Chanakya Niti: ಚಾಣಕ್ಯರ ಪ್ರಕಾರ ನಾವು ಈ 4 ವಿಚಾರಗಳಲ್ಲಿ ನಾಚಿಕೆ ಪಟ್ಟರೆ ಜೀವನದಲ್ಲಿ ಎಂದಿಗೂ ಮುಂದೆ ಬರಲು ಸಾಧ್ಯವಿಲ್ಲ
ಚಾಣಕ್ಯರು ಬರೆದ ನೀತಿಶಾಸ್ತ್ರ ಪುಸ್ತಕದಲ್ಲಿನ ಅಂಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿರುವಂಥದ್ದು. ಅವರು ಆ ಕಾಲದಲ್ಲೇ ಇಂದಿಗೂ ಎಂದಿಗೂ ಪ್ರಸ್ತುತ ಎನ್ನಿಸುವ ವಿಚಾರಗಳ ಬಗ್ಗೆ ಬರೆದಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಮನುಷ್ಯ ಈ 4 ವಿಚಾರಗಳಲ್ಲಿ ಎಂದಿಗೂ ನಾಚಿಕೆ ಪಡಬಾರದು, ನಾಚಿಕೆ ಪಟ್ಟರೆ ಎಂದಿಗೂ ಯಶಸ್ಸು ಕಾಣಲು ಸಾಧ್ಯವಿಲ್ಲ. ಅಂತಹ ವಿಚಾರಗಳು ಯಾವುವು ನೋಡಿ.
ಆಚಾರ್ಯ ಚಾಣಕ್ಯರು ಮಹಾನ್ ವಿದ್ವಾಂಸ. ಅವರು ಬದುಕಿನ ವಿವಿಧ ಹಂತಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಆ ಕಾಲದಲ್ಲಿ ಅವರು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಚಾಣಕ್ಯರ ಮಾತುಗಳನ್ನು ಅನುಸರಿಸಿದ್ರೆ ಜೀವನದಲ್ಲಿ ಎಂದಿಗೂ ಸೋಲಾಗುವುದಿಲ್ಲ. ಚಾಣಕ್ಯರ ಪ್ರಕಾರ ಮನುಷ್ಯ ಈ 4 ವಿಚಾರಗಳಲ್ಲಿ ಎಂದಿಗೂ ನಾಚಿಕೆ ಪಡಬಾರದು, ಇದರಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ.
ಚಾಣಕ್ಯ ನೀತಿಯು ಕೆಲವು ಸ್ಥಳಗಳು ಮತ್ತು ಸಂದರ್ಭಗಳನ್ನು ಉಲ್ಲೇಖಿಸುತ್ತದೆ, ಅಲ್ಲಿ ಮನುಷ್ಯ ಎಂದಿಗೂ ನಾಚಿಕೆಪಡಬಾರದು. ನಾಚಿಕೆ ಪಟ್ಟರೆ ನಾವು ಜೀವನದಲ್ಲಿ ಎಂದಿಗೂ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಾವು ಬದುಕಿನಲ್ಲಿ ಹಿಂದೆ ಉಳಿಯುತ್ತೇವೆ, ಕಷ್ಟಗಳು ನಮ್ಮನ್ನು ಹಿಂಬಾಲಿಸಬಹುದು. ಹಾಗಾದರೆ ಅಂತಹ 4 ವಿಚಾರಗಳು ಯಾವುವು ನೋಡಿ.
ತಿನ್ನಲು ನಾಚಿಕೆ ಪಡಬಾರದು
ಆಚಾರ್ಯ ಚಾಣಕ್ಯರ ಪ್ರಕಾರ ನಾವು ತಿನ್ನುವ ವಿಚಾರದಲ್ಲಿ ಎಂದಿಗೂ ನಾಚಿಕೆ ಪಡಬಾರದು. ಆಹಾರ ತಿನ್ನಲು ನಾಚಿಕೆಪಡುವ ವ್ಯಕ್ತಿಯ ಹೊಟ್ಟೆ ತುಂಬುವುದಿಲ್ಲ, ಅರೆ ಹೊಟ್ಟೆಯು ಹಸಿವಿಗೆ ಕಾರಣವಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಯು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಕೆಲವೊಮ್ಮೆ ಹಸಿವು ಅವನನ್ನು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಇದು ನಮ್ಮ ಯಶಸ್ಸಿಗೆ ಅಡ್ಡಿ ಬರುತ್ತದೆ.
ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯಬೇಡಿ
ಆಚಾರ್ಯ ಚಾಣಕ್ಯರ ಪ್ರಕಾರ, ವ್ಯಕ್ತಿ ತನ್ನ ಅಭಿಪ್ರಾಯವನ್ನು ಇತರ ಮುಂದೆ ವ್ಯಕ್ತಪಡಿಸಲು ಎಂದಿಗೂ ಹಿಂಜರಿಯಬಾರದು. ಏನಾದರೂ ಸರಿ ಅನ್ನಿಸಿದರೆ ಸರಿ ಎಂದು ಹೇಳಿ, ತಪ್ಪು ಅನಿಸಿದರೆ ತಪ್ಪನ್ನು ಸ್ಪಷ್ಟವಾಗಿ ಹೇಳಿ ಬಿಡಬೇಕು. ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುವ ಯಾವುದೇ ವ್ಯಕ್ತಿ ಜೀವನದಲ್ಲಿ ಎಂದಿಗೂ ಮುಂದುವರಿಯಲು ಸಾಧ್ಯವಿಲ್ಲ.
ಹಣದ ಬಗ್ಗೆ ನಾಚಿಕೆ
ಚಾಣಕ್ಯ ನೀತಿಯ ಪ್ರಕಾರ ಹಣದ ವ್ಯವಹಾರದಲ್ಲಿ ನಾಚಿಕೆಪಡಬಾರದು. ನೀವು ಯಾರಿಗಾದರೂ ಸಾಲವನ್ನು ನೀಡಿದ್ದರೆ ಹಣವನ್ನು ಮರಳಿ ಕೇಳಲು ಹಿಂಜರಿಯಬಾರದು. ಬೇರೆಯವರಿಗೆ ಹಣ ಕೊಡುವ ವಿಚಾರದಲ್ಲೂ ನೇರವಾಗಿ ಮಾತನಾಡಿ ಹಣ ಮರಳಿಸಬೇಕು. ಬೇರೆಯವರಿಗೆ ಕೊಟ್ಟ ಹಣ ಹಿಂಪಡೆಯಲು ನೀವು ಹಿಂಜರಿದರೆ ಅಥವಾ ಕೇಳಲು ನಾಚಿಕೆಪಡುತ್ತಿದ್ದರೆ ಯಾವಾಗಲೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕಲಿಯುವ ವಿಚಾರದಲ್ಲಿ ನಾಚಿಕೆ ಬೇಡ
ನಾವು ಯಾವಾಗಲೂ ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು. ಕಲಿಕೆ ಎನ್ನುವುದು ನಿರಂತರ, ನಾವು ಯಾರಿಂದ ಬೇಕಾದರೂ ಕಲಿಯಬಹುದು. ಶಿಕ್ಷಕರು ನಿಮಗಿಂತ ಹಿರಿಯರಾಗಿರಬೇಕು ಎಂದೇನಿಲ್ಲ. ನಿಮಗಿಂತ ಚಿಕ್ಕವರೂ ಸಹ ನಿಮಗೆ ಹೊಸ ವಿಷಯಗಳನ್ನು ಕಲಿಸಬಹುದು. ಬಾಲ್ಯದಿಂದಲೂ ಕಲಿಯುವಾಗ ನಾವು ಅನೇಕ ಬಾರಿ ನಾಚಿಕೆ ಮತ್ತು ಹಿಂಜರಿಯುತ್ತೇವೆ. ನೀವು ಕಲಿಯಲು ನಾಚಿಕೆಪಡುತ್ತಿದ್ದರೆ, ಜೀವನದಲ್ಲಿ ಮುಂದುವರಿಯಲು ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕಲಿಕೆಯ ವಿಚಾರದಲ್ಲಿ ಮನುಷ್ಯ ಎಂದಿಗೂ ನಾಚಿಕೆ ಪಡಬಾರದು.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)
ವಿಭಾಗ