ಗ್ರಾಮ ಆಡಳಿತಾಧಿಕಾರಿಗಳ ಕಾರ್ಯ ಒತ್ತಡ ತಗ್ಗಿಸಲು ಮುಂದಾದ ಸರ್ಕಾರ, ಅನಗತ್ಯ ಫೀಲ್ಡ್‌ಗೆ ಕಳುಹಿಸದಂತೆ ಸಚಿವ ಕೃಷ್ಣ ಬೈರೇಗೌಡ ತಾಕೀತು
ಕರ್ನಾಟಕದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಕಾರ್ಯ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ಕಂದಾಯ ಸಚಿವರು ಕೆಲವು ನಿರ್ದೇಶನಗಳನ್ನು ತಹಸಿಲ್ದಾರರಿಗೆ ನೀಡಿದ್ದಾರೆ.
ಬೆಂಗಳೂರು: ಈಗಾಗಲೇ ಹಲವಾರು ಆಪ್‌ಗಳಿಗೆ ನಿರಂತರವಾಗಿ ಉತ್ತರ ನೀಡುವ ಜತೆಗೆ ಕಚೇರಿ ಕೆಲಸದಲ್ಲೂ ತೊಡಗಿಕೊಂಡಿರುವ ಗ್ರಾಮ ಆಡಳಿತಾಧಿಕಾರಿಗಳ ಕಾರ್ಯ ಒತ್ತಡ ತಗ್ಗಿಸಲು ಕಂದಾಯ ಇಲಾಖೆ ಮುಂದಾಗಿದೆ. ಅವರನ್ನು ಇನ್ನು ಮುಂದೆ ಅನಗತ್ಯವಾಗಿ ಕ್ಷೇತ್ರ ಕಾರ್ಯಕ್ಕೆಂದು ಕಳುಹಿಸುವ ಹಾಗಿಲ್ಲ.ಗ್ರಾಮ ಆಡಳಿತ ಅಧಿಕಾರಿಗಳಿಗೆ ಈಗಾಗಲೇ ಕೆಲಸದ ಒತ್ತಡ ಹೆಚ್ಚಾಗಿದೆ. ಹೀಗಾಗಿ ಅವರನ್ನು ಅನಗತ್ಯವಾಗಿ ಫೀಲ್ಡ್ ಗೆ ಕಳುಹಿಸಬೇಡಿ ಎಂದು ತಹಶೀಲ್ದಾರರಿಗೆ ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿ ಕಾರ್ಯ ಒತ್ತಡದಿಂದ ಆಗುತ್ತಿರುವ ಸಮಸ್ಯೆಗಳನ್ನು ಗ್ರಾಮ ಆಡಳಿತಾಧಿಕಾರಿಗಳು ವಿವರಿಸಿದ್ದರು. ಇದರಿಂದ ಈ ಸೂಚನೆ ಹೊರ ಬಿದ್ದಿದೆ. ಎಚ್‌ಟಿ ಕನ್ನಡ ಕುರಿತು ವಾರದ ಹಿಂದೆ ವಿಶೇಷ ವರದಿಯನ್ನು ಮಾಡಿತ್ತು.
ಈಗಾಗಲೇ ಸಲ್ಲಿಕೆಯಾಗಿರುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ಅರ್ಜಿಗಳು ಯಾವುವು? ಅನರ್ಹ ಅರ್ಜಿಗಳು ಯಾವುವು ಎಂದು ತಹಶೀಲ್ದಾರ್ ಗಳಿಗೆ ಪ್ರಾಥಮಿಕ ಪರಿಶೀಲನೆಯಲ್ಲೆ ತಿಳಿಯುತ್ತದೆ. ಹೀಗಾಗಿ ಈ ಕೆಲಸವನ್ನು ಅಧಿಕಾರಿಗಳು ಕಚೇರಿಯಲ್ಲೇ ಮುಗಿಸಿ. ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅವರಿಗೆ ಅನಗತ್ಯವಾಗಿ ಕೆಲಸ ನೀಡಬೇಡಿ. ಅನರ್ಹ ಅರ್ಜಿಗಳ ಪರಿಶೀಲನೆಗಾಗಿ ಅವರನ್ನು ಫೀಲ್ಡ್ ಗೆ ಕಳುಹಿಸಬೇಡಿ” ಎಂದು ಸಚಿವರು ತಾಕೀತು ಮಾಡಿದರು.
ಶನಿವಾರ ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಅವರು ಮಾತನಾಡಿದರು.
ಬಗರ್ ಹುಕುಂ ಅರ್ಜಿ
“ಬಗರ್ ಹುಕುಂ” ಅರ್ಜಿ ವಿಲೇವಾರಿ ಕೆಲಸಗಳಿಗೆ ಸಂಬಂಧಿಸಿ ಸಕಾರಾತ್ಮಕವಾಗಿ ಕೆಲಸ ನಿರ್ವಹಿಸದ ತಹಶೀಲ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎನ್ನುವುದು ಸಚಿವರು ನೀಡಿದ ಎಚ್ಚರಿಕೆ.
ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಈಗಲೂ ಮೀನಾಮೇಷ ಎಣಿಸುವುದು ಸರಿಯಲ್ಲ. ಹೀಗಾಗಿ ಎಲ್ಲಾ ತಹಶೀಲ್ದಾರರಿಗೆ ಅಕ್ಟೋಬರ್ ಹಾಗೂ ನವೆಂಬರ್ ಅಂತ್ಯದವರೆಗೆ ಎರಡು ತಿಂಗಳ ಗಡುವು ನೀಡುತ್ತಿದ್ದು, ಈ ಅವಧಿಯಲ್ಲೂ ಬಗರ್ ಹುಕುಂ ಅರ್ಜಿಗಳ ಸಮರ್ಪಕ ವಿಲೇವಾರಿ ಹಾಗೂ ಅರ್ಹ ರೈತರಿಗೆ ಭೂ ಮಂಜೂರು ಆಗದಿದ್ದರೆ, ಸಂಬಂಧಿತ ತಹಶೀಲ್ದಾರರಿಗೆ ನೋಟೀಸ್ ಜಾರಿಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.
ಅರ್ಹ ಭೂ ಹೀನರಿಗೆ ಜಮೀನು ಮಂಜೂರು ಮಾಡಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ಸಕ್ರಮ ಯೋಜನೆಯ ಅಡಿ “ಬಗರ್ ಹುಕುಂ” ಅರ್ಜಿ ಆಹ್ವಾನಿಸಲಾಯಿತು. ಅಲ್ಲದೆ, ಕಳೆದ ಒಂದು ವರ್ಷದಿಂದ ಸ್ವತಃ ನಾನು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುತ್ತಾ, ಬಗರ್ ಹುಕುಂ ಸಂಬಂಧಿತ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೂ, ಕೆಲವು ಅಧಿಕಾರಿಗಳ ಕೆಲಸ ತೃಪ್ತಿಕರವಾಗಿಲ್ಲ. ಬಡವರ ರೈತರ ಪರ ಕೆಲಸ ಮಾಡಲು ಅಸಡ್ಡೆ ತೋರುತ್ತಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿ ಮಾಡಲು ಅಧಿಕಾರಿಗಳಿಗಿರುವ ಸಮಸ್ಯೆ ಏನು? ಒಂದು ವರ್ಷದ ನಂತರವೂ ಅಧಿಕಾರಿಗಳು ಈ ಬಗ್ಗೆ ತಡ ಮಾಡುವುದರಲ್ಲಿ ಅರ್ಥವಿಲ್ಲ. ನಮೂನೆ 50, 53 ಮತ್ತು 57ರ ಅಡಿಯಲ್ಲಿ 14ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಅನರ್ಹ ಅರ್ಜಿಗಳೇ ಬಹುಪಾಲಿವೆ. ಹೀಗಾಗಿ ಅಧಿಕಾರಿಗಳು ತಮ್ಮ ವಿವೇಚನೆಯ ಮೇಲೆ ಅನರ್ಹ ಅರ್ಜಿಗಳನ್ನು ಅನೂರ್ಜಿತಗೊಳಿಸಿ ಅರ್ಹರಿಗೆ ಶೀಘ್ರ ಜಮೀನು ಮಂಜೂರು ಮಾಡಬೇಕು, ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಈ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದೇ ತಿಂಗಳ ಅಂತ್ಯದಲ್ಲಿ ಮತ್ತೊಂದು ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎನ್ನುವುದು ಸಚಿವರು ನೀಡಿದ ಸೂಚನೆ.
ಅರ್ಹರ ಗ್ರ್ಯಾಂಟ್ ಗೆ ವಿಳಂಬ ಬೇಡ
ಅರ್ಹ ಫಲಾನುಭವಿಗಳಿಗೆ ಭೂ ಮಂಜೂರು ಮಾಡಲು ವಿಳಂಬ ಧೋರಣೆ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಈವರೆಗೆ ಎಷ್ಟು ಜನರ ಅರ್ಜಿಗಳು ಅರ್ಹ ಎಂದು ಅಧಿಕಾರಿಗಳು ಗುರುತಿಸಿದ್ದೀರೋ ಆ ಎಲ್ಲರಿಗೂ ಮುಂದಿನ ಒಂದೆರಡು ವಾರದಲ್ಲಿ ಸಾಗುವಳಿ ಚೀಟಿ ನೀಡಿ. ಬಗರ್ ಹುಕುಂ ಕಮಿಟಿ ಸಭೆ ನಡೆಸಲು ಶಾಸಕರು ಸಮಯ ನೀಡದಿದ್ದರೆ ದಯವಿಟ್ಟು ನನಗೆ ತಿಳಿಸಿ, ನಾನು ಅವರ ಜೊತೆ ಮಾತನಾಡಿ ಸಮಯ ನಿಗದಿಗೊಳಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಇದೇ ಸಂದರ್ಭದಲ್ಲಿ, ಗುಂಡ್ಲುಪೇಟೆ ತಾಲೂಕಿನಲ್ಲಿ ಈಗಾಗಲೇ 15 ಅರ್ಹ ಫಲಾನುಭವಿಗಳನ್ನು ಗುರುತಿಸಿ ಭೂ ಮಂಜೂರು ಮಾಡಲಾಗಿದ್ದು, ತಹಶೀಲ್ದಾರರ ಕೆಲಸಕ್ಕೆ ಸಚಿವರು ಮೆಚ್ಚುಗೆ ಸೂಚಿಸಿದರು. ಅಲ್ಲದೆ, ಉಳಿದ ಅರ್ಜಿಗಳನ್ನೂ ಶೀಘ್ರ ವಿಲೇವಾರಿಗೊಳಿಸುವಂತೆ ಸೂಚಿಸಿದರು.
ವಿಭಾಗ