ಕಾಡಿನ ಕಥೆಗಳು: ಹಿಮಾಲಯ ಕೇರಳದಂತೆ ಕರ್ನಾಟಕದಲ್ಲೂ ಅರಣ್ಯ ನಾಶದ ಆತಂಕ; ನಮ್ಮಲ್ಲೂ ಸೃಷ್ಟಿಯಾಗಬಹುದು ಪರಿಸರ ಹಾಟ್‌ಸ್ಪಾಟ್‌ ಗಳು !-forest tales deforestation in karnataka create land slide hot spots like himalayan states and kerala say rmsi report kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಹಿಮಾಲಯ ಕೇರಳದಂತೆ ಕರ್ನಾಟಕದಲ್ಲೂ ಅರಣ್ಯ ನಾಶದ ಆತಂಕ; ನಮ್ಮಲ್ಲೂ ಸೃಷ್ಟಿಯಾಗಬಹುದು ಪರಿಸರ ಹಾಟ್‌ಸ್ಪಾಟ್‌ ಗಳು !

ಕಾಡಿನ ಕಥೆಗಳು: ಹಿಮಾಲಯ ಕೇರಳದಂತೆ ಕರ್ನಾಟಕದಲ್ಲೂ ಅರಣ್ಯ ನಾಶದ ಆತಂಕ; ನಮ್ಮಲ್ಲೂ ಸೃಷ್ಟಿಯಾಗಬಹುದು ಪರಿಸರ ಹಾಟ್‌ಸ್ಪಾಟ್‌ ಗಳು !

Karnataka Land Slides ಭಾರತದ ಇತರೆ ಕೆಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅನಾಹುತಕಾರಿ ಭೂಕುಸಿತ ಕಡಿಮೆ. ಕೊಡಗು ಮಾತ್ರ ಪರಿಸರ ಹಾಟ್‌ ಸ್ಪಾಟ್‌ ಪಟ್ಟಿಯಲ್ಲಿದೆ. ಅರಣ್ಯ ಪ್ರದೇಶ ನಾಶ ಹೆಚ್ಚಿದಂತೆ ಹಾಟ್‌ ಸ್ಪಾಟ್‌ ಗಳು ಹೆಚ್ಚುವ ಆತಂಕವಂತೂ ಇದೆ. ಈ ವಾರದ ಕಾಡಿನ ಕಥೆಗಳು.

Land Slides  ಕರ್ನಾಟಕವೂ ಭವಿಷ್ಯದಲ್ಲಿ ಭೂಕುಸಿತದ ಹಾಟ್‌ ಸ್ಪಾಟ್‌ ಆಗುವ ಆತಂಕ ಎದುರಿಸುತ್ತಿದೆ. ಅರಣ್ಯ ನಾಶವು ಇದರ ಹಿಂದೆ ಇರುವ ಕಾರಣ.
Land Slides ಕರ್ನಾಟಕವೂ ಭವಿಷ್ಯದಲ್ಲಿ ಭೂಕುಸಿತದ ಹಾಟ್‌ ಸ್ಪಾಟ್‌ ಆಗುವ ಆತಂಕ ಎದುರಿಸುತ್ತಿದೆ. ಅರಣ್ಯ ನಾಶವು ಇದರ ಹಿಂದೆ ಇರುವ ಕಾರಣ.

ಸಿಕ್ಕಿಂನಲ್ಲಿ ದೊಡ್ಡ ಗುಡ್ಡವೊಂದು ಕುಸಿದು ಕೆಳಗಡೆಯಿದ್ದ ವಿದ್ಯುತ್‌ ಘಟಕವೇ ನಾಮಾವೇಶವಾಗಿ ಹೋಯಿತು.ಅಲ್ಲಿದ್ದವರು ಗುಡ್ಡ ಕುಸಿತದ ಭಯದ ಜತೆಯಲ್ಲಿಯೇ ವಿದ್ಯುತ್‌ ಘಟಕದಿಂದ ಏನಾದರು ಆಗಬಹುದೇನೋ ಎನ್ನುವ ಭಯದಲ್ಲಿ ಜೀವ ಕೈಯಲ್ಲಿಯೇ ಅಲ್ಲಿಂದ ಓಡಿದರು. ಸಿಕ್ಕಿಂನಲ್ಲಿ ಈಗಂತೂ ಭೂಕುಸಿತಗಳು ಸಾಮಾನ್ಯ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಂತೂ ಭೂಕುಸಿತಗಳು ಲೆಕ್ಕವಿಲ್ಲದಷ್ಟು. ಪ್ರಮುಖ ರಸ್ತೆಗಳ ಮೇಲೆಯೇ ಕುಸಿತಗಳು ಸಂಭವಿಸಿ ಜೀವವನ್ನು ಕಳೆದುಕೊಂಡವರು ಅದೆಷ್ಟೋ. ಭಾರೀ ಮಳೆ ಅಂದರೆ ಅವರಿಗೆಲ್ಲಾ ಇನ್ನಿಲ್ಲದ ಭಯ.

ಕೇರಳದಲ್ಲೂ ಮೂರು ವಾರದ ಹಿಂದೆಯಷ್ಟೇ ಸಂಭವಿಸಿದ ಭೂಕುಸಿತ ಕಣ್ಣ ಮುಂದೆಯೇ ನಡೆದ ಹಾಗೆ ಇದೆ. ಅಲ್ಲಿಯೂ ನಾಲ್ಕು ನೂರಕ್ಕೂ ಅಧಿಕ ಮಂದಿ ಕುಸಿತ ಹಾಗೂ ಪ್ರವಾಹದಡಿ ಸಿಲುಕಿ ಜೀವ ಬಿಟ್ಟರು. ಈಗಲೂ ಕೇರಳದ ವಯನಾಡು ಜಿಲ್ಲೆಯ ಆ ದುರಂತ ಹಲವಾರು ಅನುಭವಗಳನ್ನು ನಮಗೆ ಕಲಿಸಿದೆ.

ಕರ್ನಾಟಕದಲ್ಲೂ ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ,  ಜಿಲ್ಲೆಗಳಲ್ಲಿ ಭೂಕುಸಿತ ಆಗಾಗ ಸಂಭವಿಸುವ ಮಟ್ಟಕ್ಕೆ ಕರ್ನಾಟಕದಲ್ಲೂ ಸನ್ನಿವೇಶಗಳು ಬದಲಾಗಿವೆ. ಮೊನ್ನೆ ಹಾಸನ ಮಾರ್ಗದಲ್ಲಿ ರೈಲಿನ ಮೇಲೆಯೇ ಭೂಕುಸಿತ ಆಗಿ ಭಾರೀ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಕೊಡಗಿನಲ್ಲಂತೂ ಐದಾರು ವರ್ಷ ಹಿಂದಿನ ಭೂಕುಸಿತಗಳನ್ನೂ ಮರೆಯುವ ಹಾಗೆಯೇ ಇಲ್ಲ.

ಭಾರತವೆಂದರೆ ಭೂಕುಸಿತಗಳ ನಾಡು ಎಂದು ಬದಲಾಗುಷ್ಟರ ಮಟ್ಟಿಗೆ ಈ ದಶಕದಲ್ಲಿ ಅನಾಹುತಗಳು ಸಂಭವಿಸಿವೆ. ಅದೂ ನಿರಂತರವಾಗಿ ಭೂಕುಸಿತಗಳು ಆಗುತ್ತಲೇ ಇವೆ. ಇವುಗಳನ್ನೆಲ್ಲಾ ಒಂದೊಂದಾಗಿ ತಾಳೆ ನೋಡುತ್ತಾ ಹೋದರೆ ಇಲ್ಲಿ ಎರಡು ಅಂಶಗಳು ಗಮನಕ್ಕೆ ಬರುತ್ತವೆ. ಒಂದು ಮಿತಿ ಮೀರಿದ ಅರಣ್ಯ ನಾಶ ಹಾಗೂ ಅಭಿವೃದ್ದಿಯ ಓಟ.

ಇಂತಹ ವಿಕೋಪ ಅನಾಹುತಗಳ ಮೇಲೆ ಅಧ್ಯಯನ ಮಾಡುವ ಆರ್‌ಎಂಎಸ್‌ಐ ಎನ್ನುವ ಭಾರತದ ಎರಡು ಭಾಗಗಳಲ್ಲಿನ ಭೂಕುಸಿತಗಳ ಕುರಿತು ಅಧ್ಯಯನ ನಡೆಸಿತು. ಈ ಸಂಸ್ಥೇ ಜಿಯೋ ಸ್ಪೇಷಿಯಲ್‌ ತಂತ್ರಜ್ಞಾನದ ಮೂಲಕ ನಿಖರ ಮಾಹಿತಿಯನ್ನು ಕಂಡುಕೊಳ್ಳಬಲ್ಲ ನಿಷ್ಣಾತರನ್ನು ಹೊಂದಿದೆ ಆ ತಂಡದಲ್ಲಿ ತಜ್ಞರು, ನಾನಾ ಕ್ಷೇತ್ರದ ತಂತ್ರಜ್ಞರು ಇದ್ದರು. ಅವರು ಮೂರ್ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿರುವ ಹಿಮಾಲಯದ ಜಿಲ್ಲೆಗಳು, ಪಶ್ಚಿಮ ಘಟ್ಟಗಳಲ್ಲಿನ ಭೀಕರ ಭೂಕುಸಿತಕ್ಕೆ ಕಾರಣವಾದ ಅಂಶಗಳನ್ನು ಹುಡುಕುತ್ತಾ ಹೋದರು. ಅದರಲ್ಲೂ 2006ರಿಂದ ಸಾಕಷ್ಟು ಭೂಕುಸಿತಗಳು ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಆಗಿವೆ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹೆಚ್ಚಿನ ಭೂಕುಸಿತ ಆಗಿವೆ. ಅರುಣಾಚಲ ಪ್ರದೇಶ,ಸಿಕ್ಕಿಂ, ಕೇರಳ,ಮೇಘಾಲಯ, ಮಹಾರಾಷ್ಟ್ರ, ಮಣಿಪುರದ ಕೂಡ ಹೆಚ್ಚಿನ ಭೂಕುಸಿತ ಕಂಡಿವೆ. ಪಶ್ಚಿಮ ಘಟ್ಟಗಳ ಇಡುಕ್ಕಿ ಜಿಲ್ಲೆ, ಹಾಗೂ ಹಿಮಾಲಯ ವ್ಯಾಪ್ತಿಯ ಜಿಲ್ಲೆಗಳ ಭೂಕುಸಿತ ಘಟನೆಗಳನ್ನು ಕೆದಕುತ್ತಾ ಹೋದಾಗ ಮಹತ್ವದ ಅಂಶಗಳು ಬಯಲಾದವು.

ಪ್ರವಾಸೋದ್ಯಮ ಎನ್ನುವುದು ಎಲ್ಲೆಡೆ ಮಿತಿಗಿಂತ ಹೆಚ್ಚು ವಿಸ್ತರಣೆಯಾಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ರಸ್ತೆಗಳ ನಿರ್ಮಾಣ, ಗುಡ್ಡಗಳ ಕಡಿತ, ಅರಣ್ಯ ನಾಶ ನಿರಂತರವಾಗಿ ಆಗಿದೆ. ಇದೆಲ್ಲರದ ಪರಿಣಾಮಗಳು ಭೂಮಿಯ ಮೇಲೆ ಆಗುತ್ತಿದೆ. ಪರಿಸರದಲ್ಲಿನ ವ್ಯತ್ಯಯಗಳು ಹವಾಮಾನ ಬದಲಾವಣೆಗೂ ದಾರಿ ಮಾಡಿಕೊಟ್ಟಿದೆ. ಇದರಿಂದ ಮಳೆಗಳ ಸ್ವರೂಪಗಳೇ ಬದಲಾಗಿವೆ. ಅನಾಹುತಕಾರಿ ಮಳೆಗಳಿಗೆಲ್ಲಾ ಈ ಅನಿಮಿಯತ ಅಭಿವೃದ್ದಿಯೂ ಪರೋಕ್ಷ ಕಾರಣವೂ ಹೌದು.

2022 ಮತ್ತು ಸೆಪ್ಟೆಂಬರ್ 2023 ರ ನಡುವೆ ಹಿಮಾಚಲ ಪ್ರದೇಶದಲ್ಲಿ 150 ಕ್ಕೂ ಹೆಚ್ಚು ಮತ್ತು ಉತ್ತರಾಖಂಡದಲ್ಲಿ ಸುಮಾರು 70 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗದ ಅಂಕಿ ಅಂಶಗಳು ಹೇಳುತ್ತವೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 2001 ಮತ್ತು 2019 ರ ನಡುವೆ ಜನಸಂಖ್ಯಾ ಸಾಂಧ್ರತೆಯಲ್ಲಿ ಶೇ.22 ಮತ್ತು ಶೇ.32 ಹೆಚ್ಚಳ ದಾಖಲಾಗಿರುವುದನ್ನೂ ವರದಿ ಉಲ್ಲೇಖಿಸಿದೆ. ಈಗ ಸಂಪರ್ಕ ಜಾಲ ಬಲಗೊಂಡು ಪ್ರವಾಸೋದ್ಯಮವೂ ಕೈಗೆಟುವಷ್ಟು ಬದಲಾಗಿದೆ.ಭಾರತದ ಯಾವುದೇ ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಕನಿಷ್ಟ ಆರು ಗಂಟೆ ಸಾಕು.

ರಸ್ತೆ ಜಾಲದ ಹೆಚ್ಚಳವು ಗುಡ್ಡಗಾಡು ರಾಜ್ಯಗಳಲ್ಲಿ ಭೂಕುಸಿತ ಸಂಭವಿಸಲು ಕಾರಣವಾಗಬಹುದು ಎಂದು ವರದಿ ಹೇಳುತ್ತದೆ. ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ದೇಶದ ರಸ್ತೆ ಉದ್ದವು 1950 ರಲ್ಲಿ 399,942 ಚದರ ಕಿ.ಮೀ.ನಿಂದ 2021 ರಲ್ಲಿ 6,295,717 ಚ.ಕಿ.ಮೀ.ಗೆ ಏರಿದೆ. ಇದು ಅಭಿವೃದ್ದಿಯ ವೇಗವನ್ನೂ ತೋರಿಸುತ್ತದೆ

ಅದರಲ್ಲೂ ದೆಹಲಿ, ಚಂಡೀಗಢ ಮುಂತಾದ ಹತ್ತಿರದ ನಗರಗಳಿಂದ ತಲುಪುವ ಕಾರಣಕ್ಕೆ ಹಿಮಾಚಲ, ಉತ್ತರಾಖಂಡದ ಪ್ರವಾಸೋದ್ಯಮ ಗಣನೀಯವಾಗಿ ಹೆಚ್ಚಳವಾಗಿದೆ. ಕೇರಳದಲ್ಲಿನ ಪರಿಸರ ಬದಲಾವಣೆಗೆ ಪ್ರವಾಸೋದ್ಯಮದ ಕೊಡುಗೆಯೂ ಅಪಾರವಾಗಿದೆ. ಕರ್ನಾಟಕದಲ್ಲಿನ ಪಶ್ಚಿಮ ಘಟ್ಟಗಳ ಸೆರಗಿನ ಜಿಲ್ಲೆಗಳದ್ದೂ ಇದೇ ಸ್ಥಿತಿ. ಬೆಟ್ಟ, ಗುಡ್ಡ, ಅರಣ್ಯದ ಸಮೀಪದಲ್ಲಿಯೇ ಹೋಂ ಸ್ಟೇ, ರೆಸಾರ್ಟ್‌, ಮನೆಗಳೇ ಅತಿಥಿದೇವೋ ಭವ ಎನ್ನುತ್ತಿದೆ. ಇದು ಪರೋಕ್ಷವಾಗಿ ಅನಾಹುತಗಳಿಗೆ ದಾರಿ ಮೊಡುತ್ತಿದೆ.

ಯೋಜಿತವಲ್ಲದ ನಿರ್ಮಾಣ, ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ದೊಡ್ಡ ಜಲವಿದ್ಯುತ್ ಯೋಜನೆಗಳು ಮಣ್ಣು, ಜಲ್ಲಿ ಮತ್ತು ಸಸ್ಯವರ್ಗವನ್ನು ಸಡಿಲಗೊಳಿಸುತ್ತವೆ ಇದು ಅಂತರ್ಜಲ ಧಾರಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದು ಪ್ರವಾಹದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ವರದಿಯಲ್ಲಿ ತಿಳಿಸಲಾಗಿದೆ..

ಕೇರಳ ಭೂಕುಸಿತಕ್ಕೆ ಕಾರಣಗಳನ್ನು ಅಲ್ಲಿನ ಮಿತಿ ಮೀರಿದ ಅಭಿವೃದ್ದಿ ಹಾಗೂ ಪ್ರವಾಸಿ ಚಟುವಟಿಕೆಗಳ ಫಲ ಎಂದೇ ಸಂಸ್ಥೆಯ ಸಂಶೋಧನೆ ಹೇಳಿದೆ. ಐದು ವರ್ಷಗಳಲ್ಲಿ, ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೈ ಪ್ರವಾಸೋದ್ಯಮದಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದೆ. ಹಲವಾರು ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ತಲೆ ಎತ್ತಿ ಅಲ್ಲಿನ ಪರಿಸರದ ಮಹತ್ವವನ್ನು ಅಳಿಸಿ ಹಾಕಿವೆ.

ಹಿಮಾಲಯದ ರಾಜ್ಯಗಳು ಮತ್ತು ಪಶ್ಚಿಮ ಘಟ್ಟದ ಭಾಗದಲ್ಲಿ ಆಗಾಗ ಭೂಕುಸಿತಕ್ಕೆ ಒಳಗಾಗುತ್ತಿದ್ದರೂ, ಭೂಕುಸಿತಗಳು ಈಗ ಕಳವಳಕಾರಿಯಾಗಿರುವ ಹೊಸ ಹಾಟ್‌ ಸ್ಪಾಟ್‌ ಪ್ರದೇಶಗಳಾಗಿ ಮಾರ್ಪಟ್ಟಿವೆ. ಸರಿಸುಮಾರು ಶೇ 30-40 ಪಟ್ಟಣಗಳು / ನಗರಗಳು ಒಟ್ಟು ನಿರ್ಮಾಣ ಪ್ರದೇಶಗಳನ್ನು ನಿರಂತರವಾಗಿ ವಿಸ್ತರಿಸಿಕೊಂಡಿವೆ. ಈ ಪ್ರದೇಶಗಳು ರಸ್ತೆ ಮೂಲಸೌಕರ್ಯ ಮತ್ತು ಜಲವಿದ್ಯುತ್ ಯೋಜನೆಗಳಂತಹ ಪ್ರಮುಖ ಎಂಜಿನಿಯರಿಂಗ್ ಯೋಜನೆಗಳಲ್ಲಿ ಗಮನಾರ್ಹ ಬೆಳವಣಿಗೆ ಭೂಕುಸಿತದಂತಹ ಅನಾಹುತಗಳಿಗೆ ದಾರಿ ಮಾಡಿಕೊಟ್ಟಿದೆ.
ಭಾರತದ ಒಟ್ಟು ಮೂವತ್ತು ಜಿಲ್ಲೆಗಳಲ್ಲಿ ಭೂಕುಸಿತದ ಹಾಟ್‌ ಸ್ಪಾಟ್‌ಗಳಿವೆ. ಅದರಲ್ಲೂ ಕೇರಳ ಹಾಗೂ ಉತ್ತರಾಖಂಡ ಈ ಪಟ್ಟಿಯಲ್ಲಿ ಹೆಚ್ಚಿನ ಜಿಲ್ಲೆಗಳಿವೆ. ಉತ್ತರ ಖಂಡದ ರುದ್ರ ಪ್ರಯಾಗ, ತೇಹ್ರಿ ಘರವಾಲ್‌, ಚಮೋಲಿ, ಘರವಾಲ್‌, ಡೆಹ್ರಾಡೂನ್‌, ಕೇರಳ ತ್ರಿಶೂರ್‌, ಪಾಲಕ್ಕಾಡ್‌, ಮಲಪ್ಪುರಂ, ಕೋಝಿಕ್ಕೋಡ್‌, ವಯನಾಡ್‌, ಎರ್ನಾಕುಲಂ, ಕೊಟ್ಟಾಯಂ, ಕಣ್ಣೂರು, ತಿರುವಂತಪುರಂ, ಇಡುಕ್ಕಿ, ಜಮ್ಮು ಮತ್ತು ಕಾಶ್ಮೀರದ ರಜೌರಿ, ಪೂಂಚ್‌, ಉಧಂಪುರ, ಜಮ್ಮುಯ, ಸಿಕ್ಕಿಂನ ದಕ್ಷಿಣ ಜಿಲ್ಲೆ, ಪೂರ್ವ ಜಿಲ್ಲೆ, ಪಶ್ಚಿಮ ಜಿಲ್ಲೆ, ಮಣಿಪುರದ ಇಂಫಾಲ, ಹಿಮಾಚಲದ ಮಂಡಿ, ಹಮಿರ್‌ ಪುರ, ಬಿಲಾಸಪುರ್‌ ಈ ಪಟ್ಟಿಯಲ್ಲಿವೆ. ಕರ್ನಾಟದಕ ಕೊಡಗು ಕೂಡ ಪಟ್ಟಿಯಲ್ಲಿರುವ ಕರ್ನಾಟಕದ ಏಕೈಕ ಜಿಲ್ಲೆ.

ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ದುರ್ಬಲ ಇಳಿಜಾರುಗಳನ್ನು ಜೈವಿಕ-ಎಂಜಿನಿಯರಿಂಗ್ ಮತ್ತು ರಚನಾತ್ಮಕ ಜಿಯೋಟೆಕ್ನಿಕಲ್ ಪರಿಹಾರ ಬಳಸಿಕೊಂಡು ತುರ್ತಾಗಿ ಸ್ಥಿರಗೊಳಿಸಬೇಕು.ಇಲ್ಲದೇ ಇದ್ದರೆ ಹಿಮಾಲಯ ಭಾಗದಂತೆಯೇ ಪಶ್ಚಿಮ ಘಟ್ಟ, ಕರ್ನಾಟಕದಲ್ಲೂ ಕೊಡಗು ನಂತರ ಇತರೆ ಜಿಲ್ಲೆಗಳಲ್ಲೂ ಹಾಟ್‌ ಸ್ಪಾಟ್‌ಗಳು ಹೆಚ್ಚಿದರೂ ಅಚ್ಚರಿಯೇ ಇಲ್ಲ. ಇಂತಹ ವರದಿಗಳು ಆಡಳಿತ ನಡೆಸುವವರಿಗೆ ಹಾಗೂ ಈ ಪರಿಸರದಲ್ಲಿ ಬದುಕುವವರಿಗೆ ಎಚ್ಚರಿಕೆಯ ಗಂಟೆ ಆಗಬೇಕಷ್ಟೇ.