ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರುಮುಖ, 70 ರೂ. ತಲುಪಿದ ಕೆಜಿ ಬೆಲೆ; ಕೇಂದ್ರ ಸರ್ಕಾರದ ಈರುಳ್ಳಿ ಸಂಚಾರಿ ವಾಹನ ಬರುವುದು ಯಾವಾಗ?
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರುಮುಖ, 70 ರೂ. ತಲುಪಿದ ಕೆಜಿ ಬೆಲೆ; ಕೇಂದ್ರ ಸರ್ಕಾರದ ಈರುಳ್ಳಿ ಸಂಚಾರಿ ವಾಹನ ಬರುವುದು ಯಾವಾಗ?

ಕರ್ನಾಟಕದಲ್ಲಿ ಈರುಳ್ಳಿ ದರ ಮತ್ತೆ ಏರುಮುಖ, 70 ರೂ. ತಲುಪಿದ ಕೆಜಿ ಬೆಲೆ; ಕೇಂದ್ರ ಸರ್ಕಾರದ ಈರುಳ್ಳಿ ಸಂಚಾರಿ ವಾಹನ ಬರುವುದು ಯಾವಾಗ?

ಈರುಳ್ಳಿ ದರಗಳು ಕರ್ನಾಟಕದಲ್ಲಿ ಹಬ್ಬಗಳ ಸಾಲಿನ ಮುನ್ನವೇ ಹೆಚ್ಚಿದೆ. ಈಗಾಗಲೇ ಈರುಳ್ಳಿ ಕೆಜಿ ದರ 70 ರೂ.ಗಳನ್ನು ತಲುಪಿದ್ದು, ಇನ್ನಷ್ಟು ಹೆಚ್ಚಳವಾಗುವ ಆತಂಕವಿದೆ.

ಈರುಳ್ಳಿ ದರಗಳು ಕರ್ನಾಟಕವಾಗಿ ನಿರಂತರವಾಗಿ ಏರಿಕೆ ಕಾಣುತ್ತಲೇ ಇವೆ.
ಈರುಳ್ಳಿ ದರಗಳು ಕರ್ನಾಟಕವಾಗಿ ನಿರಂತರವಾಗಿ ಏರಿಕೆ ಕಾಣುತ್ತಲೇ ಇವೆ.

ಬೆಂಗಳೂರು: ಕರ್ನಾಟಕದಲ್ಲಿ ಈರುಳ್ಳಿ ದರ ಇಳಿಕೆಯ ಲಕ್ಷಣಗಳೇ ಕಾಣಿಸುತ್ತಿಲ್ಲ.ಕೆಲವು ದಿನಗಳಿಂದ ಈರುಳ್ಳಿ ದರ ಏರುಗತಿಯಲ್ಲೇ ಸಾಗಿದ್ದು. ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆ ಸಿಗುತ್ತಿದೆ. ಈಗ ಕರ್ನಾಟಕದ ಬೆಂಗಳೂರು,ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಈರುಳ್ಳಿ ದರ ಕೆಜಿಗೆ 60 ರೂ. ತಲುಪಿದೆ. ಒಂದು ವಾರದಲ್ಲಿಯೇ ಕೆಜಿ ಈರುಳ್ಳಿ ಬೆಲೆಯು ಹತ್ತು ರೂ.ಗಳಷ್ಟು ಹೆಚ್ಚಾಗಿದೆ. ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಕಡಿಮೆಯಾಗಿರುವುದರಿಂದ ದರ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಈ ವಾರಾಂತ್ಯದ ಹೊತ್ತಿಗೆ ದರ ಕೆಜಿಗೆ 70 ರೂ. ದಾಟುವ ಆತಂಕವೂ ಇದೆ. ದಸರಾ ಹಾಗೂ ದೀಪಾವಳಿ ಹಬ್ಬ ಬರುತ್ತಿರುವುದರಿಂದ ಈರುಳ್ಳಿ ದರ ಮತ್ತಷ್ಟು ಹೆಚ್ಚಬಹುದೆ ಎನ್ನುವ ಆತಂಕವೂ ಗ್ರಾಹಕರಲ್ಲಿದೆ.

ಉತ್ಪಾದನೆ ಲೆಕ್ಕಾಚಾರ

ಕರ್ನಾಟಕದ ಹಲವು ಭಾಗಗಳಲ್ಲ ಈರುಳ್ಳಿ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕ ಜಿಲ್ಲೆಗಳು, ದಕ್ಷಿಣ ಕರ್ನಾಟಕದ ಚಾಮರಾಜನಗರ ಸಹಿತ ಹಲವು ಕಡೆಗಳಲ್ಲಿ ಈರುಳ್ಳಿಯೇ ಪ್ರಮುಖ ಬೆಳೆ. ಈರುಳ್ಳಿ ಬೆಳೆಯನ್ನು ಮೂರು ಋತುಗಳಲ್ಲಿ ಕೊಯ್ಲು ಮಾಡಲಾಗುತ್ತದೆ. ಮಾರ್ಚ್-ಮೇನಲ್ಲಿ ರಬಿ, ಸೆಪ್ಟೆಂಬರ್-ನವೆಂಬರ್‌ ನಲ್ಲಿ ಖಾರಿಫ್ ಮತ್ತು ಜನವರಿ-ಫೆಬ್ರವರಿಯಲ್ಲಿ ಕೊನೆಯಲ್ಲಿ ಖಾರಿಫ್ ಉತ್ಪಾದನೆಗೆ ಸಂಬಂಧಿಸಿದಂತೆ, ರಬಿ ಬೆಳೆ ಒಟ್ಟು ಉತ್ಪಾದನೆಯ ಸರಿಸುಮಾರು ಶೇ. 70 ರಷ್ಟಿದೆ.

ಖಾರಿಫ್ ಮತ್ತು ತಡವಾದ ಖಾರಿಫ್ ಒಟ್ಟಿಗೆ ಶೇ. 30 ರಷ್ಟಿದೆ. ರಬಿ ಮತ್ತು ಗರಿಷ್ಠ ಖಾರಿಫ್ ಆಗಮನದ ನಡುವಿನ ನೇರ ತಿಂಗಳುಗಳಲ್ಲಿ ಖಾರಿಫ್ ಈರುಳ್ಳಿ ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ವರ್ಷ ಖಾರಿಫ್ ಈರುಳ್ಳಿ ಬೆಳೆಯುವ ಗುರಿ 3.61 ಲಕ್ಷ ಹೆಕ್ಟೇರ್ ಇಟ್ಟುಕೊಳ್ಳಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 27 ಹೆಚ್ಚಾಗಿದೆ. ಕರ್ನಾಟಕದಲ್ಲಿ, ಖಾರಿಫ್ ಈರುಳ್ಳಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ, ಅದರ ಗುರಿಯ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ 30 ಬಿತ್ತನೆ ಪೂರ್ಣಗೊಂಡು ಬೆಳೆಯೂ ಬಂದಿತ್ತು. ಎರಡು ತಿಂಗಳಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದರಿಂದ ಇಳುವರಿಯೂ ಕುಂಠಿತವಾಗಿದೆ. ಕೆಲವೆಡೆ ಈರುಳ್ಳಿ ಕೊಳೆತು ಹೋದ ಸನ್ನಿವೇಶವೂ ಎದುರಾಗಿದೆ. ಇದರಿಂದ ಬೆಲೆ ಏರಿಕೆಯಾಗಿರಬಹುದು ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.

ಹೇಗಿದೆ ಮಾರುಕಟ್ಟೆ

ಕಳೆದ ವರ್ಷ ಉತ್ಪಾದನೆಗೆ ಹೋಲಿಸಿದರೆ ರಬಿ-2024 ಋತುವಿನಲ್ಲಿ ಈರುಳ್ಳಿಯ ಉತ್ಪಾದನೆಯು ಸ್ವಲ್ಪಮಟ್ಟಿಗೆ ಕಡಿಮೆಯಾದರೂ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆ ಆಗಸ್ಟ್‌ವರೆಗೂ ಚೆನ್ನಾಗಿತ್ತು. ಇದರಿಂದ ದರದಲ್ಲಿ ಸ್ಥಿರತೆ ಇತ್ತು. ಈಗ ಮಾರುಕಟ್ಟೆಗೆ ಬರುವ ಈರುಳ್ಳಿ ಪ್ರಮಾಣ ಕುಸಿದಿದ್ದರಿಂದ ದರವೂ ಎರಡು ಪಟ್ಟು ಹೆಚ್ಚಾಗಿದೆ.

ಕರ್ನಾಟಕದ ನಾನಾ ಭಾಗಗಳಿಂದ ಬರುತ್ತಿರುವ ಈರುಳ್ಳಿ ಜತೆಗೆ ಮಹಾರಾಷ್ಟ್ರ ಮಾರುಕಟ್ಟೆಯಿಂದಲೂ ಬರುತ್ತಿದೆ. ಹೀಗಿದ್ದರೂ ಗುಣಮಟ್ಟದ ಈರುಳ್ಳಿ ಕಡಿಮೆಯಾಗಿರುವ ಜತೆಗೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಲಭ್ಯವಾಗದೇ ದರ ಏರಿಕೆ ಕಂಡಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ವೇಳೆ ಬೇಡಿಕೆ ಹೆಚ್ಚಿದರೆ ದರವೂ ಅಧಿಕವಾಗಬಹುದು ಎನ್ನಲಾಗುತ್ತಿದೆ.

ಮೈಸೂರಿನಲ್ಲಿಯೇ ಎರಡು ತಿಂಗಳ ಹಿಂದೆ ಕೆಜಿ ಈರುಳ್ಳಿ ಬೆಲೆ 30 ರಿಂದ 35 ರೂ. ಇತ್ತು. ಈಗ ಅದು 60 ರಿಂದ 70 ರೂ. ತಲುಪಿದೆ. ಬೆಂಗಳೂರಿನಲ್ಲಿಯೂ ಇದೇ ಸನ್ನಿವೇಶ. ಮಂಗಳೂರು. ಶಿವಮೊಗ್ಗ ಸಹಿತ ಹಲವು ಕಡೆಗಳಲ್ಲೂ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಕೆಜಿಗೆ 60 ರೂ. ದಾಟಿದೆ. ಇದು ಗ್ರಾಹಕರಿಗೆ ಕಣ್ಣೀರು ತರಿಸುವಂತಾಗಿದೆ.

ಕೇಂದ್ರದ ವಾಹನ ಯಾವಾಗ

ಕಳೆದ ವಾರ ದೆಹಲಿಯಲ್ಲಿ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡುವ ವಾಹನಕ್ಕೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ್ದರು. ಅದರಲ್ಲೂ 35 ರೂ. ಕೆಜಿ ಬೆಲೆಯಲ್ಲಿ ಮಾರಾಟ ಮಾಡುವ ಸಂಚಾರಿ ವಾಹನಗಳಿಗೆ ಹಸಿರು ನಿಶಾನೆ ತೋರಲಾಗಿತ್ತು.

ದೆಹಲಿಯ ಎನ್‌ ಸಿಆರ್ ಮತ್ತು ಮುಂಬೈನಲ್ಲಿ ಈರುಳ್ಳಿ ಚಿಲ್ಲರೆ ವಿತರಣೆ ಆರಂಭವಾಗಿದೆ. ಮುಂದಿನ ವಾರದಲ್ಲಿ ಬೆಂಗಳೂರು ಸೇರಿದಂತೆ ಕೋಲ್ಕತ್ತಾ, ಗುವಾಹಟಿ, ಹೈದರಾಬಾದ್, ಚೆನ್ನೈ, ಅಹಮದಾಬಾದ್, ರಾಯಪುರ ಮತ್ತು ಭುವನೇಶ್ವರದಲ್ಲಿ ಕಡಿಮೆ ಬೆಲೆಯಲ್ಲಿ ಈರುಳ್ಳಿ ವಿತರಣೆ ಶುರುವಾಗಲಿದೆ. ಸೆಪ್ಟೆಂಬರ್ 3ನೇ ವಾರದಲ್ಲಿ ದೇಶಾದ್ಯಂತ ವಿತರಣೆ ಅಗಲಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದರು. ಈವರೆಗೂ ಕರ್ನಾಟಕದಲ್ಲಿ ವಿತರಣೆ ಶುರುವಾಗಿಲ್ಲ. ಬೆಲೆ ಏರಿಕೆ ಅಧಿಕವಾಗುತ್ತಿರುವಾಗ ಕಡಿಮೆ ದರದಲ್ಲಿ ಬೆಂಗಳೂರಲ್ಲಿ ಈರುಳ್ಳಿ ಸಿಗುವುದು ಯಾವಾಗ, ನಂತರ ಕರ್ನಾಟಕದ ಎಲ್ಲೆಡೆ ಯಾವಾಗ ಕೊಡುತ್ತೀರಿ ಎನ್ನುವ ಪ್ರಶ್ನೆಯೂ ಎದುರಾಗಿದೆ.

Whats_app_banner