Mangalore Crime: ಮಂಗಳೂರು ವಿದ್ಯಾರ್ಥಿನಿ ಕತಾರ್ ನಲ್ಲಿ ಪತ್ತೆ, ಉಳ್ಳಾಲ ಪೊಲೀಸರಿಂದ ಯುವಕನ ವಿಚಾರಣೆ
ಮಂಗಳೂರಿನಲ್ಲಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದಿದೆ. ಆಕೆ ಕತಾರ್‌ನಲ್ಲಿರುವುದು ಗೊತ್ತಾಗಿದ್ದು, ತನಿಖೆ ಚುರುಕಾಗಿದೆ.
ಮಂಗಳೂರು: ಮಂಗಳೂರಿನ ಹೊರವಲಯದಲ್ಲಿ ಪಿ.ಎಚ್.ಡಿ. ವಿದ್ಯಾಭ್ಯಾಸ ಯುವತಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಕತಾರ್ ನಲ್ಲಿರುವ ವಿಚಾರ ಪೊಲೀಸರಿಗೆ ತಿಳಿದುಬಂದಿದೆ. ಅನ್ಯಕೋಮಿನ ಯುವಕನೊಂದಿಗೆ ತೆರಳಿದ್ದಾಳೆ, ಇದು ಲವ್ ಜಿಹಾದ್ ಇರಬಹುದು ಎಂದು ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಇದೀಗ ವಿದ್ಯಾರ್ಥಿನಿ ಕತಾರ್ ನಲ್ಲಿರುವುದು ಗೊತ್ತಾಗಿದೆ.
ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾದ ಯುವಕನನ್ನು ಉಳ್ಳಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವತಿ ಹಿಂದು ಹಾಗೂ ಯುವಕ ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾದ ಕಾರಣ ಈ ನಾಪತ್ತೆ ಪ್ರಕರಣ ಪೊಲೀಸರಿಗೆ ತಲೆನೋವಾಗಿತ್ತು. ಅಲ್ಲದೆ ಮಾದಕ ದ್ರವ್ಯ ವ್ಯಸನದ ಜಾಲ ಇದರ ಹಿಂದೆ ಇದೆಯೇ ಎಂಬ ಕುರಿತು ಸಂಶಯಗಳು ಎದ್ದಿದ್ದವು. ಯುವತಿ ನಾಪತ್ತೆ ಪ್ರಕರಣ ಹಿಂದೆ ಲವ್ ಜಿಹಾದ್ ಹುನ್ನಾರ ಇದೆ ಎಂದು ಬಜರಂಗದಳ ಆರೋಪಿಸಿತ್ತು. ಜತೆಗೆ ಹಿಂದು ಮುಖಂಡ ಅರುಣ್ ಪುತ್ತಿಲ ಅವರೂ ತನಿಖೆಗೆ ಒತ್ತಾಯಿಸಿದ್ದರು.
ಕುತೂಹಲ ಕೆರಳಿಸಿದ್ದ ನಾಪತ್ತೆ ಪ್ರಕರಣ
ಯುವತಿ ಫೆಬ್ರವರಿ 17 ರಂದು ನಾಪತ್ತೆಯಾಗಿದ್ದಳು. ಅಂದು ಬೆಳಗ್ಗೆ 9 ಗಂಟೆಗೆ ಸ್ಕೂಟಿಯಲ್ಲಿ ತೆರಳಿದ ಆಕೆ ವಾಪಸ್ ಪಿಜೆಗೆ ಬಂದಿರಲಿಲ್ಲ. ಪಂಪ್ವೆಲ್ ಬಳಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸುರತ್ಕಲ್ನಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಿದ್ದಳು. ಇದರ ಬೆನ್ನಲ್ಲೇ ಆಕೆಯ ದೊಡ್ಡಪ್ಪ ಠಾಣೆಗೆ ದೂರು ನೀಡಿದ್ದರು. ತನಿಖೆ ವೇಳೆ ಸ್ಕೂಟಿ ಸುರತ್ಕಲ್ ಬಳಿ ಪತ್ತೆಯಾಗಿತ್ತು.
ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಆ ಯುವತಿ ದೇಶವನ್ನೇ ಬಿಟ್ಟು ಹೋಗಿರುವುದು ತಿಳಿದು ಬಂದಿತ್ತು. ಇದನ್ನಾಧರಿಸಿಯೇ ಆಕೆಯ ಕುರಿತು ಇನ್ನಷ್ಟು ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.
ಕತಾರ್ ನಲ್ಲಿದ್ದಾಳೆ ಯುವತಿ, ಯುವಕನೂ ಹಿಂದೆ ಅಲ್ಲಿ ಕೆಲಸ ಮಾಡಿಕೊಂಡಿದ್ದ
ವಿದ್ಯಾರ್ಥಿನಿ ಕತಾರ್ ದೇಶಕ್ಕೆ ವಿಸಿಟಿಂಗ್ ವೀಸಾದ ಮೂಲಕ ಯುವತಿ ತೆರಳಿರುವ ಮಾಹಿತಿ ತಿಳಿದುಬಂದಿದೆ. ಆದರೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದನೆನ್ನಲಾದ ಯುವಕನ ಸ್ನೇಹ ಮಾಡಿದ ಯುವತಿಯ ಪ್ರೇಮ ಪ್ರಕರಣದ ಹಿಂದೆ ಬೇರೆ ಯಾವುದಾದರೂ ಹುನ್ನಾರ ಇರಬಹುದು ಎಂದು ಹಿಂದು ಸಂಘಟನೆಗಳು ಸಂಶಯಿಸಿವೆ.
ಹೇಗೆ ತೆರಳಿದ್ದರು ಯುವಕ, ಯುವತಿ?
ಮಂಗಳೂರಿನ ಹೊರವಲಯದ ಪಿಜಿ ಹಾಸ್ಟೆಲ್ ನಲ್ಲಿದ್ದ ಯುವತಿಗೆ 2017ರಲ್ಲೇ ಯುವಕನ ಪರಿಚಯವಾಗಿದೆ. ಈ ಸ್ನೇಹ ಯುವಕನೊಂದಿಗೆ ಊರು ಬಿಟ್ಟು ತೆರಳುವ ನಿರ್ಧಾರದವರೆಗೆ ಮುಂದೆ ಹೋಗಿದೆ. ಮಂಗಳೂರಿನಿಂದ ಹೊರಟ ಈಕೆ ಬೆಂಗಳೂರಿಗೆ ತೆರಳಿ, ಅಲ್ಲಿಂದ ಬೆಂಗಳೂರಿನಿಂದ ಗೋವಾ-ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕತಾರ್ ದೇಶಕ್ಕೆ ಪ್ರಯಾಣ ಮಾಡಿದ್ದಾಳೆ. ಪಾಸ್ಪೋರ್ಟ್ನಲ್ಲಿ ಎಕ್ಸಿಟ್ ಇರುವ ಕಾರಣ ಯುವಕನಿಗೆ ಯುಎಇ ಪ್ರಯಾಣ ನಿರ್ಬಂಧ ಮಾಡಲಾಗಿದೆ. ಹೀಗಾಗಿ ವಿಸಿಟಿಂಗ್ ವೀಸಾ ಮೂಲಕ ಆಕೆಯನ್ನು ಕಳುಹಿಸಿರುವ ಅನುಮಾನ ವ್ಯಕ್ತವಾಗಿದೆ.ಈ ಎಲ್ಲ ಅನುಮಾನಗಳಿಗೆ ಸೋಮವಾರ ಅಥವಾ ಮಂಗಳವಾರ ಉತ್ತರ ದೊರಕುವ ಸಾಧ್ಯತೆಗಳಿವೆ.
ಮಂಗಳೂರಿನಿಂದ ಯುವತಿ ಕಾಣೆಯಾಗಿರುವ ದೂರಿನ ಕುರಿತು ತನಿಖೆ ಆರಂಭಿಸಿದಾಗ ಸಾಕಷ್ಟು ಕುತೂಹಲಕಾರಿ ಮಾಹಿತಿ ಲಭಿಸಿವೆ. ಆಕೆಯನ್ನು ಕತಾರ್‌ಗೆ ಕರೆದೊಯ್ದಿದ್ದು ಬಯಲಾಗಿದೆ. ಆಕೆಯನ್ನು ಕರೆದೊಯ್ದ ಯುವಕನನ್ನೂ ವಿಚಾರಣೆಗೆ ಒಳಪಡಿಸಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆದಿದೆ. ಇದರ ಹಿಂದಿರುವ ಉದ್ದೇಶ ಏನೂ ಎನ್ನುವುದು ನಿಖರವಾಗಿ ತಿಳಿಯಬೇಕಿದೆ. ಪೊಲೀಸ್ ತಂಡ ಈ ನಿಟ್ಟಿನಲ್ಲಿ ಕೆಲಸ ನಡೆಸಿದೆ ಎಂದು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.