ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿ, ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹಸುಗೂಸು; ಹೃದಯವಿದ್ರಾವಕ ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿ, ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹಸುಗೂಸು; ಹೃದಯವಿದ್ರಾವಕ ಘಟನೆ

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿ, ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹಸುಗೂಸು; ಹೃದಯವಿದ್ರಾವಕ ಘಟನೆ

Kalaburagi Hospital Tragedy: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಕಹಿನೆನಪು ಜನರ ಮನಸ್ಸಿನಿಂದ ಮರೆಯಾಗುವ ಮೊದಲೇ ಕಲಬುರಗಿಯಿಂದ ಮನಕಲಕುವ ಘಟನೆ ವರದಿಯಾಗಿದೆ. ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟ ಬಳಿಕ ಹಸುಗೂಸು ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹೃದಯವಿದ್ರಾವಕ ಘಟನೆ ಗಮನಸೆಳೆದಿದೆ.

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿದ್ದು, ಕುಟುಂಬ ಸದಸ್ಯರು ದುಃಖದಿಂದ ಗೋಳಾಡಿದರು (ಬಲ ಚಿತ್ರ). ತಾಯಿಯನ್ನು ಕಳೆದುಕೊಂಡ ಹಸುಗೂಸು ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹೃದಯವಿದ್ರಾವಕ ಘಟನೆ ನಡೆಯಿತು (ಎಡ ಚಿತ್ರ).
ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿದ್ದು, ಕುಟುಂಬ ಸದಸ್ಯರು ದುಃಖದಿಂದ ಗೋಳಾಡಿದರು (ಬಲ ಚಿತ್ರ). ತಾಯಿಯನ್ನು ಕಳೆದುಕೊಂಡ ಹಸುಗೂಸು ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹೃದಯವಿದ್ರಾವಕ ಘಟನೆ ನಡೆಯಿತು (ಎಡ ಚಿತ್ರ). (PC- MF)

Kalaburagi Hospital Tragedy: ಅಫ್ಜಲ್‌ಪುರ ತಾಲೂಕು ಹಾವಳಗಾ ಮೂಲದ ಬಾಣಂತಿ ಭಾಗ್ಯಶ್ರೀ (22) ಎಂಬಾಕೆ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ನಿನ್ನೆ (ಡಿಸೆಂಬರ್ 17) ಮೃತಪಟ್ಟಿದ್ದು, ಹಸುಗೂಸು ಆಸ್ಪತ್ರೆ ಹೊರಗೆ ಬೀದಿಬದಿಗೆ ಗಂಟೆಗಟ್ಟಲೆ ಕಳೆಯಬೇಕಾಗಿ ಬಂದ ಕಳವಳಕಾರಿ ಮತ್ತು ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಹುಟ್ಟಿದ 24 ಗಂಟೆ ಒಳಗೆ ಹಸುಗೂಸು ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾದುದಷ್ಟೇ ಅಲ್ಲ, ಸೂಕ್ತ ಆರೈಕೆ ಇಲ್ಲದೇ ಆಸ್ಪತ್ರೆ ಹೊರಗೆ ಇರಬೇಕಾಗಿ ಬಂದ ಘಟನೆ ನಾಡಿನ ಜನರ ಮನಕಲುಕಿದೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಐದು ತಾಯಂದಿರ ಸಾವು ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಈ ಘಟನೆ ನಡೆದಿರುವುದು ಕಳವಳವನ್ನು ಹೆಚ್ಚಿಸಿದೆ.

ಕಲಬುರಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು; ಏನಿದು ಪ್ರಕರಣ

ಅಫ್ಜಲ್‌ಪುರ ತಾಲೂಕು ಆಸ್ಪತ್ರೆಗೆ ಭಾಗ್ಯಶ್ರೀ ಡಿಸೆಂಬರ್ 16 ರಂದು ದಾಖಲಾಗಿದ್ದರು. ಡಿಸೆಂಬರ್ 17 ರಂದು ಬೆಳಗ್ಗೆ 7 ಗಂಟೆಗೆ ನಾರ್ಮಲ್ ಹೆರಿಗೆ ಆಗಿದೆ. ಅವರು ಮಗುವಿಗೆ ಹಾಲುಣಿಸಿದ್ದಾರೆ. ನಂತರ ತಲೆ ಸುತ್ತು ಬರುತ್ತಿದೆ ಎಂದಾಗ ಪರೀಕ್ಷೆ ಮಾಡಿದ್ದೇವೆ. ಸಲೀನ್ ಕೊಟ್ಟು, ಇಂಜೆಕ್ಷನ್ ನೀಡಿದ್ದೇವೆ. ಆದರೂ ತಲೆಸುತ್ತು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದಾಗ ಜಿಲ್ಲಾಆಸ್ಪತ್ರೆಗೆ ಶಿಫಾರಸು ಮಾಡಿದ್ದೇವೆ. ನಮ್ಮಲ್ಲಿದ್ದಾಗ ಅವರಿಗೆ ತಲೆಸುತ್ತು ಇದ್ದುದು ಬಿಟ್ಟರೆ ಬೇರೆ ಯಾವ ಲಕ್ಷಣವೂ ಇರಲಿಲ್ಲ. ಜಿಲ್ಲಾ ಆಸ್ಪತ್ರೆಗೆ ಹೋದಾಗ ಅಲ್ಲಿ ರಕ್ತಸ್ರಾವ, ಲೋ ಬಿಪಿ ಸಮಸ್ಯೆ ಆಯಿತು ಎಂದು ಅವರ ಕುಟುಂಬಸ್ಥರು ಹೇಳಿದ್ದಷ್ಟೇ ಗೊತ್ತಾಗಿದೆ ಎಂದು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ ವಿನೋದ ರಾಠೋಡ್ ಹೇಳಿದ್ದಾಗಿ ಕನ್ನಡ ಪ್ರಭ ವರದಿ ಮಾಡಿದೆ.

ಅಫ್ಜಲ್‌ಪುರ ತಾಲೂಕು ಹಾವಳಗಾ ಮೂಲದ ಭಾಗ್ಯಶ್ರೀ ಆಳಂದದ ಮಟಕಿ ಗ್ರಾಮದ ಯುವಕ ಶಿವಾಜಿ ಎಂಬುವನನ್ನು ವಿವಾಹವಾಗಿದ್ದರು. ಗರ್ಭಿಣಿಯಾದ ಬಳಿಕ ಪ್ರಸವ ದಿನಾಂಕ ಸಮೀಪಿಸಿದ್ದರಿಂದ ತವರು ಹವಳಗಾಕ್ಕೆ ಆಗಮಿಸಿದ್ದರು. ಇದು ಅವರ ಎರಡನೆ ಹೆರಿಗೆಯಾಗಿತ್ತು. ಅಫ್ಜಲ್‌ಪುರ ತಾಲೂಕು ಆಸ್ಪತ್ರೆಗೆ ಡಿಸೆಂಬರ್ 16 ರಂದು ಸೋಮವಾರ ದಾಖಲಾಗಿದ್ದರು. ಮಂಗಳವಾರ (ಡಿಸೆಂಬರ್ 17) ಬೆಳಗ್ಗೆ 7 ಗಂಟೆ ಹೊತ್ತಿಗೆ ತಾಲೂಕು ಆಸ್ಪತ್ರೆಯಲ್ಲಿ ಸಹಜ ಪ್ರಸವದ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ತಲೆ ಸುತ್ತು ಕಾಣಿಸಿಕೊಂಡು ಆರೋಗ್ಯ ಏರುಪೇರಾದ ಕಾರಣ ಅವರನ್ನು ಅಲ್ಲಿಂದ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಭಾಗ್ಯಶ್ರೀಗೆ ಎರಡು ಯೂನಿಟ್‌ ರಕ್ತ ನೀಡಿದ್ದಾರೆ. ಕಡಿಮೆ ರಕ್ತದೊತ್ತಡದ ಸಮಸ್ಯೆ ಕಾಡಿದ ಕಾರಣ ಭಾಗ್ಯಶ್ರೀ ಆರೋಗ್ಯ ತೀರಾ ಹದಗೆಟ್ಟಿತು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಗಂಟೆಗಟ್ಟಲೆ ಆಸ್ಪತ್ರೆ ಹೊರಗಿದ್ದ ಹಸುಗೂಸು; ಸಂವೇದನೆ ಕಳೆದುಕೊಂಡ ಜಿಮ್ಸ್ ಸಿಬ್ಬಂದಿ

ಕಲಬುರಗಿಯ ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಗೆ ಹೊಂದಿಕೊಂಡಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಸಾವು ಸಂಭವಿಸಿದ ಬಳಿಕ, ಬಾಣಂತಿ ಮೃತಪಟ್ಟ ಕೂಡಲೇ ಮಗುವನ್ನು ಅಜ್ಜಿಯ ಕೈಗೆ ಕೊಟ್ಟಿದ್ದರು ಆಸ್ಪತ್ರೆ ಸಿಬ್ಬಂದಿ. ಹಸುಗೂಸನ್ನು ಹಿಡಿದು ಅಜ್ಜಿ ಆಸ್ಪತ್ರೆ ಹೊರಗೆ ಬೀದಿಬದಿ ಗಂಟೆಗಟ್ಟಲೆ ಕಾದು ಕುಳಿತ ಮನಕಲಕುವ ಘಟನೆ ಎಲ್ಲರ ಗಮನಸೆಳೆಯಿತು. ಜಿಮ್ಸ್ ಸಿಬ್ಬಂದಿ ಸಂವೇದನೆ ಕಳೆದುಕೊಂಡು ವರ್ತಿಸುವುದಕ್ಕೆ ಆಕ್ಷೇಪ ವ್ಯಕ್ತವಾಯಿತು.

ಮಗು ಆರೋಗ್ಯವಾಗಿದೆ. ಅದನ್ನು ಮನೆಗೆ ತೆಗೆದುಕೊಂಡು ಹೋಗಿ. ಮಗುವಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ, ನೆರವು ಬೇಕಾಗಿಲ್ಲ ಎಂದು ಮಗುವನ್ನು ಕೈಗೆ ಕೊಟ್ಟರು. ಹಸುಗೂಸಿಗೆ ತಕ್ಷಣಕ್ಕೆ ಏನು ಮಾಡಬೇಕು ಎಂಬಿತ್ಯಾದಿ ಸಲಹೆ, ಮಾರ್ಗದರ್ಶನ ನೀಡಿಲ್ಲ ಎಂದು ಅಜ್ಜಿ ಮಾಧ್ಯಮದವರಿಗೆ ಬಹಳ ದುಃಖದೊಂದಿಗೆ ಹೇಳಿದರು. ತಾಯಿಯನ್ನು ಕಳೆದುಕೊಂಡ ಮಗುವಿಗೆ ಸೂಕ್ತ ಆರೈಕೆ ನೀಡಬೇಕಾಗಿದ್ದ ಕಲಬುರಗಿ ಜಿಮ್ಸ್ ಸಿಬ್ಬಂದಿಯನ್ನು ಮಾಧ್ಯಮದವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಳಿಕವಷ್ಟೇ ಅವರು ಮಗುವನ್ನು ಐಸಿಯುಗೆ ದಾಖಲಿಸಿ ಅದರ ಆರೋಗ್ಯ ಆರೈಕೆಗೆ ಗಮನಹರಿಸಿದರು.

Whats_app_banner