Indian Railways: ರೈಲಿನೊಂದಿಗೆ ಪ್ರಕೃತಿ ಸೊಬಗು: ಮಂಗಳೂರಿನ ರೋನಕ್ ಡೆಸಾ ಕ್ಲಿಕ್‌ಗೆ ರೈಲ್ವೆ ಸಚಿವಾಲಯ ಫಿದಾ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ರೈಲಿನೊಂದಿಗೆ ಪ್ರಕೃತಿ ಸೊಬಗು: ಮಂಗಳೂರಿನ ರೋನಕ್ ಡೆಸಾ ಕ್ಲಿಕ್‌ಗೆ ರೈಲ್ವೆ ಸಚಿವಾಲಯ ಫಿದಾ

Indian Railways: ರೈಲಿನೊಂದಿಗೆ ಪ್ರಕೃತಿ ಸೊಬಗು: ಮಂಗಳೂರಿನ ರೋನಕ್ ಡೆಸಾ ಕ್ಲಿಕ್‌ಗೆ ರೈಲ್ವೆ ಸಚಿವಾಲಯ ಫಿದಾ

ಫೋಟೋಗಳಿರುವುದೇ ಹಾಗೆ. ಸಾವಿರ ಪದಗಳನ್ನು ಒಂದು ಫೋಟೋ ಹೇಳಿಬಿಡುತ್ತೆ ಎಂಬ ವ್ಯಾಖ್ಯೆಯೇ ಇದೆ. ಪ್ರಕೃತಿ ಸೊಬಗು ಮತ್ತು ಭಾರತೀಯ ರೈಲ್ವೆ ಈ ಕಾನ್ಸೆಪ್ಟ್‌ ಇಟ್ಟುಕೊಂಡು ಸಾವಿರಾರು ಫೋಟೋ ಕ್ಲಿಕ್ಕಿಸಿದ ಮಂಗಳೂರಿನ ರೋನಕ್ ಡೇಸಾ ರೈಲ್ವೆ ಸಚಿವಾಲಯದ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಹರೀಶ್ ಮಾಂಬಾಡಿ ಅವರಿಂದ ಈ ಕುರಿತು ವಿಶೇಷ ವರದಿ.

ರೈಲಿನೊಂದಿಗೆ ಪ್ರಕೃತಿ ಸೊಬಗನ್ನು ಕ್ಯಾಮೆರಾ ಮೂಲಕ ಸೆರೆಹಿಡಿಯುತ್ತಿರುವ ಮಂಗಳೂರಿನ ರೋನಕ್ ಡೆಸಾ ಕ್ಲಿಕ್‌ಗೆ ರೈಲ್ವೆ ಸಚಿವಾಲಯ ಫಿದಾ ಆಗಿದೆ.
ರೈಲಿನೊಂದಿಗೆ ಪ್ರಕೃತಿ ಸೊಬಗನ್ನು ಕ್ಯಾಮೆರಾ ಮೂಲಕ ಸೆರೆಹಿಡಿಯುತ್ತಿರುವ ಮಂಗಳೂರಿನ ರೋನಕ್ ಡೆಸಾ ಕ್ಲಿಕ್‌ಗೆ ರೈಲ್ವೆ ಸಚಿವಾಲಯ ಫಿದಾ ಆಗಿದೆ.

ಮಂಗಳೂರು: ರೈಲು ಪ್ರಯಾಣ ಬೆಳೆಸುವವರ ಪೈಕಿ, ಕ್ಯಾಮರಾ ಬಳಸುವವರು ಸುಮ್ಮನೆ ಕೂರುವುದಿಲ್ಲ. ಕಿಟಕಿ, ಬಾಗಿಲುಗಳಿಂದ ಇಣುಕಿ, ಹೊರಗಿನ ಸೌಂದರ್ಯವನ್ನು ಸೆರೆಹಿಡಿಯುತ್ತಾರೆ. ಅಂಥ ಲಕ್ಷಾಂತರ ಫೊಟೋಗಳು ಸ್ನೇಹಿತರ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಶೇರ್ ಆಗುತ್ತವೆ. ರೈಲ್ವೆ ಪ್ರಯಾಣದ ಕ್ಷಣಕ್ಷಣದ ಸವಿಯನ್ನು ಅದು ನೀಡುತ್ತದೆ. ಆದರೆ ಮಂಗಳೂರಿನ ಹುಡುಗ ರೋನಕ್ ಡೆಸಾ ಹಾಗಲ್ಲ. ರೈಲನ್ನು, ರೈಲುಯಾನವನ್ನು ಅತಿಯಾಗಿ ಪ್ರೀತಿಸುವ ಈ ವಿದ್ಯಾರ್ಥಿ, ರೈಲು ಹಾಗೂ ಪ್ರಕೃತಿಯ ಸೊಬಗಿನ ನೋಟದ ನೂರಾರು ಫೊಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಅವುಗಳನ್ನು ಪ್ರಬಲವಾದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅವು ರೈಲ್ವೆ ಸಚಿವಾಲಯದ ಗಮನ ಸೆಳೆದಿದೆ.

ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜಿನ ಬಿಬಿಎ ವಿದ್ಯಾರ್ಥಿ ರೋನಕ್ ಡೇಸಾ ಅವರು ಕ್ಲಿಕ್ಕಿಸಿದ ದೇಶದ ಪಾಕೃತಿಕ ಸೊಬಗಿನ ನಡುವೆ ಸಂಚರಿಸುವ ರೈಲುಗಳ ಆಕರ್ಷಕ ಪೋಟೋಗಳಿಗೆ ರೈಲ್ವೆ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಮಾತ್ರವಲ್ಲದೆ ಇವರ ಫೋಟೋಗಳನ್ನು ಇಲಾಖೆಯ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲೂ ಬಳಸಿಕೊಂಡಿದೆ.

ರೋನಕ್ ಡೆಸಾ ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಕೃತಿ ವಿಸ್ಮಯ ಹಾಗೂ ರೈಲುಗಳೇ ಕಾಣಸಿಗುತ್ತವೆ. ಅನೇಕ ವೀಡಿಯೋಗಳನ್ನು ಅವರು ತಮ್ಮ ಯೂಟ್ಯೂಬ್ ಚ್ಯಾನಲ್ ಗಳಲ್ಲಿಯೂ ಹಂಚಿಕೊಂಡಿದ್ದಾರೆ. ಇಷ್ಟೆಲ್ಲಾ ಮಾಡಲು ನನಗೆ ರೋಲ್ ಮಾಡೆಲ್ ನನ್ನಜ್ಜ ದಿ.ವಿಕ್ಟರ್ ರಸ್ಕಿನ್ಹಾ ಕಾರಣ ಎಂದು ಹೇಳುತ್ತಾರೆ ರೋನಕ್.

ಬಾಲ್ಯದಲ್ಲೇ ರೈಲಿನತ್ತ ಆಸಕ್ತಿ ಬೆಳೆಸಿಕೊಂಡ ರೋನಕ್

ರೋನಕ್ ಡೆಸಾ ಅವರು ದೇಶದ ರಮಣೀಯ ಸ್ಥಳಗಳಲ್ಲಿ ತೆಗೆದ ರೈಲುಗಳ ಆಕರ್ಷಕ ಚಿತ್ರಗಳು ಇವು. ಬಾಲ್ಯದ ದಿನಗಳಿಂದಲೇ ತನ್ನ ಅಜ್ಜನ ಜೊತೆ ರೈಲು ಪ್ರಯಾಣ ಮಾಡುತ್ತಿದ್ದ. ಈ ಸಂದರ್ಭ, ರೈಲಿನ ಸದ್ದು, ಅದರ ಸೌಂದರ್ಯ, ಪ್ರಯಾಣಿಕರ ಕಲರವ, ಹೊರಗಿನ ನೋಟದತ್ತ ಆಕರ್ಷಿತರಾಗಿದ್ದರು. ಪ್ರಥಮ ಪಿಯುಸಿಯಲ್ಲಿದ್ದಾಗ ಸ್ಟಿಲ್ ಕ್ಯಾಮರಾ ಸಿಕ್ಕಿದ ಮೇಲೆ ಅವರ ಒಲವು ಉತ್ಸಾಹಕ್ಕೆ ತಿರುಗಿತು. ಅಂದಿನಿಂದ, ಕಾಡುಗಳು, ಜಲಪಾತಗಳು, ಮೋಡ, ಪರ್ವತ, ಸುರಂಗಗಳು, ಸೇತುವೆಗಳು ಮತ್ತು ರೈಲುಗಳ ಚಿತ್ರಗಳನ್ನು ಕ್ಲಿಕ್ ಮಾಡಲು ಆರಂಭಿಸಿದರು. ಎಲ್ಲ ಮಕ್ಕಳು ಸಿನಿಮಾ ನೋಡುವುದೋ ಅಥವಾ ಬೇರಿನ್ನಾವುದೋ ಕೆಲಸಗಳನ್ನು ಮಾಡುವ ಮೂಲಕ ಬಿಡುವಿನ ವೇಳೆ ಕಳೆದರೆ, ರೋನಕ್, ದೇಶದ ರಮಣೀಯ ಸ್ಥಳಗಳಿಗೆ ಪ್ರಯಾಣಿಸಲು ಬಿಡುವಿನ ಸಮಯವನ್ನು ಬಳಸಿಕೊಂಡರು. ಅದರ ಫಲವೇ ಈ ಚಿತ್ರಗಳು.

ಕಳೆದ ನಾಲ್ಕು ವರ್ಷಗಳಲ್ಲಿ, ಅವರು ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ನೂರಾರು ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ, ಸ್ಥಳೀಯ ಪರಂಪರೆ, ಸಂಸ್ಕೃತಿ, ಪಾಕಪದ್ಧತಿ, ಜನಸಮುದಾಯದ ಕುರಿತು ಫೊಟೋಗಳನ್ನು ತೆಗೆದಿದ್ದಾರೆ.

ಈ ಕುರಿತು ಹಿಂದುಸ್ಥಾನ್ ಟೈಮ್ಸ್ ಕನ್ನಡ ಜೊತೆ ಮಾತನಾಡಿದ ರೋನಕ್, ‘’ನನಗೆ ಚಿಕ್ಕಂದಿನಿಂದಲೇ ರೈಲ್ವೆ ಕುರಿತು ಆಸಕ್ತಿ ಇತ್ತು. ಫೊಟೋಗ್ರಫಿಯನ್ನು ಮಾಡಲು ಆರಂಭಿಸಿದ ಮೇಲೆ ಅದರ ಕುರಿತ ಮೋಹಕ್ಕೆ ಉತ್ತಮ ಸಾಥ್ ದೊರಕಿತು. ಚಲಿಸುವ ರೈಲುಗಳ ಸಹಿತ ವಿವಿಧ ಚಿತ್ರಗಳನ್ನು ತೆಗೆದಿದ್ದೇನೆ. INSTAGRAMನಲ್ಲಿ ಅವುಗಳನ್ನು ರೈಲ್ವೆ ಸಚಿವಾಲಯಕ್ಕೆ ಟ್ಯಾಗ್ ಮಾಡಿ ಪೋಸ್ಟ್ ಮಾಡುತ್ತಿದ್ದೆ. ನನ್ನ ಚಿತ್ರಗಳು ತುಂಬಾ ಶೇರ್ ಆಗುತ್ತಿದ್ದವು. ಅದೃಷ್ಟವೆಂಬಂತೆ ರೈಲ್ವೆ ಸಚಿವಾಲಯ ನನ್ನ ಚಿತ್ರಗಳನ್ನು ಗುರುತಿಸಿದೆ’’.

‘’ರೈಲ್ವೆ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ನನ್ನ ಫೋಟೋಗಳನ್ನು ಇಷ್ಟಪಟ್ಟಿವೆ. ಚಿತ್ರಗಳನ್ನು ಫೇಸ್‌ ಬುಕ್‌ ಮತ್ತು ಇನ್ ಸ್ಟಾಗ್ರಾಂ ಖಾತೆ ರೈಲ್‌ಬಾಯ್‌ರಾನ್‌(railboyron)ನಲ್ಲಿ ಪೋಸ್ಟ್‌ ಮಾಡುತ್ತಿದ್ದೆ. ಈ ಚಿತ್ರಗಳು ರೈಲ್ವೆ ಸಚಿವಾಲಯದ ಗಮನ ಸೆಳೆದಿತ್ತು, ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಧಿಕಾರಿಗಳು ನನ್ನನ್ನು ಸಂಪರ್ಕಿಸಿದ್ದಾರೆ. ಬಳಿಕ ಇಲಾಖೆಯವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ‘ರೈಲ್ವೆ ಸಚಿವಾಲಯ ಇದುವರೆಗೆ ನನ್ನ 12ರಿಂದ 15 ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದೆ. ಅಲ್ಲದೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಇದನ್ನು ಬಳಸಿಕೊಂಡಿವೆ’’ ಎಂದು ರೋನಕ್ ಡೆಸಾ ಹೇಳಿದರು.

ರೋನಕ್‌ ಡೇಸಾ. ಸೇವೆಯನ್ನು ಗುರುತಿಸಿ, ವಿಐಪಿ ಪಾಸ್‌ ನೊಂದಿಗೆ ಧಾರವಾಡ-ಬೆಂಗಳೂರು ಮತ್ತು ಕಾಸರಗೋಡು- ತಿರುವನಂತಪುರಂ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಫ್ಲ್ಯಾಗ್‌ ಆಫ್‌ ಕಾರ್ಯಕ್ರಮಕ್ಕೆ ಇಲಾಖೆ ಆಹ್ವಾನಿಸಿತ್ತು. ರೋನಕ್ ಡೆಸಾ ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಕೃತಿ ವಿಸ್ಮಯ ಹಾಗೂ ರೈಲುಗಳೇ ಕಾಣಸಿಗುತ್ತವೆ. ಅನೇಕ ವೀಡಿಯೋಗಳನ್ನು ಅವರು ತಮ್ಮ ಯೂಟ್ಯೂಬ್ ಚ್ಯಾನಲ್ ಗಳಲ್ಲಿಯೂ ಹಂಚಿಕೊಂಡಿದ್ದಾರೆ.

ರೋನಕ್‌ ಡೇಸಾ ಅವರ ಸೋಷಿಯಲ್ ಮೀಡಿಯಾ ಹ್ಯಾಂಡಲ್ಸ್

Instagram Link : https://instagram.com/railboyron?igshid=OGQ5ZDc2ODk2ZA==

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner