಿಲಿಕೆ ಮಾಡಿಕೊಳ್ಳಲು ಆಯಾ ಇಲಾಖೆಗೆ ಬಿಡಲಾಗಿದೆ.
ಶಿಕ್ಷಣ ಇಲಾಖೆಯಲ್ಲಿ ಐದು ವರ್ಷ ಇದೆ. ಅಲ್ಲೂ ಪತಿ-ಪತ್ನಿ ಪ್ರಕರಣದಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಇದು ಸಾಮಾನ್ಯ ನಿಯಮವಾದ ಕಾರಣ, ಎಲ್ಲ ಇಲಾಖೆಗಳಿಗೂ ಅನ್ವಯವಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
15 ಗುಂಟೆ ಜಮೀನು ನಮ್ಮನೆ ಸುಮ್ಮನೆಗೆ
ಬೆಂಗಳೂರಿನ ದಾಸನಪುರ ಹೋಬಳಿ ಗಂಗೋಡನಹಳ್ಳಿ ಸರ್ವೇ 18 ರಲ್ಲಿ 15 ಗುಂಟೆ ಜಮೀನನ್ನು " ನಮ್ಮನೆ ಸುಮ್ಮನೆ" ಎಂಬ ಸಂಸ್ಥೆಗೆ ನೀಡಲು ತೀರ್ಮಾನ ಮಾಡಲಾಗಿದೆ.
ಇದಲ್ಲದೇ, ಶ್ರೀಕಂಠೇಶ್ವರ ದೇಗುಲ ವಿಐಪಿ ಕೊಠಡಿ ನಿರ್ಮಾಣಕ್ಕೆ 16 ಕೋಟಿ, ಇಎಸ್ ಐ ಆಸ್ಪತ್ರೆ ಉಪಕರಣ ಖರೀದಿಗೆ ಸಂಪುಟ ಒಪ್ಪಿಗೆ ನೀಡಿದೆ. ಸುಮಾರು 44 ಕೋಟಿ ವೆಚ್ಷಕ್ಕೆ ಅನುಮೋದನೆ ಸಿಕ್ಕಿದೆ.
ಶ್ರೀಗಂಧ ನೀತಿಯ ಪ್ರಸ್ತಾವನೆಗೆ ಅಂಗೀಕಾರ ಸಿಕ್ಕಿದೆ. ರೈತರು ತಮ್ಮ ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದು. ಶ್ರೀಗಂಧವನ್ನು ಮುಕ್ತಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಬಹಳ ಬೇಡಿಕೆ ಇದೆ. ಶ್ರೀಗಂಧ ಕಳ್ಳಸಾಗಣೆ ತಡೆಯಲು ಟೆಕ್ನಾಲಜಿಯನ್ನು ಬಳಸುವ ಪ್ರಸ್ತಾವನೆ ಇದೆ. ಶ್ರೀಗಂಧ ಬೆಳೆಯಲು ಪ್ರೋತ್ಸಾಹಧನವನ್ನೂ ಒದಗಿಸಲಾಗುವುದು.
ಶ್ರೀಗಂಧ ಮಾರಾಟಕ್ಕೆ ಇನ್ನು ಮುಕ್ತಅವಕಾಶ. ಇದುವರೆಗೂ ಇದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಇದಲ್ಲದೆ, ಸಚಿವ ಸಂಪುಟ ಸಭೆಯಲ್ಲಿ ಒಟ್ಟು 45 ಪ್ರಸ್ತಾವನೆಗಳನ್ನುಅಂಗೀಕರಿಸಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.