ಕನ್ನಡ ಸುದ್ದಿ  /  ಕರ್ನಾಟಕ  /  Competitive Exam Training: ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುತ್ತೀದ್ದೀರಾ, ಇಲ್ಲಿ ತರಬೇತಿ ಉಚಿತ -ಯಶಸ್ಸು ಖಚಿತ; ಯಾವುದೀ ಸಂಸ್ಥೆ

Competitive Exam Training: ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುತ್ತೀದ್ದೀರಾ, ಇಲ್ಲಿ ತರಬೇತಿ ಉಚಿತ -ಯಶಸ್ಸು ಖಚಿತ; ಯಾವುದೀ ಸಂಸ್ಥೆ

Free Training in Mysuru ಮೈಸೂರಿನ ಸರ್ಕಾರಿ ಶಾಲೆಯಲ್ಲಿ ನಡೆಯುವ ಜ್ಞಾನಬುತ್ತಿ( Jnana Buthi) ಸಂಸ್ಥೆ ನಾಲ್ಕು ದಶಕದಿಂದ ಹಲವಾರು ಪರೀಕ್ಷೆಗಳಿಗೆ ಉಚಿತ, ಗುಣಮಟ್ಟದ ತರಬೇತಿ ನಡೆಸುತ್ತಾ ಮನೆ ಮಾತಾಗಿದೆ.

ಜ್ಞಾನಬುತ್ತಿಯಲ್ಲಿ ತರಗತಿ ನೀಡುತ್ತಿರುವ ಡಾ.ಶಾಲಿನಿ ರಜನೀಶ್‌. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ.
ಜ್ಞಾನಬುತ್ತಿಯಲ್ಲಿ ತರಗತಿ ನೀಡುತ್ತಿರುವ ಡಾ.ಶಾಲಿನಿ ರಜನೀಶ್‌. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ.

ಮೈಸೂರು: ಇಲ್ಲಿ ಕರ್ನಾಟಕ ಮಾತ್ರವಲ್ಲದೇ ಕೇಂದ್ರ ಲೋಕಸೇವಾ ಆಯೋಗ ಸೇರಿದಂತೆ ನಾನಾ ಬ್ಯಾಂಕ್‌ಗಳು ನಡೆಸುವ ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಯುತ್ತದೆ. ಅದು ಉಚಿತ. ಅದೂ ಐಎಎಸ್‌, ಐಪಿಎಸ್‌, ಕೆಎಎಸ್ ಅಧಿಕಾರಿಗಳು, ಕುಲಪತಿಗಳು, ಅಧ್ಯಾಪಕರು ಉಚಿತವಾಗಿ ಹೇಳಿಕೊಡುತ್ತಾರೆ. ಸತತ 4 ದಶಕದಿಂದ ಇಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದವರು ಉದ್ಯೋಗ ಪಡೆದು ನಾನಾ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು, ಗ್ರಾಮೀಣ ಪ್ರದೇಶದವರು, ಹೆಣ್ಣು ಮಕ್ಕಳು, ಮದುವೆಯಾದ ನಂತರವೂ, ಒಂದು ಕೆಲಸಕ್ಕೆ ಆಯ್ಕೆಗೊಂಡ ನಂತರವೂ ಮತ್ತೊಂದು ಬಯಕೆಯ ಉದ್ಯೋಗ ಪಡೆಯಬೇಕೆಂದವರು ಸೇರಿ ವಿಭಿನ್ನ ಹಿನ್ನೆಲೆಯವರು ಇಲ್ಲಿ ತರಬೇತಿಗೆ ಬಂದು ದಡ ಮುಟ್ಟಿದ್ದಾರೆ. ಈಗಲೂ ಈ ಸಂಸ್ಥೆಗೆ ಸೇರಲು ಇನ್ನಿಲ್ಲದ ಬೇಡಿಕೆ.

ಟ್ರೆಂಡಿಂಗ್​ ಸುದ್ದಿ

ಮೈಸೂರಿನ ಲಕ್ಷ್ಮಿಪುರಂನ ಸರ್ಕಾರಿ ಪದವಿಪೂರ್ವ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆ ಇಂತಹ ಅಮೂಲ್ಯ ಕಾಯಕದಲ್ಲಿ ತೊಡಗಿದೆ. ಸತತ ನಾಲ್ಕು ದಶಕದಿಂದಲೂ ಇಲ್ಲಿ ಜ್ಞಾನ ದಾಸೋಹ ನಿರಂತರವಾಗಿ ನಡೆದುಕೊಂಡು ಬಂದಿದೆ.

ಆರಂಭಗೊಂಡಿದ್ದು ಹೀಗೆ

ಅದು 1984, ಮೈಸೂರಿನಲ್ಲಿ ಕನ್ನಡಕ್ಕೆ ಸಂಬಂಧಿಸಿದಂತಹ ಹಲವಾರು ಚಟುವಟಿಕೆಗಳು ನಡೆದ ಸಮಯ. ಪ್ರಮುಖ ಕನ್ನಡ ಸಾಹಿತಿಗಳು ಅದರಲ್ಲಿ ಮುಂಚೂಣಿಯಲ್ಲಿದ್ದ ಕಾಲ. ಈ ವೇಳೆ ಕನ್ನಡ ತರಗತಿಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆಂದು ತರಗತಿಗಳನ್ನು ನಡೆಸಲೆಂದೇ ಸಂಸ್ಥೆಯೊಂದು ಹುಟ್ಟಿಕೊಂಡಿತು. ಅದು ಜ್ಞಾನಬುತ್ತಿ ಸಂಸ್ಥೆ. ಹಲವಾರು ಸಾಹಿತಿಗಳು, ವಿದ್ವಾಂಸದ, ಕನ್ನಡ ಅಧ್ಯಾಪಕರು ಇಲ್ಲಿಗೆ ಬಂದು ಕನ್ನಡದಲ್ಲಿ ಎಂಎ ಮಾಡುವವರಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅದೂ ಸಂಜೆ 6ರಿಂದ 8 ಗಂಟೆವರೆಗೆ ಮಾತ್ರ. ದೇವರಾಜ ಮೊಹಲ್ಲಾದ ಎನ್‌ಟಿಎಂ ಸರ್ಕಾರಿ ಶಾಲೆ ಆವರಣದಲ್ಲಿ ಶುರುವಾಯಿತು. ಅಲ್ಲಿಂದ ಪ್ರತಿವರ್ಷ ಎಂಎ ಓದುವವರು ಬಂದು ಇಲ್ಲಿ ತರಗತಿಗಳಲ್ಲಿ ಭಾಗಿಯಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ಉಪನ್ಯಾಸಕ ವೃತ್ತಿಯನ್ನೂ ಮುಂದುವರೆಸಿದರು.

ಕನ್ನಡ ತರಗತಿಗಳ ಜತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸಿದರೆ ಹೇಗೆ ಎನ್ನುವ ಚಿಂತನೆ ಜ್ಞಾನಬುತ್ತಿಗೆ ಸಂಸ್ಥೆಯಲ್ಲಿದ್ದವರಲ್ಲಿ ಬಂದಿತು. ಕೆಎಎಸ್‌, ಗ್ರಾಮೀಣಾಭಿವೃದ್ದಿ ಇಲಾಖೆ. ಶಿಕ್ಷಕರ ನೇಮಕಾತಿ ಸಹಿತ ಹಲವು ಪರೀಕ್ಷೆಗಳಿಗೆ ತರಬೇತಿಗಳು ಶುರುವಾಗಿಯೇ ಬಿಟ್ಟವು. ಅದೂ ಸಂಜೆಯೇ. ಒಂದೊಂದಾಗಿ ತರಗತಿಗಳನ್ನು ಆರಂಭಿಸುತ್ತಾ ಆಯಾ ಕಾಲದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗಳೂ ಶುರುವಾದವು. ಎಲ್ಲಿಲ್ಲದ ಪ್ರತಿಕ್ರಿಯೂ ಅದಕ್ಕೆ ಬಂದಿತು. ಉಚಿತ ತರಬೇತಿ ಜತೆಗೆ ಗುಣಮಟ್ಟದ ತರಗತಿ, ಶಿಸ್ತುಬದ್ದಾದ ಚಟುವಟಿಕೆಯಿಂದ ಜ್ಞಾನಬುತ್ತಿ ಬಹುಬೇಗನೇ ಜನಪ್ರಿಯವಾಯಿತು. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಆಸರೆಯ ಸಂಸ್ಥೆಯೂ ಆಯಿತು.

ಅಧಿಕಾರಿಗಳ ಸಾಥ್‌

90ರ ದಶಕದಲ್ಲಿ ಆಗ ಮೈಸೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ಕೆಂಪಯ್ಯ ಅವರ ಸಹಕಾರ, ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸಚಾರಿ ಅವರು ಜಿಲ್ಲಾಡಳಿತ, ಅಪ್ನಾದೇಶ್‌ ಸಹಯೋಗದೊಂದಿಗೆ ನಡೆಸಿದ ಚಟುವಟಿಕೆಗಳು ಇನ್ನಷ್ಟು ವಿಶ್ವಾಸರ್ಹತೆಯನ್ನು ತಂದವು. ಇಲ್ಲಿಯೇ ತರಬೇತಿ ಪಡೆದು ಅಧಿಕಾರಿಗಳಾದ ಹಲವರು ತಾವು ವಾರದಲ್ಲಿ ಇಂತಿಷ್ಟು ದಿನ ಎಂದು ತರಗತಿ ತೆಗೆದುಕೊಂಡು ಶಕ್ತಿ ತುಂಬಿದರು.

ಆನಂತರ ಜಿಲ್ಲಾಧಿಕಾರಿಗಳಾಗಿದ್ದ ಮಣಿವಣ್ಣನ್‌, ಹರ್ಷಗುಪ್ತ, ಸಿ.ಶಿಖಾ ಸಹಿತ ಹಲವರು ಕೂಡ ಇಲ್ಲಿ ಬಂದು ಪಾಠ ಮಾಡುತ್ತಿದ್ದರು. ಈಗ ಅಭಿವೃದ್ದಿ ಆಯುಕ್ತರಾಗಿರುವ ಡಾ.ಶಾಲಿನಿ ರಜನೀಶ್‌ ಅವರೂ ಆಸಕ್ತಿಯಿಂದ ತರಗತಿ ತೆಗೆದುಕೊಂಡು ಅಭ್ಯರ್ಥಿಗಳನ್ನು ಉತ್ತೇಜಿಸಿದ ಉದಾಹರಣೆಗಳು ಸಾಕಷ್ಟಿವೆ.

ಅಭ್ಯರ್ಥಿಗಳಿಗೆ ಇಲ್ಲಿನ ಆಸ್ತಿ

ಜ್ಞಾನ ಬುತ್ತಿ ಸಂಸ್ಥೆ ಸ್ವಂತ ಕಟ್ಟಡ ಹೊಂದದೇ, ಆಸ್ತಿಯನ್ನೂ ಮಾಡದೇ ಚಟುವಟಿಕೆಗಳಲ್ಲಿ ನಿರತರಾಗಿರುವುದು, ಈಗಲೂ ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳದೇ ನುರಿತ ಅಧ್ಯಾಪಕರು, ತಜ್ಞರ ಉಚಿತ ತರಗತಿಗಳಿಂದ ಮನಸು ಗೆದ್ದಿದೆ. ಅಲ್ಲಿ ಸೇರಲು 300 ರೂ. ಮಾತ್ರ ಸೇವಾ ಶುಲ್ಕ ಪಡೆಯಲಾಗುತ್ತದೆ. ಅದಕ್ಕೂ ಅಭ್ಯರ್ಥಿಗಳಿಗೆ ಕೊನೆಯಲ್ಲಿ ಒಂದು ಸಂಗ್ರಹಯೋಗ್ಯ ಪುಸ್ತಕ ನೀಡಲು, ಉದ್ಘಾಟನೆ, ಸಮಾರೋಪ ಸಮಾರಂಭ ನಡೆಸಲು ಹಾಗೂ ಪಾಠ ಮಾಡಿದವರಿಗೆ ನೆನಪಿನ ಕಾಣಿಕೆ ನೀಡಲು ಬಳಸಿ ಆ ಕೋರ್ಸ್‌ನ ತರಬೇತಿ ಖರ್ಚು ವೆಚ್ಚವನ್ನು ಮುಗಿಸಲಾಗುತ್ತದೆ. ಈಗಲೂ ಜ್ಞಾನಬುತ್ತಿಗೆ ಪಾಠ ಮಾಡಲು ಬರುವವರ ದೊಡ್ಡ ಪಟ್ಟಿಯೇ ಇದೆ. ಅಭ್ಯರ್ಥಿಗಳು ಸಹಾ ಅದೇ ಆಸಕ್ತಿಯಿಂದ ಬರುತ್ತಾರೆ.

ಎಲ್ಲರೂ ದೆಹಲಿ, ಬೆಂಗಳೂರು, ಹೈದ್ರಾಬಾದ್‌ ಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಲು ಹೋಗಲಾಗುವುದಿಲ್ಲ. ಅಷ್ಟು ಆರ್ಥಿಕ ಶಕ್ತಿಯೂ ಇರುವುದಿಲ್ಲ. ಅಂಥವರಿಗೆ ಜ್ಞಾನಬುತ್ತಿಯಿಂದ ಸಾಕಷ್ಟು ಲಾಭವಾಗುತ್ತದೆ. ಹಾಗೆ ಇಲ್ಲಿಗೆ ಬಂದವರು ಕೆಎಎಸ್‌ ಸಹಿತ ಎಲ್ಲಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉನ್ನತ ಅಧಿಕಾರಿಗಳಾಗಿದ್ಧಾರೆ.

ಜೈನಹಳ್ಳಿ ಸತ್ಯನಾರಾಯಣಗೌಡರ ಸೇವೆ

ಕನ್ನಡ ಮೇಷ್ಟ್ರಾಗಿದ್ದ ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲ್ಲೂಕು ಜೈನಹಳ್ಳಿಯವರಾದ ಸತ್ಯನಾರಾಯಣಗೌಡ ಅವರು ಜ್ಞಾನಬುತ್ತಿಗೆ ಹುಟ್ಟು ಹಾಕಿ ಅದನ್ನು ಈಗಲೂ ನಡೆಸಿಕೊಂಡು ಹೋಗುತ್ತಿರುವ ಹಿಂದಿರುವ ಶಕ್ತಿ. ಜ್ಞಾನಬುತ್ತಿ ಸಂಸ್ಥೆಗೆ ಅಧ್ಯಕ್ಷರಾಗಿ ಸಚಿವರಾಗಿದ್ದ ಎಚ್‌.ಎಸ್.ಮಹದೇವಪ್ರಸಾದ್‌ ಸೇವೆ ಸಲ್ಲಿಸಿದ್ದಾರೆ. ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ, ನಿವೃತ್ತ ಬ್ಯಾಂಕ್‌ ಅಧಿಕಾರಿ ಬಾಲಕೃಷ್ಣ ಹೆಜಮಾಡಿ ಸಹಿತ ಈಗಲೂ ಹಲವರು ಜ್ಞಾನಬುತ್ತಿಯ ಸೇವಾ ಚಟುವಟಿಕೆಗಳು ನಡೆಯಲು ನೆರವಾಗುತ್ತಲೇ ಇದ್ದಾರೆ. ಇದರಿಂದಲೇ ಈಗ ಕೆಎಎಸ್‌ ಪ್ರವೇಶ ಪರೀಕ್ಷೆಗಳೂ ಸದ್ದಿಲ್ಲದೇ ನಡೆದಿವೆ. ನಾಲ್ಕು ದಶಕದಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದಾರೆ. ಬಂದವರು ಒಂದಿಲ್ಲೊಂದು ಕಡೆ ಕೆಲಸ ಪಡೆದುಕೊಂಡು ಬದುಕು ರೂಪಿಸಿಕೊಂಡಿದ್ದಾರೆ.

ಆಗ ಕನ್ನಡದ ಆಶಯದೊಂದಿಗೆ ಆರಂಭಗೊಂಡ ಜ್ಞಾನಬುತ್ತಿಗೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳಿಗೆ ವೇದಿಕೆಯಾಗಿದೆ. ಅದೆಷ್ಟೋ ಜನರ ಸಹಕಾರ, ಹಾರೈಕೆಗಳಿಂದಲೇ ಜ್ಞಾನಬುತ್ತಿಗೆ ಈಗಲೂ ಜನರ ಪ್ರೀತಿಯ, ಅಭ್ಯರ್ಥಿಗಳ ಆಕಾಂಕ್ಷೆಯ ಸಂಸ್ಥೆಯಾಗಿ ರೂಪುಕೊಂಡಿದೆ ಎಂದು ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಹೇಳುತ್ತಾರೆ.

ನೀವು ಮೈಸೂರಿಗೆ ಬಂದು ತರಬೇತಿ ಪಡೆದು ಯಶಸ್ವಿಯಾಗಬೇಕು ಎಂದು ಬಯಸಿದರೆ ಜೈನಹಳ್ಳಿ ಸತ್ಯನಾರಾಯಣಗೌಡ ಅವರನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ: 9448800816.

ಟಿ20 ವರ್ಲ್ಡ್‌ಕಪ್ 2024