ವೀಕ್ಷಕರು ಇನ್ನೂ ಅಪ್‌ಡೇಟ್‌ ಆಗಬೇಕು ಅನಿಸುತ್ತದೆ, ಸೂಕ್ಷ್ಮ ಕಂಟೆಂಟ್ ಸ್ವೀಕಾರ ಡೌಟ್: ಭಾಗ್ಯಲಕ್ಷ್ಮೀ ನಟ ಸುದರ್ಶನ್‌ ರಂಗಪ್ರಸಾದ್‌ ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  ವೀಕ್ಷಕರು ಇನ್ನೂ ಅಪ್‌ಡೇಟ್‌ ಆಗಬೇಕು ಅನಿಸುತ್ತದೆ, ಸೂಕ್ಷ್ಮ ಕಂಟೆಂಟ್ ಸ್ವೀಕಾರ ಡೌಟ್: ಭಾಗ್ಯಲಕ್ಷ್ಮೀ ನಟ ಸುದರ್ಶನ್‌ ರಂಗಪ್ರಸಾದ್‌ ಸಂದರ್ಶನ

ವೀಕ್ಷಕರು ಇನ್ನೂ ಅಪ್‌ಡೇಟ್‌ ಆಗಬೇಕು ಅನಿಸುತ್ತದೆ, ಸೂಕ್ಷ್ಮ ಕಂಟೆಂಟ್ ಸ್ವೀಕಾರ ಡೌಟ್: ಭಾಗ್ಯಲಕ್ಷ್ಮೀ ನಟ ಸುದರ್ಶನ್‌ ರಂಗಪ್ರಸಾದ್‌ ಸಂದರ್ಶನ

ಸಂದರ್ಶನ- ಪದ್ಮಶ್ರೀ ಭಟ್: ʼಭಾಗ್ಯಲಕ್ಷ್ಮಿʼ ಧಾರಾವಾಹಿಯಲ್ಲಿ ತಾಂಡವ್ ಪಾತ್ರ ನಿರ್ವಹಿಸುವ ಸುದರ್ಶನ್‌ ರಂಗಪ್ರಸಾದ್‌ ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರು. ಹೆಣ್ಣುಮಕ್ಕಳು ಹೆಚ್ಚು ಬೈದುಕೊಳ್ಳುವ ಪಾತ್ರಕ್ಕೆ ಜೀವ ತುಂಬುವ ಸುದರ್ಶನ್ ಅವರ ವೈಯಕ್ತಿಕ ಬದುಕು, ಆಲೋಚನೆಗಳು ಹೇಗಿವೆ? ಇಲ್ಲಿದೆ ಉತ್ತರ.

ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್' ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಸಂದರ್ಶನ
ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್' ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಸಂದರ್ಶನ (instagram.com/sudarshan_rangaprasad)

ʼಭಾಗ್ಯಲಕ್ಷ್ಮಿʼ ಧಾರಾವಾಹಿಯ ನಟ ಸುದರ್ಶನ್‌ ರಂಗಪ್ರಸಾದ್‌ ಅವರು ರಂಗಭೂಮಿ, ಸಿನಿಮಾ, ಕಿರುತೆರೆ, ಸ್ಟ್ಯಾಂಡಪ್‌ ಕಾಮಿಡಿಯಲ್ಲಿ ತೊಡಗಿಸಿಕೊಂಡವರು. ಟಿವಿಯಲ್ಲಿ 'ತಾಂಡವ್' ಆಗಿ ಹೆಣ್ಮಕ್ಕಳಿಂದ ಪ್ರತಿದಿನ ಬೈಸಿಕೊಳ್ಳುವ ಅವರ ಚರ್ಯೆಗಳು ಧಾರಾವಾಹಿ ಮುಗಿದ ಮೇಲೆ ವೀಕ್ಷಕರ ನಡುವೆ ಚರ್ಚೆಯಲ್ಲಿರುತ್ತವೆ. ಪದ್ಮಶ್ರೀ ಭಟ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಬದುಕು, ಆಲೋಚನೆಗಳು ಹೇಗಿವೆ ಎನ್ನುವ ವಿವರ ಹಂಚಿಕೊಂಡಿದ್ದಾರೆ.

ಪ್ರ: ಸಾಮಾಜಿಕ ಮಾಧ್ಯಮಗಳಲ್ಲಿ (ಸೋಷಿಯಲ್‌ ಮೀಡಿಯಾ) ಯಶೋಗಾಥೆಗಳು (ಸಕ್ಸಸ್‌ ಸ್ಟೋರಿ) ಕಾಣಿಸುತ್ತವೆ. ಆದರೆ ಅದರ ಹಿಂದಿನ ಕಷ್ಟ ಗೊತ್ತಿರೋದಿಲ್ಲ..
ಉ: ಹೌದು, ಜೀವನದ ಒಳ್ಳೆಯ ಅಂಶಗಳನ್ನು ಹಂಚಿಕೊಳ್ತಾರೆ.

ಪ್ರ: ಎಷ್ಟೇ ಕೌಶಲ ಇದ್ದರೂ ಕೂಡ ಶಿಕ್ಷಣ ತುಂಬ ಮುಖ್ಯ ಅಲ್ವಾ?
ಉ: ನಿಮ್ಮ ಮಾತು ನಿಜ. ಯಾರೂ ಬಯ್ದುಕೊಳ್ಳದಷ್ಟು ನಾನು ಎಂಜಿನಿಯರಿಂಗ್‌ಗೆ ಬೈದುಕೊಂಡಿದ್ದೇನೆ. ನಮಗೆ ಶಿಕ್ಷಣ ಅಗತ್ಯ. ದಯವಿಟ್ಟು ಪಾಸ್‌ ಆಗಿ, ಕೊನೇ ಪಕ್ಷ ಡಿಗ್ರಿ ತಗೊಳ್ಳಿ. ಶಿಕ್ಷಣ ಅಂದಕೂಡಲೇ ಡಿಗ್ರಿ ಅಲ್ಲವೇ ಅಲ್ಲ, ಅದೊಂದು ಕೌಶಲ. ಫೋಟೋಗ್ರಾಫರ್‌ ಆಗಿರುವ ನಿಮಗೆ ಫೋಟೋ ತೆಗೆಯುವ ಕೌಶಲ ಇದ್ರೆ ತುಂಬ ಚೆನ್ನಾಗಿ ಬದುಕಬಹುದು. ಮಧ್ಯಮ ವರ್ಗದವರಿಗೆ ಜೀವನದಲ್ಲಿ ಆರ್ಥಿಕವಾಗಿ ಸಮತೋಲನ ಬೇಕು. ನಟನೆ ಮಾಡ್ತೀನಿ ಅಂತ ಬಂದು ನಿಮ್ಮ ಮನೆಯ ಕಷ್ಟಗಳಿಗೆ ಆಗದಷ್ಟು ಆರ್ಥಿಕವಾಗಿ ಹಿಂದುಳಿದರೆ ಏನು ಮಾಡೋದು?

ಪ್ರ: ಕಲಾವಿದರೇ ಇರಲಿ, ಬೇರೆ ರಂಗದವರೇ ಇರಲಿ ಗಮನ (ಅಟೆನ್ಷನ್) ಸಿಕ್ಕಿಲ್ಲ ಅಂದ್ರೆ ಬೇಸರ ಮಾಡಿಕೊಳ್ತಾರೆ.
ಉ: ಹೌದು, ಈ ರೀತಿಯ ಹಲವು ಉದಾಹರಣೆಗಳನ್ನು ನೋಡಿದ್ದೇನೆ. ಕೆಲಸಕ್ಕೆ ಬಾರದೆ ಇದ್ದವರ ಮುಂದೆ ನಾನು ಓಡಾಡುವಾಗ ಯಾರೂ ಬಂದು ಫೋಟೋ ತಗೋಳಲ್ಲ. ಉರಿಸುವವರ ಮುಂದೆ ಇನ್ನೂ ಉರಿಸಬೇಕು ಅಂತ ಅನಿಸುತ್ತದೆ. ಯಾರಾದರೂ ಬಂದು ನನ್ನ ಫೋಟೋ ತಗೋಬಾರದಾ ಅಂತ ಅನಿಸುತ್ತದೆ. ಆದರೆ ಅಪ್ಪ-ಅಮ್ಮನ ಜೊತೆ ಬೇರೆ ಕಡೆ ಹೋಗುವಾಗ ಎಲ್ಲರೂ ಬಂದು ಫೋಟೋ ತಗೋಳ್ತಾರೆ.

ಪ್ರ: ಧಾರಾವಾಹಿಯನ್ನು ಮನಸ್ಸಿಗೆ ತೆಗೆದುಕೊಳ್ಳುವವರು ಮಾಡುವವರು ಇದ್ದಾರೆ…
ಉ: ಹೌದು, ತಾಂಡವ್‌ ಮಗ ತನ್ಮಯ್‌ ಅವರನ್ನು ನೋಡಿರುವ ವೀಕ್ಷಕರು ನಾನು ಹೊರಗೆ ಹೋದಾಗ ನಿಮ್ಮ ಮಗ ಸೂಪರ್‌ ಅಂತ ಹೇಳ್ತಾರೆ. ಆಗ ನಾನು ಅವನು ನನ್ನ ನಿಜವಾದ ಮಗ ಅಲ್ಲ ಅಂತ ಹೇಳ್ತೀನಿ. ವೀಕ್ಷಕರು ಇನ್ನೂ ಮುಗ್ಧರು ಹೌದು, ಸಂಚಲನವನ್ನು ಮೂಡಿಸುವ ಸೂಕ್ಷ್ಮ ಕಂಟೆಂಟ್‌ಗಳನ್ನು ಸ್ವೀಕಾರ ಮಾಡ್ತಾರೆ ಅಂತ ಹೇಳೋದು ಡೌಟ್.‌ ಇನ್ನೂ ಅಪ್‌ಡೇಟ್‌ ಆಗಬೇಕು ಅಂತ ಅನಿಸುತ್ತದೆ.

ಪ್ರ: ಸಂಕಲ್ಪದ ವಿಚಾರದಲ್ಲಿ (ಮ್ಯಾನಿಫೆಸ್ಟ್‌) ನಿಮಗೆ ನಂಬಿಕೆ ಇದೆಯೇ?
ಉ: ನಾನು ಪ್ರಾಕ್ಟಿಕಲ್‌ ಆಗಿ ಬದುಕುವವನು. ಸರಳವಾಗಿ ಇರುತ್ತೇನೆ. ಸಂಕಲ್ಪ (ಮ್ಯಾನಿಫೆಸ್ಟ್‌) ಮಾಡಿದ ಕೂಡಲೇ ಐಶ್ವರ್ಯಾ ರೈ ಸಿಗ್ತಾಳಾ? ಇಲ್ಲವೇ ಇಲ್ಲ. ಎಲ್ಲರೂ ದೇವರಾ? ಖಂಡಿತ ಅಲ್ಲ.‌

ಪ್ರ: ಕೆಲವೊಮ್ಮೆ ಕಷ್ಟಪಡದೆ ಕೆಲವರಿಗೆ ಅದೃಷ್ಟ ಸಿಗುತ್ತದೆ?
ಉ: ಒಳ್ಳೇ ಕಡೆ ಮಚ್ಚೆ ಇದ್ದರೆ ಹಾಗೆ ಆಗುತ್ತದೆ. ಸಿನಿಮಾ ರಂಗದಲ್ಲಿ ಕೆಲವರಿಗೆ ಒಂದಾದ ಮೇಲೆ ಒಂದರಂತೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ನಾಯಕಿಯರಿಗೆ ಒಂದು ಪ್ರಾಜೆಕ್ಟ್‌ ಆದ್ಮೇಲೆ ಇನ್ನೊಂದು ದೊಡ್ಡ ಸಿನಿಮಾ ಸಿಗತ್ತೆ, ಬೇರೆ ಭಾಷೆ ಸಿನಿಮಾ ಆಫರ್‌ ಬರುತ್ತದೆ. ನಾನು 15 ಸಿನಿಮಾ ಮಾಡಿದರೂ ಕೂಡ ನಮ್ಮ ಪರಿಸ್ಥಿತಿ ಹೀಗಿದೆ ಅಂತ ನನ್ನ ಪತ್ನಿ ಸಂಗೀತಾ ಭಟ್‌ ಹೇಳುತ್ತಾಳೆ.

ಪ್ರ: ಪತ್ನಿ ಸಂಗೀತಾ ಭಟ್‌ ಅವರ ಕಡೆಯಿಂದ ಯಾವುದೇ ಕಟ್ಟಪ್ಪಣೆಗಳು ಇಲ್ಲವೇ?
ಉ: ಇಲ್ಲ, ಆದರೆ ನಾನು ಎಲ್ಲ ಕುಟುಂಬದ ಸಮಾರಂಭಗಳಿಗೆ, ಫ್ರೆಂಡ್ಸ್‌ ಮೀಟ್‌ಗಳಿಗೆ ಕರೆದುಕೊಂಡು ಹೋಗ್ತೀನಿ. ಅದೇ ಅವಳಿಗೆ ಕಷ್ಟ ಆಗುತ್ತದೆ.

ಪ್ರ: ಮದುವೆಯಾಗುವವರಿಗೆ ಏನು ಸಲಹೆ ಕೊಡ್ತೀರಾ?
ಉ: ಸಂಗಾತಿ ಬೇಕು. ಬೈಕೊಳೋಕಾದ್ರೂ ಒಬ್ರೂ ಬೇಕು. ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿರುವವರು ಚೆನ್ನಾಗಿದ್ದಾರೆ. ಒಟ್ಟಿನಲ್ಲಿ ಖುಷಿಯಾಗಿರಬೇಕು ಅಷ್ಟೇ. ಸುಖ-ದುಃಖವನ್ನು ಹಂಚಿಕೊಳ್ಳಬೇಕು.

ಪ್ರ: ಯುವಜನತೆಗೆ ಏನು ಹೇಳ್ತೀರಾ?
ಉ: ಎಲ್ಲವನ್ನೂ ತುಂಬಾ ಹಚ್ಚಿಕೊಳ್ಳಬೇಡಿ (ಅಟ್ಯಾಚ್‌). ಹೀಗೆ ಮಾಡಿದರೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟ. ವಾಸ್ತವ ಅರಿತು ರಿಯಲಿಸ್ಟಿಕ್ ಆಗಿ ಬದುಕಿ.

(ಸಂದರ್ಶನ: ಪದ್ಮಶ್ರೀ ಭಟ್, ಪಂಚಮಿ ಟಾಕ್ಸ್)

Whats_app_banner