ಕನ್ನಡ ಸುದ್ದಿ  /  ಜೀವನಶೈಲಿ  /  ಟಿವಿ ನೋಡುತ್ತ ತಿನ್ನುವ ದುಷ್ಚಟ ನನಗಿದೆ, ಇದರಿಂದ ಆರೋಗ್ಯ ಸಮಸ್ಯೆಗಳೇ ಹೆಚ್ಚಾಗ್ತಿವೆ, ಇದಕ್ಕೆ ಪರಿಹಾರವೇನು? ಕಾಳಜಿ ಅಂಕಣ

ಟಿವಿ ನೋಡುತ್ತ ತಿನ್ನುವ ದುಷ್ಚಟ ನನಗಿದೆ, ಇದರಿಂದ ಆರೋಗ್ಯ ಸಮಸ್ಯೆಗಳೇ ಹೆಚ್ಚಾಗ್ತಿವೆ, ಇದಕ್ಕೆ ಪರಿಹಾರವೇನು? ಕಾಳಜಿ ಅಂಕಣ

ಟಿವಿ ನೋಡುತ್ತಲೇ ತಿನ್ನುವ ಅಭ್ಯಾಸ ನಿಮಗೂ ಇದ್ಯಾ? ಹಾಗಾದರೆ, ಅದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಗಂಭೀರ ಸಮಸ್ಯೆಗಳನ್ನೇ ಹೊತ್ತು ತರಬಹುದು. ಆ ಚಟದಿಂದ ಹೊರಬರುವುದು ಹೇಗೆ? ಡಾ. ರೂಪ ರಾವ್‌ ಇಂದಿನ ಕಾಳಜಿ ಅಂಕಣದಲ್ಲಿ ವಿವರಿಸಿದ್ದಾರೆ.

ಟಿವಿ ನೋಡುತ್ತ ತಿನ್ನುವ ದುಷ್ಚಟ ನನಗಿದೆ, ಇದರಿಂದ ಆರೋಗ್ಯ ಸಮಸ್ಯೆಗಳೇ ಹೆಚ್ಚಾಗ್ತಿವೆ, ಇದಕ್ಕೆ ಪರಿಹಾರವೇನು? ಕಾಳಜಿ ಅಂಕಣ
ಟಿವಿ ನೋಡುತ್ತ ತಿನ್ನುವ ದುಷ್ಚಟ ನನಗಿದೆ, ಇದರಿಂದ ಆರೋಗ್ಯ ಸಮಸ್ಯೆಗಳೇ ಹೆಚ್ಚಾಗ್ತಿವೆ, ಇದಕ್ಕೆ ಪರಿಹಾರವೇನು? ಕಾಳಜಿ ಅಂಕಣ

ಪ್ರಶ್ನೆ: ನಾನೊಬ್ಬಳು ಹೌಸ್ ವೈಫ್ ನನಗೆ ಒಂದು ದುಷ್ಚಟವಿದೆ. ಅದೆಂದರೆ ಟೀವಿ ನೋಡುವಾಗ ಏನಾದರೂ ತಿನ್ನುತ್ತಲೇ ಇರಬೇಕು ಅನಿಸುವುದು‌. ಬೇರೆ ಸಮಯದಲ್ಲಿ ಊಟದ ವಿಷಯದಲ್ಲಿ ಬಹಳ‌ ಕಟ್ಟುನಿಟ್ಟಾಗಿರುವ ನಾನು, ಟೀವಿ ನೋಡುತ್ತಾ ನೋಡುತ್ತಾ ಎಲ್ಲೆ ಮೀರಿ ತಿನ್ನುವೆ. ಇದರಿಂದಾಗಿ ನನ್ನ ತೂಕ ಹಾಗೂ ಅನಾರೋಗ್ಯ ಎರಡೂ ಹೆಚ್ಚಾಗಿದೆ‌. ಮನೆಯವರು ಟಿವೀ ನೋಡುವುದನ್ನು ನಿಲ್ಲಿಸು ಅನ್ನುತ್ತಾರೆ. ನಾನೊಬ್ಬ ಟೈಲರ್ ಕೂಡ, ಮನೆ ಕೆಲಸ ಮತ್ತು ಟೈಲರಿಂಗ್ ಕೆಲಸಗಳನ್ನು ಮುಗಿಸಿ ಬಂದ ಮೇಲೆ ನನಗಿರುವ ಮನರಂಜನೆ ಟೀವಿ ಮಾತ್ರ, ಮಕ್ಕಳು ಮತ್ತು ಗಂಡ‌ ಇಬ್ಬರೂ ಸಂಜೆ ಬರುವವರೆಗೂ ಟಿವಿಯೇ ನನ್ನ ಸಂಗಾತಿ. ‌ಹಾಗಾಗಿ ಟಿವಿ ನೋಡುವುದನ್ನು ಬಿಟ್ಟುಬಿಡು ಎಂದು ಹೇಳುವುದನ್ನು ಬಿಟ್ಟು ಇನ್ನೇನಾದರೂ ಟಿಪ್ಸ್ ಕೊಡಿ.

ಟ್ರೆಂಡಿಂಗ್​ ಸುದ್ದಿ

ಉತ್ತರ

 • ಟಿವಿ ಅಥವಾ ಸೋಷಿಯಲ್ ಮೀಡಿಯಾ ಅಥವಾ ಪುಸ್ತಕ ಓದುತ್ತಾ ‌ಮೈಮರೆತು ತಿನ್ನುವ ಅಭ್ಯಾಸ ಬಹಳ ಸಾಮಾನ್ಯವಾದ ವರ್ತನೆ/ ಸಮಸ್ಯೆ.
 • ಹಸ್ಟನ್ ವಿಶ್ವವಿದ್ಯಾಲಯದಲ್ಲಿ ನಡೆದ ಒಂದು ಸಂಶೋಧನೆಯ‌ ಪ್ರಕಾರ ಟಿವಿ ನೋಡುವ ಸಮಯಕ್ಕೂ ಮತ್ತು ಆಹಾರಕ್ಕೂ ನೇರ ಸಂಬಂಧವಿದೆ.
 • ಇನ್ನೊಂದು ಅಧ್ಯಯನದ ಪ್ರಕಾರ ಹೆಚ್ಚು ಸಮಯ ಓಟಿಟಿ ಅಥವಾ ಧಾರಾವಾಹಿಗಳಂತಹ‌ವನ್ನು ನೋಡುವವರ ದೇಹದ ತೂಕ ಗಣನೀಯವಾಗಿದೆ. ಇನ್ನೊಂದು ಹೇಳುವ ಪ್ರಕಾರ ಟೈಪ್ 2 ಡಯಾಬಿಟೀಸ್ ಬರುವ ಸಾಧ್ಯತೆ ಹೆಚ್ಚು.
 • ಟಿವಿ ನೋಡುವ ಸಮಯ‌ದಲ್ಲಿ ನಾವು ಟಿವಿ ನೋಡುವುದನ್ನು ಬಿಟ್ಟು ಇನ್ನೇನೂ ಮಾಡುವುದಿಲ್ಲ ಅಂದರೆ ನಮ್ಮ‌ದೇಹ‌ ಆರಾಮವಾಗಿರುತ್ತದೆ. ಆದರೆ ಮನಸು ಆ ಸೀರೀಸ್ ನ ಎಮೋಶನ್‌ಗಳಿಗೆ ಸ್ಪಂದಿಸುತ್ತಿರುತ್ತದೆ. ಅಲ್ಲಿನ ಪಾತ್ರಧಾರಿಗಳ‌ ಭಾವನೆಗಳನ್ನು ನಮ್ಮ‌ ಮೇಲೆ ಹೊತ್ತುಕೊಂಡಿರುತ್ತೇವೆ.
 • ಈ ಸಮಯದಲ್ಲಿ ಅಲ್ಲಿನ ನೋವು, ಖುಷಿ, ಕೋಪ, ಕುತೂಹಲ ‌ಮುಂತಾದವು‌ಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿದ್ದಾಗ‌ ಆ ಭಾವನೆಗಳ ಲಯಕ್ಕೆ ಸರಿಯಾಗಿ ಏನಾದರೂ ತಿನ್ನಬೇಕೆಂಬ ತೀವ್ರ ಹಂಬಲ ಬರುವುದು ತೀರಾ ಸಾಮಾನ್ಯ. ಇದೊಂದು ಎಮೋಷನಲ್ ಈಟಿಂಗ್‌ ಪ್ಯಾಟರ್ನ್.

ಇದನ್ನೂ ಓದಿ: ಸಂಬಂಧಗಳೆಂದರೆ ಹೆದರಿ ಓಡುವ ನನ್ನ ಮನಸ್ಸನ್ನು ಬದಲಿಸಿಕೊಳ್ಳುವುದು ಹೇಗೆ? ಯಾರಾದರೂ ಹತ್ತಿರ ಬಂದರೆ ನನಗೇಕೆ ಭಯ? -ಕಾಳಜಿ ಅಂಕಣ

ಏನಿದು ಎಮೋಷನಲ್ ಈಟಿಂಗ್, ಭಾವನಾತ್ಮಕ ತಿನ್ನುವಿಕೆ

ಭಾವನೆಗಳಿಗೆ ಪ್ರತಿಸ್ಪಂದನೆಯಾಗಿ ನಾವು ತಿನ್ನುವುದನ್ನು ಎಮೋಷನಲ್ ಈಟಿಂಗ್ ಎಂದು ಕರೆಯುತ್ತೇವೆ. ನಮ್ಮ ದೇಹವು ಬದುಕಲು ಆಹಾರದ ಅಗತ್ಯವಿದೆ ಅಂತ‌ ಗೊತ್ತಿದೆ. ತಿನ್ನುವುದು ಮೆದುಳಿನಲ್ಲಿರುವ ರಿವಾರ್ಡ್ ವ್ಯವಸ್ಥೆಯನ್ನು ಆಕ್ಟಿವೇಟ್ ಮಾಡುತ್ತದೆ ಮತ್ತು ನಮಗೆ ಉತ್ತಮ ಫೀಲ್ ನೀಡುತ್ತದೆ. ನಿಮಗೆ ನೋವು, ಆಕ್ರೋಶ, ಕೋಪ, ನಿರೀಕ್ಷೆ ಇವುಗಳು ಹೆಚ್ಚಾಗಿದ್ದಾಗ ಇವುಗಳನ್ನು ನಿರ್ವಹಿಸಲು ಎಮೋಷನಲ್ ಈಟಿಂಗ್ ಸಹಾ ಒಂದು ಮಾರ್ಗ, ನೀವು ನೋಡಿರಬಹುದು ಬಹಳಷ್ಟು ಜನ ಖಿನ್ನತೆ ಆಂಕ್ಸೈಟಿ ಇವುಗಳಿಂದ ಒದ್ದಾಡುವವರ ಆಹಾರದ ಪ್ರಮಾಣ‌ಕೂಡ‌ಹೆಚ್ಚಾಗಿರುತ್ತದೆ.

ಟೀವೀ ನೋಡುವಾಗ ಯಾವ ರೀತಿಯ‌ ಕಂಟೆಂಟ್ ನೋಡುತ್ತೇವೆ ಎನ್ನುವುದರ ಮೇಲೂ‌ ಈ ಎಮೋಷನಲ್ ಈಟಿಂಗ್‌ ಮಾದರಿ ಡಿಪೆಂಡ್ ಮಾಡುತ್ತದೆ. ದುಃಖ, ನೋವು, ಕುತೂಹಲ ರೋಮಾಂಚನ ಇಂತಹ‌ ಭಾವನೆಗಳ ಸಿನಿಮಾಗಳು‌ ನಮ್ಮ ದೇಹದ ಸ್ಟ್ರೆಸ್ ಹಾರ್ಮೋನ್ ‌ಕಾರ್ಟಿಸೊಲ್ ಅನ್ನು ಹೆಚ್ಚು ಬಿಡುಗಡೆ ಮಾಡುತ್ತದೆ. ಇದು ಆ ಸಮಯದಲ್ಲಿ ನಾವು ಹೆಚ್ಚು ತಿನ್ನುವಂತೆ ಮಾಡುತ್ತದೆ. ತಿನ್ನುವುದು ಯಾವಾಗಲೂ ಮನಸಿಗೆ ಪ್ರಿಯ ನೀವು ಬೇಕಾದರೆ ನೋಡಿ ಯಾವುದೇ ಸ್ಟ್ರೆಸ್ ಅಥವಾ ದುಃಖದ ಸಮಯದಲ್ಲಿ ಇಷ್ಟವಾದ ಚಾಕೋಲೇಟ್ ಅಥವಾ ಪ್ರಿಯವಾದ ಅಡುಗೆ‌ ತಿಂದರೆ ಆ ಕ್ಷಣಕ್ಕೆ ಮನಸಿಗೆ ನೆಮ್ಮದಿ ಅನಿಸುತ್ತದೆ.

ಟಿವಿ ನೋಡುವಾಗ ತಿನ್ನುವುದನ್ನು ನಿಲ್ಲಿಸುವುದು ಹೇಗೆ..

 • ಈಗ ಟಿವಿ ನೋಡಬೇಡಿ ಎನ್ನುವುದನ್ನು ನಾ ಹೇಳುವುದಿಲ್ಲ, ಆದರೆ ಟಿವಿ ನೋಡುವ ಸಮಯ ಹಾಗು ತಿನ್ನುವ ಸಮಯ ಬೇರೆ ಬೇರೆಯಾಗಿಡಿ
 • ಮನೆಯಲ್ಲಿ ಹೆಚ್ಚಾಗಿ ತಿಂಡಿ ತರಿಸಿಟ್ಟುಕೊಳ್ಳಬೇಡಿ.
 • ಸ್ವಿಗ್ಗಿ ಮುಂತಾದೆಡೆ ಇಂದು ಆರ್ಡರ್ ಮಾಡಿ ತರಿಸುವುದಾದರೆ‌ ಆ ಸಮಯದಲ್ಲಿ ಅವುಗಳನ್ನು ಅನ್ ಇನ್ಸ್ಟಾಲ್ ಮಾಡಿ.
 • ಟಿವಿ ನೋಡುವಾಗ ಮನಸು ಎಂಗೇಜ್ ಆಗಿರುತ್ತದೆ. ಆದರೆ ದೇಹ ಫ್ರೀ ಆಗಿರುತ್ತದೆ. ಈಗ ದೇಹಕ್ಕೊಂದು ಕೆಲಸ ಕೊಡಿ ‌ಅಂದರೆ ಹೂ ಕಟ್ಟುವುದೋ, ಅವರೇ ಕಾಳು ಬಿಡಿಸುವುದೋ ಅಥವವಾ ಏನಾದರೂ ನೋಟ್ ಮಾಡಿಕೊಳ್ಳುವುದು ಈ ರೀತೀಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ.
 • ನೀವು ಟೀವಿ ನೋಡುವ ಸಮಯದಲ್ಲಿ ನಿಮ್ಮ ಹತ್ತಿರದಲ್ಲಿಯೇ ಒಂದೆರೆಡು ಬಾಟಲ್ ನೀರನ್ನು ಇಟ್ಟುಕೊಂಡಿರಿ. ಹಾಗೆಯೇ ಒಂದಷ್ಟು ಆರೋಗ್ಯಕರ ತಿನಿಸುಗಳು ತರಕಾರಿ ಕಟ್ ಮಾಡಿಟ್ಟುಕೊಂಡಿರಿ. ಏನಾದರೂ ತಿನ್ನಬೇಕು ಅನಿಸಿದಾಗ ಹತ್ತಿರದಲ್ಲಿರುವ ತಿಂಡಿಗೇ ಮನಸು ಕೈ ಚಾಚುತ್ತದೆ. ಇವುಗಳನ್ನು ತಿನ್ನುವುದರಿಂದ ನಿಮ್ಮ ತೂಕದ ತೊಂದರೆ ‌ಇರುವುದಿಲ್ಲ.
 • ಎಲ್ಲಕ್ಕಿಂತ ಮುಖ್ಯವಾಗಿ ಮೈಂಡ್ಫುಲ್ ಆಗಿರುವುದು ಮುಖ್ಯ. ಯಾವಾಗ ನಮ್ಮ ದೇಹ‌ ಮತ್ತು ಮನಸಿನ ಕನೆಕ್ಷನ್ ತಪ್ಪುತ್ತದೆಯೋ ಆಗ ದೇಹ ಅಡ್ಡಾದಿಡ್ಡಿ ಆಡಲು ಪ್ರಾರಂಭಿಸುತ್ತದೆ. ಆದ್ದರಿಂದ ನೀವು ಟಿವಿ ಇರುವ ಕಡೆಯೇ ನಿಮ್ಮನ್ನು ಎಚ್ಚರಿಸಲು ಒಂದು ನೋಟ್ ಹಾಕಿಕೊಂಡಿರಿ , “ನೋ ಮೋರ್ ಈಟಿಂಗ್‌’ ಅಂತ , ಇದು ನಿಮ್ಮನ್ನು ಎಚ್ಚರಿಸುತ್ತಿರುತ್ತದೆ.

ಇದನ್ನೂ ಓದಿ: ಪ್ರೀತ್ಸೆ ಅಂತ ಹಿಂದೆ ಬೀಳೋ ಹುಡುಗನಿಗೆ ಮದುವೆಯಾಗೋಕೆ ಏಕೆ ನಿರಾಸಕ್ತಿ; ಮನಸ್ಸುಗಳ ಆಟಕ್ಕೆ ಹಾರ್ಮೋನ್‌ ಕಾರಣ -ಕಾಳಜಿ

ಈ ಮೇಲಿನ ಉತ್ತರ ನಿಮಗಷ್ಟೇ ಅಲ್ಲ ಕಂಪನಿಗಳಲ್ಲಿ ಕಂಪ್ಯೂಟರ್ ಮುಂದಿನ ಕೆಲಸದ ಸಮಯದಲ್ಲಿ ಕೈ‌ ಬಿಡುವಾದಾಗಲೆಲ್ಲಾ ತಿನ್ನುವ ಅಭ್ಯಾಸವಿರುವ ಎಲ್ಲರಿಗೂ ಅನ್ವಯಿಸುತ್ತದೆ.

ಒಂದು ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ಬೊಜ್ಜಿನ ಸಮಸ್ಯೆಯು ಅಗಾಧವಾಗಿದೆ. 2022ರ ಈ ಅಧ್ಯಯನದ ಪ್ರಕಾರ 1990 ರಲ್ಲಿದ್ದ ಬೊಜ್ಜಿನಿಂದ ನರಳುತ್ತಿದ್ದ ವಯಸ್ಕರ ಸಂಖ್ಯೆ ಈಗ ದ್ವಿಗುಣವಾಗಿದೆ. ಇದಕ್ಕೆ ಬದಲಾದ ಜೀವನಶೈಲಿ, ಬೇಕಾದ ತಿಂಡಿ ನಾವಿರುವೆಡೆ ಬರುವುದು, ಹೆಚ್ಚಿದೆ ಮಾನಸಿಕ ಒತ್ತಡ, ಕೆಲಸದ ಒತ್ತಡ, ಹೋಲಿಕೆಯ ಒತ್ತಡ ಇವುಗಳೂ ಕೊಡುಗೆ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಒಟಿಟಿಗಳೂ ಸಹಾ ಆರಾಮ ಜೀವನ ಶೈಲಿಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಬದಲಾದ ಜೀವನ ಶೈಲಿಗೆ ನಾವೂ‌ ಮನಸನ್ನು ಬದಲಾಯಿಸಿಕೊಂಡು ದೇಹ ದಂಡನೆಗೂ ಕೊಂಚ ಕಾಲ ಕೊಡಲೇ ಬೇಕಾದ ಸಮಯವಿದು. ಹಾಗಾಗಿ ಸಾಧ್ಯವಾದಷ್ಟು ವ್ಯಾಯಾಮ ಅಥವಾ ವಾಕಿಂಗ್ ಗಳಂತಹದ್ದನ್ನು ಮಾಡುವುದು ಬಹಳ ಮುಖ್ಯ.

ಇದೇ ಪ್ರಶ್ನೆಗೆ ಮುಂದುವರಿಕೆಯಾಗಿ, ಬಹಳಷ್ಟು ತಾಯಂದಿರು ತಮ್ಮ ಮಕ್ಕಳಿಗೆ ಟೀವಿ ಅಥವಾ ಮೊಬೈಲ್ ತೋರಿಸಿ ಊಟ ಮಾಡಿಸುವುದು ತುಂಬಾ ಕಡೆ ಆಗುತ್ತಿದೆ, ಇದು ನಿಜಕ್ಕೂ ಮಕ್ಕಳ ದೈಹಿಕ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ‌.

ಇದರಿಂದಾಗಿ ಮಕ್ಕಳಲ್ಲಿ ಒಬೆಸಿಟಿ, ಅಜೀರ್ಣ ತೊಂದರೆ, ಮೆಟಾಬಾಲಿಸಂ (ತಿಂದದ್ದನ್ನು ಶಕ್ತಿ ಆಗಿ ಮಾರ್ಪಡಿಸುವ ದೈಹಿಕ ಕ್ರಿಯೆ) ಕಡಿಮೆ ಆಗುವುದು. ಕೆಲವೊಂದು ಅಧ್ಯಯನಗಳ‌ ಪ್ರಕಾರ ಇದರಿಂದ ಮಕ್ಕಳಲ್ಲಿ ಗಮನ ಕೇಂದ್ರೀಕರಿಸುವ ಸಮಯ‌ ಕಡಿಮೆ‌ ಆಗುತ್ತದೆ. ಒಂದೇ ಸಮಯದಲ್ಲಿ ಎರಡರ ಮೇಲೂ ಗಮನ ಕೊಡಲಾಗುವುದಿಲ್ಲ. ಆದ್ದರಿಂದ ತಿನ್ನುವ ಆಹಾರದ ರುಚಿಯನ್ನು ಸವಿಯುವ ಸಾಮರ್ಥ್ಯವೂ ಕಡಿಮೆ ಆಗುತ್ತಾ ಹೋಗುತ್ತದೆ.

ಇದರ ಬದಲಿಗೆ ತಾಯಂದಿರು ಮಕ್ಕಳಿಗೆ ಕುಟುಂಬದ ಒಟ್ಟಿಗೆ ಕೂತು ಊಟ ಮಾಡುವುದನ್ನು ಮಾದರಿಯನ್ನು ತೋರಿಸಿಕೊಡಬೇಕು. ಟಿವಿ ನೋಡುವ ಸಮಯದಲ್ಲಿ ಓದು, ಬರಹ, ಊಟ/ ತಿಂಡಿ ತಿನ್ನುವುದನ್ನು ಮಾಡಬಾರದು ಎಂಬ ಕಟ್ಟುನಿಟ್ಟಾದ ನಿಯಮ ತರಬೇಕು. ‌ಹಾಗೆಂದ ವೇಳೆ ತಿನ್ನಲೇಬೇಕೆಂಬ ಹಠ ಹಿಡಿದರೆ ಆರೋಗ್ಯಕರ ತಿಂಡಿಗಳನ್ನು ತಟ್ಟೆಯಲ್ಲಿಟ್ಟಿರಿ, ಈ ನೆಪದಲ್ಲಿಯಾದರೂ ಇಂತಹ ತಿಂಡಿಗಳನ್ನು ತಿನ್ನಲಿ.‌

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ನಿವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ 20ಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.