ತುಳುನಾಡಿನ ರಾಜಧಾನಿ ಬಾರ್ಕೂರಿನಲ್ಲಿದೆ ದೇಶದ ಏಕೈಕ ಮಹಿಷಾ ದೇವಾಲಯ- ಮಹಿಷಪಂಥ ಕಾಲ್ಪನಿಕವಲ್ಲ: ಪ್ರೊ.ಟಿ. ಮುರುಗೇಶಿ
ಮಹಿಷ ಪಂಥ ಒಂದು ಕಾಲ್ಪನಿಕ ಪಂಥವಲ್ಲ, ಪಶ್ಚಿಮ ಕರಾವಳಿಯಲ್ಲಿ ಇಂದಿಗೂ ಜೀವಂತ ಪಂಥವಾಗಿಯೇ ಇದೆ. ದೇಶದ ಏಕೈಕ ಮಹಿಷಾ ದೇವಾಲಯ ತುಳುನಾಡಿನ ರಾಜಧಾನಿ ಎಂದು ಪ್ರಖ್ಯಾತವಾದ ಬಾರ್ಕೂರಿನಲ್ಲಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿ ಹೇಳಿದ್ದಾರೆ. (ಹರೀಶ ಮಾಂಬಾಡಿ,ಮಂಗಳೂರು)
ಮಂಗಳೂರು: ಮಹಿಷಾ ದಸರಾ ಕುರಿತ ವಿಚಾರಗಳು ಮುನ್ನಲೆಗೆ ಬಂದ ಮೇಲೆ ಮಹಿಷ ಪಂಥದ ಕುರಿತು ಚರ್ಚೆಗಳು ಆರಂಭಗೊಂಡವು. ಕೆಲ ವರ್ಷಗಳಿಂದ ಈ ವಿಚಾರ ಚಾಲ್ತಿಯಲ್ಲಿರುವಾಗಲೇ ಮಹಿಷನ ಆರಾಧನೆ ಇದೆಯೇ ಅಥವಾ ಕೇವಲ ವಿರೋಧಕ್ಕಾಗಿ ವಿರೋಧವೇ ಎಂಬ ಕುರಿತು ವಿಚಾರಗಳು ಮಂಡನೆಯಾದವು. ಇದೀಗ ಪುರಾತತ್ವಶಾಸ್ತ್ರದ ಕುರಿತು ಅಧ್ಯಯನ ನಡೆಸುತ್ತಿರುವ ಉಡುಪಿಯ ಪ್ರೊಫೆಸರ್ ಟಿ.ಮುರುಗೇಶಿ ಅವರ ಪ್ರಕಾರ, ಮಹಿಷ ಪಂಥ ಕಾಲ್ಪನಿಕವಲ್ಲ ಎಂದು ತಿಳಿಸಿದ್ದಾರೆ. ತುಳುನಾಡು ಅಂದರೆ, ಈಗಿನ ಕಾಸರಗೋಡಿನಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರೆಗಿನ ಭೂಭಾಗದಲ್ಲಿ ಬಾರ್ಕೂರು ಅಂದು ರಾಜಧಾನಿಯಾಗಿತ್ತು. ಅಲ್ಲಿ ಮಹಿಷಾ ದೇವಾಲಯವಿತ್ತು ಎನ್ನುತ್ತಾರೆ ಪ್ರೊ.ಮುರುಗೇಶಿ.
ಪ್ರೊ.ಟಿ. ಮುರುಗೇಶಿ ಹೇಳುವುದು ಏನು?
ಮಹಿಷ ಪಂಥ ಒಂದು ಕಾಲ್ಪನಿಕ ಪಂಥವಲ್ಲ, ಪಶ್ಚಿಮ ಕರಾವಳಿಯಲ್ಲಿ ಇಂದಿಗೂ ಜೀವಂತ ಪಂಥವಾಗಿಯೇ ಇದೆ. ದೇಶದ ಏಕೈಕ ಮಹಿಷಾ ದೇವಾಲಯ ತುಳುನಾಡಿನ ರಾಜಧಾನಿ ಎಂದು ಪ್ರಖ್ಯಾತವಾದ ಬಾರ್ಕೂರಿನಲ್ಲಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿ ಹೇಳಿದ್ದಾರೆ.
ಮಹಿಷ ಪದ ತಪ್ಪಾಗಿ ಅರ್ಥೈಸಲಾಗಿದೆ
ಮಹಿಷ ಪದವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಪ್ರೊ. ಮುರುಗೇಶಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ದಸರಾ ಸಂದರ್ಭದಲ್ಲಿ, ಭುಗಿಲೇಳುವ ವಿಷಮ ಸನ್ನಿವೇಶಕ್ಕೆ ಕಾರಣ ಮಹಿಷಪದವನ್ನು ತಪ್ಪಾಗಿ ತಿಳಿದುಕೊಂಡಿರುವುದೇ ಕಾರಣವಾಗಿದೆ. ಮಹಿಷರು ಆಳಿದ ಊರು ಮೈಸೂರು. ಮಹಿಷರ ರಾಜ್ಯ ಮಹಿಷ ಮಂಡಲ. ಮಹಿಷ ಎಂದರೆ ಕೋಣ ಎಂದು ತಪ್ಪಾಗಿ ಅಥೈಸಲಾಗಿದೆ. ಕ್ರಿ.ಶ. 8 ರಿಂದ 9ನೇ ಶತಮಾನದ ಆಳುಪರ ಶಾಸನಗಳಲ್ಲಿ ಮಯ್ಗೇಶ ಎಂಬ ಪದ ಬಳಕೆಯಾಗಿದೆ. ಮಹಿ ಎಂದರೆ ಭೂಮಿ, ಆದ್ದರಿಂದ ಮಹಿಗೆ+ಈಶ>ಮಹೀಷ/ಮಯ್ಗೇಶ. ಈಗಲೂ ಮಹಿಷಿ ಎಂದರೆ ರಾಣಿ ಎಂಬ ಅರ್ಥವೇ ಇದೆ. ಮಹಿಷಿ ರಾಣಿಯಾದರೆ, ಮಹಿಷ ರಾಜನಾಗಬೇಕಲ್ಲವೆ? ಎನ್ನುತ್ತಾರೆ.
ಬಾರಕೂರಿನ ಮಹಿಷ ದೇವಾಲಯದಲ್ಲಿನ ಮಹಿಷ ಶಿಲ್ಪ ಅತ್ಯಂತ ಕುತೂಹಲಕಾರಿಯಾಗಿದೆ. ನಂದಿಯ ತಲೆ ಹಾಗೂ ಮಾನವ ದೇಹದ ರಚನೆಯನ್ನು ಹೊಂದಿರುವ ಈ ಶಿಲ್ಪ, ಮಹಿಷ ಪಂಥದ ದೊರೆಗಳು ನಂದಿಯ ಮುಖವಾಡವನ್ನು ಧರಿಸಿ ಆಳ್ವಿಕೆ ನಡೆಸುತ್ತಿದ್ದರು ಮತ್ತು ನಂದಿಯ ಮುಖವಾಡವನ್ನು ಧರಿಸಿ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದರೆಂಬ ಕುತೂಹಲಕಾರಿ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಮಹಿಷ ದೈವವನ್ನು ಫಲವತ್ತತೆಯ ದೈವವಾಗಿ ಕರಾವಳಿಯಲ್ಲಿ ಆರಾಧಿಸಲಾಗುತ್ತದೆ.
ವೈದಿಕರ ಕೆಂಗಣ್ಣಿಗೆ ಗುರಿಯಾದ ಮಹಿಷ ದೊರೆಗಳು
ಈ ಮಹಿಷ ದೊರೆಗಳು, ವೈದಿಕ ವಿಸ್ತರಣೆಯನ್ನು ತೀವ್ರವಾಗಿ ಪ್ರತಿರೋಧಿಸಿದರ ಫಲವಾಗಿ, ವೈದಿಕರ ಕೆಂಗಣ್ಣಿಗೆ ಗುರಿಯಾದ ಇವರು ಅಸುರ ದೊರೆಗಳೆಂದು ಕರೆಯಲ್ಪಟ್ಟರು. ಆದ್ದರಿಂದ, ಮಹಿಷ ಮಹಿಷಾಸುರನಾದ. ಪುರಾಣಗಳ ಪ್ರಕಾರ ದೇವಿಯು ಮಹಿಷಾಸುರನನ್ನು ಕೊಂದು ಮಹಿಷಮರ್ಧಿನಿ ಎಂದು, ಮೂಕಾಸುರನನ್ನು ಕೊಂದು ಮೂಕಾಂಬಿಕೆ ಎಂದು ಚಂಡ-ಮುಂಡರನ್ನು ಕೊಂದು ಚಾಮುಂಡಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟಳು ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
ಮಹಿಷರು ಯಾರು?
ಸಾಮ್ರಾಟ ಅಶೋಕನ ಪರಿಶ್ರಮದಿಂದ ಬೌದ್ಧ ಧರ್ಮ ದಕ್ಷಿಣ ಭಾರತದಲ್ಲಿ ನೆಲೆಯೂರಿತು. ಬೌದ್ಧ ಧರ್ಮದಲ್ಲಿ ಅನೇಕ ಶಾಖೆಗಳಿವೆ. ಅವುಗಳಲ್ಲಿ ಒಂದು ಮಹಿಷಾಸಿಕ/ಮಹಿಷಿಕ ಎಂಬ ಶಾಖೆ ಬನವಾಸಿ ಮಂಡಲದಲ್ಲಿ ಮತ್ತು ಮಹಿಷ ಮಂಡಲದಲ್ಲಿ ಜನಪ್ರಿಯವಾಗಿತ್ತು. ತಲಕಾಡಿನಲ್ಲಿ ಉತ್ಖನನ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಎಂ.ಎಸ್. ಕೃಷ್ಣಮೂರ್ತಿಯವರು ವಜ್ರದ ಚಿನ್ಹೆಯನ್ನು ಹೊಂದಿರುವ ಒಂದು ಕಂಚಿನ ಅಚ್ಚನ್ನು ಹಾಗೂ ಧರ್ಮಚಕ್ರದ ಅವಶೇಷಗಳನ್ನು ಸಂಶೋಧಿಸಿದ್ದಾರೆ. ಅವರ ಪ್ರಕಾರ, ತಲಕಾಡು ಮಹಿಷ ಮಂಡಲದ ರಾಜಧಾನಿಯಾಗಿತ್ತು. ಮಹಿಷಾಸಿಕ/ಮಹಿಷಿಕ ಬೌದ್ಧ ಶಾಖೆಯ ದೊರೆಗಳೆ ಮಹಿಷ ದೊರೆಗಳಾಗಿ ಆಳ್ವಿಕೆ ನಡೆಸಿದರು. ಸ್ಥಳೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಿ, ವೈದಿಕ ಸಂಸ್ಕೃತಿಯ ವಿಸ್ತರಣೆಯನ್ನು ಪ್ರತಿರೋಧಿಸಿದ ಮಹಿಷನನ್ನು ಕರಾವಳಿಯಲ್ಲಿ ಪ್ರತಿನಿತ್ಯ ಆರಾಧಿಸಲಾಗುತ್ತದೆ ಎನ್ನುತ್ತಾರೆ ಪ್ರೊ.ಮುರುಗೇಶಿ.