Karnataka Election: ಮೊಯ್ದೀನ್ ಬಾವಾ ಪರ ಕುಮಾರಸ್ವಾಮಿ ಪ್ರಚಾರ, ಮುಸ್ಲಿಂ ಮತಬ್ಯಾಂಕ್ ಆಗಿಸಿದ್ದು ಕಾಂಗ್ರೆಸ್ ಸಾಧನೆ ಎಂದ ಹೆಚ್‌ಡಿಕೆ
Karnataka Election: ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನಿಂದ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಮೊಯ್ದೀನ್ ಬಾವಾ ಪರ ಭಾನುವಾರ ರಾತ್ರಿ ಹೆಚ್‌ಡಿ ಕುಮಾರಸ್ವಾಮಿ ಪ್ರಚಾರ ನಡೆಸಿದರು.
ಮಂಗಳೂರು: ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯವನ್ನು ಸುದೀರ್ಘ ಕಾಲ ಮತಬ್ಯಾಂಕ್ ಆಗಿ ಬಳಸಿತೇ ವಿನಃ ಯಾವುದೇ ಸೌಲಭ್ಯ ಕೊಡದೆ ವಂಚಿಸಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮೊಯ್ದೀನ್ ಬಾವಾ ಪರ ಚುನಾವಣಾ ಪ್ರಚಾರಕ್ಕೆ ಭಾನುವಾರ ರಾತ್ರಿ ಆಗಮಿಸಿದ ಕುಮಾರಸ್ವಾಮಿ, ಕೃಷ್ಣಾಪುರದಲ್ಲಿ ಆಯೋಜಿಸಲಾದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಅಮಾಯಕರನ್ನು ಬಳಸಿಕೊಂಡು, ಧರ್ಮದ ಹೆಸರಲ್ಲಿ ದಾರಿ ತಪ್ಪಿಸಿ, ಜೀವ ಕಳೆದುಕೊಳ್ಳುವಂಥ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಹಲಾಲ್ ಕಟ್, ಹಿಜಾಬ್ ಸಮಸ್ಯೆಗಳನ್ನು ದೊಡ್ಡದು ಮಾಡಿ ಜಾತಿ, ಧರ್ಮಗಳ ಮಧ್ಯೆ ಕಂದಕಗಳನ್ನು ಸೃಷ್ಟಿಸಲಾಯಿತು. ದ್ವೇಷದ ವಾತಾವರಣವನ್ನು ಉಂಟುಮಾಡಲಾಯಿತು. ಬಿಲ್ಲವ ನಿಗಮ ಎಂದು ಮಾಡಿ, ಚುನಾವಣೆಗಾಗಿ ಮತ ಸೆಳೆಯಲು ಯೋಚಿಸಲಾಯಿತು ಎಂದು ಆಪಾದಿಸಿದ ಕುಮಾರಸ್ವಾಮಿ, ಜನತೆ ಇದನ್ನೆಲ್ಲಾ ಗಮನಿಸುತ್ತಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕುಗಳ ಅಸ್ತಿತ್ವಕ್ಕೆ ಧಕ್ಕೆ ತಂದು ಅವುಗಳ ವಿಲೀನ ಮಾಡಿ, ಇಲ್ಲಿನ ಐತಿಹಾಸಿಕ ಕುರುಹುಗಳನ್ನು ನಾಶ ಮಾಡಿದ ಬಿಜೆಪಿ, ಈಗ ಜಿಲ್ಲೆಗೆ ಕೊಟ್ಟ ಕೊಡುಗಗಳೇನು ಎಂದು ತಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಆಧರಿತ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದ್ದರೂ ಅದು ಅಸಾಧ್ಯವಾಗುತ್ತಿರುವ ಹಿನ್ನೆಲೆ ಅಶಾಂತಿಯೇ ಆಗಿದೆ. ಇಲ್ಲಿ ಶಾಂತಿ, ನೆಮ್ಮದಿ ನೆಲಸಬೇಕು ಎಂದಿದ್ದರೆ, ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಜೆಡಿಎಸ್ ಎಲ್ಲ ಧರ್ಮ, ಮತಗಳಲ್ಲಿ ಏಕತೆಯನ್ನು ಗುರುತಿಸುತ್ತದೆ. ಮೊಯ್ದೀನ್ ಬಾವಾ ಅವರನ್ನು ಗೆಲ್ಲಿಸಿದರೆ, ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವೆ ಎಂದು ಕುಮಾರಸ್ವಾಮಿ ಹೇಳಿದರು.
ದ.ಕ.ಜಿಲ್ಲೆಗೆ ಬೇಕಾಗಿರುವುದೇ ನೆಮ್ಮದಿಯ ಬದುಕು. ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ಕೊಟ್ಟ ಜಿಲ್ಲೆಯನ್ನು ಆರ್ಥಿಕವಾಗಿ ಗಟ್ಟಿಗೊಳಿಸಿ, ಅದನ್ನು ಸರಿಯಾಗಿ ಬಳಸಿದರೆ, ಮಾದರಿ ಜಿಲ್ಲೆಯನ್ನಾಗಿಸಬಹುದು ಎಂದ ಕುಮಾರಸ್ವಾಮಿ, ಜೆಡಿಎಸ್ ಗೆ ಮತ ಹಾಕಿದರೆ, ಬಿಜೆಪಿಗೆ ಮತ ಹಾಕಿದಂತೆ ಎಂದು ಹೇಳುವ ಕಾಂಗ್ರೆಸ್, ಇದೀಗ ಬಿಜೆಪಿ ಬಿಟ್ಟು ಬಂದ ಕಟ್ಟರ್ ಹಿಂದುತ್ವವಾದಿ ನಾಯಕರನ್ನು ಏಕೆ ಸೇರಿಸಿಕೊಂಡಿತು ಎಂದು ಪ್ರಶ್ನಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಬಿ.ಎಂ.ಫಾರೂಕ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಹಂಕಾರದಿಂದ ನಡೆದುಕೊಂಡಾಗ ಮಂಗಳೂರಿನ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಮೊಯ್ದೀನ್ ಬಾವಾ ಅವರನ್ನು ಗೆಲ್ಲಿಸಿ, ಕರಾವಳಿಯಲ್ಲಿ ಖಾತೆ ತೆರೆಯಬೇಕು ಎಂದರು.