Karnataka Weather: ಬೆಂಗಳೂರು, ಕರಾವಳಿ, ಮಲೆನಾಡು ಭಾಗದಲ್ಲಿ ಹಗುರ ಮಳೆ ನಿರೀಕ್ಷೆ: ಚಳಿ ಯಥಾರೀತಿ
Karnataka Rain Updates ಕರ್ನಾಟಕದ ಬೆಂಗಳೂರು( Bengaluru), ದಕ್ಷಿಣ ಕನ್ನಡ( Dakshin Kannada), ಮಲೆನಾಡಿನ( Malnad Region) ಒಂದೆರಡು ಭಾಗದಲ್ಲಿ ಸೋಮವಾರ ಮಳೆಯಾಗುವ ಮುನ್ಸೂಚನೆಯಿದ್ದು, ಉತ್ತರ ಕರ್ನಾಟಕ( North Karnataka) ಭಾಗದಲ್ಲಿ ಒಣ ಹವೆಯ ವಾತಾವರಣವೇ ಮುಂದುವರಿಯಲಿದೆ.
ಬೆಂಗಳೂರು: ನೆರೆಯ ತಮಿಳುನಾಡು, ಕೇರಳದ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯತ್ತಿದ್ದರೂ ಕರ್ನಾಟಕದಲ್ಲಿ ಅಂತಹ ವಾತಾವರಣವೇನೂ ಇಲ್ಲ. ಆದರೂ ಬೆಂಗಳೂರು, ಕರಾವಳಿ ಭಾಗದ ಜಿಲ್ಲೆಗಳ, ಮಲೆನಾಡು ಭಾಗದ ಕೆಲವು ಕಡೆಗಳಲ್ಲಿ ಸೋಮವಾರ ಹಗುರದಿಂದ ಸಾಧಾರಣ ಮಳೆಯಾಗಬಹುದು ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ.
ಶನಿವಾರ ಸಂಜೆ ಹಾಗೂ ಭಾನುವಾರದಂದು ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಿರುವ ವರದಿಯನ್ನು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ಬಿಡುಗಡೆ ಮಾಡಿದೆ. ಆದರೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಎಲ್ಲಿಯೂ ಮಳೆಯಾದ ವರದಿಯಿಲ್ಲ.
ಮುಂದಿನ 24 ತಾಸುಗಳಲ್ಲಿ ಅಂದರೆ ಮಂಗಳವಾರ ಬೆಳಿಗ್ಗೆವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಅದೇ ರೀತಿ ದಕ್ಷಿಣ ಒಳನಾಡಿನ ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸಹಿತ ಒಂದೆರಡು ಭಾಗದಲ್ಲಿ ಮಾತ್ರ ಮಳೆಯಾಗಬಹುದು. ಆದರೆ ಉತ್ತರ ಕರ್ನಾಟಕದಲ್ಲಿ ಒಣ ಹವೆಯ ವಾತಾವರಣವೇ ಮುಂದುವರಿಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಅಂದರೆ ಬುಧವಾರ ಬೆಳಿಗ್ಗೆವರೆಗೆ ದಕ್ಷಿಣ ಒಳನಾಡಿನ ಕೆಲವು ಭಾಗ, ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿಲ್ಲ. ಎರಡೂ ದಿನವೂ ಗುಡುಗು, ಮಿಂಚಿನ ಮುನ್ನೆಚ್ಚರಿಕೆ ಇಲ್ಲ. ಭಾರೀ ಮಳೆಯ ಮುನ್ನೆಚ್ಚರಿಕೆಯನ್ನೂ ನೀಡಲಾಗಿಲ್ಲ.
ಬೆಂಗಳೂರು ಹವಾಮಾನ
ಇನ್ನು ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನವೂ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಮಂಗಳವಾರ ಬೆಳಿಗ್ಗೆ ವರೆಗ ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಗರಿಷ್ಠ ಉಷ್ಣಾಂಶದಲ್ಲಿ ಕೊಂಚ ಕುಸಿತ ಕಾಣಲಿದೆ. ಗರಿಷ್ಠ ಉಷ್ಣಾಂಶವು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 26 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ, ಕನಿಷ್ಠ ಉಷ್ಣಾಂಶದ ಪ್ರಮಾಣವು 19 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಬಹುದು. ಬುಧವಾರ ಬೆಳಿಗ್ಗೆ ಹೊತ್ತಿಗೆ ಗರಿಷ್ಠ ಉಷ್ಣಾಂಶದಲ್ಲಿ ಮಾತ್ರ ಕೊಂಚ ಏರಿಕೆಯಾಗಲಿದೆ. ಅಂದರೆ 27 ಡಿಗ್ರಿ ಸೆಲ್ಸಿಯಸ್‌ನಷ್ಟಾಗಬಹುದು, ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಮೋಡ ಕವಿದ ವಾತಾವರಣ ಬುಧವಾರದವರೆಗೂ ಮುಂದುವರಿಯಲಿದ್ದು, ಮಂಗಳವಾರ ಬೆಂಗಳೂರು ಸುತ್ತಮುತ್ತ ಮಳೆಯ ಸೂಚನೆಯಿಲ್ಲ.
ಚಳಿಯೂ ಸಾಮಾನ್ಯ
ಕೆಲ ದಿನಗಳಿಂದ ಕರ್ನಾಟಕದ ಕರಾವಳಿ ಹೊರತುಪಡಿಸಿ ಎಲ್ಲೆಡೆ ಚಳಿಯ ವಾತಾವರಣ ಕಂಡು ಬಂದಿದೆ. ಅದು ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಭಾಗದಲ್ಲಿ ಚಳಿಯ ಪ್ರಮಾಣ ಅಧಿಕವಾಗಿಯೇ ಇದೆ. ಬೆಂಗಳೂರು, ಮೈಸೂರು ಭಾಗದಲ್ಲಿ ಚಳಿಯ ಸನ್ನಿವೇಶವೇ ಇದ್ದು, ಕನಿಷ್ಠ ಉಷ್ಣಾಂಶದಲ್ಲಿ ಗಣನೀಯ ಏರಿಕೆಯೇನೂ ಕಂಡು ಬಂದಿಲ್ಲ.
ಕರ್ನಾಟಕ ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ ವಿಜಯಪುರದಲ್ಲಿಯೇ ಮುಂದುವರಿದಿದೆ. ಭಾನುವಾರದಂದು ಕನಿಷ್ಠ ಉಷ್ಣಾಂಶ 15.5 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.