Karnataka Cabinet Decisions: ಶ್ರೀಗಂಧ ನೀತಿ ಜಾರಿ; ಶ್ರೀಗಂಧ ಕೃಷಿ, ಮಾರಾಟ ಸಂಪೂರ್ಣ ಮುಕ್ತ; ಸಚಿವ ಸಂಪುಟ ನಿರ್ಣಯ ಬೇರೆ ಏನೇನು?
Karnataka Cabinet Decisions: ಶ್ರೀಗಂಧ ನೀತಿಯ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟದ ಅಂಗೀಕಾರ ಸಿಕ್ಕಿದೆ. ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದು. ಶ್ರೀಗಂಧವನ್ನು ಮುಕ್ತಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ನೀಡಿದ್ದ ಭರವಸೆ ಪ್ರಕಾರ, ಶ್ರೀಗಂಧ ನೀತಿ 2022 ಜಾರಿಗೊಳಿಸುವುದಕ್ಕೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಗುರುವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ಗುರುವಾರ ನಡೆಯಿತು. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವ ಡಾ.ಕೆ.ಸುಧಾಕರ್ ಈ ವಿಚಾರ ತಿಳಿಸಿದರು.
ಹೊಸ ಶ್ರೀಗಂಧ ನೀತಿಯ ಪ್ರಸ್ತಾವನೆಗೆ ಸಚಿವ ಸಂಪುಟದ ಅಂಗೀಕಾರ ಸಿಕ್ಕಿದೆ. ಇನ್ನು ಮುಂದೆ ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆಯಬಹುದು. ಬೆಳೆದ ಶ್ರೀಗಂಧವನ್ನು ಮುಕ್ತಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಬಹಳ ಬೇಡಿಕೆ ಇದೆ. ಶ್ರೀಗಂಧ ಕಳ್ಳಸಾಗಣೆ ತಡೆಯಲು ಟೆಕ್ನಾಲಜಿಯನ್ನು ಬಳಸುವ ಪ್ರಸ್ತಾವನೆ ಇದೆ. ಶ್ರೀಗಂಧ ಬೆಳೆಯಲು ಪ್ರೋತ್ಸಾಹಧನವನ್ನೂ ಒದಗಿಸಲಾಗುವುದು. ಶ್ರೀಗಂಧ ಮಾರಾಟಕ್ಕೆ ಇನ್ನು ಮುಕ್ತಅವಕಾಶ. ಇದುವರೆಗೂ ಇದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ 45 ಪ್ರಸ್ತಾವನೆಗಳನ್ನುಅಂಗೀಕರಿಸಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಪ್ರಮುಖ ನಿರ್ಧಾರಗಳಿವು
- ಸರ್ಕಾರಿ ನೌಕರ ವೃಂದದಲ್ಲಿ ಡಿ ಮತ್ತು ಸಿ ಗ್ರೂಪಿಗೆ ಅನ್ವಯವಾಗುವಂತೆ 7 ವರ್ಷ ಆದ್ಮೇಲೆ ಪತಿ-ಪತ್ನಿಯ ಪ್ರಕರಣಗಳಲ್ಲಿ ಮಾತ್ರ ಅಂತರ್ ಜಿಲ್ಲಾ ವರ್ಗಾವಣೆ ಮಾಡಿಕೊಳ್ಳಲು ಅನುಮತಿ.
- ಅಂಜನಾಪುರದಲ್ಲಿ ಸಾರಿಗೆ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರೂಪಾಯಿ ಅನುದಾನ ನೀಡಲು ಒಪ್ಪಿಗೆ.
- ರಾಜ್ಯದಲ್ಲಿ ಹೊಸದಾಗಿ ಉತ್ತಾರೆಗುಡ್ಡ ವನ್ಯಜೀವಿಧಾಮ, ಬಂಕಾಪುರ ವನ್ಯಜೀವಿಧಾಮ ಮತ್ತು ಅರಸೀಕೆರೆ ಕರಡಿ ಲಗತ್ತಿ ಧಾಮಗಳನ್ನು ಹಾಗೂ ಹಿರೆಸೂಲೇಕೆರೆ ಕರಡಿ ಸಂರಕ್ಷಣಾ ಮೀಸಲು ಪ್ರದೇಶ, ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಮುಂಡಿಗೆ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ಬೋನಾಳ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಗಳನ್ನು ಘೋಷಿಸುವ ಪ್ರಸ್ತಾವನೆಗಳಿಗೆ ಅನುಮೋದನೆ.
- ಬಳ್ಳಾರಿ ತಾಲೂಕಿನ 6 ಜನವಸತಿ ಪ್ರದೇಶಕ್ಕೆ 11 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆಗೆ ತೀರ್ಮಾನ.
- ರಾಜ್ಯದಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಸಮ್ಮತಿ. ಅದೇ ರೀತಿ, ತುಮಕೂರಿನಲ್ಲಿ 100 ಹಾಸಿಗೆಗಳ ಕ್ರಿಟಿಕಲ್ ಕೇರ್ ಆಸ್ಪತ್ರೆ ನಿರ್ಮಾಣ. ಹಾಗೂ ತುಮಕೂರಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಒಪ್ಪಿಗೆ.
- ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಸೆಂಟರ್ ಆರಂಭ ಮತ್ತು ಎನ್ಹೆಚ್ಎಂ ಫಂಡ್ನಲ್ಲಿ ಆಸ್ಪತ್ರೆಗಳ ಮೇಲ್ದರ್ಜೆಗೇರಿಸಲು ನಿರ್ಧಾರ.
- ರಾಜ್ಯದ 7 ಆಸ್ಪತ್ರೆಗಳಿಗೆ 158 ಕೋಟಿ ರೂಪಾಯಿ ಅನುದಾನ, ತಾಯಿ & ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸಂಪುಟ ನಿರ್ಧಾರ, ತರೀಕೆರೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಯಿ, ಮಕ್ಕಳ ಆಸ್ಪತ್ರೆ, ಲಿಂಗಸುಗೂರಿನಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ, ಮಕ್ಕಳ ಆಸ್ಪತ್ರೆ, ಹರಿಹರದಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ, ಮಕ್ಕಳ ಆಸ್ಪತ್ರೆ, ಗೋಕಾಕ್ನಲ್ಲಿ 200 ಹಾಸಿಗೆ ಸಾಮರ್ಥ್ಯದ ತಾಯಿ, ಮಕ್ಕಳ ಆಸ್ಪತ್ರೆಗಳ ಪ್ರಸ್ತಾವನೆಯನ್ನು ಸಚಿವ ಸಂಪುಟ ಅಂಗೀಕರಿಸಿದೆ.