ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ 50 ಲಕ್ಷ ರೂ ಚಿನ್ನಾಭರಣ, 3 ಲಕ್ಷ ರೂ ಮೊಬೈಲ್ ಕಳವು; 556 ಮದ್ಯಪಾನ ಮಾಡಿ ವಾಹನ ಚಾಲನೆ ಕೇಸ್‌
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ 50 ಲಕ್ಷ ರೂ ಚಿನ್ನಾಭರಣ, 3 ಲಕ್ಷ ರೂ ಮೊಬೈಲ್ ಕಳವು; 556 ಮದ್ಯಪಾನ ಮಾಡಿ ವಾಹನ ಚಾಲನೆ ಕೇಸ್‌

ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ 50 ಲಕ್ಷ ರೂ ಚಿನ್ನಾಭರಣ, 3 ಲಕ್ಷ ರೂ ಮೊಬೈಲ್ ಕಳವು; 556 ಮದ್ಯಪಾನ ಮಾಡಿ ವಾಹನ ಚಾಲನೆ ಕೇಸ್‌

Bengaluru Crime: ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಯಲ್ಲಿ 50 ಲಕ್ಷ ರೂ ಚಿನ್ನಾಭರಣ ಕಳುವಾಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಮೊಬೈಲ್‌ ಅಂಗಡಿಯಿಂದ 3 ಲಕ್ಷ ರೂ ಮೌಲ್ಯದ ಮೊಬೈಲ್‌ ಅನ್ನು ಖದೀಮರು ದೋಚಿದ್ದಾರೆ. ಇನ್ನೊಂದೆಡೆ, ಮದ್ಯಪಾನ ಮಾಡಿ ವಾಹನ ಚಾಲನೆಯ 556 ಕೇಸ್ ದಾಖಲಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ 50 ಲಕ್ಷ ರೂ ಚಿನ್ನಾಭರಣ, 3 ಲಕ್ಷ ರೂ ಮೊಬೈಲ್ ಕಳವು; 556 ಮದ್ಯಪಾನ ಮಾಡಿ ವಾಹನ ಚಾಲನೆ ಕೇಸ್‌ ದಾಖಲಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ 50 ಲಕ್ಷ ರೂ ಚಿನ್ನಾಭರಣ, 3 ಲಕ್ಷ ರೂ ಮೊಬೈಲ್ ಕಳವು; 556 ಮದ್ಯಪಾನ ಮಾಡಿ ವಾಹನ ಚಾಲನೆ ಕೇಸ್‌ ದಾಖಲಾಗಿದೆ. (ಸಾಂಕೇತಿಕ ಚಿತ್ರ) (Pexel/ BTP)

Bengaluru Crime: ತಿಲಕ್‌ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ರಿಯಲ್‌ ಎಸ್ಟೇಟ್‌ ಉದ್ಯಮಿ ನಾಗರಾಜ್‌ ಅವರ ನಿವಾಸದಲ್ಲಿ ದುಷ್ಕರ್ಮಿಗಳು ಸುಮಾರು 50 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿದ್ದಾರೆ. ಇವರು ಎರಡು ವರ್ಷಗಳಿಂದ ಜಯನಗರ 4ನೇ ಬ್ಲಾಕ್‌ನ 13ನೇ ಮುಖ್ಯರಸ್ತೆಯ ಅಪಾರ್ಟ್‌ ಮೆಂಟ್‌ನಲ್ಲಿ ತಮ್ಮ ಕುಟುಂಬದವರೊಂದಿಗೆ ವಾಸಿಸುತ್ತಿದ್ದರು. ಐದು ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಐದು ಫ್ಲ್ಯಾಟ್‌ಗಳು ಮಾತ್ರ ಇದ್ದು, ಒಂದನೇ ಅಂತಸ್ತಿನ ಫ್ಲ್ಯಾಟ್ ನಲ್ಲಿ ನಾಗರಾಜ್‌ ನೆಲೆಸಿದ್ದರು. ಇವರು ತಮ್ಮ ಕುಟುಂಬದವರೊಂದಿಗೆ ಡಿ.13ರಂದು ರಾತ್ರಿ ಮನೆಗೆ ಬೀಗ ಹಾಕಿಕೊಂಡು ಮಂತ್ರಾಲಯಕ್ಕೆ ತೆರಳಿ ಭಾನುವಾರ ರಾತ್ರಿ ಮರಳಿದ್ದರು. ಮನೆಗೆ ಬಂದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಬೀರುವಿನಲ್ಲಿ ಇಟ್ಟಿದ್ದ 500 ಗ್ರಾಂ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಮತ್ತು ರೂ. 3 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ನಾಗರಾಜ್‌ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮನೆ ಪ್ರವೇಶಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಪಾರ್ಟ್‌ ಮೆಂಟ್ ನ ಭದ್ರತಾ ಸಿಬ್ಬಂದಿ ಆರು ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದ. ನಂತರ ಹೊಸ ಸೆಕ್ಯೂರಿಟಿ ಗಾರ್ಡ್‌ ನೇಮಕ ಆಗಿರಲಿಲ್ಲ. ಬಹುಶಃ ನಾಗರಾಜ್‌ ಅವರ ವ್ಯವಹಾರ ಮತ್ತು ಕುಟುಂಬದ ಮಾಹಿತಿ ಇರುವವರೇ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದ ಮನೆಗಳ ಸಿಸಿಟಿವಿಗಳಲ್ಲೂ ಕಳ್ಳರ ಚಲನವಲನ ಪತ್ತೆಯಾಗಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್‌ ಅಂಗಡಿ ದೋಚಿದ ಖದೀಮರು

ಶಿವಾಜಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮೊಬೈಲ್‌ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿರುವ ಕಳ್ಳರು ದುಬಾರಿ ಬೆಲೆಯ 50 ಮೊಬೈಲ್‌ ಗಳನ್ನು ಕಳವು ಮಾಡಿದ್ದಾರೆ. ಎಂಕೆ ರಸ್ತೆಯ ವಿಶ್ವಾಸ್‌ ಕಮ್ಯೂನಿಕೇಷನ್ಸ್‌ ಹೆಸರಿನ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ. ಡಿ. 11ರಂದು ಮಧ್ಯರಾತ್ರಿ ಇಬ್ಬರು ಕಳ್ಳರು ಈ ಕೈಚಳಕ ತೋರಿದ್ದಾರೆ. ಈ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರು ಮೊಬೈಲ್ ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ. 2 ಲಕ್ಷ ರೂಪಾಯಿ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 54 ಮೊಬೈಲ್ ಫೋನ್‌ಗಳ ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕ ಅಬ್ದುಲ್ ಮುನಾಫ್ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರು ಮುಖದ ಗುರುತು ಪತ್ತೆಯಾಗದಂತೆ ತಲೆಗೆ ಟೋಪಿ, ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಗ್ಲೌಸ್ ಧರಿಸಿದ್ದಾರೆ. ಮೊಬೈಲ್ ಟಾರ್ಚ್ ಹಾಕಿಕೊಂಡು ಕಳವು ಮಾಡಲಾಗಿದೆ. ನಂತರ ಬ್ಯಾಗ್‌ನಲ್ಲಿ ಮೊಬೈಲ್ ಗಳನ್ನಿಟ್ಟುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ; 556 ಪ್ರಕರಣ ದಾಖಲು

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ದ್ವಿಚಕ್ರ ಮತ್ತು ಕಾರುಗಳ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಸಂಚಾರಿ ಪೊಲೀಸರು 556 ಪ್ರಕರಣಗಳನ್ನು ದಾಖಲಿಸಿದ್ದಾರೆ. 50 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್‌ 9 ರಿಂದ 15ರವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ವಿವಿಧ ಮಾದರಿಯ 52,834 ವಾಹನಗಳನ್ನು ಪರಿಶೀಲನೆ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ್ದ ಸವಾರರು ಹಾಗೂ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅತಿವೇಗದಿಂದ ವಾಹನ ಚಾಲನೆ ಮಾಡುತ್ತಿರುವವರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ 133 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಮತ್ತು 1.33 ಲಕ್ಷ ದಂಡ ಸಂಗ್ರಹಿಸಲಾಗಿದೆ. ಕಳೆದ ಹಲವು ತಿಂಗಳಿನಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸುವವರು, ಅತಿವೇಗದಿಂದ ವಾಹನ ಚಲಾಯಿಸುವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಸ್ತೆ ಸುರಕ್ಷತೆಗಾಗಿ ಈ ರೀತಿಯ ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಲಾಗಿದೆ.

ವರದಿ- ಎಚ್.ಮಾರುತಿ, ಬೆಂಗಳೂರು)

Whats_app_banner