Breaking News: ಮಂಗಳೂರಿನ ನದಿಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಸಹೋದರನ ಶವ ಪತ್ತೆ; ಮಹಿಳೆ ಸಹಿತ ಆರು ಮಂದಿ ವಿರುದ್ದ ದೂರು ದಾಖಲು
ಎರಡು ದಿನದ ಹಿಂದೆ ಕಾಣೆಯಾಗಿದ್ದ ಮಂಗಳೂರಿನ ಉದ್ಯಮಿ ಹಾಗೂ ಮಾಜಿ ಶಾಸಕರ ಸಹೋದರ ಮುಮ್ತಾಜ್ ಆಲಿ ಶವ ಮಂಗಳೂರು ಸಮೀಪದಲ್ಲಿಯೇ ಪತ್ತೆಯಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆ ಸಹಿತ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು
ಮಂಗಳೂರು: ನಗರದ ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ ಉದ್ಯಮಿ ಮುಮ್ತಾಝ್ ಅಲಿಯವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ತಕ್ಷಣ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಗೆ ರವಾನಿಸಲಾಗಿದೆ. ರವಿವಾರ ಬೆಳಗ್ಗೆ ಉಡುಪಿ - ಮಂಗಳೂರಿನ ಕೂಳೂರು ಸೇತುವೆಯ ಮೇಲೆ ಮುಮ್ತಾಝ್ ಅವರ ಕಾರು ಅಪಘಾತಗೊಂಡ ರೀತಿಯಲ್ಲಿ ಕುಳೂರು ಸೇತುವೆಯ ಪತ್ತೆಯಾಗಿತ್ತು. ಆದರೆ ಅವರು ಫೋನ್ ಅನ್ನು ಕಾರಿನಲ್ಲಿಯೇ ಇಟ್ಟು ನಾಪತ್ತೆಯಾಗಿದ್ದರು. ಆದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಶಂಕೆಯಲ್ಲಿ ಕೂಳೂರಿನ ಫಲ್ಗುಣಿ ನದಿಯಲ್ಲಿ ರವಿವಾರ ಬೆಳಗ್ಗೆ 8ಗಂಟೆಯಿಂದಲೇ ಹುಡುಕಾಟ ನಡೆಸಲಾಗಿತ್ತು. ಸೋಮವಾರ ಬೆಳಗ್ಗೆ ಸೇತುವೆಯ ಬಳಿಯಲ್ಲಿ ಮೃತದೇಹ ತೇಲುತ್ತಿತ್ತು. ಇದು ಕಾರ್ಯಾಚರಣೆ ನಡೆಸುತ್ತಿದ್ದ ತಂಡಕ್ಕೆ ಗೋಚರವಾಗಿದ್ದು, ಅವರು ಮೃತದೇಹವನ್ನು ಮೇಲಕ್ಕೆತ್ತಿ ತಂದಿದ್ದಾರೆ.
ಮಹಿಳೆ ಸೇರಿದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲು
ಮಾಜಿ ಶಾಸಕ ಮೊಯ್ದೀನ್ ಭಾವ ಸಹೋದರ ಬಿ.ಎಂ.ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ಪೊಲೀಸ್ ದೂರು ದಾಖಲಾಗಿದೆ.
ಮುಮ್ತಾಜ್ ಅಲಿಯವರ ಸಹೋದರ ಹೈದರ್ ಅಲಿಯವರು ಕಾವೂರು ಠಾಣೆಯಲ್ಲಿ ಆರು ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಮಹಿಳೆ ಸಹಿತ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತರ್ ಮತ್ತು ಮುಮ್ತಾಜ್ ಅಲಿಯವರ ಕಾರು ಚಾಲಕ ಸಿರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಮ್ತಾಜ್ ಅಲಿಯವರನ್ನು ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟಿರುವ ಆರೋಪ ಇವರ ಮೇಲಿದೆ.
ರೆಹಮತ್ ಎಂಬ ಮಹಿಳೆ ಬ್ಲ್ಯಾಕ್ ಮೇಲ್ ಮಾಡಿ 50 ಲಕ್ಷಕ್ಕಿಂತಲೂ ಅಧಿಕ ವಸೂಲಿ ಮಾಡಿದ್ದಾಳೆ. ಈ ಮಹಿಳೆಗೆ ಉಳಿದವರ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ. ಆರೋಪಿಗಳು ಈ ಮೊದಲು ಮುಮ್ತಾಜ್ ಆಲಿ ಮೇಲೆ ಹಲ್ಲೆ ಮಾಡಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕಾರಣದಿಂದಲೇ ಅವರು ನಾಪತ್ತೆಯಾಗಿದ್ದರೆ ಎಂದು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)