Mid day meals: ಎಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ಮೊಟ್ಟೆ ಬಾಳೆಹಣ್ಣು ನೀಡುವಂತೆ ಆದೇಶ
Mid day meal Eggs: ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಇಲಾಖೆ ವತಿಯಿಂದ ಮಧ್ಯಾಹ್ನದ ಉಪಹಾರ ಯೋಜನೆಯಡಿ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವಂತೆ ನಿರ್ಮಾಣ್ ನಿರ್ದೇಶಕ ಶುಭ ಕಲ್ಯಾಣ್ ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು: 2023-24 ನೇ ಸಾಲಿಗೆ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ವಿತರಿಸುವಂತೆ ಸೂಚಿಸುವ ಸುತ್ತೋಲೆ ಪತ್ರದಲ್ಲಿ ತಿಳಿಸಲಾಗಿದೆ.
ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1-8 ನೇ ತರಗತಿ ಮಕ್ಕಳಿಗೆ ಅಪೌಷ್ಟಿಕತೆ ಮತ್ತು ಅನಿಮಿಯ ನಿವಾರಣೆಗಾಗಿ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ (ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ) ಮಧ್ಯಾಹ್ನದ ಬಿಸಿಯೂಟದೊಂದಿಗೆ ಒಬ್ಬ ವಿದ್ಯಾರ್ಥಿಗೆ ವಾರದಲ್ಲಿ ಒಂದು ಮೊಟ್ಟೆಯಂತೆ ಮೊದಲ ಹಂತದಲ್ಲಿ ಜೂನ್ 20, 2023 ರಿಂದ ಪ್ರಾರಂಭಿಸಿ ಜುಲೈ 15, 2023 ರವರೆಗೆ ಸರ್ಕಾರದ ಮುಂದಿನ ಆದೇಶ ಬರವವರೆಗೂ ಫಲಾನುಭವಿ ಮಕ್ಕಳ ಹಾಜರಾತಿಗೆ ಅನುಗುಣವಾಗಿ ವಿತರಿಸುವಂತೆ ಈ ಮೂಲಕ ಸೂಚಿಸಿದೆ.
ರಾಜ್ಯದ ಕಲ್ಯಾಣ ಕರ್ನಾಟಕ ವಿಭಾಗದ 8 ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್, ವಿಜಯಪುರ ಈ ಜಿಲ್ಲೆಗಳಲ್ಲಿ 2023-24ನೇ ಸಾಲಿನ ಪಿ.ಎ.ಬಿ ಅನುಮೋದನೆ ಮತ್ತು ಅನುದಾನ ಹಂಚಿಕೆಯಂತೆ ಕೇಂದ್ರ ಮತ್ತು ರಾಜ್ಯದ ಪಾಲಿನ ಪ್ಲೆಕ್ಸಿ ಅನುದಾನದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿಯ ಫಲಾನುಭವಿ ಮಕ್ಕಳಿಗೆ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದೆ.
ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದು ಈ ಸಂಬಂಧ ವೆಚ್ಚವನ್ನು K2 PFMS ಅಡಿಯಲ್ಲಿ ಭರಿಸಿ ಖರ್ಚು ವೆಚ್ಚುಗಳನ್ನು ನಿರ್ವಹಿಸುವಂತೆ ಸೂಚಿಸಿದೆ.
ಉಳಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ 1-8ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಫಲಾನುಭವಿ ಮಕ್ಕಳಿಗೆ ಮೇಲ್ಕಂಡಂತೆ ಶಾಲೆಯ ಮುಖ್ಯಶಿಕ್ಷಕರು ಹಿಂದಿನ ಸಾಲಿನ ಉಲ್ಲೇಖ-3 ರಲ್ಲಿ ನೀಡಿದ ಮಾರ್ಗಸೂಚಿಯಂತೆ ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ಅಗತ್ಯ ಕ್ರಮ ಕೈಗೊಂಡು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವಂತೆ ಈ ಮೂಲಕ ಸೂಚಿಸಿದೆ.
ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಪಿ.ಎಂ.ಪೋಷಣೆ ಅಡಿಯಲ್ಲಿ ಜಿಲ್ಲಾ ಪಂಚಾಯತ್ ನೊಂದಿಗೆ Mou ಮಾಡಿಕೊಂಡು ಭಾಗವಹಿಸಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸಿದ್ಧಪಡಿಸಿದ ಮಧ್ಯಾಹ್ನದ ಬಿಸಿಯೂಟ ವಿತರಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು (NGO) ಸಹ ಮೇಲ್ಕಂಡ ಉಲ್ಲೇಖಿತ ಮಾರ್ಗಸೂಚಿಯಂತೆ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಕ್ರಮ ವಹಿಸುವಂತೆ ಸೂಚಿಸಿದೆ, ಈ ಕುರಿತು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಶಿಕ್ಷಣಾಧಿಕಾರಿಗಳು - ಪಿ.ಎಂ.ಪೋಷನ್ ಹಾಗೂ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು - ಪಿ.ಎಂ.ಪೋಷಣ್, ಕೂಡಲೇ ಅಗತ್ಯ ಕ್ರಮ ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿದೆ.