ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌; ಅರ್ನಾಬ್‌ ಗೋಸ್ವಾಮಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌; ಅರ್ನಾಬ್‌ ಗೋಸ್ವಾಮಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್‌

ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌; ಅರ್ನಾಬ್‌ ಗೋಸ್ವಾಮಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್‌

Karnataka High Court: ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌ನಲ್ಲಿ ರಿಪಬ್ಲಿಕ್ ಕನ್ನಡ ಟಿವಿ ಚಾನೆಲ್‌ನ ಕಾರ್ಯಕಾರಿ ನಿರ್ದೇಶಕ ಅರ್ನಾಬ್‌ ಗೋಸ್ವಾಮಿ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. (ವರದಿ - ಎಚ್.‌ ಮಾರುತಿ, ಬೆಂಗಳೂರು)

ಸಿಎಂ ಸಿದ್ದರಾಮಯ್ಯ (ಬಲ ಚಿತ್ರ) ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌ನಲ್ಲಿ ಅರ್ನಾಬ್‌ ಗೋಸ್ವಾಮಿ (ಎಡ ಚಿತ್ರ) ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ.
ಸಿಎಂ ಸಿದ್ದರಾಮಯ್ಯ (ಬಲ ಚಿತ್ರ) ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌ನಲ್ಲಿ ಅರ್ನಾಬ್‌ ಗೋಸ್ವಾಮಿ (ಎಡ ಚಿತ್ರ) ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ.

Karnataka High Court: ರಿಪಬ್ಲಿಕ್‌ ಕನ್ನಡ ಟಿವಿ ಸುದ್ದಿಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದ್ವೇಷ ಹರಡುವ ಸುದ್ದಿ ಪ್ರಸಾರ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಚಾನೆಲ್‌ ನ ಕಾರ್ಯಕಾರಿ ನಿರ್ದೇಶಕ ಅರ್ನಾಬ್‌ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಈ ಆರೋಪಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಇದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರದ ಕೇಸ್‌; ವಿಚಾರಣೆ ಏನಾಯಿತು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದ್ವೇಷ ಹರಡುವ ಸುದ್ದಿಯನ್ನು ರಿಪಬ್ಲಿಕ್‌ ಕನ್ನಡ ಟಿವಿ ಸುದ್ದಿಸಂಸ್ಥೆ ಪ್ರಸಾರ ಮಾಡಿದೆ ಎಂದು ಚಾನೆಲ್‌ನ ಕಾರ್ಯಕಾರಿ ನಿರ್ದೇಶಕ ಅರ್ನಾಬ್ ಗೋಸ್ವಾಮಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇದರ ವಿಚಾರಣೆ ಸಂದರ್ಭದಲ್ಲಿ ಗೋಸ್ವಾಮಿ ಪರ ಹಾಜರಿದ್ದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಝೀರೊ ಟ್ರಾಫಿಕ್ ಕಲ್ಪಿಸಿರುವುದರಿಂದ ಆಂಬುಲೆನ್ಸ್ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂಬ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ಆದರೆ, ಇದು ಸುಳ್ಳು ಸುದ್ದಿ ಎನ್ನುವುದು ತಿಳಿಯುತ್ತಿದ್ದಂತೆ ಕೂಡಲೇ ಪ್ರಸಾರವನ್ನು ನಿಲ್ಲಿಸಲಾಗಿದೆ. ಇದೆಲ್ಲವೂ ಒಂದೇ ದಿನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ 505(2) ಅನ್ವಯಿಸುವುದಿಲ್ಲ ಎಂದೂ ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಯಾಗಿ, ರಾಜ್ಯ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ ವಾದಿಸಿ ಅರ್ನಾಬ್‌ ಗೋಸ್ವಾಮಿ ಅತಿ ಉತ್ಸಾಹಿ ಇದ್ದಾರೆ ಎಂದರು.

ಅರ್ನಾಬ್‌ ಗೋಸ್ವಾಮಿ ಏನನ್ನು ತೋರಿಸಬೇಕೋ ಅದನ್ನು ತೋರಿಸುತ್ತಾರೆ. ಅವರಿಂದ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದೂ ಎರಡೂ ಇದೆ. ಇಂತಹ ವಿಷಯಗಳಿಗೆ ಬಿಎನ್‌ಎಸ್‌ ಕಲಂ 505(2) ಅನ್ವಯಿಸುವುದು ಉತ್ತಮ ಪ್ರಕ್ರಿಯೆ ಅಲ್ಲ ಎಂದು ಹೇಳಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿದರು.

ಚಿನ್ನಾಭರಣ ಕಳ್ಳತನ; ಕುಪ್ಪಂ ಗ್ಯಾಂಗ್‌ ನ ಮಹಿಳೆ ಬಂಧನ, ಇಬ್ಬರು ಪರಾರಿ

ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಹಣವನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ಕುಪ್ಪಂ ಗ್ಯಾಂಗ್‌ ನ ಓರ್ವ ಮಹಿಳೆಯನ್ನು ಎಲೆಕ್ಟ್ರಾನಿಕ್ಸ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜ್ಯೋತಿ (30) ಎಂಬಾಕೆಯನ್ನು ಬಂಧಿಸಿ 50 ಸಾವಿರ ನಗದು ಸೇರಿದಂತೆ 11.54 ಲಕ್ಷ ಬೆಲೆ ರೂ.ಬಾಳುವ 153 ಗ್ರಾಂ ಚಿನ್ನಾಭರಣ, 21 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಇಬ್ಬರು ಮಹಿಳೆಯರ ಪತ್ತೆಗೆ ಬಲೆ ಬೀಸಲಾಗಿದೆ. ಸೊಣ್ಣೇಹಳ್ಳಿಯ ನಿವಾಸಿಯೊಬ್ಬರು ಕೃಷ್ಣಗಿರಿಗೆ ಹೋಗಿ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಹೆಬ್ಬಗೋಡಿಯ ನಾರಾಯಣ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಇಬ್ಬರು ಮಹಿಳೆಯರು ಪ್ರಯಾಣಿಕರಂತೆ ಬಸ್ ಹತ್ತಿ, ಇವರ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ.

ಸ್ವಲ್ಪ ದೂರ ಬಂದ ನಂತರ ಅವರ ಗಮನವನ್ನು ಬೇರೆಡೆಗೆ ಸೆಳೆದು ಆಭರಣ ಮತ್ತು ಹಣವಿದ್ದ ಪರ್ಸ್ ಅನ್ನು ಕಳವು ಮಾಡಿ ಮುಂದಿನ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಬಸ್ ನಿಲ್ದಾಣ ಬಳಿ ಅನುಮಾನಸ್ಪದವಾಗಿ ನಿಂತಿದ್ದ ಮಹಿಳೆಯನ್ನು ಚಿನ್ನಾಭರಣ ಹಾಗೂ ನಗದು ಸಹಿತ ವಶಕ್ಕೆ ಪಡೆದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಇಬ್ಬರು ಮಹಿಳೆಯರು ಪರಾರಿಯಾಗಿದ್ದಾರೆ. ಅವರೂ ಸಹ ಪ್ರಯಾಣಿಕರ ಸೋಗಿನಲ್ಲಿ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈಕೆಯ ಬಂಧನದಿಂದ ಎಲೆಕ್ಟ್ರಾನಿಕ್ಸ್‌ ಸಿಟಿ, ಹೆಬ್ಬಗೋಡಿ, ಮಡಿವಾಳ ಹಾಗೂ ಸೂರ್ಯ ನಗರ ಠಾಣೆಯ 9 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

(ವರದಿ - ಎಚ್.‌ ಮಾರುತಿ, ಬೆಂಗಳೂರು)

Whats_app_banner