ಅಡಿಕೆ ಬೆಳೆಗಾರರ ಪರವಾಗಿ ಕೋರಿಕೆ; ಕರಾವಳಿಯಲ್ಲಿ ಇಸ್ರೋದ ಬಾಹ್ಯಾಕಾಶ ಕಾಲೇಜು ಸ್ಥಾಪಿಸಲು ಕ್ಯಾಂಪ್ಕೊ ಪ್ರಯತ್ನಿಸಲಿ: ಪ್ರಭಾಕರ ಕಾರಂತ ಬರಹ
ಇಸ್ರೋ ಬಾಹ್ಯಾಕಾಶ ಶಿಕ್ಷಣ ನೀಡಲು ಕೆಲವರ್ಷದ ಹಿಂದೆ ಸಂಸ್ಥೆಯೊಂದನ್ನು ಆರಂಭಿಸಿದೆ. ಅಂತಹ ಸಂಸ್ಥೆಯ ಕಾಲೇಜೊಂದನ್ನು ಉಡುಪಿ ಅಥವಾ ಮಂಗಳೂರಲ್ಲಿ ಆರಂಭಿಸಲೂ ಕ್ಯಾಮ್ಕೋ ಪ್ರಯತ್ನಿಸಲಿ ಎಂದು ಪ್ರಭಾಕರ್ ಕಾರಂತ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಚಂದ್ರಯಾನ ಯಶಸ್ಸಿನ ಹಿನ್ನೆಲೆಯಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿದ ಕ್ಯಾಮ್ಕೋ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿಯವರು, ಪ್ರದಾನ ಮಂತ್ರಿಗಳಿಗೆ ಪತ್ರಿಸಿ ಇಸ್ರೋಗೆ ಉಡುಪಿ ಯು.ಆರ್.ರಾವ್ ಕೊಡುಗೆ ನೆನಪುಮಾಡಿ ಅವರ ನೆನಪಿನಲ್ಲಿ ಉಡುಪಿಯಲ್ಲಿ ಇಸ್ರೋ ಪ್ರಯೋಗಾಲಯ ಸ್ಥಾಪಿಸಬೇಕೆಂದು ಕೋರುತ್ತಾರೆ.ಈ ಕೋರಿಕೆ ಮಾಡಿ ಕ್ಯಾಮ್ಕೋ ಅಧ್ಯಕ್ಷರು ಮಹಾಪರಾಧ ಮಾಡಿದ್ದಾರೇನೋ ಎಂಬಂತೆ ಕೆಲವರು ಸಾಮಾಜಿಕ ಜಾಲತಾಣದಲ್ಲೂ, ಪತ್ರಿಕೆಗಳಲ್ಲೂ ಹೇಳಿಕೆ ನೀಡಿದ್ದಾರೆ. ಅಂತ ಒಂದು ಹೇಳಿಕೆಯಲ್ಲಿ ಇಸ್ರೋಗೂ, ಕೃಷಿಗೂ ಅಡಿಕೆಗೂ ಏನೂ ಸಂಬಂಧವಿಲ್ಲ ಎಂಬ ಅಭಿಪ್ರಾಯ ಓರ್ವರಿಂದ ಬಂದಿದೆ.ನಾವು ಅಜ್ಞಾನದಲ್ಲಿರುವುದಲ್ಲದೇ ಅದನ್ನು ಪ್ರಸಾರ ಮಾಡುವ ಇಂತಹವರ ಮನೋಭಾವ ಸುಲಭಕ್ಕೆ ಅರ್ಥವಾಗಲಾರದು.
ಕೆಲ ವರ್ಷದ ಹಿಂದೆ ಮಾಜೀ ರಾಷ್ಟ್ರಪತಿ ಅಬ್ದುಲ್ ಕಲಾಂ ಶೃಂಗೇರಿಗೆ ಬಂದಿದ್ದರು.ಅವರ ಜೊತೆಗೆ ಒಂದರ್ದ ದಿನ ಇರುವ ಅಪೂರ್ವ ಅವಕಾಶ ನನಗೆ ಒದಗಿತ್ತು.ತನ್ನ ಶೃಂಗೇರಿಯ ಬೇಟಿ ನೆನಪಲ್ಲಿ ಶೃಂಗೇರಿಯಲ್ಲಿ ಏನಾದರೂ ಉತ್ತಮ ಕೆಲಸ ಆರಂಭಿಸಬೇಕೆಂದು ಕಲಾಂ ಅಪೇಕ್ಷಿಸಿದ್ದರು. ಆದಿನ ಇಸ್ರೋದ ಹಿರಿಯ ವಿಜ್ಞಾನಿ ಡಾ.ಸುರೇಶ್ ಸೇರಿದಂತೆ ಅನೇಕ ವಿಜ್ಞಾನಿಗಳು ಶೃಂಗೇರಿಗೆ ಆಗಮಿಸಿದ್ದರು. ತಮ್ಮ ಹಿಂದಿನ ಸಹೋದ್ಯೋಗಿಗಳೊಂದಿಗೂ ಈ ಇಂಗಿತ ಕಲಾಂ ವ್ಯಕ್ತಪಡಿಸಿದ್ದರು. ಡಾ.ಸುರೇಶ್ ಮೂಲತಹ ಕೊಪ್ಪ ತಾಲ್ಲೂಕಿನ ಅಂದಗಾರಿನವರು. ಅವರಿಗೆ ಕಲಾಂ ಇಂಗಿತ ಕಾರ್ಯಗತಗೊಳಿಸುವ ಇಚ್ಛೆ ಉಂಟಾಯಿತು. ಇದೇ ಕಾರಣಕ್ಕೆ ಇಸ್ರೋದ ಆಗಿನ ಅಧ್ಯಕ್ಷ ಮಾಧವನ್ನಾಯರ್ ರನ್ನು ಅವರು ಶೃಂಗೇರಿಗೆ ಕರೆತಂದರು. ಆಗ ಶೃಂಗೇರಿಯ ಸುತ್ತಲಿನ ಕೃಷಿಕರ ಒಂದು ಕಾರ್ಯಾಗಾರ ಶೃಂಗೇರಿಯಲ್ಲಿ ಏರ್ಪಡಿಸಲಾಗಿತ್ತು. ಅದರ ಉದ್ಘಾಟನೆ ಮಾಧವನ್ ನಾಯರ್ ರದ್ದು. ಇಸ್ರೋದ ಅನೇಕ ವಿಜ್ಞಾನಿಗಳೇ ಎರಡು ದಿನದ ಈ ಕಾರ್ಯಾಗಾರ ನಡೆಸಿಕೊಟ್ಟಿದ್ದು. ಇಸ್ರೋದಿಂದ ಕೃಷಿಗೆ ಏನೆಲ್ಲಾ ಸಹಕಾರ ಸಿಗಬಹುದು, ಯುರೋಪ್ ಮತ್ತು ಅಮೆರಿಕಗಳಲ್ಲಿ ಕೃಷಿ ಉನ್ನತಿಗೆ ಹೇಗೆ ಬಾಹ್ಯಾಕಾಶ ತಂತ್ರಜ್ಞಾನ ಬಳಕೆ ಆಗುತ್ತಿದೆ, ಪ್ರಾಕೃತಿಕ ಅವಘಡದ ಸಂಧರ್ಭ ಹೇಗೆ ಬಾಹ್ಯಾಕಾಶ ತಂತ್ರಜ್ಞಾನ ನೆರವಾಗುತ್ತದೆ ಎಂಬಿತ್ಯಾದಿ ವಿಷಯವನ್ನು ವಿಜ್ಞಾನಿಗಳು ರೈತರಿಗೆ ವಿವರಿಸಿದರು. ನಾನು ಇಸ್ರೋದ ಅಧ್ಯಕ್ಷರನ್ನೂ ಆಗ ಸಂದರ್ಶನ ಮಾಡಿದ್ದೆ ಮತ್ತು ಓರ್ವ ಪತ್ರಕರ್ತನಾಗಿ ಕಾರ್ಯಾಗಾರದಲ್ಲೂ ಪಾಲ್ಗೊಂಡಿದ್ದೆ. ವಿಜ್ಞಾನಿಗಳ ಮಾತು ಕೇಳಿದ ನಾನು ನೀವು ಇಷ್ಟೆಲ್ಲ ಮಾಡಬಲ್ಲಿರಿ ಎನ್ನುತ್ತೀರಿ, ದೇಶದಲ್ಲಿ ಎಲ್ಲಾದರೂ ನಿಮ್ಮ ತಂತ್ರಜ್ಞಾನದ ಬಳಕೆ ಮಾಡಿಕೊಂಡು ಪ್ರಯೋಜನ ಪಡೆದಿದ್ದಾರಾ ಎಂದು ಪ್ರಶ್ನಿಸಿದೆ.ಆಗ ವಿಜ್ಞಾನಿಗಳು ನಮ್ಮ ತಂತ್ರಜ್ಞಾನ ಬಳಕೆ ಮಾಡಿದ್ದು ಗುಜರಾತಿನಲ್ಲಿ ಎಂದು ವಿವರಿಸಿದ್ದರು. ಮೋದಿಯವರು ಆಗ ಗುಜರಾತಿನ ಮುಖ್ಯ ಮಂತ್ರಿ.ಇಸ್ರೋದ ತಂತ್ರಜ್ಞಾನ ತನ್ನ ರಾಜ್ಯದಲ್ಲಿ ಪೂರ್ಣ ಬಳಕೆ ಮಾಡಲು ಅವರು ಇಸ್ರೋಗೆ ಶುಲ್ಕ ನೀಡಿ ಅವಕಾಶ ನೀಡಿದ್ದರಂತೆ. ಕಚ್ ಸೇರಿದಂತೆ ಬರ ಪ್ರದೇಶ ಆಗಿದ್ದ ಗುಜರಾತಿನ ಅನೇಕ ಸ್ಥಳಗಳು ಈಗ ನಳನಳಿಸುತ್ತಿರುವ ಹಿಂದೆ ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯೂ ಕಾರಣವಾಗಿದೆ. ಪ್ರಾಕೃತಿಕ ವಿಕೋಪ ಸೇರಿದಂತೆ ಅನೇಕ ಸಂಧರ್ಭಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಉಪಯೋಗಕ್ಕೆ ಬಂದಿದೆ.ಜನರ ಪ್ರಾಣ ಆಸ್ತಿಯ ರಕ್ಷಣೆ ಸಾಧ್ಯವಾಗಿದೆ.
ಚಂದ್ರನಲ್ಲಿ ನೀರನ್ನು ಚಂದ್ರಯಾನ 1 ಪತ್ತೆ ಮಾಡಿರುವಾಗ ಭೂಮಿಯಲ್ಲಿ ಈ ತಂತ್ರಜ್ಞಾನ ಎಷ್ಟೆಲ್ಲಾ ಪ್ರಯೋಜನಕ್ಕೆ ಬಂದೀತು ಅಂದಾಜಿಸಬಹುದು. ಭೂಮಿಯ ಅಧ್ಯಯನ ಕೃಷಿ ಹಿನ್ನೆಲೆಯಲ್ಲಿ ಮಾಡಲು ಬಾಹ್ಯಾಕಾಶ ತಂತ್ರಜ್ಞಾನ ಈಗ ಸಶಕ್ತವಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನಕ್ಕೂ ಕೃಷಿಗೂ ಸಂಭಂದ ಇಲ್ಲ ಎಂಬುದು ಅಜ್ನಾನದ ಪರಮಾವದಿ.
ಶೃಂಗೇರಿಯಲ್ಲಿ ಕಲಾಂ ಕನಸು ನನಸಾಗಿಸುವ ಪ್ರಯತ್ನ ಆರಂಭವಾಗಿ ಎರಡು ದಶಕದ ಹತ್ತಿರ ಆದರೂ ಅದು ನನಸಾಗುವ ಕಾಲ ಈಗ ಒದಗಿದೆ.ಶೃಂಗೇರಿಯಲ್ಲಿ ಇಸ್ರೋದ ಒಂದು ಬಾಹ್ಯಾಕಾಶ ಮ್ಯೂಸಿಯಂ ಅಸ್ಥಿತ್ವಕ್ಕೆ ಬರಲಿದೆ.
ಕ್ಯಾಮ್ಕೋ ಅಧ್ಯಕ್ಷರು ಉಡುಪಿಗೆ ಪ್ರಯೋಗಾಲಯಕ್ಕಾಗಿ ಈಗ ಮನವಿ ಮಾಡಿದ್ದು ಈಗಲೇ ಕಾರ್ಯರೂಪಕ್ಕೆ ಬಂದರೂ ಬಂದೀತು. ಅಥವಾ ಮುಂದೊಂದು ದಿನ ಅದು ಸಾಕಾರವಾದೀತು. ಅದು ಕರಾವಳಿ ಕೃಷಿಗೆ ವರದಾನವಾದೀತು. ಒಂದು ಪ್ರಯತ್ನದ ಆರಂಭದಲ್ಲೇ ಹೀಗೆ ಅಡ್ಡಸ್ವರ ಕೇಳಿ ಬಂದಿದ್ದು ವಿಷಾದನೀಯ. ಕರಾವಳಿ ಮೀನುಗಾರರಿಗೂ ಇಂತಹ ಪ್ರಯೋಗಾಲಯ ಆಶಾಕಿರಣ ಎನಿಸೀತು. ಇದರ ಜೊತೆಗೆ ಬಾಹ್ಯಾಕಾಶ ಕುರಿತು ಈ ಪ್ರದೇಶದ ರೈತರ ಮಕ್ಕಳು ಆಸಕ್ತಿ ತಾಳಿ ಅವರಲ್ಲೂ ಕೆಲವರು ವಿಜ್ಞಾನಿಗಳಾದಾರು. ಕರಾವಳಿ ಜಿಲ್ಲೆಯ ಭವಿಷ್ಯದ ಕುರಿತು ಚಿಂತಿಸುವುದು ಹೇಗೆ ಅಪರಾಧ ಆಗುತ್ತದೆ ತರ್ಕಕ್ಕೆ ಸಿಕ್ಕದ ಸಂಗತಿ.
ಇನ್ನು ಯು.ಆರ್. ರಾವ್ ಅಂತರರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನಿಗಳಲ್ಲೇ ಶ್ರೇಷ್ಠ ಸಾಲಿನಲ್ಲಿ ನಿಲ್ಲುವವರು. ಅವರು ಭಾರತದ ಬಾಹ್ಯಾಕಾಶ ವಿಜ್ಞಾನಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದು ಇಸ್ರೋದ ವಿಜ್ಞಾನಿ ನಂಬಿ ನಾರಾಯಣ ರವರ ಆತ್ಮಕಥನದಲ್ಲಿ ಬಹು ಸೊಗಸಾಗಿ ನಿರೂಪಿತವಾಗಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೋಮಿ ಬಾಬಾ,ವಿಕ್ರಂ ಸಾರಾಬಾಯ್,ಸತೀಷ್ ಧವನ್ ರವರಂತೆ ಡಾ.ಯು.ಆರ್.ರಾವ್ ಕೊಡುಗೆ ಸಹ ಅತ್ಯಂತ ಮಹತ್ವದ್ದು ಎಂದು ನಂಬಿ ನಾರಾಯಣ್ ಉಲ್ಲೇಖಿಸುತ್ತಾರೆ. ಅಂತಹ ಮಹಾನ್ ವಿಜ್ಞಾನಿ ತಮ್ಮ ಕರಾವಳಿಯವರು ಎಂಬ ಹೆಮ್ಮೆ ಇರುವುದು ತಪ್ಪೇನು. ಆ ಹೆಸರು ಉಳಿಸಿ ಅವರದೇ ಸ್ಮರಣೆಯಲ್ಲಿ ಉಡುಪಿಯಲ್ಲಿ ಬಾಹ್ಯಾಕಾಶ ಪ್ರಯೋಗಾಲಯ ಆಗಬೇಕೆಂದು ಕ್ಯಾಮ್ಕೋ ಕೇಳುವುದು ಸಕಾಲಿಕವಷ್ಟೆ ಅಲ್ಲ ಸಮರ್ಥನೀಯವೂ ಹೌದು. ಯು.ಆರ್. ರಾವ್ ಹೆಸರೂ ಉಳಿಯಬೇಕು ಮತ್ತು ಕರಾವಳಿಗೆ ಉಪಯೋಗವೂ ಆಗಬೇಕು ಎಂಬ ಕೋರಿಕೆ ಅಡಿಕೆ ಬೆಳೆಗಾರರರ ಪ್ರಪಂಚದ ದೊಡ್ಡ ಸಂಸ್ಥೆ ಪರ ಕೇಳುವುದು ನ್ಯಾಯವಾಗೇ ಇದೆ. ಇದು ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಪಡೆಯುವ ಬುದ್ದಿವಂತಿಕೆ. ಇಷ್ಟಕ್ಕೂ ಕ್ಯಾಮ್ಕೋಗೆ ಇದರಿಂದ ಯಾವುದೇ ಆರ್ಥಿಕ ಹೊರೆ ಬೀಳುತ್ತಲೂ ಇಲ್ಲ.ಇಸ್ರೋದ ಹಣದಲ್ಲೇ ಪ್ರಯೋಗಾಲಯ ಸ್ಥಾಪಿಸಲು ಪ್ರದಾನ ಮಂತ್ರಿಗಳನ್ನು ಕೋರಿರುವುದು. ಅದೂ ಚಂದ್ರಯಾನ3 ರ ಯಶಸ್ಸಿನ ಸಂಧರ್ಭ ಈ ಬೇಡಿಕೆ ಇಟ್ಟಿದ್ದು ಸೂಕ್ತವೇ ಆಗಿದೆ.
ಇದಕ್ಕೂ ಸಂಸ್ಥೆಯು ಹಳದಿರೋಗ ಸಂಶೋಧನೆಗೆ ಹಣ ನೀಡದಿರುವುದಕ್ಕೂ ಸಂಭಂದ ಕಲ್ಪಿಸಿ ಟೀಕಿಸುವುದು ಕುಹುಕ ಅಷ್ಟೇ ಅಲ್ಲ ತಪ್ಪು ಮಾಹಿತಿ ಪ್ರಸಾರ.ಹಳದಿರೋಗ ಸಂಶೋಧನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸ.ಆ ದಿಸೆಯಲ್ಲಿ ಅಡಿಕೆ ಬೆಳೆಗಾರರ ಸಂಘ ಸರ್ಕಾರವನ್ನು ಒತ್ತಾಯಿಸಿ ಒತ್ತಡ ಹಾಕಬಹುದು. ಅದು ಬಿಟ್ಟು ತಾನೇ ಸಂಶೋಧನೆ ಹೊಣೆ ಹೊರಲು ಸಾಧ್ಯವೇ. ಇಷ್ಟಕ್ಕು ಅಡಿಕೆ ಸಂಶೋಧನೆಗೆ ಸಂಸ್ಥೆ ವಿರೋಧಿಸಿದೆಯಾ. ವೈಯುಕ್ತಿಕ ಇಷ್ಟಾನಿಷ್ಟಗಳನ್ನು ತಂದು ಮೊಸರಲ್ಲಿ ಕಲ್ಲು ಹುಡುಕುವ ಇಂತಹ ಚಟುವಟಿಕೆಯಿಂದ ಸಂಸ್ಥೆ ವಿಚಲಿತವಾಗಬಾರದು.
ಅಡಿಕೆ ಕ್ಯಾನ್ಸರ್ ಕಾರಕ ಎಂಬ ಸರ್ವೋಚ್ಚ ನ್ಯಾಯಾಲಯದ ಕೇಸಿನಲ್ಲಿ ಯುಪಿಎ ಸರ್ಕಾರ ನೀಡಿದ ಪ್ರಮಾಣ ಪತ್ರ ದಿಂದ ಅಡಿಕೆ ರಕ್ಷಿಸಲು ಕ್ಯಾಮ್ಕೋ ನಡೆಸಿದ ಪ್ರಯತ್ನ ನನಗಂತೂ ಚೆನ್ನಾಗಿ ತಿಳಿದಿದೆ.ಸಂಸ್ಥೆ ಅಮೆರಿಕದಲ್ಲಿ ವಿಜ್ಞಾನಿಯಾಗಿರುವ ನನ್ನ ಸಹೋದರನನ್ನ ಸಂಪರ್ಕಿಸಿ ಅಲ್ಲಿ ಅಡಿಕೆ ಕುರಿತು ನಡೆದ ಪೂರಕ ಸಂಶೋಧನೆ ಮತ್ತು ಅಧ್ಯಯನ ವರದಿ ತರಿಸಿಕೊಂಡು ಆ ಹಿನ್ನೆಲಿಯಲ್ಲಿ ಮಲ್ಪೆಯಲ್ಲಿ ಅಂತದೇ ಸಂಶೋಧನೆ ನಡೆಸಲು ಕ್ಯಾಮ್ಕೋ ಮುಂದಾಗಿ ಈಗ ಸಾಕಷ್ಟು ಮುಂದುವರೆದಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಅಡಿಕೆ ಭವಿಷ್ಯಕ್ಕೆ ಮಾರಕವಾದ ತೀರ್ಪು ಬಾರದಂತೆ ನಡೆದ ಈ ಪ್ರಯತ್ನ ಅತ್ಯಂತ ಮಹತ್ವದ್ದಾಗಿದೆ.
ಅಡಿಕೆ ಕೃಷಿಕರ ಜೊತೆಗೆ ಸುತ್ತಲಿನ ಎಲ್ಲರ ಬದುಕಿಗೂ ಉಪಯೋಗವಾಗಬಲ್ಲ ಒಂದು ಕೋರಿಕೆ ದೇಶದ ಪ್ರದಾನ ಮಂತ್ರಿಯ ಬಳಿ ಕ್ಯಾಮ್ಕೋ ಇಟ್ಟಿದ್ದು ಸ್ವಾಗತಾರ್ಹ. ಈ ಪ್ರಯತ್ನ ಮುಂದುವರೆಸಿ ಒಂದು ತಾರ್ಕಿಕ ಅಂತ್ಯ ಕಾಣಿಸಲಿ ಎಂದು ನಾನಂತೂ ಹಾರೈಸುವೆ.
ಇಸ್ರೋ ಬಾಹ್ಯಾಕಾಶ ಶಿಕ್ಷಣ ನೀಡಲು ಕೆಲವರ್ಷದ ಹಿಂದೆ ಸಂಸ್ಥೆಯೊಂದನ್ನು ಆರಂಭಿಸಿದೆ. ಅಂತಹ ಸಂಸ್ಥೆಯ ಕಾಲೇಜೊಂದನ್ನು ಉಡುಪಿ ಅಥವಾ ಮಂಗಳೂರಲ್ಲಿ ಆರಂಭಿಸಲೂ ಕ್ಯಾಮ್ಕೋ ಪ್ರಯತ್ನಿಸಲಿ. ಇದರಿಂದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಯ ವಿದ್ಯಾರ್ಥಿಗಳ ಅವಕಾಶದ ಬಾಗಿಲು ತೆರೆಯಲಿದೆ. ಪ್ರಯತ್ನ ಒಂದು ತಕ್ಷಣ ಫಲಕಾರಿಯಾದೀತು ಅಥವಾ ಸಮಯ ಪಡೆದೀತು ಆದರೆ ಪ್ರಯತ್ನ ಆರಂಭಿಸಲು ವಿಳಂಬ ಸಲ್ಲದು. ಇದು ಅಡಿಕೆ ಬೆಳೆಗಾರರ ಪರವಾಗಿ ಒಂದು ಕೋರಿಕೆ.
- ಪ್ರಭಾಕರ್ ಕಾರಂತ್ ( ಕೃಪೆ: ಫೇಸ್‌ಬುಕ್ ಬರಹ)