Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ದೃಷ್ಟಿ ವಿಕಲಚೇತನರ ಕವಿಗೋಷ್ಠಿ; ಮೊದಲ ಬಾರಿ ವೇದಿಕೆ ಏರಿದರು ಅಂಧಕವಿಗಳು
Mandya Sahitya Sammelana: ಮಂಡ್ಯದಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಇತಿಹಾಸ ನಿರ್ಮಾಣವಾಯಿತು. ಅಂಧ ಕವಿಗಳ ಕವಿಗೋಷ್ಠಿ ವಿಶೇಷವಾಗಿತ್ತು.
ಮಂಡ್ಯ: ಮಂಡ್ಯದಲ್ಲಿ ಶುಕ್ರವಾರ ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೊಸ ಇತಿಹಾಸ ಬರೆಯಿತು. ಈವರೆಗೂ ಪ್ರತಿ ಸಮ್ಮೇಳನದಲ್ಲಿ ಕವಿಗೋಷ್ಠಿಗಳು ನಡೆಯುವುದು ಸಾಮಾನ್ಯವಾಗಿತ್ತು. ಈ ಬಾರಿ ಮೂರು ಕವಿಗೋಷ್ಠಿಗಳಿದ್ದರೂ ವಿಭಿನ್ನ ಕವಿಗೋಷ್ಠಿ ನಡೆಯಿತು. ಅದು ಅಂಧರ ಕವಿಗೋಷ್ಠಿ, ರಾಜಮಾತೆ ಕೆಂಪನಂಜಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ನಡೆದ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಸಾಹಿತ್ಯ ಸಮ್ಮೇಳನದ ಇತಿಹಾಸದ ಪುಟದಲ್ಲಿ ಇದೇ ಮೊದಲಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿಗೆ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಯಿತು.ಬಾಪು ಖಾಡೆ, ಹರೀಶ್ ಸಿ, ಹೇಮಂತ ಕುಮಾರ್, ಜಯನಂದಾ ಟೋಪುಗೋಳು, ರಮಾ ಫಣಿಭಟ್ ಗೋಪಿ, ಸೋಮಶೇಖರ್ ಬಳೆಗಾರ್, ಶಿವಸ್ವಾಮಿ ಚೀನಕೇರ, ಟಿ. ಎಂ. ತೋಟಯ್ಯ, ಡಾ. ಕೃಷ್ಣ ಹೊಂಬಾಳ, ಡಾ. ಆನಂದ್ ಇಂದೂರಾ ಅವರು ಕವನ ವಾಚಿಸಿದರು.
ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿದ್ದ ಅಂಧ ಸಾಧಕರು ತಾವು ರಚಿಸಿದ ಕವನ ವಾಚಿಸಿದಾಗ ಭಾರೀ ಕರತಾಡನವೇ ಕೇಳಿ ಬಂದಿತು. ಕೆಲವು ಕವಿಗಳ ಸಾಲುಗಳು ಅರ್ಥಪೂರ್ಣವೂ ಆಗಿದ್ದವು.
ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರಿ ಹೇರೂರ ಅವರ ಅಧ್ಯಕ್ಷತೆಯಲ್ಲಿ ಆಶಯ ನುಡಿಗಳನ್ನಾಡಿದ ಸಾಹಿತಿ ಮುದಿಗೆರೆ ರಮೇಶ್ ಕುಮಾರ್ ಅವರು, ನಮ್ಮ ಬದುಕೇ ಒಂದು ಸವಾಲು ಅದರಲ್ಲೂ ಕಾವ್ಯ ಕಟ್ಟುವುದೇ ಸವಾಲು. ಸವಾಲಿನ ಬದುಕಿನಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಬದುಕಿಗಿಂತ ಬರಹ ಮುಖ್ಯ. ದೃಷ್ಟಿ ವಿಶೇಷಚೇತನರ ಕವಿಗೋಷ್ಠಿ ಆಯೋಜಿಸುವ ಮೂಲಕ ಸಾಹಿತ್ಯ ಪರಿಷತ್ತು ಐತಿಹಾಸಿಕ ಕಾರ್ಯಕ್ಕೆ ಮುನ್ನುಡಿ ಬರೆದಿದ್ದು ಮುಂದಿನ ದಿನಗಳಲ್ಲಿ ದೃಷ್ಟಿ ವಿಶೇಷಚೇತನರ ಕೃತಿಗಳನ್ನು ಚಿಂತನೆಗೆ ಒಳಪಡಿಸುವ ಕಾರ್ಯವಾಗಲಿ ಎಂದರು.
ಈ ಸಂದರ್ಭದಲ್ಲಿ ನಾಲ್ವರನ್ನು ನಾವು ನೆನೆಯಬೇಕು. ಬರಗೂರು ರಾಮಚಂದ್ರಪ್ಪ ಅವರು ಅಂಧರ ಕವಿಗೋಷ್ಠಿಗೆ ಮುನ್ನುಡಿ ಬರೆದರು. ಸಿದ್ದಲಿಂಗಯ್ಯ ಅವರು 50 ಕೃತಿಗಳನ್ನು ಬ್ರೈಲಿ ಲಿಪಿಯಲ್ಲಿ ಮುದ್ರಿಸಿದರು. ಎಚ್.ವಿಶ್ವನಾಥ್ ಅವರು ದತ್ತಿ ಪ್ರಶಸ್ತಿ ಆರಂಭಿಸಿ ದೃಷ್ಟಿ ಚೇತನರಿಗೆ ಪ್ರಶಸ್ತಿ ನೀಡಿದರು. ಈಗ ನಾಡೋಜ ಡಾ. ಮಹೇಶ್ ಜೋಶಿ ಅವರು ದಾಖಲಾರ್ಹವಾದ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು ಡಾ. ಶಿವರಾಜ ಶಾಸ್ತ್ರಿ .
ನಂತರ ಡಾ. ಶಿವರಾಜ ಶಾಸ್ತ್ರಿ ಅವರು ವಾಚಿಸಿದ ಆತ್ಮದ ಹಾಡು ಕವನಕ್ಕೆ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆ ಹರಿಸಿದರು.