ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah Profile: ಅಹಿಂದ ಭಾವ ಜಾಗೃತದಾರ ಸಿದ್ದರಾಮಯ್ಯ ಅವರ ಪರಿಚಯ ಹೀಗಿದೆ..

Siddaramaiah Profile: ಅಹಿಂದ ಭಾವ ಜಾಗೃತದಾರ ಸಿದ್ದರಾಮಯ್ಯ ಅವರ ಪರಿಚಯ ಹೀಗಿದೆ..

Siddaramaiah Profile: ಸಿದ್ದರಾಮಯ್ಯ ಎಂದಾಕ್ಷಣ ನೆನಪಿಗೆ ಬರುವುದು ಅಹಿಂದ ಸಮಾವೇಶ. ಮತದಾರರಲ್ಲಿ ಅಹಿಂದ ಭಾವ ಜಾಗೃತಗೊಳಿಸಿದ ಸಿದ್ದರಾಮಯ್ಯ ಇಂದು ಮಾಸ್‌ ಲೀಡರ್.‌ ಸಿದ್ದರಾಮೋತ್ಸವ ಅದನ್ನು ಖಚಿತಪಡಿಸಿದೆ. ಈ ಸಲದ್ದು ಕೊನೆಯ ಚುನಾವಣೆ. ಒಮ್ಮೆ ಮುಖ್ಯಮಂತ್ರಿ ಆಗಿಬಿಡುತ್ತೇನೆ ಎನ್ನುತ್ತ ಚುನಾವಣೆ ಎದುರಿಸಿದ ಸಿದ್ದರಾಮಯ್ಯ ಅವರ ವ್ಯಕ್ತಿಪರಿಚಯ ಇಲ್ಲಿದೆ.

ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ) (HT_PRINT)

ರಾಜ್ಯ ವಿಧಾನಸಭಾ ಚುನಾವಣೆ ಕಾವು ರಾಜಕೀಯ ರಂಗದ ಕಾವೇರಿಸಿದೆ. ಮೈಸೂರು ಭಾಗದಲ್ಲಿ ಹೈವೋಲ್ಟೇಜ್‌ ಕ್ಷೇತ್ರವೆನಿಸಿದ ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದು, ಎದುರಾಳಿಯಾಗಿ ಸಚಿವ ಸೋಮಣ್ಣ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಅಹಿಂದ ನಾಯಕರಾಗಿ ಗುರುತಿಸಿಕೊಂಡಿರುವ ಸಿದ್ದರಾಮ್ಯಗೆ ಈ ಸಲ ಹಿಂದುತ್ವದ ಸವಾಲು ಎದುರಾಗಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಹಿಂದು ವಿರೋಧಿ ಅಂಶಗಳನ್ನು ಮುಂದಿಟ್ಟುಕೊಂಡು ವರುಣಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ ಪ್ರಯತ್ನಿಸಿದೆ.

ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಪುತ್ರ ಎಸ್.ಯತೀಂದ್ರ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು ಸಿದ್ದರಾಮಯ್ಯ. ತಾವು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಬಾದಾಮಿಯಲ್ಲಿ ಅಲ್ಪ ಅಂತರದ ಗೆಲುವು ದಾಖಲಿಸಿದ್ದರು. ಈ ಸಲದ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯೇ ಕಣಕ್ಕೆ ಇಳಿದ ಕಾರಣ, ಸಿದ್ದರಾಮಯ್ಯ ಕ್ಷೇತ್ರ ಬಿಟ್ಟು ಕದಲಿಲ್ಲ.

ಸಿದ್ದರಾಮಯ್ಯ ಇದುವರೆಗೆ ಒಟ್ಟು 10 ಚುನಾವಣೆ ಎದುರಿಸಿದ್ದಾರೆ. 10ನೇ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಒಂದರಲ್ಲಿ ಸೋಲು ಅನುಭವಿಸಿದವರು. 1983ರಲ್ಲಿ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರರಾಗಿ ನಿಂತು ಗೆಲುವು ಕಂಡವರು. 1985ರ ಚುನಾವಣೆಯಲ್ಲಿ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದರು. ಚಾಮುಂಡೇಶ್ವರಿಯಲ್ಲಿ ಒಟ್ಟು ಎಂಟು ಸಲ ಸ್ಪರ್ಧಿಸಿದ್ದು, ಆ ಪೈಕಿ ಮೂರು ಬಾರಿ ಸೋಲು ಅನುಭವಿಸಿದರು. ಕಳೆದ ಸಲ ಕೂಡ ಅವರು ಸೋತದ್ದು ಚಾಮುಂಡೇಶ್ವರಿಯಲ್ಲೇ ಆಗಿತ್ತು. ಬಾದಾಮಿಯಲ್ಲಿ 1,696 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು.

ಅವರ ರಾಜಕೀಯ ಬದುಕನ್ನು ನೋಡಿದಾಗ 1999ರ ವೇಳೆಗೆ ಜೆಡಿಎಸ್‌ ಸೇರಿದ್ದ ಅವರು 2004 -05ರ ತನಕ ಜೆಡಿಎಸ್‌ನಲ್ಲಿದ್ದರು. 1996ರಿಂದ 1999ರ ತನಕ ಜನತಾದಳ ಸರ್ಕಾರ ಇದ್ದಾಗ, ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ತರುವಾಯ, 2004ರ ಮೇ 28ರಿಂದ 2005 ಆಗಸ್ಟ್‌ 5ರ ತನಕ ಧರಂ ಸಿಂಗ್‌ ನೇತೃತ್ವದ ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು.

ಅಹಿಂದ ಸಮಾವೇಶ ಮತ್ತು ಮಾಸ್‌ ನಾಯಕರಾಗಿ ಗುರುತಿಸಿಕೊಂಡ ಸಿದ್ದರಾಮಯ್ಯ

ಅದು 2004-05ರ ಕಾಲಘಟ್ಟ. ಆ ಸಂದರ್ಭದಲ್ಲಿ ರಾಜ್ಯದ ಮತದಾರರಲ್ಲಿ ಅಹಿಂದ ಭಾವ ಜಾಗೃತಗೊಳಿಸುವ ಸಮಾವೇಶ ನಡೆಸಲು ಸಿದ್ದರಾಮಯ್ಯ ಮುಂದಾದರು. ಇದಕ್ಕೆ ಜೆಡಿಎಸ್‌ ವರಿಷ್ಠರಾದ ಎಚ್.ಡಿ.ದೇವೇಗೌಡರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟು ಹೊರಬಂದರು. ಆಲ್‌ ಇಂಡಿಯಾ ಪ್ರೋಗ್ರೆಸಿವ್‌ ಜನತಾ ದಳ ಸೇರಿದ್ದರು. ಅಲ್ಲಿ ಒಂದು ವರ್ಷ ಇದ್ದರು. ಬಳಿಕ ಕಾಂಗ್ರೆಸ್‌ ಪಕ್ಷ ಸೇರಿದರು.

ತರುವಾಯ ಅಹಿಂದ ಸಮಾವೇಶಗಳನ್ನು ಮಾಡುತ್ತ ಮಾಸ್‌ ಲೀಡರ್‌ ಆಗಿ ಗುರುತಿಸಿಕೊಂಡರು. ಇದರ ಫಲ 2013ರಲ್ಲಿ ಅವರಿಗೆ ಸಿಕ್ಕಿತು. ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಿತು. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ರಾಜಕೀಯ ಪರಿಭಾಷೆಯಲ್ಲಿ ಮೊದಲ ಸಲ ಅಹಿಂದ ಪರಿಕಲ್ಪನೆ ಕೊಟ್ಟರು. ಸಿದ್ದರಾಮಯ್ಯ ಅವರು ಈ ಪರಿಕಲ್ಪನೆಯನ್ನು ಮತಬ್ಯಾಂಕ್‌ ಆಗಿ ಪರಿವರ್ತಿಸಲು ಶ್ರಮಿಸಿ ಒಂದು ಹಂತಕ್ಕೆ ಯಶಸ್ವಿಯಾದವರು.

ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುತ್ತಲೇ ಅನ್ನ ಭಾಗ್ಯ ಯೋಜನೆ ಘೋಷಿಸಿದರು. ನಂತರ ಶಾದಿ ಭಾಗ್ಯ ಸೇರಿ ಹಲವು ಭಾಗ್ಯಗಳ ಯೋಜನೆಗಳನ್ನು ಜಾರಿಗೊಳಿಸಿದರು. ಆದರೆ ಈ ಯೋಜನೆಗಳಾವುದೂ 2018ರ ಚುನಾವಣೆಯಲ್ಲಿ ಅವರ ಕೈ ಹಿಡಿಯಲಿಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಬಲ 79ಕ್ಕೆ ಕುಸಿಯಿತು. ಇಷ್ಟಾಗ್ಯೂ, ಜೆಡಿಎಸ್‌ ಜತೆಗೆ ಮೈತ್ರಿ ಸರ್ಕಾರ ರಚನೆ ಆಯಿತು. ಆಗ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಆಗುವುದು ಸಾಧ್ಯವಾಗಲಿಲ್ಲ. ಜೆಡಿಎಸ್‌ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.

ಸಿದ್ದರಾಮಯ್ಯ ಅವರು 2018ರಲ್ಲೇ ತನ್ನ ಕೊನೆಯ ಚುನಾವಣೆ ಎಂದು ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಚುನಾವಣೆಯಲ್ಲೂ ಅವರು ಅದೇ ಮಾತನ್ನು ಹೇಳಿದ್ದು, ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿರಿಸಿದ್ದಾರೆ. ಈ ಸಲ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಅವರಿಗೆ ಪಕ್ಷದಲ್ಲಿ ಪ್ರಬಲ ಎದುರಾಳಿ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್.‌ ಪಕ್ಷವನ್ನು ರಾಜ್ಯದಲ್ಲಿ ಕನಿಷ್ಟ 113 ಕ್ಷೇತ್ರಗಳಲ್ಲಿ ಗೆಲ್ಲಿಸಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಮೇಲಿದೆ. ಇದಾದ ಬಳಿಕ ಗೆದ್ದ ಶಾಸಕರ ಪೈಕಿ ಎಷ್ಟು ಜನರ ಬೆಂಬಲ ಇದೆ ಎಂಬುದರ ಮೇಲೆ ಮುಖ್ಯಮಂತ್ರಿ ಯಾರಾಗಬಹುದು ಎಂಬುದು ತೀರ್ಮಾನವಾಗಲಿದೆ.

ವೈಯಕ್ತಿಕ ಪರಿಚಯ

ಸಿದ್ದರಾಮಯ್ಯ

ಜನನ - 12.08.1948

ಪತ್ನಿ- ಪಾರ್ವತಿ

ಮಕ್ಕಳು - ರಾಕೇಶ್‌ ಮತ್ತು ಡಾ.ಯತೀಂಧ್ರ

ಹುಟ್ಟೂರು - ವರುಣಾ ಹೋಬಳಿಯ ಸಿದ್ದರಾಮನ ಹುಂಡಿ

ಕೌಟುಂಬಿಕ ಹಿನ್ನೆಲೆ - ಕೃಷಿ ಕುಟುಂಬ, ಕುರುಬ ಸಮುದಾಯದವರು

ಶಿಕ್ಷಣ - ಮೈಸೂರು ವಿವಿಯಿಂದ ಬಿಎಸ್ಸಿ ಪದವಿ, ಕಾನೂನು ಪದವಿ

ವೃತ್ತಿ - ಕೆಲಕಾಲ ವಕೀಲಿಕೆ, ಬಳಿಕ ಪೂರ್ಣಾವಧಿ ರಾಜಕೀಯ

ವಿದಾರ್ಥಿ ದೆಸೆಯಲ್ಲೇ ಉತ್ತಮ ವಾಗ್ಮಿ ಎಂದು ಗುರುತಿಸಿಕೊಂಡವರು. ಡಾ.ರಾಮ ಮನೋಹರ್‌ ಲೋಹಿಯಾ ಅವರ ಸೋಷಿಯಲಿಸಂನಿಂದ ಆಕರ್ಷಿತರಾದವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋ ಫ್ರೊಫೈಲ್‌ಗಾಗಿ ಕೆಳಗಿನ ವಿಡಿಯೋ ನೋಡಿ.

IPL_Entry_Point