ಮಂಗಳೂರು: ನಿಗೂಢ ಸಾವು ಪ್ರಕರಣಕ್ಕೆ ತಿರುವು, ದೊಡ್ಡಪ್ಪನ ಮಗಳಿಂದಲೇ ಹತ್ಯೆಗೀಡಾದ ತಾರಾನಾಥ ಮುಗೇರ
ಮಂಗಳೂರು ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಕಟೀಲು ಸಮೀಪದ ವ್ಯಕ್ತಿಯದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಮಂಗಳೂರು : ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿ ಕಟೀಲು - ಗಿಡಿಗೆರೆ ನಿವಾಸಿಯ ಸಾವು ಆತ್ಮಹತ್ಯೆಯಲ್ಲ ಎಂಬುದನ್ನು ಬಜಪೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಾರನಾಥ ಮುಗೇರ ಎಂಬಾವರ ಮೃತದೇಹ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾಗಿತ್ತು. ಕುತ್ತಿಗೆಗೆ ಕೇಬಲ್ನಿಂದ ಬಿಗಿದು ಮೃತಪಟ್ಟ ರೀತಿಯಲ್ಲಿ ಶವ ಸಿಕ್ಕಿತ್ತು. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸುವ ವೇಳೆ ಸಂಶಯ ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತಮ್ಮ ಮನೆಯಿಂದ ಸುಮಾರು 100 ಮೀ. ದೂರದಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಅಕ್ಟೋಬರ್ 27ರ ಭಾನುವಾರದಂದು ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸುತ್ತಮುತ್ತ ಸಂಶಯದ ಸುಳಿವುಗಳ ಜಾಡು ಹಿಡಿದು ತನಿಖೆ ನಡೆಸಿದ ಬಜಪೆ ಪೊಲೀಸರು, ಇದು ಕೊಲೆ ಎಂಬುದನ್ನು ತಿಳಿಸಿದ್ದಾರೆ. ಮೃತ ತಾರನಾಥನ ದೊಡ್ಡಪ್ಪನ ಅವಿವಾಹಿತೆ ಮಗಳು ದೇವಕಿ (42) ಎಂಬಾಕೆಯನ್ನು ಕೊಲೆ ಆರೋಪಿ ಎಂಬುದಾಗಿ ಬಹಿರಂಗಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಕುಡಿತದ ಚಟವಿದ್ದ ತಾರನಾಥ ಹಾಗೂ ಆರೋಪಿ ದೇವಕಿ ನಡುವೆ ಪರಸ್ಪರ ಕಿರುಕುಳದ ಮಾತುಗಳು ತನಿಖೆಯ ವೇಳೆ ಕೇಳಿಬಂದಿದ್ದು ನಿಗೂಢವೆನಿಸಿದೆ. ಹೆದರಿಸುವ ಸಲುವಾಗಿ ತಾರನಾಥ ತನ್ನ ಮನೆಯ ಪಕ್ಕವೇ ಇರುವ ದೊಡ್ಡಪ್ಪನ ಮನೆಯ ಬಟ್ಟೆ ಒಣಗಿಸಲು ಕಟ್ಟಿದ್ದ ಕೇಬಲನ್ನು ತಂದು ಕುತ್ತಿಗೆಗೆ ಬಿಗಿದುಕೊಂಡಿದ್ದ ವೇಳೆ ದೇವಕಿ ಅದನ್ನು ಜೋರಾಗಿ ಬಿಗಿದಾಗ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಘಟನೆ ನಡೆದಿದ್ದು ಶನಿವಾರ ರಾತ್ರಿ 7 ಗಂಟೆಯ ಬಳಿಕ. ಸ್ಥಳದಲ್ಲಿ ಜೋಡಿಸಿ ಇಟ್ಟಿದ್ದ ಚಪ್ಪಲಿ, ಸ್ಥಳ ಮಹಜರು ವೇಳೆ ಧೃಡಪಟ್ಟ ಅಂಶಗಳಿಂದ ಪ್ರಕರಣದ ಸುಳಿವು ಸಿಕ್ಕಿತ್ತು ಎನ್ನಲಾಗಿದೆ. ಪ್ರಕರಣದಲ್ಲಿ ತಾರನಾಥನ ಸಹೋದರನನ್ನು ಕೂಡಾ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು.
ತನಿಖೆಗೆ ವಿಶೇಷ ತಂಡ ರಚನೆ
ಪ್ರಕರಣದ ತನಿಖೆಗಾಗಿ ಬಜಪೆ ಇನ್ಸ್ಪೆಕ್ಟರ್ ಸಂದೀಪ್ ಜಿ ಎಸ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿ ಕಟೀಲು - ಗಿಡಿಗೆರೆ ದರ್ಕಾಸುಮನೆ ದೇವಕಿ (42) ಎಂಬಾಕೆಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಮೃತ ತಾರನಾಥ ದಿನವೂ ಕುಡಿದು ಬಂದು ಆತನ ಮನೆಯವರಿಗೂ, ತನಗೂ ಸತತವಾಗಿ ಕಿರುಕುಳ ನೀಡುತ್ತಿದ್ದ ಕಾರಣ ಈ ರೀತಿ ಮಾಡಿರುವುದಾಗಿ ತನಿಖೆಯ ವೇಳೆ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನಷ್ಟು ಕ್ರೈಮ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಬೆಂಗಳೂರು ಕಸವನಹಳ್ಳಿಯಲ್ಲಿ ಪುಂಡರ ರಸ್ತೆ ದೌರ್ಜನ್ಯ; 5 ವರ್ಷದ ಬಾಲಕನಿಗೆ ಗಾಯ, ಕಾರಿನ ಗಾಜು ಒಡೆದ ಆರೋಪಿಗಳ ಗುರುತು ಪತ್ತೆ